ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಮೇಲ್ಜಾತಿಗೆ ಸೇರಿದ ಎಂಟು ಮಂದಿಯ ಬಿಡುಗಡೆ; ದಲಿತ ಯುವಕನಿಗೆ ನ್ಯಾಯಾಂಗ ಬಂಧನ

Update: 2021-11-30 13:44 GMT
Photo: Twitter

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ದಲಿತ ಕುಟುಂಬದ ನಾಲ್ಕು ಸದಸ್ಯರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮೇಲ್ಜಾತಿಗೆ ಸೇರಿದ ಎಂಟು ಮಂದಿಯನ್ನು ಬಿಡುಗಡೆಗೊಳಿಸಿರುವ ಪೊಲೀಸರು ಸೋಮವಾರ ಮೂವರು ದಲಿತ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವರಲ್ಲಿ ಒಬ್ಬಾತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದರೆ ಇತರ ಇಬ್ಬರನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ಪೊಲೀಸರು ಅತ್ಯಾಚಾರ ಸಹಿತ ಹತ್ಯೆ ಪ್ರಕರಣದಲ್ಲಿ ಬಂಧಿಸಿರುವ ಯುವಕರ ವಿರುದ್ಧ ಯಾವುದೇ ಸಾಕ್ಷ್ಯಗಳನ್ನು ಹೊಂದಿರುವ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ.

ಪತಿ, ಪತ್ನಿ ಹಾಗೂ ಅವರ ಇಬ್ಬರು ಮಕ್ಕಳ ಮೃತದೇಹಗಳು ಕಳೆದ ಗುರುವಾರ ಅವರ ಮನೆಯಲ್ಲಿ ಪತ್ತೆಯಾಗಿದ್ದವು. ಹನ್ನೊಂದು ಮಂದಿ ಈ ಕುಟುಂಬಕ್ಕೆ ಬೆದರಿಕೆಯೊಡ್ಡಿದ್ದರು ಎಂಬ ಸಂಬಂಧಿಕರ ಆರೋಪಗಳ ನಂತರ ಪೊಲೀಸರು ಈ 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಎಂಟು ಮಂದಿಯನ್ನು ಬಂಧಿಸಿದ್ದರು. ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಸಂತ್ರಸ್ತ ಕುಟುಂಬವನ್ನು ಭೇಟಿಯಾದ ನಂತರ ಇಬ್ಬರು ಪೊಲೀಸರನ್ನು ಘಟನೆ ಸಂಬಂಧ ವಜಾಗೊಳಿಸಲಾಗಿತ್ತು.

ಸೋಮವಾರ ಬಂಧನಕ್ಕೊಳಗಾಗಿ ಈಗ ನ್ಯಾಯಾಂಗ ಬಂಧನದಲ್ಲಿರುವಾತ 19 ವರ್ಷದ ಕಾರ್ಮಿಕನಾಗಿದ್ದು, ಇತರ ಇಬ್ಬರು ಯುವಕರ ವಯಸ್ಸು 17 ಹಾಗೂ 20 ಆಗಿದ್ದು ಅವರು ಕೂಡ ಆತನ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಸೋಮವಾರ ಈ ಮೂವರ ಕುಟುಂಬಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ಕೂಡ ನಡೆಸಿದ್ದವು.

ನ್ಯಾಯಾಂಗ ಬಂಧನದಲ್ಲಿರುವಾತ ಅತ್ಯಾಚಾರಕ್ಕೀಡಾಗಿ ಕೊಲೆಯಾದ ದಲಿತ ಕುಟುಂಬದ ಯುವತಿಯ ಬೆನ್ನು ಬಿದ್ದಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಆದರೆ ಮೇಲ್ಜಾತಿಯ ಆರೋಪಿಗಳನ್ನು ರಕ್ಷಿಸಲು ಪೊಲೀಸರು ದಲಿತ ಯುವಕರ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಅವರ ಕುಟುಂಬಗಳು ದೂರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News