ಕಾರು ಸ್ಫೋಟ ಪ್ರಕರಣ ಭಯೋತ್ಪಾದಕ ಕೃತ್ಯ: ಬ್ರಿಟನ್ ಪೊಲೀಸರ ಹೇಳಿಕೆ
ಲಂಡನ್, ನ.15: ಲಿವರ್ಪೂಲ್ ನ ಆಸ್ಪತ್ರೆಯೊಂದರ ಮುಂಭಾಗ ರವಿವಾರ ಕಾರಿನಲ್ಲಿ ಸ್ಫೋಟ ಸಂಭವಿಸಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ 3 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿದ್ದು ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 3 ಆರೋಪಿಗಳನ್ನು ಭಯೋತ್ಪಾದಕ ಕೃತ್ಯ ಕಾಯ್ದೆಯಡಿ ನಗರದ ಕೆನ್ಸಿಂಗ್ಟನ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಫೋಟ ಸಂಭವಿಸಿದಾಗ ಕಾರಿನಲ್ಲಿದ್ದ ಪ್ರಯಾಣಿಕನೊಬ್ಬ ಮೃತಪಟ್ಟಿದ್ದು ಮತ್ತೊಬ್ಬ ಪ್ರಯಾಣಿಕ ಗಾಯಗೊಂಡಿದ್ದಾನೆ. ಈ ವಾಹನ ಸ್ಫೋಟ ನಡೆಯುವ ಕೆಲ ನಿಮಿಷಗಳ ಮೊದಲು ಅಲ್ಲಿಗೆ ಬಂದಿತ್ತು. ಈ ಪ್ರಕರಣದ ವಿಚಾರಣೆಯನ್ನು ಭಯೋತ್ಪಾದನೆ ನಿಗ್ರಹ ಪೊಲೀಸ್ ದಳಕ್ಕೆ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸೆರೆನಾ ಕೆನೆಡಿ ಹೇಳಿದ್ದಾರೆ.
ಸ್ಫೋಟದ ಹಿಂದಿನ ಕಾರಣದ ಬಗ್ಗೆ ತಿಳಿದುಬಂದಿಲ್ಲ. ಆದರೆ ಸ್ಫೋಟಗೊಂಡಿದ್ದ ಕಾರಿನಲ್ಲಿದ್ದ ಪ್ರಯಾಣಿಕ(ಮೃತಪಟ್ಟ ವ್ಯಕ್ತಿ) ಸ್ಫೋಟಕವನ್ನು ಕಾರಿನಲ್ಲಿ ಇರಿಸಿರುವುದು ಸ್ಪಷ್ಟವಾಗಿದೆ ಎಂದು ಭಯೋತ್ಪಾದನೆ ನಿಗ್ರಹ ಪೊಲೀಸ್ ದಳದ ಉಸ್ತುವಾರಿ ಅಧಿಕಾರಿ ರಸ್ ಜಾಕ್ಸನ್ ಹೇಳಿದ್ದಾರೆ.