ಸುಯೋಧನ-ಅರ್ಜುನರ ಮುಂದಿದ್ದ ಆಯ್ಕೆಗಳು!
ಮನುಷ್ಯ ‘ಜೀವನ-ಮರಣ’ದ ಪ್ರಶ್ನೆಯಲ್ಲಿ ಸಿಲುಕಿಕೊಂಡ ಸಂದರ್ಭದಲ್ಲಿ ಅವನು ಮಾಡುವ ಆಯ್ಕೆಯೇ ಆತನ ನಿಜವಾದ ಅಂತಃಶಕ್ತಿಯನ್ನು ಹೇಳುತ್ತದೆ. ಅದುವೇ ಆತನ ವ್ಯಕ್ತಿತ್ವವೂ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಬೆರಳೆಣಿಕೆಯ ಜನರಷ್ಟೇ ಗೆಲ್ಲುತ್ತಾರೆ. ಆ ಆಯ್ಕೆಯ ದೆಸೆಯಿಂದ ಸಾರ್ವಜನಿಕರ ಕಣ್ಣಿನಲ್ಲಿ ಅವರು ಸೋಲುತ್ತಾರೆ. ಆದರೆ ವೈಯಕ್ತಿಕವಾಗಿ ಅವರು ಗೆದ್ದಿರುತ್ತಾರೆ. ಮಹಾಭಾರತ ಮಹಾಕಾವ್ಯ ಇಂತಹ ಪರಿಸ್ಥಿತಿಯನ್ನು ಪ್ರತಿ ಪಾತ್ರಗಳಿಗೂ ಆಗಾಗ ಮುಖಾಮುಖಿಯಾಗಿಸುತ್ತದೆ. ಅವುಗಳಲ್ಲಿ ಮುಖ್ಯವೆನಿಸುವುದು ಅರ್ಜುನ ಮತ್ತು ಸುಯೋಧನರಿಗೆ ಎದುರಾಗುವ ಎರಡು ಆಯ್ಕೆಗಳು. ಮಹಾಭಾರತಕ್ಕೆ ತಿರುವುಕೊಡಬಹುದಾದ ಸನ್ನಿವೇಶಗಳು ಇವು.
ಸನ್ನಿವೇಶ -1
ಕೊನೆಗೂ ಕೃಷ್ಣ ಸಂಧಾನ ವಿಫಲವಾಗಿ ಯುದ್ಧವೇ ಪರಿಹಾರವೆಂದು ನಿರ್ಧಾರವಾಗುತ್ತದೆ. ಪಾಂಡವರು ಮತ್ತು ಕೌರವರು ತಮ್ಮ ತಮ್ಮ ಗುಂಪಿಗೆ ಸೇರಲು ಎಲ್ಲ ಅರಸರಿಗೆ ಮನವಿಗಳನ್ನು ಕಳುಹಿಸತೊಡಗುತ್ತಾರೆ. ಕೃಷ್ಣ ಯಾದವರಿಗೆ ಸೇರಿದವನು. ಅರ್ಜುನನ ಆಪ್ತನೇ ಆಗಿದ್ದರೂ ಏಕಪಕ್ಷೀಯವಾಗಿ ಪಾಂಡವರ ಕಡೆಗೆ ಸೇರುವ ಅಧಿಕಾರ ಕೃಷ್ಣನಿಗಿರಲಿಲ್ಲ. ಅತ್ತ, ಬಲರಾಮ ಯುದ್ಧದಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿರುತ್ತಾರೆ. ಈಗ ಕೃಷ್ಣ ಮತ್ತು ಯಾದವರ ಸೇನೆ ಯಾರ ಜೊತೆಗೆ ನಿಲ್ಲುತ್ತದೆ ಎನ್ನುವುದು ಯುದ್ಧದ ಗೆಲುವಿನಲ್ಲಿ ನಿರ್ಣಾಯಕವಾಗುತ್ತದೆ.
ಕೃಷ್ಣ ಮತ್ತು ಯಾದವರು ಪಾಂಡವರ ಪರವಾಗಿ ಹೋರಾಡಬೇಕು ಎಂಬ ಮನವಿಯ ಜೊತೆಗೆ ಸ್ವತಃ ಅರ್ಜುನನೇ ಕೃಷ್ಣನ ಅರಮನೆಯ ಕಡೆಗೆ ಧಾವಿಸುತ್ತಾನೆ. ಇದು ಸುಯೋಧನನಿಗೆ ತಿಳಿಯುತ್ತದೆ. ಅರ್ಜುನನಿಗಿಂತ ಮೊದಲು ತಲುಪಿ, ಕೃಷ್ಣನನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ತಂತ್ರವನ್ನು ಸುಯೋಧನ ಹೂಡುತ್ತಾನೆ. ಹಾಗೆಯೇ ಒಳಮಾರ್ಗವಾಗಿ ಅರ್ಜುನನಿಗಿಂತ ಮುಂಚೆಯೇ ಸುಯೋಧನ ಅರಮನೆಯನ್ನು ತಲುಪಿ ಬಿಡುತ್ತಾನೆ. ಕೃಷ್ಣ ಶಯನ ಮಂದಿರದಲ್ಲಿ ಗಾಢ ನಿದ್ರೆಯಲ್ಲಿರುತ್ತಾನೆ. ಕೃಷ್ಣನನ್ನು ಎಚ್ಚರಿಸುವಂತಿಲ್ಲ. ಸುಯೋಧನ ನೇರವಾಗಿ ಕೃಷ್ಣನ ತೆಯ ಪಕ್ಕವೇ ಕುಳಿತು ಬಿಡುತ್ತಾನೆ.
ಕೃಷ್ಣನ ಅರಮನೆಯನ್ನು ಅರ್ಜುನ ತಲುಪುವಾಗ ಅಲ್ಲಿನ ಪರಿಸ್ಥಿತಿ ಅವನಿಗೆ ಅರ್ಥವಾಯಿತು. ಅರ್ಜುನನು ಕೃಷ್ಣನ ಪಾದದ ಬಳಿ ಕುಳಿತುಕೊಂಡು ಕೃಷ್ಣ ಏಳುವುದನ್ನೇ ಕಾಯುತ್ತಾನೆ. ಅಂಗಾತ ಮಲಗಿದ್ದ ಕೃಷ್ಣ ಕಣ್ಣು ಬಿಟ್ಟಾಗ ಮೊದಲು ಕಾಣುವುದು ಪಾದದ ಬಳಿ ಕುಳಿತ ಅರ್ಜುನ. ‘‘ಅರೆ ಅರ್ಜುನ, ಯಾವಾಗ ಬಂದೆ?’’ ಎಂದು ಕೇಳುತ್ತಾನೆ. ಅಷ್ಟರಲ್ಲಿ ತಲೆಯ ಪಕ್ಕದಲ್ಲಿ ಕೂತಿದ್ದ ಸುಯೋಧನನೂ ಕಣ್ಣಿಗೆ ಬೀಳುತ್ತಾನೆ. ‘‘ಅರೆ ಸುಯೋಧನ, ನೀನು ಯಾವಾಗ ಬಂದೆ... ?’’ ಎಂದು ಅಚ್ಚರಿ ಪಡುತ್ತಾನೆ. ಸುಯೋಧನ ‘‘ನಾನು ಮೊದಲು ಬಂದು, ನಿನ್ನ ತಲೆ ಪಕ್ಕ ಕೂತಿದ್ದೆ. ಅರ್ಜುನ ಬಳಿಕ ಬಂದ...’’ ಎಂದು ಹೇಳುತ್ತಾನೆ. ಅರ್ಜುನನೂ ಅದನ್ನು ಒಪ್ಪಿಕೊಳ್ಳುತ್ತಾನೆ. ಅವರಿಬ್ಬರು ಯಾಕೆ ಬಂದಿರುವುದು ಎನ್ನುವುದು ಕೃಷ್ಣನಿಗೆ ಚೆನ್ನಾಗಿ ಗೊತ್ತಿದೆ. ಈಗ ಅರ್ಜುನ ಮತ್ತು ಸುಯೋಧನ ತಾವು ಬಂದ ಉದ್ದೇಶವನ್ನು ಹೇಳುತ್ತಾರೆ. ಯುದ್ಧದಲ್ಲಿ ತಮ್ಮ ಪಕ್ಷಕ್ಕೆ ಸೇರೇಕು ಎಂದು ಮನವಿ ಮಾಡುತ್ತಾರೆ.
ಕೃಷ್ಣ ನಕ್ಕು ಉತ್ತರಿಸುತ್ತಾನೆ ‘‘ಇಲ್ಲೊಂದು ಧರ್ಮ ಸೂಕ್ಷ್ಮ ಇದೆ. ಮೊದಲು ಬಂದಿರುವುದು ಸುಯೋಧನ. ಆದುದರಿಂದ ಅವನನ್ನು ನಾನು ಬಿಟ್ಟು ಬಿಡುವಂತಿಲ್ಲ. ಆದರೆ ನಾನು ಮೊದಲು ನೋಡಿರುವುದು ಅರ್ಜುನನ್ನು. ಆದುದರಿಂದ ಅವನನ್ನೂ ತಿರಸ್ಕರಿಸುವಂತಿಲ್ಲ. ಈಗ ಯಾದವರನ್ನು ನಾನು ಎರಡು ಪಾಲು ಮಾಡುತ್ತೇನೆ. ಒಂದು, ಇಡೀ ಯಾದವರ ಸೇನೆ. ವೀರಾಧಿವೀರರೆಲ್ಲರೂ ಆ ಸೇನೆಯಲ್ಲಿದ್ದಾರೆ. ಇನ್ನೊಂದು ಪಾಲು ನಾನು. ಮೊದಲು ಆಯ್ಕೆ ಮಾಡುವ ಅವಕಾಶವನ್ನು ನಾನು ಅರ್ಜುನನಿಗೆ ನೀಡಿದ್ದೇನೆ. ಒಬ್ಬ ಕೃಷ್ಣ ಅಥವಾ ಇಡೀ ಯಾದವ ಸೇನೆ. ಇದರಲ್ಲಿ ಒಂದನ್ನು ಅರ್ಜುನ ಆಯ್ಕೆ ಮಾಡಿಕೊಳ್ಳಲಿ. ಸೇನೆಯನ್ನು ಆಯ್ಕೆ ಮಾಡಿಕೊಂಡರೆ ನಾನು ಸುಯೋಧನನ ಪಕ್ಷ ಸೇರುತ್ತೇನೆ. ನನ್ನನ್ನು ಆಯ್ಕೆ ಮಾಡಿಕೊಂಡರೆ ಇಡೀ ಯಾದವ ಸೇನೆ ಸುಯೋಧನನದ್ದಾಗುತ್ತದೆ...’’
ಕೃಷ್ಣ ಅರ್ಜುನನ ಮನಸ್ಸಿನ ಜೊತೆಗೆ ಆಟವಾಡುತ್ತಿದ್ದ. ಅರ್ಜುನನಿಗೆ ಕೃಷ್ಣ ಪರಮಾಪ್ತ. ಪಾಂಡವರಿಗೆ ಸೇನೆಯ ಬಹುದೊಡ್ಡ ಕೊರತೆಯಿದೆ. ಸುಯೋಧನನದ್ದು 11 ಅಕ್ಷೋಹಿಣಿ ಸೇನೆ. ಪಾಂಡವರದ್ದು ಕೇವಲ 7 ಅಕ್ಷೋಹಿಣಿ ಸೇನೆ. ಅರ್ಜುನ ಏನನ್ನು ಆಯ್ಕೆ ಮಾಡುತ್ತಾನೆ ಎನ್ನುವುದು ಆತನ ನಿಜ ವ್ಯಕ್ತಿತ್ವಕ್ಕೆ ಒಡ್ಡಿದ ಅಗ್ನಿ ಪರೀಕ್ಷೆಯಾಗಿತ್ತು. ಕೃಷ್ಣನ ಮೇಲೆ ಆತ ಇಟ್ಟಿದ್ದ ನಂಬಿಕೆಗೆ ಈ ಆಯ್ಕೆ ಸವಾಲಾಗಿತ್ತು. ಆದರೆ ಅರ್ಜುನ ಒಂದಿಷ್ಟೂ ಆಲೋಚಿಸದೆ, ‘‘ನನಗೆ ಕೃಷ್ಣನೊಬ್ಬನೇ ಸಾಕು’’ ಎಂದು ಬಿಟ್ಟ. ಈ ಆಯ್ಕೆಯ ಮೂಲಕ ಆತ ವೈಯಕ್ತಿಕವಾಗಿಯೂ ಗೆದ್ದ. ಹಾಗೆಯೇ ಸಾರ್ವತ್ರಿಕವಾಗಿಯೂ ಗೆದ್ದ. ಇತ್ತ ಸುಯೋಧನನಿಗೆ ಕೃಷ್ಣ ಬೇಕಾಗಿರಲಿಲ್ಲ. ಆತ ಕೃಷ್ಣನನ್ನು ನಂಬುತ್ತಲೇ ಇರಲಿಲ್ಲ. ಆದುದರಿಂದ, ಸುಯೋಧನ ಸಂತೋಷದಿಂದಲೇ ಯಾದವರ ಸೇನೆಯನ್ನು ಸ್ವೀಕರಿಸುತ್ತಾನೆ. ಅವನಿಗೇನು ಬೇಕಾಗಿತ್ತೋ ಅದು ಸಿಕ್ಕಿತ್ತು. ಒಂದು ವೇಳೆ ಅರ್ಜುನ ಯಾದವರ ಸೇನೆಯನ್ನು ಆಯ್ಕೆ ಮಾಡಿಕೊಂಡಿದ್ದರೆ ಏನಾಗುತ್ತಿತ್ತು? ಮಹಾಭಾರತಕ್ಕೆ ಬೇರೆಯೇ ತಿರುವು ಸಿಗುತ್ತಿತ್ತೇ? ಅಥವಾ ಭೀಷ್ಮ, ದ್ರೋಣಾದಿಗಳು ಮಾಡಿದಂತೆ ಕೃಷ್ಣನೂ ಸುಯೋಧನನ ಪಕ್ಷದಲ್ಲಿದ್ದುಕೊಂಡು ಪಾಂಡವರನ್ನು ಗೆಲ್ಲಿಸುತ್ತಿದ್ದನೆ? ಅಥವಾ ಸುಯೋಧನನೇ ಕೃಷ್ಣನನ್ನು ತಿರಸ್ಕರಿಸಿ ಬರಿಗೈಯಲ್ಲಿ ಹೊರಡುತ್ತಿದ್ದನೇ? ಕೆಲವು ಅಮುಖ್ಯವಾದ ಪ್ರಶ್ನೆಗಳು.
ಸನ್ನಿವೇಶ -2
ಎರಡನೇ ಸನ್ನಿವೇಶ ಗಧಾಪರ್ವದಲ್ಲಿ ಎದುರಾಗುತ್ತದೆ. ದು ಸುಯೋಧನನಿಗೆ ಧರ್ಮರಾಯ ಮುಂದಿಡುವ ಆಯ್ಕೆ. ಯುದ್ಧದ ಕೊನೆಯ ಘಟ್ಟ. ಸುಯೋಧನ ಸರ್ವರನ್ನು, ಸರ್ವಸ್ವವನ್ನೂ ಕಳೆದುಕೊಂಡು ಮೈ ತುಂಬಾ ಗಾಯಗಳೊಂದಿಗೆ ವೈಶಂಪಾಯನ ಸರೋವರದಲ್ಲಿ ವಿಶ್ರಾಂತಿ ಪಡೆದುಕೊಂಡಿರುತ್ತಾನೆ. ಅವನನ್ನು ಹುಡುಕಿಕೊಂಡು ಐವರು ಪಾಂಡವರು ಅಲ್ಲಿಗೆ ಬರುತ್ತಾರೆ. ಮತ್ತು ಸುಯೋಧನನ್ನು ಹಂಗಿಸಿ, ಆತ ಬಚ್ಚಿಟ್ಟುಕೊಂಡ ಸ್ಥಳದಿಂದ ಹೊರಬರುವಂತೆ ಮಾಡುತ್ತಾರೆ. ಸುಯೋಧನನ ದೈನೇಸಿ ಸ್ಥಿತಿಯನ್ನು ನೋಡಿ ಧರ್ಮರಾಯ ಮರುಕ ಪಡುತ್ತಾನೆ. ಅವನೊಂದಿಗೆ ಐವರು ಸೇರಿ ಯುದ್ಧ ಮಾಡಿದರೆ ಪಾಂಡವರ ಶೌರ್ಯಕ್ಕೆ ಕಳಂಕವೆನ್ನುವುದು ಅವನ ಗಮನಕ್ಕೆ ಬರುತ್ತದೆ. ಆದುದರಿಂದ ಆತ ಏಕಪಕ್ಷೀಯವಾಗಿ ಸುಯೋಧನನ ಮುಂದೆ ಒಂದು ಆಯ್ಕೆಯನ್ನು ಇಡುತ್ತಾನೆ.
‘‘ನಮ್ಮ ಐವರಲ್ಲಿ ಯಾರೇ ಒಬ್ಬನಲ್ಲಿ ಯುದ್ಧ ಮಾಡಿ ನೀನು ಗೆದ್ದರೂ, ಕಳೆದುಕೊಂಡ ನಿನ್ನ ಸಾಮ್ರಾಜ್ಯವನ್ನೆಲ್ಲ ನಿನಗೆ ಮರಳಿಸುತ್ತೇವೆ’’ ಎಂದು ಬಿಟ್ಟ ಧರ್ಮರಾಯ. ತನ್ನ ದಯಾಗುಣದಿಂದ ಧರ್ಮರಾಯ ಹಲವು ಸಂದರ್ಭದಲ್ಲಿ ತನ್ನ ಸ್ವಂತ ತಮ್ಮಂದಿರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾನೆ. ಇಲ್ಲೂ, ಅಂತಹದೇ ಒಂದು ದೊಡ್ಡ ಪ್ರಮಾದಕರವಾದ ವಚನವನ್ನು ಧರ್ಮರಾಯ ನೀಡುತ್ತಾನೆ.
ಸುಯೋಧನನಿಗೆ ಇದೊಂದು ದೊಡ್ಡ ಅವಕಾಶ. ನಕುಲ, ಸಹದೇವ, ಅರ್ಜುನ, ಧರ್ಮರಾಯ ಇವರಲ್ಲಿ ಯಾರನ್ನೇ ಆಯ್ಕೆ ಮಾಡಿಕೊಂಡರೂ ಸುಯೋಧನ ಕ್ಷಣ ಮಾತ್ರದಲ್ಲಿ ಗೆದ್ದು ಬಿಡುತ್ತಾನೆ. ಪಾಂಡವ ಸೇನೆ ಹರಿಸಿದ ರಕ್ತವೆಲ್ಲ ವ್ಯರ್ಥವಾಗಿ ಬಿಡುತ್ತದೆ. ಪಾಂಡವರಲ್ಲಿ ಒಬ್ಬ ಸತ್ತರೂ ಉಳಿದವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸನ್ನಿವೇಶ ನಿರ್ಮಾಣವಾಗುತ್ತದೆ. ಆದರೆ ಸುಯೋಧನ ಈ ಸಂದರ್ಭದಲ್ಲಿ ತನಗೆ ಸಮಬಲನಾಗಿರುವ ಭೀಮನನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ, ತಾನು ಯುದ್ಧ ಮಾಡಿರುವುದು ಭೂಮಿಗಾಗಿ ಅಲ್ಲ ಎನ್ನುವುದನ್ನು ನಿರೂಪಿಸುತ್ತಾನೆ. ಯುದ್ಧದಲ್ಲಿ ಸುಯೋಧನನಿಗೆ ಭೀಮನಿಂದ ಅನ್ಯಾಯವಾಗುತ್ತದೆ. ಆದರೆ ಒಂದು ವೇಳೆ ಆತ ದುರ್ಬಲನಾದ ನಕುಲ ಅಥವಾ ಸಹದೇವನನ್ನು ಯುದ್ಧಕ್ಕೆ ಆಯ್ಕೆ ಮಾಡಿಕೊಂಡಿದ್ದರೆ ಸ್ವತಃ ಸುಯೋಧನನಿಂದಲೇ ಸುಧನನಿಗೆ ಅನ್ಯಾಯವಾಗಿ ಬಿಡುತ್ತಿತ್ತು.
ಒಂದು ರೀತಿಯಲ್ಲಿ ಧರ್ಮರಾಯ ಬುದ್ಧಿವಂತ. ಇಂತಹದೊಂದು ಅವಕಾಶ ನೀಡುವ ಮೂಲಕ, ಸುಯೋಧನನ ಆತ್ಮಾಭಿಮಾನವನ್ನು ಆತ ಕೆಣಕುತ್ತಾನೆ. ಸುಯೋಧನ ಎಂತಹ ಆತ್ಮಾಭಿಮಾನಿ ಎನ್ನುವುದು ತಿಳಿದೇ ಆತ ಈ ಆಯ್ಕೆಯನ್ನು ನೀಡಿರುತ್ತಾನೆ. ಒಂದು ವೇಳೆ ಗೆದ್ದರೂ ಬದುಕಿಡೀ ಪಾಂಡವರ ಹಂಗಿನ ಅರಮನೆಯಲ್ಲಿ ಸುಯೋಧನ ಬದುಕಬೇಕಾಗಿತ್ತು. ಸುಯೋಧನ ಭೀಮನನ್ನೇ ಆಯ್ಕೆ ಮಾಡುತ್ತಾನೆ ಎನ್ನುವುದು ತಿಳಿದೇ ಅವನನ್ನು ಪರೀಕ್ಷೆಗೊಡ್ಡುತ್ತಾನೆ. ಒಂದು ರೀತಿಯಲ್ಲಿ, ಧರ್ಮರಾಯನು ಸುಯೋಧನನ ಮನಸ್ಸಿನ ಜೊತೆಗೆ ಆಟವಾಡುತ್ತಾನೆ. ಮತ್ತು ಆಟದಲ್ಲಿ ಗೆಲ್ಲುತ್ತಾನೆ.
****
ಮಾನವೀಯತೆಯ ಕುರಿತು, ಕ್ರಾಂತಿಯ ಕುರಿತು, ಯುದ್ಧದ ಕುರಿತು ಮಾತನಾಡುವುದು, ಬರೆಯುವುದು ಬಹಳ ಸುಲಭ. ಆದರೆ ನಮ್ಮ ಕ್ರಾಂತಿ, ಮನುಷ್ಯತ್ವ, ಕಾಳಜಿಗಳ ನಿಜಬಣ್ಣ ಗೊತ್ತಾಗುವುದು ನಮ್ಮೆದುರು ಜೀವನ ಮರಣದ ಸನ್ನಿವೇಶ ನಿರ್ಮಾಣವಾದಾಗ. ಸದ್ಯದ ಭಾರತದ ಅಂತಹದೊಂದು ಸನ್ನಿವೇಶ. ಈ ದೇಶದ ಗಾಂಧಿವಾದಿ, ಅಂಬೇಡ್ಕರ್‌ವಾದಿ, ಮಾನವತಾವಾದಿ ಅನ್ನಿಸಿಕೊಂಡವರಿಗೆ ಎದುರಾಗಿದೆ. ಅವರ ಮುಂದೆ ಈಗ ಎರಡು ಆಯ್ಕೆಯಿದೆ. ಒಂದು ವರ್ತಮಾನದ ಜೊತೆಗೆ ಹೊಂದಿಕೊಂಡು ಹೋಗುವುದು. ಇಲ್ಲವೇ ತನ್ನನ್ನೇ ಬಲಿಕೊಟ್ಟು ತನ್ನ ನಂಬಿಕೆಯನ್ನು ಉಳಿಸಿಕೊಳ್ಳುವುದು. ಎರಡನೇ ಆಯ್ಕೆ ಅಷ್ಟು ಸುಲಭದ್ದಲ್ಲ. ಹಾಗೆ ಆಯ್ಕೆ ಮಾಡಿಕೊಳ್ಳುವವರದು ಅತಿ ಸಣ್ಣ ಸಂಖ್ಯೆ. ಆದರೆ ಈ ಸಣ್ಣ ಸಂಖ್ಯೆಯೇ ಭವಿಷ್ಯದ ಭಾರತವನ್ನು ನಿರ್ಣಯಿಸಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.