ಊಳಿಗಮಾನ್ಯ ಸಂಸ್ಕೃತಿಯನ್ನು ನಿರ್ಮೂಲಿಸಲು ಸಾಧ್ಯವಾಗದ್ದಕ್ಕೆ ವಿಷಾದವಿದೆ: ಮದ್ರಾಸ್ ಹೈಕೋರ್ಟ್ ಸಿಜೆ ವಿದಾಯ ಸಂದೇಶ

Update: 2021-11-17 16:04 GMT
photo:twitter/The Wire

ಚೆನ್ನೈ,ನ.17: ಮೇಘಾಲಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆಗೊಂಡಿರುವ ಮದ್ರಾಸ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ (ಸಿಜೆ) ಸಂಜೀಬ್ ಬ್ಯಾನರ್ಜಿಯವರು ತನ್ನ 11 ತಿಂಗಳುಗಳ ಅಧಿಕಾರಾವಧಿಯಲ್ಲಿನ ಸಹಕಾರಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿ ಬುಧವಾರ ವಿದಾಯ ಸಂದೇಶವೊಂದನ್ನು ಬರೆದಿದ್ದಾರೆ.

ತನ್ನ ಸಿಬ್ಬಂದಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿರುವ ನ್ಯಾ.ಬ್ಯಾನರ್ಜಿ,‘ನೀವು ನನಗಾಗಿ ತುಂಬ ಸಮಯ ಕಾಯುತ್ತಿದ್ದಿರಿ,ಅದಕ್ಕಾಗಿ ಕ್ಷಮೆ ಕೋರುತ್ತೇನೆ. ನಿಮ್ಮ ಸಂಪೂರ್ಣ ಸಹಕಾರವನ್ನು ನಾನು ಶ್ಲಾಘಿಸುತ್ತೇನೆ. ನೀವು ಸೇವೆ ಸಲ್ಲಿಸುತ್ತಿರುವ ಊಳಿಗಮಾನ್ಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ನಿರ್ಮೂಲಿಸಲು ಸಾಧ್ಯವಾಗದ್ದಕ್ಕೆ ನನಗೆ ವಿಷಾದವಿದೆ ’ ಎಂದು ಹೇಳಿದ್ದಾರೆ.

ಪೀಠದಲ್ಲಿಯ ತನ್ನ ಸಹೋದ್ಯೋಗಿಗಳಿಗೂ ಕೃತಜ್ಞತೆಗಳನ್ನು ಸಲ್ಲಿಸಿರುವ ಅವರು,ಅಂತರವನ್ನು ಅಂತ್ಯಗೊಳಿಸಲು ಸಾಧ್ಯವಾಗದ್ದಕ್ಕಾಗಿ ಮತ್ತು ವೈಯಕ್ತಿಕವಾಗಿ ವಿದಾಯವನ್ನು ಹೇಳದಿದ್ದಕ್ಕಾಗಿ ಕ್ಷಮೆಯನ್ನು ಕೋರಿದ್ದಾರೆ. ತನ್ನ ಕ್ರಮಗಳಿಂದ ನೊಂದಿರಬಹುದಾದವರನ್ನು ಉದ್ದೇಶಿಸಿ ನ್ಯಾ.ಬ್ಯಾನರ್ಜಿ,‘ಅವು ಎಂದೂ ವೈಯಕ್ತಿಕವಾಗಿರಲಿಲ್ಲ. ಆ ಕ್ರಮಗಳು ಸಂಸ್ಥೆಗೆ ಅಗತ್ಯವಾಗಿದ್ದವು ಎಂದು ನಾನು ಭಾವಿಸಿದ್ದೆ ’ ಎಂದು ಬರೆದಿದ್ದಾರೆ.

ಸಂದೇಶವು ಮದ್ರಾಸ್ ಬಾರ್ ಅಸೋಸಿಯೇಷನ್ ಸದಸ್ಯರನ್ನು ಮತ್ತು ಹೈಕೋರ್ಟ್ ರಿಜಿಸ್ಟ್ರಿಯನ್ನೂ ಉದ್ದೇಶಿಸಿದೆ. ‘ನೀವು ಈ ದೇಶದ ಅತ್ಯುತ್ತಮರಲ್ಲಿ ಸೇರಿದ್ದೀರಿ ಮತ್ತು ವಾಚಾಳಿ ಹಾಗೂ ಕೆಲವೊಮ್ಮೆ ಮುಂಗೋಪದ ಹಿರಿಯ ನ್ಯಾಯಾಧೀಶರನ್ನು ನಾನು ಅರ್ಹನಾಗಿರುವುದಕ್ಕಿಂತ ಹೆಚ್ಚಿನ ತಾಳ್ಮೆ,ಗೌರವ ಮತ್ತು ತಿಳುವಳಿಕೆಯಿಂದ ಸಹಿಸಿಕೊಂಡಿದ್ದೀರಿ.

ನಿಮ್ಮ ಒಳ್ಳೆಯ ಮಾತುಗಳಿಗಾಗಿ ನನ್ನ ಪ್ರಾಮಾಣಿಕ ಕೃತಜ್ಞತೆಗಳು ’ ಎಂದು ವಕೀಲರನ್ನುದ್ದೇಶಿಸಿ ಬರೆದಿರುವ ನ್ಯಾ.ಬ್ಯಾನರ್ಜಿ,‘ನಿಮ್ಮ ದಕ್ಷತೆಯು ಆಡಳಿತವನ್ನು ಸುಲಭವಾಗಿಸಿತ್ತು. ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಸುಧಾರಿಸಲು ನೀವು ತೋರಿಸಿದ್ದ ಪ್ರಾಮಾಣಿಕತೆಯನ್ನು ನಾನು ಪ್ರಶಂಸಿಸುತ್ತೇನೆ. ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರುವ ನಿಮ್ಮ ಪ್ರಯತ್ನವನ್ನು ದಯವಿಟ್ಟು ಮುಂದುವರಿಸಿ ’ಎಂದು ರಿಜಿಸ್ಟ್ರಿ ಸಿಬ್ಬಂದಿಗಳನ್ನು ಉದ್ದೇಶಿಸಿ ಹೇಳಿದ್ದಾರೆ.

ಸಿಜೆ ಬ್ಯಾನರ್ಜಿಯವರ ವರ್ಗಾವಣೆಯನ್ನು ‘ದಂಡನಾ ಕ್ರಮ ’ ಎಂದು ಗ್ರಹಿಸಲಾಗಿದ್ದು,ಇದು ವಿವಾದವನ್ನು ಸೃಷ್ಟಿಸಿದೆ. ಮದ್ರಾಸ್ ಉಚ್ಚ ನ್ಯಾಯಾಲಯಕ್ಕಿಂತ ಚಿಕ್ಕದಾಗಿರುವ ಮೇಘಾಲಯ ಉಚ್ಚ ನ್ಯಾಯಾಲಯಕ್ಕೆ ನ್ಯಾ.ಬ್ಯಾನರ್ಜಿಯವರ ಮತ್ತು ಕಲಕತ್ತಾ ಉಚ್ಚ ನ್ಯಾಯಾಲಯಕ್ಕೆ ನ್ಯಾ.ಟಿ.ಎಸ್.ಶಿವಜ್ಞಾನಂ ಅವರ ವರ್ಗಾವಣೆಗೆ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಶಿಫಾರಸು ಮಾಡಿತ್ತು. ನ್ಯಾ.ಶಿವಜ್ಞಾನಂ ಅವರು ಕಲಕತ್ತಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಅ.25ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನ್ಯಾ.ಬ್ಯಾನರ್ಜಿಯವರ ವರ್ಗಾವಣೆ ಆದೇಶ ಹೊರಬಿದ್ದ ಬಳಿಕ ರವಿವಾರ ತುರ್ತು ಸಾಮಾನ್ಯ ಸಭೆಯನ್ನು ಕರೆದಿದ್ದ ಮದ್ರಾಸ್ ಬಾರ್ ಅಸೋಸಿಯೇಷನ್,ಈ ವರ್ಗಾವಣೆಗಳು ವರ್ಗಾವಣೆಯ ಸ್ಥಾಪಿತ ವಿಧಿವಿಧಾನಗಳ ಉಲ್ಲಂಘನೆಯಾಗಿರುವಂತೆ ಕಂಡು ಬರುತ್ತಿದೆ. ಇಂತಹ ವರ್ಗಾವಣೆಗಳನ್ನು ದಂಡನಾತ್ಮಕ ಎಂದು ಗ್ರಹಿಸಲಾಗುತ್ತದೆ ಮತ್ತು ನ್ಯಾಯಾಂಗದ ಸ್ವಾತಂತ್ರಕ್ಕೆ ಒಳ್ಳೆಯದಲ್ಲ.

ವರ್ಗಾವಣೆಗಳ ಸುತ್ತಲಿನ ಅಪಾರದರ್ಶಕತೆ ತನಗೆ ಕಳವಳವನ್ನುಂಟು ಮಾಡಿದೆ. ಹೀಗಾಗಿ ಇಬ್ಬರು ನ್ಯಾಯಾಧೀಶರನ್ನು ವರ್ಗಾವಣೆಗೊಳಿಸುವ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಕೊಲಿಜಿಯಂ ಅನ್ನು ಕೋರಿ ನಿರ್ಣಯವನ್ನು ಅಂಗೀಕರಿಸಿತ್ತು. ಕೊಲಿಜಿಯಂ ಶಿಫಾರಸುಗಳನ್ನು ತಿರಸ್ಕರಿಸುವಂತೆ ಕೇಂದ್ರ ಸರಕಾರವನ್ನೂ ಅದು ಕೋರಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News