ಪ್ರಧಾನಿ ಕಾರ್ಯಾಲಯದ ಅಧಿಕಾರಿಯ ಹೆಸರಿನಲ್ಲಿ ಫೋರ್ಜರಿ ಪ್ರಕರಣ: ದಿಲ್ಲಿ ಪೊಲೀಸರಿಂದ ತನಿಖೆ

Update: 2022-04-16 06:58 GMT
Twitter/@CPDelhi

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯ ಖಾಸಗಿ ಕಾರ್ಯದರ್ಶಿ ಎಂದು ಹೇಳಿಕೊಂಡು ಜನರಿಗೆ ವಂಚಿಸಲು ಯತ್ನಿಸುತ್ತಿದ್ದ ಆನ್ ಲೈನ್ ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಸೈಬರ್ ಸೆಲ್ ತನಿಖೆ ಆರಂಭಿಸಿದೆ.

ವಂಚಕನ ಬಗ್ಗೆ ಎಚ್ಚರಿಕೆಯಿಂದಿರುವಂತೆ ಸಾರ್ವಜನಿಕರಿಗೆ ದಿಲ್ಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ತಾನಾ ಟ್ವಿಟರ್ ನಲ್ಲಿ ಎಚ್ಚರಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ತಾನು ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡಿದ್ದ ವ್ಯಕ್ತಿಯ ಗುರುತನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಖಾಸಗಿ ಕಾರ್ಯದರ್ಶಿ ವಿವೇಕ್ ಕುಮಾರ್ ಎಂದು ಹೇಳಿಕೊಂಡ ವ್ಯಕ್ತಿಯಿಂದ ತಾನು ಇಮೇಲ್ ಸ್ವೀಕರಿಸಿದ್ದಾಗಿ ಖ್ಯಾತ ವಿನ್ಯಾಸಕಾರ ಕುನಾಲ್ ಮರ್ಚೆಂಟ್ ದಿಲ್ಲಿ ಪೊಲೀಸ್ ನ ಸೈಬರ್ ಸೆಲ್ ಗೆ ದೂರು ದಾಖಲಿಸಿದ ಬಳಿಕ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಧಾನಮಂತ್ರಿ ಕಚೇರಿಯ ವಿವೇಕ್ ಕುಮಾರ್ ಅವರಿಂದ ತಾನು ಎ.12ರಂದು ಇಮೇಲ್ ಸ್ವೀಕರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬಳಕೆಗಾಗಿ ವಿಶೇಷ ಟೇಬಲ್ ಅನ್ನು ವಿನ್ಯಾಸಗೊಳಿಸಿ ನಿರ್ಮಿಸಿಕೊಂಡುವಂತೆ ತನಗೆ ಕುಮಾರ್ ತನ್ನಲ್ಲಿ ಕೇಳಿಕೊಂಡಿದ್ದಾರೆ. ತನ್ನ "ರಾಜಕೀಯ ಹಾಗೂ  ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ" ಮೇಜನ್ನು ನಿರ್ಮಿಸಿಕೊಡಲು ನಿರಾಕರಿಸಿದ್ದಾಗಿ ಹೇಳಿದ್ದೆ. ಸರಕಾರದ ಪಕ್ಷಪಾತ ಹಾಗೂ ದ್ವೇಷಯುತ ಭಾರತವನ್ನು ವಿರೋಧಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಇನ್‌ಸ್ಟಾಗ್ರಾಮ್ ಬಳಕೆದಾರ ಹಾಗೂ ಖ್ಯಾತ  ವಿನ್ಯಾಸಕಾರ ಕುನಾಲ್ ಮರ್ಚೆಂಟ್ ಹೇಳಿದ್ದರು.

“ಪ್ರಧಾನಿ ಕಚೇರಿಯಲ್ಲಿನ ಅಧಿಕಾರಿಯೊಬ್ಬರ ಹೆಸರಿನಲ್ಲಿ ವ್ಯವಹರಿಸಿದ, ನಕಲಿ ದಾಖಲೆ ಸೃಷ್ಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಾವು ದೂರು ಸ್ವೀಕರಿಸಿದ್ದೇವೆ. ಈ ವಿಷಯ ತನಿಖೆಯಲ್ಲಿದೆ’’ ಎಂದು ಪೊಲೀಸ್ ಮುಖ್ಯಸ್ಥ ರಾಕೇಶ್ ಅಸ್ತಾನಾ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News