ಸೌದಿ ನೇತೃತ್ವದ ಮಿತ್ರರಾಷ್ಟ್ರ ಪಡೆ ದಾಳಿ: ಯೆಮನ್ ನಲ್ಲಿ ಬಂಡುಗೋರರ ಶಿಬಿರ ಧ್ವಂಸ
ಸನಾ, ಡಿ.26: ಯೆಮೆನ್ ನ ಹೌದಿ ಬಂಡುಗೋರ ಪಡೆ ವಿರುದ್ಧ ಬಾಂಬ್ ದಾಳಿ ತೀವ್ರಗೊಳಿಸಿರುವ ಸೌದಿ ಅರೆಬಿಯಾ ನೇತೃತ್ವದ ಮಿತ್ರರಾಷ್ಟ್ರಗಳ ಪಡೆ ರಾಜಧಾನಿ ಸನಾದಲ್ಲಿದ್ದ ಹೌದಿ ಬಂಡುಗೋರರ ಶಿಬಿರದ ಮೇಲೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾಂಬ್ ದಾಳಿಯಲ್ಲಿ ಬಂಡುಗೋರರ ಶಿಬಿರದಲ್ಲಿದ್ದ ಶಸ್ತ್ರಾಸ್ತ್ರ ದಾಸ್ತಾನು ಧ್ವಂಸವಾಗಿದೆ . ಶಿಬಿರದಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಅಲ್ಲಿಂದ ಸಾಗಿಸುವ ಪ್ರಯತ್ನದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಮಿತ್ರರಾಷ್ಟ್ರಗಳ ಪಡೆ ಹೇಳಿದೆ. ಯೆಮೆನ್ನಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದಿರುವ ಸರಕಾರದ ಪರವಾಗಿ ಮಿತ್ರರಾಷ್ಟ್ರಗಳ ಪಡೆ ಹೋರಾಡುತ್ತಿದೆ. ಹೌದಿ ಬಂಡುಗೋರ ಪಡೆಗೆ ಇರಾನ್ ಬೆಂಬಲವಿದೆ.
ಶನಿವಾರ ಹೌದಿ ಪಡೆಯ ಕ್ಷಿಪಣಿ ದಾಳಿಯಲ್ಲಿ ಸೌದಿ ಅರೆಬಿಯಾದಲ್ಲಿ 2 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಮಿತ್ರರಾಷ್ಟ್ರ ಪಡೆಗಳು ಹೌದಿ ಬಂಡುಗೋರರ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಿವೆ.
2014ರಿಂದ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಜರ್ಝರಿತವಾಗಿರುವ ಯೆಮನ್ನಲ್ಲಿ ಇದುವರೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸುಮಾರು 3,77,000 ಮಂದಿಯ ಹತ್ಯೆಯಾಗಿದೆ. ಸಾವಿರಾರು ಮಂದಿ ಮೃತಪಟ್ಟಿದ್ದು ಇಲ್ಲಿ ವಿಶ್ವದ ಅತ್ಯಂತ ಭೀಕರ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.