ಫ್ಲಾಹರ್ಟಿಯ ಕರ್ನಾಟಕದ ನಂಟು ಮತ್ತು ಮೈಸೂರಿನ ಸಾಬು

Update: 2022-03-26 18:36 GMT

ಎತ್ತಣ ಮಾಮರ? ಎತ್ತಣ ಕೋಗಿಲೆ?... ಎಲ್ಲಿಯ ಫ್ಲಾಹರ್ಟಿ? ಎಲ್ಲಿಯ ಕೊರ್ಡಾ? ಮೈಸೂರಿನ ಆನೆ ಲಾಯವೆಲ್ಲಿ? ಹಾಲಿವುಡ್‌ನ ಯೂನಿವರ್ಸಲ್ ಸ್ಟುಡಿಯೊ ಎಲ್ಲಿ? ಹಾಲಿವುಡ್ ಮತ್ತು ಮೈಸೂರು ನಡುವೆ ಬಾಂಧವ್ಯ ಬೆಸೆದ ಫ್ಲಾಹರ್ಟಿ- ಸಾಬು ನಂಟು, ಚಲನಚಿತ್ರಗಳು ಮಾತ್ರವೇ ಸೃಷ್ಟಿಸಬಹುದಾದ ಪವಾಡಗಳಿಗೆ ಸಾಕ್ಷಿ.


ರಾಬರ್ಟ್ ಫ್ಲಾಹರ್ಟಿ ಅವರ ಚಿತ್ರಜೀವನಕ್ಕೆ ಸಂಬಂಧಿಸಿದ ಈ ಮೂರನೇ ಭಾಗವು ಭಾರತದ ಜೊತೆಗಿನ ಅವರ ನಂಟು ಮತ್ತು ಆ ಮೂಲಕ ಅರಳಿದ ಚಿತ್ರವೊಂದನ್ನು ಕುರಿತದ್ದಾಗಿದೆ. ಅದರಲ್ಲೂ ಕರ್ನಾಟಕದ ಜೊತೆಗಿನ ವಿಶೇಷ ಸಂಬಂಧ ಮೂಲಕ ಹಾಲಿವುಡ್‌ಗೆ ಸಾಹಸ ಕಥಾನಕಗಳ ಹೊಸ ಮಾರ್ಗವೊಂದನ್ನು ರೂಪಿಸುವುದರ ಜೊತೆಗೆ ಭಾರತ ಮೂಲದ ಮೊದಲ ಸೂಪರ್‌ಸ್ಟಾರ್ ಅನ್ನು ಕೊಡುಗೆ ನೀಡಿದ ಖ್ಯಾತಿಯೂ ಅವರಿಗಿದೆ.

ರಾಬರ್ಟ್ ಫ್ಲಾಹರ್ಟಿ ಅವರು ‘ನ್ಯಾನೂಕ್ ಆಫ್ ದಿ ನಾರ್ತ್’(1922) ಮತ್ತು ‘ಮ್ಯಾನ್ ಆಫ್ ಆರನ್’(1934) ಎಂಬ ಎರಡು ಮಾನವ ಸಾಹಸ ಬದುಕಿನ ಸಾಕ್ಷ ಕಥಾಚಿತ್ರಗಳನ್ನು ಮಾಡಿ ಜಗತ್ ಪ್ರಸಿದ್ಧಿ ಪಡೆದಿದ್ದರು. ಅದೇ ಕಾಲದಲ್ಲಿ ಅಂದಿನ ಯಶಸ್ವಿ ಚಿತ್ರನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದ ಅಲೆಕ್ಸಾಂಡರ್ ಕೊರ್ಡಾ ಅವರು ಫ್ಲಾಹರ್ಟಿ ಅವರ ನಿರ್ದೇಶನದಲ್ಲಿ ಮನುಷ್ಯಬದುಕಿನ ಸಾಹಸದ ಅದೇ ಮಾದರಿಯ ಚಿತ್ರವೊಂದನ್ನು ನಿರ್ಮಿಸಲು ಮುಂದೆ ಬಂದರು. ಮೆಕ್ಸಿಕೋ ದೇಶದಲ್ಲಿ ಮನುಷ್ಯ ಮತ್ತು ಗೂಳಿಯ ನಡುವಿನ ಸಂಬಂಧಗಳ ಕತೆಯೊಂದರ ಸುತ್ತ ಚಿತ್ರನಿರ್ಮಿಸುವ ಆಸೆ ಕೊರ್ಡಾ ಅವರಿಗಿತ್ತು. ಆಸ್ಟ್ರಿಯಾ ಮೂಲದ ಕೊರ್ಡಾ ಹಾಲಿವುಡ್‌ನಲ್ಲಿ ಚಿತ್ರ ನಿರ್ಮಾಣ ನಿರ್ದೇಶನದ ವಿಧಾನಗಳನ್ನು ಕಲಿತು ಹಲವು ಚಿತ್ರಗಳನ್ನು ನಿರ್ಮಿಸಿ ಇಂಗ್ಲೆಂಡ್‌ನಲ್ಲಿ ನೆಲೆಯಾಗಿ ಚಿತ್ರನಿರ್ಮಾಣ ಸಂಸ್ಥೆಯನ್ನು ನಿರ್ವಹಿಸುತ್ತಿದ್ದ ಯಶಸ್ವಿ ಚಿತ್ರೋದ್ಯಮಿ. ಕೊರ್ಡಾ ಅವರ ಯೋಜನೆಯನ್ನು ಕೈಗೆತ್ತಿಕೊಳ್ಳಲು ಫ್ಲಾಹರ್ಟಿ ಸಮ್ಮತಿಸಿದರು. ಕೆಲಕಾಲದ ನಂತರ ಅಂದುಕೊಂಡಿದ್ದ ಕತೆಯನ್ನು ಕೈಬಿಟ್ಟು ಕೊರ್ಡಾ ಅವರು ಮೆಕ್ಸಿಕೋ ಬದಲು ಭಾರತದಲ್ಲಿ ಆನೆ ಮತ್ತು ಬಾಲಕನ ನಡುವಿನ ಸಂಬಂಧಗಳ ಕತೆಯಿರುವ ಚಿತ್ರ ನಿರ್ಮಾಣದತ್ತ ಒಲವು ತೋರಿದರು. ಅದಕ್ಕಾಗಿ ಅವರು ರುಡ್ಯಾರ್ಡ್ ಕಿಪ್ಲಿಂಗ್ ಅವರ ‘ತೂಮೈ ಆಫ್ ದಿ ಎಲಿಫ್ಯಾಂಟ್ಸ್’ ಸಣ್ಣಕತೆಯನ್ನು ಆರಿಸಿಕೊಂಡರು.

ಮೈಸೂರಿನ ದಸರಾ ಉತ್ಸವಕ್ಕೆ ಈ ಹಿಂದೆ ಬಂದಿದ್ದ ಹಾಗೂ ಆನೆಗಳ ಖೆಡ್ಡಾ ಕಾರ್ಯಾಚರಣೆ ನೋಡಿದ್ದ ಅಲೆಕ್ಸಾಂಡರ್ ಕೊರ್ಡಾ ಅವರಿಗೆ ಈ ರಾಜ್ಯದ ದಟ್ಟಾರಣ್ಯಗಳು ಚಿತ್ರದ ಕಥೆಗೆ ವೈಭವದ ಹಿನ್ನೆಲೆ ಒದಗಿಸಿ ಹಾಲಿವುಡ್ ಮತ್ತು ಯೂರೋಪ್ ಪ್ರೇಕ್ಷಕರನ್ನು ಸೆಳೆಯುತ್ತವೆಂಬ ನಂಬಿಕೆ ಇತ್ತು. ಕಿಪ್ಲಿಂಗ್ ಕಥೆಯನ್ನು ಆಧರಿಸಿ ಚಿತ್ರಕತೆಯನ್ನು ರೂಪಿಸಲು ಫ್ಲಾಹರ್ಟಿಗೆ ಸಲಹೆ ಮಾಡಿದ ಕೊರ್ಡಾ ಅವರು ಚಿತ್ರೀಕರಣದ ತಂಡದೊಡನೆ 1935 ಮೇ ತಿಂಗಳಲ್ಲಿ ಮೈಸೂರಿಗೆ ಬಂದಿಳಿದರು. ಅಂದು ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಚಿತ್ರತಂಡಕ್ಕೆ ಆಶ್ರಯ ನೀಡಿದ್ದಲ್ಲದೆ ಚಿತ್ರೀಕರಣಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಿದರು. ಚಿತ್ರದ ಆರಂಭದ ಶೀರ್ಷಿಕೆಗಳಲ್ಲಿ ಮೈಸೂರು ಅರಸರನ್ನು ಕೊರ್ಡಾ ನೆನೆದಿದ್ದಾರೆ. ಚಿತ್ರೀಕರಣದ ಸ್ಥಳಗಳನ್ನು ಹುಡುಕಿ ನಿರ್ಧರಿಸಿದ ಮೇಲೆ ಹತ್ತರಿಂದ ಹದಿನೈದು ತಿಂಗಳಕಾಲ ಚಿತ್ರೀಕರಣ ನಡೆಸಬೇಕಾಗುತ್ತದೆಂದು ಫ್ಲಾಹರ್ಟಿ ಅಂದಾಜಿಸಿದ್ದರು. ಆದರೆ ಮುಖ್ಯವಾಗಿ ಅವರಿಗೆ ಕಥೆಯ ನಾಯಕ ಬಾಲಕ ತೂಮೈ ಪಾತ್ರಕ್ಕೆ ಕಲಾವಿದನನ್ನು ಹುಡುಕಲು ಬಹಳ ಸಮಯವೇ ಹಿಡಿಯಿತು. ಆನೆಯ ಜೊತೆ ಧೈರ್ಯವಾಗಿ ಒಡನಾಡಬಲ್ಲ ಮುಗ್ಧಮುಖದ ಬಾಲಕನೊಬ್ಬ ಅವರಿಗೆ ಬೇಕಾಗಿತ್ತು. ಎರಡು ತಿಂಗಳ ನಂತರ ಕ್ಯಾಮರಾಮನ್ ಓಸ್ಮಾಂಡ್ ಬೊರಡೈಲಿ ಅವರ ಕಣ್ಣಿಗೆ ಮಹಾರಾಜರ ಆನೆಯ ಲಾಯದಲ್ಲಿದ್ದ ಸಾಬು ಎಂಬ ಹನ್ನೆರಡು ವರ್ಷದ ಹುಡುಗ ಬಿದ್ದ. ಮಹಾರಾಜರ ಆನೆಯ ಮಾವುತನ ತಬ್ಬಲಿ ಮಗ, ಲಾಯದಲ್ಲಿ ತಾತನ ಜೊತೆ ತಂಗಿದ್ದ. ಆತ ಆನೆಗಳ ಜೊತೆ ಸರಸದಿಂದ ಇದ್ದದ್ದು ಬೊರಡೈಲಿಯ ಗಮನ ಸೆಳೆಯಿತು. ಆತನ ಸಲಹೆಯಂತೆ ಬಂದು ನೋಡಿದ ಫ್ಲಾಹರ್ಟಿ ತಮ್ಮ ನಾಯಕ ದೊರೆತನೆಂದು ಘೋಷಿಸಿದರು.

ಬಾಲಕನ ಜೀವನ ಕಥೆಯೂ ಕಥಾನಾಯಕ ತೂಮೈನ ಕತೆಗೂ ಹೋಲಿಕೆ ಇದ್ದ ಕಾರಣ ಕತೆಗೆ ಬಾಲಕನ ನಿಜಜೀವನದ ಕೆಲ ಘಟನೆಗಳನ್ನು ಫ್ಲಾಹರ್ಟಿ ಹೆಣೆದರು. ಮೈಸೂರಿನ ಹೆಗ್ಗಡದೇವನಕೋಟೆ ಮತ್ತು ಕಾಕನ ಕೋಟೆಯ ದಟ್ಟಾರಣ್ಯಗಳಲ್ಲಿ ಸುಮಾರು ಒಂದು ವರ್ಷ ಕಾಲ ಫ್ಲಾಹರ್ಟಿ ಚಿತ್ರೀಕರಣ ಮಾಡಿದರು. ಮಳೆಗಾಲದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಚಿತ್ರೀಕರಣವನ್ನು ಮುಂದುವರಿಸಿದ ತಂಡ ಕೊನೆಗೂ 1936 ಜೂನ್ ತಿಂಗಳಲ್ಲಿ ಚಿತ್ರೀಕರಣ ಮುಗಿಸಿತು. ಸಿನೆಮಾದ ಅತಿ ಮುಖ್ಯ ಭಾಗವಾದ ಮೈ ನವಿರೇಳುವ ಆನೆ ಹಿಡಿಯುವ ಖೆಡ್ಡಾ ದೃಶ್ಯಗಳನ್ನು ನಿಜವಾದ ಕಾರ್ಯಾಚರಣೆ ಮಾಡಿಯೇ ಸೆರೆಹಿಡಿಯಲಾಯಿತು. ಅದಕ್ಕಾಗಿ 1,100 ಸ್ಥಳೀಯ ಸಿಬ್ಬಂದಿ, ಖೆಡ್ಡಾ ಆವರಣದೆಡೆಗೆ ಆನೆಗಳನ್ನು ಓಡಿಸಲು 200 ತಮಟೆ ಬಾರಿಸುವ ಮಂದಿ, ಆನೆಗಳನ್ನು ನದಿ ದಾಟಿಸಿ ಖೆಡ್ಡಾಗೆ ಕೂಡಲು ಮಾವುತರಿದ್ದ 36 ಪಳಗಿದ ಆನೆಗಳನ್ನು ಬಳಸಿದ್ದರು. ಆನೆ ಕೂಡುವ ಖೆಡ್ಡಾ ಆವರಣವನ್ನು ಸುಮಾರು ಹತ್ತು ಸಾವಿರ ಮರದ ದಿಮ್ಮಿಗಳನ್ನು ನೆಟ್ಟು ಹದಿನೈದು ದಿವಸದಲ್ಲಿ ನಿರ್ಮಿಸಿದ್ದರು. ಮೈಸೂರು ಜಿಲ್ಲೆಯಲ್ಲಿ ಆವರೆವಿಗೂ ದಾಖಲೆ ಎನಿಸಿದ 80 ಆನೆಗಳನ್ನು ಈ ಕಾರ್ಯಾಚರಣೆಯಲ್ಲಿ ಹಿಡಿಯಲಾಗಿತ್ತು ಎಂದು ದಾಖಲೆಗಳು ಹೇಳುತ್ತವೆ. ಜೊತೆಗೆ ಕೊರ್ಡಾ ಸೋದರ ಮತ್ತು ಸಹ ನಿರ್ಮಾಪಕ ಜೊಲ್ಟಾನ್ ಕೊರ್ಡಾ ಎರಡನೇ ಘಟಕವೊಂದನ್ನು ರಚಿಸಿ ಅದೇ ವೇಳೆಯಲ್ಲಿ ಬೇರೆ ಬೇರೆ ಕಡೆ ಹಲವು ದೃಶ್ಯಗಳನ್ನು ಚಿತ್ರೀಕರಿಸಿದರು.

ಮೈಸೂರಿನಲ್ಲಿ ಚಿತ್ರೀಕರಣ ಮುಗಿದಾಗ ಮೂರು ಲಕ್ಷ ಅಡಿಯಷ್ಟು ಫಿಲಂ ಅನ್ನು ಚಿತ್ರೀಕರಿಸಿದ್ದರು. ಚಿತ್ರೀಕರಣಕ್ಕೆ ಆದ ವೆಚ್ಚ ಕಂಡು ಕೊರ್ಡಾಗೆ ಚಿಂತೆ ಶುರುವಾಗಿತ್ತು. ಫ್ಲಾಹರ್ಟಿಯವರನ್ನು ಬಜೆಟ್ ಮಿತಿಗೆ ಕಟ್ಟಿಹಾಕುವುದು ಸಾಧ್ಯವಿಲ್ಲವೆಂಬುದು ತಿಳಿದಿದ್ದರೂ ಅಂದಾಜಿಸಿದ ಮೂಲ ಮೊತ್ತ 30,000 ಪೌಂಡ್ ಮೀರಿ 90,000 ಪೌಂಡ್ ಖರ್ಚಾಗಿತ್ತು. ಜೊತೆಗೆ ಫ್ಲಾಹರ್ಟಿ ಅವರ ಮೂಲ ಯೋಜನೆಯಂತೆ ಚಿತ್ರ ಮೂಡಿಬಂದಲ್ಲಿ ಯಶಸ್ಸು ಖಾತ್ರಿಯಾಗದೆಂದು ಭಾವಿಸಿ ಜಾನ್ ಕೊಲಿಯರ್ ಎಂಬ ಕತೆಗಾರನಿಂದ ಭಾರತದಲ್ಲಿ ಚಿತ್ರೀಕರಣಗೊಂಡ ಭಾಗಕ್ಕೆ ಪೂರಕವಾಗಿ ಹೆಚ್ಚುವರಿ ಭಾಗವನ್ನು ಅಳವಡಿಸಿ ಕತೆಯನ್ನು ವಿಸ್ತರಿಸಿದರು; ಅದಕ್ಕೆ ಅಗತ್ಯವಾದ ಚಿತ್ರೀಕರಣವನ್ನು ಲಂಡನ್‌ನ ಡೆನ್‌ಹ್ಯಾಂ ಸ್ಟುಡಿಯೋಸ್‌ನಲ್ಲಿ ಚಿತ್ರೀಕರಿಸಲು ಸೋದರ ಜೋಲ್ಟಾನ್ ಕೊರ್ಡಾನನ್ನು ಕಳುಹಿಸಿಕೊಟ್ಟರು. ಬಾಲಕ ಸಾಬು ಉಳಿದ ಚಿತ್ರೀಕರಣಕ್ಕೆ ಲಂಡನ್‌ಗೆ ಆಗಮಿಸಿದ. ಈ ಬೆಳವಣಿಗೆಯಿಂದ ಬೇಸತ್ತ ಫ್ಲಾಹರ್ಟಿ ಅವರು ಮುನಿಸಿಕೊಂಡು ಚಿತ್ರೀಕರಣದ ನಂತರದ ಚಿತ್ರನಿರ್ಮಾಣ ಕಾರ್ಯಕ್ಕೆ ತಲೆಹಾಕಲಿಲ್ಲ.

ಅರಣ್ಯ ಸಾಹಸದ ಈ ಚಿತ್ರದ ಕತೆ ಕೆಲವು ಜಾನಪದ ಅಂಶಗಳನ್ನೊಳ ಗೊಂಡಿದ್ದರೂ ದೇಸೀ ಜಾನಪದ ಕತೆಗಳಷ್ಟೂ ರಮ್ಯವಾಗಿಲ್ಲ, ತೀರಾ ಸರಳ. ನಾಲ್ಕು ತಲೆಮಾರಿನಿಂದಲೂ ಕುಟುಂಬದ ಜೊತೆ ಇರುವ ಕಾಳನಾಗ ಎಂಬ ಆನೆಯ ಮಾವುತನ ಮಗನಾದ ತೂಮೈ ಎಂಬ ಬಾಲಕನಿಗೆ ಬೇಟೆಗಾರನಾಗಬೇಕೆಂಬ ಹುಚ್ಚು. ಆ ಆನೆಯ ಜೊತೆ ತೂಮೈಗೆ ವಿಶೇಷ ಬಾಂಧವ್ಯ. ಆನೆಗಳನ್ನು ಹಿಡಿಯುವ ಕಾರ್ಯಾಚರಣೆಗೆ ನೇಮಕವಾದ ಪೀಟರ್ಸನ್(ಕರ್ನಾಟಕದಲ್ಲಿ ಖೆಡ್ಡಾ ಕಾರ್ಯಾಚರಣೆ ರೂಪಿಸಿದ ನೀರು ತೋಟಿ ಸ್ಯಾಂಡರ್ಸನ್ ಹೋಲಿಕೆ) ತನ್ನ ತಂಡಕ್ಕೆ ಕಾಳನಾಗನ ಜೊತೆ ಮಾವುತನನ್ನು ಸೇರಿಸಿಕೊಳ್ಳುತ್ತಾನೆ. ತಾಯಿಯಿಲ್ಲದ ತೂಮೈ ಅಪ್ಪನ ಜೊತೆ ಬರಲು ಅವಕಾಶ ಕೊಡುತ್ತಾನೆ. ಇತ್ತ ದೀರ್ಘ ಸಮಯವಾದರೂ ಆನೆಗಳು ಕಾಡಿನಲ್ಲಿ ಪತ್ತೆಯಾಗುವುದಿಲ್ಲ. ಬೇಟೆಗಾರನಾಗಬೇಕೆಂಬ ತೂಮೈ ಆಸೆಯನ್ನು ಕೇಳಿದ ಜೊತೆಗಾರರು ಗೇಲಿ ಮಾಡುತ್ತಾರೆ. ಆನೆಗಳು ನರ್ತನ ಮಾಡಿದ ದಿನ ನೀನು ಬೇಟೆಗಾರನಾಗುತ್ತೀ ಎಂದು ಅಣಕಿಸುತ್ತಾರೆ. ಒಂದು ರಾತ್ರಿ ತಂಡ ತಂಗಿರುವ ಶಿಬಿರದ ಮೇಲೆ ಹೊಂಚು ಹಾಕಿದ ಹುಲಿಯನ್ನು ನೋಡಿ ಪೀಟರ್ಸನ್ ಜೊತೆ ಅದನ್ನು ಬೆನ್ನಟ್ಟಿದ ತೂಮೈನ ಅಪ್ಪ ಸಾಯುತ್ತಾನೆ. ಒಡೆಯನ ಸಾವಿನಿಂದ ರೋಷಗೊಂಡ ಆನೆ ಶಿಬಿರದ ಮೇಲೆ ದಾಳಿ ಮಾಡುತ್ತದೆ. ತೂಮೈನ ಸಂತೈಸುವಿಕೆಯಿಂದ ಶಾಂತವಾಗುತ್ತದೆ. ತೂಮೈ ಇನ್ನೂ ಬಾಲಕನಾದ್ದರಿಂದ ಕಾಳನಾಗನನ್ನು ರಾಮಲಾಲ್ ಎಂಬ ಮಾವುತನ ವಶಕ್ಕೆ ಕೊಡುತ್ತಾರೆ. ಅವನ ಹಿಂಸೆ ತಾಳಲಾರದ ಆನೆ ಅವನನ್ನು ಘಾಸಿಗೊಳಿಸುತ್ತದೆ. ಅದನ್ನು ಕೊಲ್ಲುವುದೇ ಉಳಿದಿರುವ ಮಾರ್ಗ ಎಂಬ ತೀರ್ಮಾನಕ್ಕೆ ಬರುತ್ತಾರೆ. ಪೀಟರ್ಸನ್ ಒಪ್ಪುವುದಿಲ್ಲ. ಒಂದು ರಾತ್ರಿ ತೂಮೈ ಕಾಳನಾಗನನ್ನು ಕರೆದುಕೊಂಡು ಕಾಡಿನೊಳಕ್ಕೆ ತಪ್ಪಿಸಿಕೊಳ್ಳುತ್ತಾನೆ. ಹಾದಿಯಲ್ಲಿ ಆವರೆಗೂ ಕಾಣಿಸಿಕೊಳ್ಳದ, ನರ್ತಿಸುವ ಆನೆಗಳ ಹಿಂಡು ಸಿಗುತ್ತದೆ, ತೂಮೈ ಹಿಂದಿರುಗಿ ಅವುಗಳ ಹತ್ತಿರಕ್ಕೆ ಪೀಟರ್ಸನ್‌ನನ್ನು ಕರೆದೊಯ್ಯುತ್ತಾನೆ. ಆನೆಗಳ ಮಗು ತೂಮೈ ಎಂದು ತಂಡ ಕೊಂಡಾಡುತ್ತದೆ. ಪೀಟರ್ಸನ್‌ನ ಸಹಾಯಕ ಮಾಚು ಅಪ್ಪತೂಮೈನನ್ನು ಬೇಟೆಗಾರನಾಗಿ ಮಾಡುತ್ತೇನೆಂದು ಭರವಸೆ ಕೊಡುತ್ತಾನೆ.

ಇದಿಷ್ಟು ಪುರಾತನ ಭಾರತದ ಕತೆಯನ್ನೊಳಗೊಂಡ ‘ಎಲಿಫ್ಯಾಂಟ್ ಬಾಯ್’ ಚಿತ್ರವು 1937ರಲ್ಲಿ ಬಿಡುಗಡೆಯಾಯಿತು. ಅಪಾರ ಹಣ ವೆಚ್ಚಮಾಡಿದ್ದ ನಿರ್ಮಾಪಕ ಕೊರ್ಡಾಗೆ ಅಸಲು ಬಂದರೆ ಸಾಕೆನಿಸಿತ್ತು. ಚಿತ್ರೀಕರಣ ಮತ್ತು ನಂತರದಲ್ಲಿ ಅನೇಕ ತೊಂದರೆಗಳನ್ನು ಎದುರಿಸಿದ್ದ ಚಿತ್ರವು ಬಿಡುಗಡೆಯಾದಾಗ ಕಂಡ ಯಶಸ್ಸು ಎಲ್ಲ ಲೆಕ್ಕಾಚಾರವನ್ನು ತಲೆಕೆಳಗು ಮಾಡಿತ್ತು. ಅಲ್ಲದೆ ಆ ವರ್ಷದ ವೆನಿಸ್ ಚಿತ್ರೋತ್ಸವದಲ್ಲಿ ಚಿತ್ರದ ನಿರ್ದೇಶಕ ರಾಬರ್ಟ್ ಫ್ಲಾಹರ್ಟಿ ಮತ್ತು ಜೊಲ್ಟಾನ್ ಕೊರ್ಡಾ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತು. ಫ್ಲಾಹರ್ಟಿಗೆ ಅದರಿಂದ ಸಂತೋಷವಾದಂತೆ ಕಾಣಲಿಲ್ಲ. ಆದರೆ ಇಡೀ ಚಿತ್ರದ ಯಶಸ್ಸು ನಿಂತದ್ದು ಅನಗತ್ಯ ಗಿಮಿಕ್‌ಗಳಿಲ್ಲದ ಅದರ ಸರಳ ಕತೆ, ಫ್ಲಾಹರ್ಟಿಯ ನಿರ್ದೇಶನದಲ್ಲಿ ಸಂಯೋಜನೆಗೊಂಡ ಕಾಡಿನ ದೃಶ್ಯಗಳನ್ನು ಅನುಸರಿಸಿದ ಸದಭಿರುಚಿ ನಿರೂಪಣೆ, ವಿದೇಶಿ ಪ್ರೇಕ್ಷಕರಿಗೆ ಹೊಸದೆನಿಸುವ ಆನೆ ಮತ್ತು ಬಾಲಕನ ನಡುವಿನ ಬಿಂದಾಸ್ ವರ್ತನೆಗಳು ಹಾಗೂ ಆನೆಗಳನ್ನು ಹಿಡಿವ ಕಾರ್ಯಾಚರಣೆಯ ರೋಮಾಂಚಕ ದೃಶ್ಯಗಳು. ಇದರ ಜೊತೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಅನೇಕ ಆಸಕ್ತಿದಾಯಕ ದೃಶ್ಯಗಳು- ನಗೆಯುಕ್ಕಿಸುವ ಮಂಗನಚೇಷ್ಟೆ, ಹುಲಿಯ ಆಕ್ರಮಣ, ಕಾಳನಾಗನ ರೋಷಾವೇಷ, ಹೊಳೆಯಲ್ಲಿ ಈಜುವ ಆನೆಯ ಸಾಹಸ, ರಾತ್ರಿಯ ವೇಳೆಯಲ್ಲಿ ತೆಗೆದ ಆನೆಗಳ ಹಿಂಡಿನ ಸುಂದರ ದೃಶ್ಯಗಳು. ಹಾಗೆ ನೋಡಿದರೆ ಮೈಸೂರು ಕಾಡುಗಳ ದೃಶ್ಯದೊಳಗೆ ಕಥೆಯ ಎಳೆಗೆ ತಕ್ಕಂತೆ ಆಗಾಗ ತೂರಿಬರುವ, ಸ್ಟುಡಿಯೋದಲ್ಲಿ ಚಿತ್ರಿತಗೊಂಡ ದೃಶ್ಯಗಳ ಹೆಣಿಗೆ ಸಮುಚಿತವಾಗಿ ಬೆರೆಯದೆ ಕಿರಿಕಿರಿ ತರುತ್ತದೆ. ಅಂಥದೇ ಕಿರಿಕಿರಿ ಭಾರತೀಯರ ಪಾತ್ರಗಳನ್ನು ವಹಿಸಿರುವ ಬ್ರಿಟನ್/ಯೂರೋಪ್ ಕಲಾವಿದರ ಅಭಿನಯ.

ಇವುಗಳ ನಡುವೆ ನಿಜವಾಗಿಯೂ ಎಲ್ಲರ ಮನಗೆದ್ದು ಅಂತರ್‌ರಾಷ್ಟ್ರೀಯ ಪ್ರಸಿದ್ಧಿಯ ತೆಕ್ಕೆಗೆ ಜಿಗಿದವನೆಂದರೆೆ ಮೈಸೂರು ಸಾಬು ಎಂದೇ ಹೆಸರಾದ ಸಾಬು ದಸ್ತಗೀರ್ ಅಥವಾ ಸೇಲಾರ್ ಶೇಖ್. ಎಲಿಫ್ಯಾಂಟ್ ಬಾಯ್ ಬಗ್ಗೆ ಎಪ್ರಿಲ್ 6, 1937ರ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಬಂದ ವಿಮರ್ಶೆಯೊಂದು ಚಿತ್ರದ ಪ್ರಮುಖ ಆಕರ್ಷಣೆ ಸಾಬು ಎಂದು ಗುರುತಿಸಿದೆ. ಅಂದಿನ ಪತ್ರಿಕೆಗಳು ಸಾಬುವನ್ನು ಹೊಗಳಿದ ಅಭಿಪ್ರಾಯಗಳನ್ನು ಹೀಗೆ ಸಂಗ್ರಹಿಸಬಹುದು. ಚಿತ್ರದ ತತ್‌ಕ್ಷಣದ ಆಕರ್ಷಣೆಯೆಂದರೆ, ಸಾಬು. ಕ್ಯಾಮರಾದ ಎದುರು ಆತನ ಸ್ವಾಭಾವಿಕ ವರ್ತನೆ ಹಾಲಿವುಡ್‌ನ ಪ್ರತಿಭಾವಂತ ಬಾಲಕಲಾವಿದರ ಮುಖವು ನಾಚುವಂತೆ ಮಾಡುತ್ತದೆ. ವಿದೇಶಿ ಪಾತ್ರಗಳನ್ನು ವಹಿಸಿದಾಗ ಆಂಗ್ಲೋ ಮೂಲದ ಕಲಾವಿದರು ತಮ್ಮ ಚರ್ಮದ ಬಣ್ಣವನ್ನು ಕಪ್ಪುಮಾಡಿಕೊಳ್ಳುತ್ತಾರೆ. ಇಲ್ಲಿ ಸಾಬು ತನ್ನ ತಾಜ ನೈಸರ್ಗಿಕ ತ್ವಚೆಯಿಂದ ಹೊಳೆಯುತ್ತಾನೆ. ಸಾಬು ನಮಗೆ ತಿಳಿಯದ ನಾಡಿನವನಾದರೂ ಬಹು ಪರಿಚಿತನಂತೆ, ಸಹಜವ್ಯಕ್ತಿಯಂತೆ ಇದ್ದಾನೆ. ಮನೆಯ ಭಾಷೆ ಮಾತ್ರ ಆಡಬಲ್ಲ ಅತ ಕಲಿತು ಆಡಿರುವ ಇಂಗ್ಲಿಷ್ ಪದಗಳ ಉಚ್ಚಾರಣೆ ತಮಾಷೆಯೆನಿಸಿದರೂ ಅವನಿಗೆ ಸಹಜವಾದ ಧ್ವನಿಯಲ್ಲಿವೆ. ಆದರೂ ಆ ಬಾಲಕನ ಲೀಲಾಜಾಲ ಚಲನೆ, ಭಿಡೆಯಿಲ್ಲದ ಅಭಿನಯವನ್ನು ಆಧುನಿಕ ಸಿನೆಮಾ ತಂತ್ರಜ್ಞಾನವು ಬೇರೊಂದು ಅನುಭವಕ್ಕೆ ದಾಟಿಸುತ್ತದೆ.

ಮೈಸೂರಿನ ಕಾರಾಪುರದಲ್ಲಿ ಜನಿಸಿದ(27ನೇ ಜನವರಿ 1924) ಮಾವುತನೊಬ್ಬನ ಮಗನಾದ ಸಾಬು ತಂದೆಯೊಟ್ಟಿಗೆ ಸಾಕಿದ ಆನೆಗಳ ಜೊತೆ ಬೆಳೆದವನು. ಒಂಭತ್ತನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಸಾಬುಗೆ ತಕ್ಷಣವೇ ಆನೆ ಲಾಯದ ಜವಾಬ್ದಾರಿ ಬಿತ್ತು. ಸಂಕೋಚ ಸ್ವಭಾವದ ನಿರ್ಗತಿಕ ಬಾಲಕನಿಗೆ ಹನ್ನೆರಡನೇ ವಯಸ್ಸಿಗೆ ಅದೃಷ್ಟದ ಬಾಗಿಲು ತೆರೆಯಿತು. ಆನೆಗಳ ಜೊತೆಗೆ ಸಲೀಸಾಗಿ ವರ್ತಿಸುತ್ತಾ ನೆಗೆದು ಕುಪ್ಪಳಿಸುತ್ತಿದ್ದ ಬಾಲಕ ಸಹಜವಾಗಿ ಚಿತ್ರದ ನಾಯಕನ ಪಾತ್ರಕ್ಕೆ ಆಯ್ಕೆಯಾದ. ಮೈಸೂರಿನ ನಂತರ ಉಳಿದ ಚಿತ್ರದ ಭಾಗಗಳನ್ನು ಸ್ಟುಡಿಯೋದಲ್ಲಿ ಚಿತ್ರೀಕರಿಸಲು ಸಾಬು ಮತ್ತು ಅವನ ಹಿರಿಯ ಸೋದರನನ್ನು ಇಂಗ್ಲೆಂಡ್‌ಗೆ ಕರೆತಂದರು. ಆತನಿಗೆ ಬೆಂಬಲವಾಗಿ ನಿಂತು ಪೋಷಿಸಿದವರು ಅನೇಕರು. ಆನೆ ಲಾಯದಲ್ಲಿ ಗುರುತಿಸಿದ ಕ್ಯಾಮರಾಮನ್ ಓಸ್ಮಾಂಡ್ ಬೊರಡೈಲಿ ಲಂಡನ್‌ನಲ್ಲಿ ಆತನಿಗೆ ಆಸರೆಯಾದರು. ಅಲೆಕ್ಸಾಂಡರ್ ಕೊರ್ಡಾ ಆತನನ್ನು ಲಂಡನ್‌ನ ಬೀಕಾನ್‌ಫೀಲ್ಡ್‌ನಲ್ಲಿನ ಶಾಲೆಯೊಂದಕ್ಕೆ ಸೇರಿಸಿ ಶಿಕ್ಷಣ ಕೊಡಿಸಿದರು.

‘ದಿ ಎಲಿಫ್ಯಾಂಟ್ ಬಾಯ್’ ಅಮೋಘ ಯಶಸ್ಸು ಕಂಡ ನಂತರ ಅದರ ಪ್ರಚಾರಕ್ಕೆ ಅಮೆರಿಕಕ್ಕೆ ಹೋದಾಗ ಹಾಲಿವುಡ್‌ನ ಸ್ಟುಡಿಯೋಗಳು ಈತನ ಬಗ್ಗೆ ಆಸಕ್ತಿ ತಾಳಿದವು. ‘ದಿ ಎಲಿಫ್ಯಾಂಟ್ ಬಾಯ್’ ನಂತರ ಕೊರ್ಡಾ ಅವನಿಗಾಗಿಯೇ ಮತ್ತೊಂದು ಮಹತ್ವಾಕಾಂಕ್ಷಿ ಚಿತ್ರ ‘ದಿ ಡ್ರಂ’ (1938) ನಿರ್ಮಿಸಿದರು. ವಸಾಹತು ಭಾರತದಲ್ಲಿ ಬ್ರಿಟಿಷರ ಜೊತೆ ಸೇರಿ ತನ್ನ ದುಷ್ಟ ಚಿಕ್ಕಪ್ಪನ ವಿರುದ್ಧ ಯುದ್ಧ ಮಾಡುವ ಯುವರಾಜನ ಕಥೆ. ಬ್ರಿಟಿಷರ ಜೊತೆ ಕೈಜೋಡಿಸಿದ ಯುವರಾಜ ಭಾರತೀಯರಿಗೆ ಇಷ್ಟವಾಗಲಿಲ್ಲ. ಪ್ರದರ್ಶನದ ವಿರುದ್ಧ ಪ್ರತಿಭಟನೆಗಳೂ ನಡೆದವು. ಆದರೂ ಅದು ವರ್ಣದಲ್ಲಿ ತೆಗೆದ, ತಾಂತ್ರಿಕವಾಗಿ ಉನ್ನತ ಗುಣಮಟ್ಟದ ಚಿತ್ರ. ಆನಂತರ ‘ದಿ ಥೀಫ್ ಆಫ್ ಬಗ್ದಾದ್’(1940) ಮತ್ತು ‘ದಿ ಜಂಗಲ್ ಬುಕ್’(1942) (ನಾಯಕ ಮೌಗ್ಲಿಯ ಪಾತ್ರ) ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಅಮೆರಿಕಕ್ಕೆ ಬಂದ ಸಾಬುವನ್ನು ಯೂನಿವರ್ಸಲ್ ಸ್ಟುಡಿಯೊ ತನ್ನ ಸಂಸ್ಥೆಯ ಖಾಯಂ ನಟನನ್ನಾಗಿಸಿಕೊಂಡಿತು. 1944ರಲ್ಲಿ ಅಮೆರಿಕದ ಪೌರತ್ವವನ್ನು ಪಡೆದ ಸಾಬು ಮುಂದೆ ಹತ್ತೊಂಬತ್ತು ವರ್ಷ ವಿವಿಧ ಸಾಹಸ ಚಿತ್ರಗಳಲ್ಲಿ ನಟಿಸಿ ಮನೆಮಾತಾದರು. ಮರಿಲಿನ್ ಕೂಪರ್ ಎಂಬ ತನ್ನ ಸಹನಟಿಯನ್ನು ಮದುವೆಯಾದ ಸಾಬುಗೆ ಪಾಲ್ ಮತ್ತು ಜಾಸ್ಮಿನ್ ಎಂಬ ಮಕ್ಕಳು. ಈ ನಡುವೆ ಎರಡನೇ ಮಹಾಯುದ್ಧದಲ್ಲಿ ಅಮೆರಿಕದ ಸೈನ್ಯದಲ್ಲೂ ಕಡ್ಡಾಯ ಸೇವೆ ಸಲ್ಲಿಸಿ ಅನೇಕ ಮನ್ನಣೆ ಗಳಿಸಿದರು. ಆದರೆ ತಮ್ಮ ಮೂವತ್ತೊಂಬತ್ತನೆ ವಯಸ್ಸಿಗೆ ಹಠಾತ್ತನೆ ಹೃದಯಾಘಾತದಿಂದ ತೀರಿಕೊಂಡರು(3ನೇ ಡಿಸೆಂಬರ್ 1963). ಸಾಬು ಅವರ ಬದುಕು ಬಡತನದಿಂದ ಶ್ರೀಮಂತಿಕೆಯ ಉಪ್ಪರಿಗೆ ಏರಿದ ರಮ್ಯ ಕಥಾನಕಕ್ಕೆ ಉದಾಹರಣೆಯಾಗಿದೆ.

ಎತ್ತಣ ಮಾಮರ? ಎತ್ತಣ ಕೋಗಿಲೆ?... ಎಲ್ಲಿಯ ಫ್ಲಾಹರ್ಟಿ? ಎಲ್ಲಿಯ ಕೊರ್ಡಾ? ಮೈಸೂರಿನ ಆನೆ ಲಾಯವೆಲ್ಲಿ? ಹಾಲಿವುಡ್‌ನ ಯೂನಿವರ್ಸಲ್ ಸ್ಟುಡಿಯೊ ಎಲ್ಲಿ? ಹಾಲಿವುಡ್ ಮತ್ತು ಮೈಸೂರು ನಡುವೆ ಬಾಂಧವ್ಯ ಬೆಸೆದ ಫ್ಲಾಹರ್ಟಿ- ಸಾಬು ನಂಟು, ಚಲನಚಿತ್ರಗಳು ಮಾತ್ರವೇ ಸೃಷ್ಟಿಸಬಹುದಾದ ಪವಾಡಗಳಿಗೆ ಸಾಕ್ಷಿ

Writer - ಕೆ. ಪುಟ್ಟಸ್ವಾಮಿ

contributor

Editor - ಕೆ. ಪುಟ್ಟಸ್ವಾಮಿ

contributor

Similar News