ತಮಿಳುನಾಡು ಸರಕಾರವು ಕರ್ನಾಟಕಕ್ಕೆ ಮಾದರಿಯಾಗಲಿ
ಮಾನ್ಯರೇ,
ವೈದ್ಯರು ಮತ್ತು ಇಂಜಿನಿಯರ್ ಆಗಲು ವಿದ್ಯಾರ್ಥಿಗಳಿಗೆ ಮೊದಲ ಮತ್ತು ಎರಡನೇ ಪಿಯುಸಿ ಅಡಿಪಾಯವಾಗಿದೆ. ಭಾರತ ಸರಕಾರವು ಎಂಬಿಬಿಎಸ್ ಆಕಾಂಕ್ಷಿಗಳಿಗೆ ಅಖಿಲ ಭಾರತ ನೀಟ್ ಪರೀಕ್ಷೆ ಮತ್ತು ಇಂಜಿನಿಯರ್‌ಗಳಿಗೆ ಜೆಇಇ ಪರೀಕ್ಷೆ ನಡೆಸುತ್ತದೆ. ಸಿಬಿಎಸ್‌ಸಿ ಬೋರ್ಡ್ ನ 11ನೇ ಹಾಗೂ 12ನೇ ತರಗತಿಯ ಪಾಠವನ್ನು ಈ ಪರೀಕ್ಷೆ ಬರೆಯಲು ಕಲಿಯಬೇಕು.
ಅಂದಾಜಿನಂತೆ ಕೇವಲ ಶೇ. 5 ಭಾರತೀಯ ವಿದ್ಯಾರ್ಥಿಗಳು ಕೇಂದ್ರ ಮಂಡಳಿಯ ಪಠ್ಯಕ್ರಮದಲ್ಲಿ ಅಧ್ಯಯನ ಮಾಡುತ್ತಾರೆ. ಉಳಿದ ಶೇ. 95 ವಿವಿಧ ರಾಜ್ಯ ಬೋರ್ಡ್ ಪಠ್ಯಕ್ರಮದಲ್ಲಿ ಕಲಿಯುತ್ತಾರೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ತಿಳಿದಿದ್ದರೂ; ಶೇ. 95 ಭಾರತೀಯ ವಿದ್ಯಾರ್ಥಿಗಳು ನೀಟ್ ಮತ್ತು ಜೆಇಇ ಪರೀಕ್ಷೆಗಳಿಗೆ ಮಾತ್ರ ಸಿಬಿಎಸ್‌ಸಿ ಪಠ್ಯಕ್ರಮವನ್ನು ಅಧ್ಯಯನ ಮಾಡಲು ಏಕೆ ಒತ್ತಾಯಿಸುತ್ತಾರೆ ಎಂಬುದು ತಿಳಿದಿಲ್ಲ. ಅವರು ರಾಜ್ಯ ಪರೀಕ್ಷಾ ಪಠ್ಯಕ್ರಮದೊಂದಿಗೆ ಈ ಪರೀಕ್ಷೆಗಳನ್ನು ಏಕೆ ನಡೆಸಲು ಸಾಧ್ಯವಿಲ್ಲ?
ತಮಿಳುನಾಡು ಸರಕಾರವು ಈಗಾಗಲೇ ಹೊಸ ನಿಯಮವನ್ನು ತಂದಿದೆ - ತಮಿಳುನಾಡು ಮಂಡಳಿಯ 11 ಮತ್ತು 12 ನೇ ತರಗತಿಯ ಪಠ್ಯಕ್ರಮ ಮಾತ್ರ ‘ಸಾಮಾನ್ಯ ಪ್ರವೇಶ ಪರೀಕ್ಷೆ’ಗೆ ಇರುತ್ತದೆ. ತಮಿಳುನಾಡಿನಲ್ಲಿರುವ ಎಲ್ಲಾ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಸಾಮಾನ್ಯ ಪ್ರವೇಶ ಪರೀಕ್ಷೆ ಪಾಸಾದ ತಮಿಳುನಾಡು ವಿದ್ಯಾರ್ಥಿಗಳಿಗೆ ಸೀಟು ಒದಗಿಸಲೇಬೇಕು.
ತಮಿಳುನಾಡು ಸರಕಾರವು ಇತರ ರಾಜ್ಯ ಸರಕಾರಗಳಿಗೂ ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಇದೇ ರೀತಿಯ ನಿಯಮಗಳನ್ನು ತರಲು ವಿನಂತಿಸಿದೆ. ಮಹಾರಾಷ್ಟ್ರ ಇದೇ ನಿಯಮವನ್ನು ಶೀಘ್ರವೇ ಜಾರಿಗೆ ತರಲಿದೆ. ಕನ್ನಡಿಗರಿಗೆ ಸಹಾಯ ಮಾಡಲು ಕರ್ನಾಟಕ ಸರಕಾರವು ಇದೇ ರೀತಿಯ ನಿಯಮವನ್ನು ತರಲು ಏಕೆ ಸಾಧ್ಯವಿಲ್ಲ?