ಯುರೋಪ್, ಏಶ್ಯಾದಲ್ಲಿ ಹಕ್ಕಿಜ್ವರದ ಪ್ರಕರಣ ಹೆಚ್ಚಳ
ಪ್ಯಾರಿಸ್, ನ.15: ಯುರೋಪ್ ಮತ್ತು ಏಶ್ಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಹಕ್ಕಿಜ್ಚರ ಉಲ್ಬಣಗೊಂಡಿರುವ ಬಗ್ಗೆ ಹಲವು ವರದಿ ಬಂದಿದ್ದು ಈ ಸೋಂಕು ಮತ್ತೆ ತ್ವರಿತವಾಗಿ ಹರಡುವ ಲಕ್ಷಣ ಗೋಚರಿಸಿದೆ ಎಂದು ‘ವರ್ಲ್ಡ್ ಆರ್ಗನೈಸೇಷನ್ ಫಾರ್ ಅನಿಮಲ್ ಹೆಲ್ತ್’(ಒಐಇ) ಹೇಳಿದೆ. ಹಕ್ಕಿಜ್ವರದ ಸೋಂಕು ಸಾಮಾನ್ಯವಾಗಿ ಶರತ್ಕಾಲ(ಸೆಪ್ಟಂಬರ್‌ನಿಂದ ನವೆಂಬರ್ ಅಂತ್ಯದವರೆಗೆ)ದಲ್ಲಿ ಉಲ್ಬಣಗೊಳ್ಳುತ್ತದೆ. ವಲಸೆ ಬರುವ ಹಕ್ಕಿಗಳಿಂದ ಇದು ಹರಡುತ್ತದೆ. ಕೋಳಿ ಮಾಂಸ ತಿನ್ನುವುದರಿಂದ ಈ ಸೋಂಕು ಹರಡುವುದಿಲ್ಲ ಎಂದು ಒಐಇ ಹೇಳಿದೆ.
ಅತ್ಯಂತ ರೋಗಕಾರಕವಾದ, ಪಕ್ಷಿಗಳಿಗೆ ಸಂಬಂಧಿಸಿದ ಸಾಂಕ್ರಾಮಿಕ ಇದಾಗಿದ್ದು ಹಕ್ಕಿಜ್ವರ ಎಂದೇ ಕರೆಯಲಾಗುತ್ತದೆ. ಈ ಹಿಂದೆ ಹಕ್ಕಿಜ್ವರ ಕಾಣಿಸಿಕೊಂಡಾಗ ಸಾವಿರಾರು ಹಕ್ಕಿಗಳು ಸತ್ತುಬಿದ್ದ ಹಿನ್ನೆಲೆಯಲ್ಲಿ, ಇದೀಗ ಕೋಳಿ ಉದ್ಯಮದವರು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಒಐಇ ಹೇಳಿದೆ. ಈ ಸೋಂಕು ಮಾನವನಿಗೂ ಹರಡುತ್ತದೆ.
ಚೀನಾದಲ್ಲಿ ಈ ವರ್ಷ ಹಕ್ಕಿಜ್ವರದ 21 ಪ್ರಕರಣ ವರದಿಯಾಗಿದ್ದು ಇದು 2020ರಲ್ಲಿ ವರದಿಯಾದ ಪ್ರಕರಣಕ್ಕಿಂತ ಇದು ಅಧಿಕವಾಗಿದೆ. ದಕ್ಷಿಣ ಕೊರಿಯಾದಲ್ಲಿ ಸುಮಾರು 7,70,000 ಕೋಳಿಗಳಿರುವ ಉದ್ಯಮದಲ್ಲಿ ಹಕ್ಕಿಜ್ವರದ ಪ್ರಕರಣ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಎಲ್ಲಾ ಕೋಳಿಗಳನ್ನೂ ಕೊಲ್ಲಲಾಗಿದೆ. ಜಪಾನ್‌ನ ಈಶಾನ್ಯ ಪ್ರದೇಶದ ಕೋಳಿ ಉದ್ಯಮವೊಂದರಲ್ಲೂ ಹಕ್ಕಿಜ್ವರದ ಪ್ರಕರಣ ದಾಖಲಾಗಿದೆ.
ನಾರ್ವೆಯ ರೊಗಲ್ಯಾಂಡ್ ವಲಯದಲ್ಲಿ ಸುಮಾರು 7000 ಕೋಳಿಗಳಲ್ಲಿ ಹಕ್ಕಿಜ್ವರದ ಸೋಂಕು ಪತ್ತೆಯಾಗಿದೆ. ಬೆಲ್ಜಿಯಂನಲ್ಲೂ ಹಕ್ಕಿಜ್ವರದ ಪ್ರಕರಣ ಅಧಿಕೊಂಡಿರುವುದರಿಂದ ಕೋಳಿ ಉದ್ಯಮವು ಒಳಾಂಗಣದಲ್ಲಿ ಮಾತ್ರ ಕಾರ್ಯನಿರ್ವಹಿಸುವಂತೆ ಸರಕಾರ ಸೂಚನೆ ನೀಡಿದೆ.