ಕರ್ತಾರ್‌ಪುರ ಕಾರಿಡಾರ್ ನಾಳೆ ಪುನರಾರಂಭವಾಗಲಿದೆ: ಗೃಹ ಸಚಿವ ಅಮಿತ್ ಶಾ
ಹೊಸದಿಲ್ಲಿ, ನ. 16: ನವೆಂಬರ್ 19ರಂದು ಗುರುಪುರಬ್ ನಡೆಯುವ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿರುವ ಸಿಕ್ಖರ ಪವಿತ್ರ ಪ್ರಾರ್ಥನಾ ಮಂದಿರಕ್ಕೆ ಭಾರತದ ಯಾತ್ರಿಗಳು ಭೇಟಿ ನೀಡಲು ಅನುಕೂಲವಾಗುವಂತೆ ಬುಧವಾರದಿಂದ ಕರ್ತಾರ್ಪುರ ಸಾಹಿಬ್ ಕಾರಿಡರ್ ತೆರೆಯಲು ಕೇಂದ್ರ ಸರಕಾರ ನಿರ್ಧರಿಸಿದೆ.
‘‘ ಕರ್ತಾರ್ಪುರ ಸಾಹಿಬ್ ಕಾರಿಡರ್ ಅನ್ನು ನವೆಂಬರ್ 17ರಿಂದ ಮರು ತೆರೆಯಲು ಪ್ರಧಾನಿ ನರೇಂದ್ರ ಮೋದಿ ಸರಕಾರ ನಿರ್ಧರಿಸಿದೆ. ಈ ಪ್ರಮುಖ ನಿರ್ಧಾರದಿಂದ ಅತಿ ದೊಡ್ಡ ಸಂಖ್ಯೆಯ ಸಿಕ್ಖ್ ಯಾತ್ರಿಗಳಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಟ್ವೀಟ್ ಮಾಡಿದ್ದಾರೆ.
‘‘ಈ ನಿರ್ಧಾರ ಗುರುನಾನಕ್ ದೇವ್ ಜಿ ಹಾಗೂ ಸಿಕ್ಖ್ ಸಮುದಾಯದ ಮೇಲೆ ಮೋದಿ ಸರಕಾರಕ್ಕಿರುವ ಅಪಾರ ಗೌರವವನ್ನು ಪ್ರತಿಬಿಂಬಿಸುತ್ತದೆ’’ ಎಂದು ಅವರು ಹೇಳಿದ್ದಾರೆ. ‘‘ನವೆಂಬರ್ 19ರಂದು ಶ್ರೀ ಗುರು ನಾನಕ್ ದೇವ್ ಜಿ ಅವರ ಪ್ರಕಾಶ್ ಉತ್ಸವ್ ಅನ್ನು ಆಚರಿಸಲು ದೇಶ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಕರ್ತಾರ್ಪುರ ಸಾಹಿಬ್ ಕಾರಿಡರ್ ಅನ್ನು ಮರು ತೆರೆಯುವ ಪ್ರಧಾನಿ ನರೇಂದ್ರ ಮೋದಿ ಸರಕಾರದ ನಿರ್ಧಾರ ದೇಶಾದ್ಯಂತದ ಸಂತಸವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂಬ ಬಗ್ಗೆ ನನಗೆ ಖಾತರಿ ಇದೆ’’ ಎಂದು ಅವರು ಹೇಳಿದ್ದಾರೆ.
ಪಂಜಾಬ್ ನ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ರವಿವಾರ ಹೊಸದಿಲ್ಲಿಯಲ್ಲಿ ಭೇಟಿಯಾಗಿ, ಪಾಕಿಸ್ತಾನಕ್ಕೆ ಪ್ರಯಾಣಿಸುವ ಕರ್ತಾರ್ಪುರ ಕಾರಿಡರ್ ಅನ್ನು ಮರು ಆರಂಭಿಸುವ ಮನವಿ ಸಲ್ಲಿಸಿದ ಎರಡು ದಿನಗಳ ಬಳಿಕ ಕೇಂದ್ರ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.