ಅಂಬೇಡ್ಕರ್‌ರನ್ನು ಅವರ ಚಿಂತನೆಗಳಿಲ್ಲದೆ ಮಹಾನ್ ನಾಯಕನಾಗಿಸುವುದು!
ಬಹುಷಃ ಇದು ನಮ್ಮ ಕಾಲದ ಅತಿ ದೊಡ್ಡ ವಿರೋಧಾಭಾಸವಾಗಿದೆ. ಈ ಆರೆಸ್ಸೆಸ್ ಸಂಘಟನೆ ಹಿಂದೂ ರಾಷ್ಟ್ರೀಯವಾದಿ ಸಿದ್ಧಾಂತವನ್ನು ಅನುಸರಿಸುತ್ತಿದೆ. ಇದು ಅಂಬೇಡ್ಕರ್ ಚಿಂತನೆಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಅಂಬೇಡ್ಕರ್‌ರದ್ದು ಜಾತ್ಯತೀತತೆ, ಸಮಾಜವಾದ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯವನ್ನೊಳಗೊಂಡ ಭಾರತೀಯ ರಾಷ್ಟ್ರೀಯತೆ. ಜಾತಿ-ವರ್ಣ ವ್ಯವಸ್ಥೆಯು ಹಿಂದೂ ರಾಷ್ಟ್ರೀಯವಾದಿಗಳು ಪ್ರಸಾರ ಮಾಡುತ್ತಿರುವ ಬ್ರಾಹ್ಮಣೀಯ ಹಿಂದುತ್ವದ ಅಡಿಗಲ್ಲು ಎಂಬುದಾಗಿ ಅವರು ಭಾವಿಸಿದ್ದರು.
ಎಪ್ರಿಲ್ 14ರಂದು ವಿವಿಧ ರಾಜಕೀಯ ಸಂಘಟನೆಗಳು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರ ಜನ್ಮದಿನವನ್ನು ಗೌಜಿ ಗದ್ದಲದೊಂದಿಗೆ ಆಚರಿಸಿದವು. ಕಳೆದ ಹಲವು ದಶಕಗಳಿಂದ ಹೆಚ್ಚಿನ ರಾಜಕೀಯ ಪಕ್ಷಗಳು ಈ ಸಾಮಾಜಿಕ ನ್ಯಾಯದ ಮಹಾನ್ ಹರಿಕಾರನಿಗೆ ಪುಷ್ಪಮಾಲೆಗಳನ್ನು ಹಾಕುತ್ತಿವೆ. ಅಂಬೇಡ್ಕರ್‌ರನ್ನು ಪ್ರಶಂಸಿಸುವ ಕ್ಲಬ್‌ಗೆ ಹೊಸದಾಗಿ ಸೇರ್ಪಡೆಯಾಗಿದ್ದು ಆಮ್ ಆದ್ಮಿ ಪಾರ್ಟಿ (ಆಪ್). ಆರೆಸ್ಸೆಸ್ ಬೆಂಬಲಿತ ಅಣ್ಣಾ ಹಝಾರೆ ಚಳವಳಿಯ ಉತ್ಪನ್ನವಾಗಿರುವ ಆಪ್, ತನ್ನ ಇಬ್ಬರು ಮಹಾನ್ ನಾಯಕರ ಪೈಕಿ ಬಾಬಾಸಾಹೇಬ್ ಒಬ್ಬರು ಎಂಬುದಾಗಿ ಘೋಷಿಸಿದೆ.
ಬಿಜೆಪಿ ಸೇರಿದಂತೆ ಹಿಂದೂ ರಾಷ್ಟ್ರೀಯತೆಯ ವಿಚಾರಧಾರೆ ಹೊಂದಿರುವ ವಿವಿಧ ರಾಜಕೀಯ ಸಂಘಟನೆಗಳು ಇತ್ತೀಚಿನ ದಿನಗಳಲ್ಲಿ ಈ ದಿನವನ್ನು ಆಚರಿಸುವಲ್ಲಿ ಮುಂಚೂಣಿಯಲ್ಲಿವೆ ಹಾಗೂ ತಾವು ಕೂಡ ಬಾಬಾಸಾಹೇಬ್‌ರ ಪರವಾಗಿದ್ದೇವೆ ಎನ್ನುವುದನ್ನು ತೋರಿಸುವುದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿವೆ. ಈ ವರ್ಷ, ಆರೆಸ್ಸೆಸ್‌ಗೆ ಒಳಪಟ್ಟ ವಿವಿಧ ಸಂಘಟನೆಗಳು ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿವೆ. ಬಿಜೆಪಿಯು ‘ಸಾಮಾಜಿಕ ನ್ಯಾಯ ಸಪ್ತಾಹ’ವನ್ನು ಆಚರಿಸುತ್ತಿದೆ. ದಲಿತರ ಕಲ್ಯಾಣ, ಸಬಲೀಕರಣ ಮತ್ತು ಸಾಮಾಜಿಕ ಪ್ರಕ್ರಿಯೆಗಳಲ್ಲಿ ದಲಿತರ ಪ್ರಾತಿನಿಧ್ಯಕ್ಕೆ ಸಂಬಂಧಿಸಿ ಅಂಬೇಡ್ಕರ್ ಮಾಡಿರುವ ಕೆಲಸಗಳಿಗೆ ಪ್ರಚಾರ ನೀಡುತ್ತಿದೆ. ದಲಿತರು ಮತ್ತು ಹಿಂದುಳಿದವರ ಪ್ರಯೋಜನಕ್ಕಾಗಿ ರೂಪಿಸಲಾಗಿದೆ ಎನ್ನಲಾದ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡುವುದಕ್ಕಾಗಿ ದಲಿತರ ಮನೆಗಳಿಗೆ ಭೇಟಿ ನೀಡಲು ಈ ಸಂಘಟನೆಗಳು ನಿರ್ಧರಿಸಿವೆ. ಸಾಮಾಜಿಕ ಸೇರ್ಪಡೆಗೆ ಸಂಬಂಧಿಸಿ ಅಂಬೇಡ್ಕರ್ ಮಾಡಿರುವ ಕೆಲಸಗಳನ್ನು ದೇಶದ ವಿವಿಧ ಭಾಗಗಳಲ್ಲಿ ಪ್ರಚುರಪಡಿಸಲು ಆರೆಸ್ಸೆಸ್‌ಗೆ ಒಳಪಟ್ಟ ಸಂಘಟನೆ ಎಬಿವಿಪಿ ಉದ್ದೇಶಿಸಿದೆ.
ಬಹುಷಃ ಇದು ನಮ್ಮ ಕಾಲದ ಅತಿ ದೊಡ್ಡ ವಿರೋಧಾಭಾಸವಾಗಿದೆ. ಈ ಆರೆಸ್ಸೆಸ್ ಸಂಘಟನೆ ಹಿಂದೂ ರಾಷ್ಟ್ರೀಯವಾದಿ ಸಿದ್ಧಾಂತವನ್ನು ಅನುಸರಿಸುತ್ತಿದೆ. ಇದು ಅಂಬೇಡ್ಕರ್ ಚಿಂತನೆಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಅಂಬೇಡ್ಕರ್‌ರದ್ದು ಜಾತ್ಯತೀತತೆ, ಸಮಾಜವಾದ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯವನ್ನೊಳಗೊಂಡ ಭಾರತೀಯ ರಾಷ್ಟ್ರೀಯತೆ. ಜಾತಿ-ವರ್ಣ ವ್ಯವಸ್ಥೆಯು ಹಿಂದೂ ರಾಷ್ಟ್ರೀಯವಾದಿಗಳು ಪ್ರಸಾರ ಮಾಡುತ್ತಿರುವ ಬ್ರಾಹ್ಮಣೀಯ ಹಿಂದುತ್ವದ ಅಡಿಗಲ್ಲು ಎಂಬುದಾಗಿ ಅವರು ಭಾವಿಸಿದ್ದರು. ಹಿಂದೂ ಸಮಾಜದೊಳಗೆ ಸುಧಾರಣೆಯಾಗಬೇಕೆಂದು ಆಗ್ರಹಿಸಿ ಅವರು ನಡೆಸಿದ ಹೋರಾಟಗಳಿಗೆ ಹಿಂದೂ ಮಹಾಸಭಾ-ಆರೆಸ್ಸೆಸ್ ಸಹಕಾರವನ್ನೇ ನೀಡಲಿಲ್ಲ. ಅದು ಚಾವ್ದಾರ್ ಕೆರೆಯ ನೀರು ಕುಡಿಯುವ ಸತ್ಯಾಗ್ರಹವಾಗಿರಲಿ, ಕಾಳಾರಾಮ್ ಮಂದಿರ ಪ್ರವೇಶ ಚಳವಳಿಯಾಗಿರಲಿ, ಹಿಂದೂ ರಾಷ್ಟ್ರೀಯವಾದಿಗಳು ಅವರಿಂದ ದೂರವೇ ಉಳಿದರು. ಹಿಂದೂ ರಾಷ್ಟ್ರೀಯವಾದದ ಸೈದ್ಧಾಂತಿಕ ನೆಲೆಯಾಗಿರುವ ಬ್ರಾಹ್ಮಣೀಯ ಹಿಂದೂ ಧರ್ಮದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಲಿಂಗ ತಾರತಮ್ಯ ಅಂತರ್ಗತವಾಗಿದೆ ಎನ್ನುವುದು ಅವರಿಗೆ ತಿಳಿದಿತ್ತು. ಒಂದು ಕಡೆ, ಅವರು ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಲಿಂಗ ತಾರತಮ್ಯದ ವಿರುದ್ಧದ ಬಂಡಾಯವಾಗಿ ಮನುಸ್ಮತಿಯನ್ನು ಸುಟ್ಟರು ಹಾಗೂ ಬಳಿಕ, ಇನ್ನೊಂದು ಕಡೆ, ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವವನ್ನು ಪ್ರತಿಪಾದಿಸುವ ಭಾರತೀಯ ಸಂವಿಧಾನದ ರೂವಾರಿಯಾದರು.
ಅವರು ಮನುಸ್ಮತಿಯನ್ನು ಸುಟ್ಟ ಒಂದು ದಶಕದ ಬಳಿಕ, ಆರೆಸ್ಸೆಸ್ ಮುಖ್ಯಸ್ಥ ಗೋಳ್ವಾಲ್ಕರ್ ಅದೇ ಪುಸ್ತಕವನ್ನು ಹಾಡಿ ಕೊಂಡಾಡಿದರು. ಮನುಸ್ಮತಿಯು ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಎತ್ತಿಹಿಡಿಯುತ್ತದೆ, ಯಾಕೆಂದರೆ ಜಾತಿ ವ್ಯವಸ್ಥೆಯು ಹಿಂದೂ ಸಮಾಜಕ್ಕೆ ಸ್ಥಿರತೆಯನ್ನು ನೀಡಿದೆ ಎಂಬುದಾಗಿ ಗೋಳ್ವಾಲ್ಕರ್ ಹೇಳಿದರು. ಅದೇ ವೇಳೆ, ಭಾರತೀಯ ಸಂವಿಧಾನಕ್ಕೆ ಆರೆಸ್ಸೆಸ್‌ನಿಂದ ವಿರೋಧ ವ್ಯಕ್ತವಾಯಿತು. ಈ ಸಂವಿಧಾನದಲ್ಲಿ ಭಾರತದ ಪ್ರಾಚೀನ ವೌಲ್ಯಗಳು (ಅಂದರೆ ಮನುಸ್ಮತಿ) ಇಲ್ಲ ಎಂಬುದಾಗಿ ಆರೆಸ್ಸೆಸ್ ಅಭಿಪ್ರಾಯಪಟ್ಟಿತು. ಆರೆಸ್ಸೆಸ್ ಮೀಸಲಾತಿಗೆ ಸಂಪೂರ್ಣ ವಿರುದ್ಧವಾಗಿತ್ತು. ಇದೇ ವಿಷಯದಲ್ಲಿ, ಅಹ್ಮದಾಬಾದ್‌ನಲ್ಲಿ 1980ರ ದಶಕದಲ್ಲಿ ದಲಿತ ವಿರೋಧಿ ಗಲಭೆ ಮತ್ತು 1986ರಲ್ಲಿ ಒಬಿಸಿ ವಿರೋಧಿ ಗಲಭೆಗಳು ನಡೆದವು. ಬಳಿಕ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮಂಡಲ ಆಯೋಗದ ಶಿಫಾರಸುಗಳು ಜಾರಿಗೊಂಡಾಗ, ಆರೆಸ್ಸೆಸ್ ಅದನ್ನು ನೇರವಾಗಿ ವಿರೋಧಿಸಲಿಲ್ಲ. ಆದರೆ, ಸಮುದಾಯಗಳನ್ನು ವಿಭಜಿಸಲು ಕಮಂಡಲ, ರಾಮ ಮಂದಿರ ವಿಷಯಗಳನ್ನು ಮುನ್ನೆಲೆಗೆ ತಂದಿತು.
ಈಗ ಅವರು ತಮ್ಮ ತಂತ್ರಗಾರಿಕೆಯನ್ನು ಬದಲಾಯಿಸಿದರು. ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಲಿಂಗ ತಾರತಮ್ಯವನ್ನು ಕಾಯ್ದುಕೊಳ್ಳುವ ತಮ್ಮ ನೈಜ ಕಾರ್ಯಸೂಚಿಯನ್ನು ನೇರವಾಗಿ ತೋರಿಸಿಕೊಳ್ಳುವ ಬದಲು, ದಲಿತ-ಒಬಿಸಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅವರು ವಿವಿಧ ಸಂಘಟನೆಗಳನ್ನು ಸೃಷ್ಟಿಸಿದರು. ಇದರ ಭಾಗವಾಗಿ ಅವರು ಸಾಮಾಜಿಕ ಸಾಮರಸ್ತ ಮಂಚ್ (ಸಾಮಾಜಿಕ ಸಾಮರಸ್ಯ ವೇದಿಕೆ) ಎಂಬ ಸಂಘಟನೆಯನ್ನು ಸೃಷ್ಟಿಸಿದರು. ಅಂಬೇಡ್ಕರ್ ಜಾತಿ ನಾಶವಾಗಬೇಕೆಂದು ಹೇಳಿದರೆ, ಅವರು ಜಾತಿಗಳ ಪೂರಕ ಪಾತ್ರಗಳ ಬಗ್ಗೆ ಮಾತನಾಡಿದರು. ಈ ಪ್ರಕ್ರಿಯೆಯನ್ನು ಅವರ ಸಿದ್ಧಾಂತಿ ದೀನ್ ದಯಾಳ್ ಉಪಾಧ್ಯಾಯ ‘ಆಂತರಿಕ ಮಾನವೀಯತೆ’ ಎಂಬುದಾಗಿ ಬಣ್ಣಿಸಿದರು.
ಇದೇ ಸಾಮಾಜಿಕ ಇಂಜಿನಿಯರಿಂಗ್ ತಂತ್ರಗಾರಿಕೆಯನ್ನು ಬಳಸಿಕೊಂಡು ಅವರು ದಲಿತರು ಮತ್ತು ಆದಿವಾಸಿಗಳನ್ನು ಸಂಘಟಿಸಿದರು ಹಾಗೂ ಅವರನ್ನು ‘ಬಾಹ್ಯ ಶತ್ರು’ ಮುಸ್ಲಿಮರ ವಿರುದ್ಧ ಛೂಬಿಟ್ಟರು. ದಲಿತ-ಒಬಿಸಿ ಸಮುದಾಯಗಳ ಜೊತೆಗೆ ಕೆಲಸ ಮಾಡುವುದಕ್ಕಾಗಿ ಅವರು ಹಲವಾರು ತಂತ್ರಗಾರಿಕೆಗಳನ್ನು ರೂಪಿಸಿದರು. ಮುಸ್ಲಿಮ್ ‘ಶತ್ರು’ಗಳ ವಿರುದ್ಧ ‘ಹಿಂದೂ ಏಕತೆ’ಯು ಇದರ ಉದ್ದೇಶವಾಗಿತ್ತು. ಹಿಂದೂ ಸಮಾಜದ ಎಲ್ಲ ಕಾಯಿಲೆಗಳಿಗೆ ಮುಸ್ಲಿಮರು ಕಾರಣ ಎಂಬುದಾಗಿ ಬಿಂಬಿಸಲಾಯಿತು. ಇದರ ಪರಿಣಾಮವನ್ನು 2002ರ ಗುಜರಾತ್ ಗಲಭೆಯಲ್ಲಿ ನೋಡಬಹುದಾಗಿದೆ. ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಸುವಂತೆ ದಲಿತ-ಆದಿವಾಸಿಗಳನ್ನು ಪ್ರಚೋದಿಸಲಾಯಿತು. ಯಾರ ಮೇಲೆ ಆಕ್ರಮಣ ನಡೆಸಬೇಕು ಎಂಬ ಪಟ್ಟಿಯನ್ನು ಹಿಂಸೆಯ ಸಂಘಟಕರು ತಯಾರಿಸಿದರು ಹಾಗೂ ದಲಿತ-ಆದಿವಾಸಿಗಳು ಅದನ್ನು ಜಾರಿಗೊಳಿಸಿದರು.
2017ರ ಉತ್ತರಪ್ರದೇಶ ಚುನಾವಣೆಯ ಅವಧಿಯಲ್ಲಿ, ಬಿಜೆಪಿಯ ಪ್ರಚಾರದ ಶೈಲಿ ಹೀಗಿತ್ತು: ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಮುಸ್ಲಿಮರ ಪರವಾಗಿವೆ ಹಾಗೂ ಹಿಂದೂಗಳ (ದಲಿತ-ಆದಿವಾಸಿಗಳು) ಪರವಾಗಿರುವುದು ಬಿಜೆಪಿ ಮಾತ್ರ. ಸಾಮಾಜಿಕ ಸಾಮರಸ್ತ ಮಂಚ್, ವನವಾಸಿ ಕಲ್ಯಾಣ ಆಶ್ರಮ್, ಸೇವಾ ಭಾರತಿ, ವಿಶ್ವ ಹಿಂದೂ ಪರಿಷತ್ ಮುಂತಾದ ಆರೆಸ್ಸೆಸ್ ಸಂಘಟನೆಗಳು, ದಲಿತರು ಮತ್ತು ಆದಿವಾಸಿಗಳನ್ನು ಹಿಂದೂ ರಾಷ್ಟ್ರೀಯತೆಯ ಪರವಾಗಿ ಒಲಿಸಿಕೊಳ್ಳಲು ದಲಿತ-ಆದಿವಾಸಿ ಪ್ರದೇಶಗಳಲ್ಲಿ ನಿರಂತರವಾಗಿ ಕೆಲಸ ಮಾಡಿದವು. ಆದಿವಾಸಿ ಪ್ರದೇಶಗಳ ಪೈಕಿ, ಶಬರಿ ಮತ್ತು ಹನುಮಾನ್‌ಗಳನ್ನು ಸಂಪೂರ್ಣವಾಗಿ ಪರಿವರ್ತಿಸಲಾಗಿದೆ. ತುಳಿತಕ್ಕೊಳಗಾದ ಇತರ ಸಮುದಾಯಗಳ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ, ಸುಹೇಲ್ ದೇವ್‌ಮುಂತಾದ ಹಲವಾರು ಸ್ಥಳೀಯ ಐತಿಹಾಸಿಕ ನಾಯಕರಿಗೆ ಉನ್ನತ ಸ್ಥಾನಮಾನ ನೀಡಿ ಅವರನ್ನು ಮುಸ್ಲಿಮ್ ವಿರೋಧಿ ಹೋರಾಟಗಾರರು ಎಂಬುದಾಗಿ ಬಿಂಬಿಸಲಾಗಿದೆ. ಇದಕ್ಕಾಗಿ ಇತಿಹಾಸವನ್ನೂ ತಿರುಚಲಾಗಿದೆ. ಸುಹೇಲ್ ದೇವ್ ಮುಸ್ಲಿಮ್ ಗಾಝಿ ಮಿಯಾಂನ್ ವಿರುದ್ಧ ಹಿಂದೂ ಧರ್ಮಕ್ಕಾಗಿ ಹೋರಾಡಿದನು ಎಂಬುದಾಗಿ ಬಣ್ಣಿಸಲಾಗಿದೆ.
ದಲಿತ ಪ್ರದೇಶಗಳಲ್ಲಿ ಆರೆಸ್ಸೆಸ್ ಸಂಘಟನೆಗಳು ಮಾಡುತ್ತಿರುವ ಪರೋಪಕಾರ ಕೆಲಸಗಳು ಮತ್ತು ಶೈಕ್ಷಣಿಕ ಸೇವೆಗಳನ್ನು ಯುಪಿಎ ಸರಕಾರ ಮಾಡಿರುವ ಕೆಲಸಗಳೊಂದಿಗೆ ಹೋಲಿಸಲು ಸಾಧ್ಯವಿಲ್ಲ. ತಾನು ಮಾಡಿರುವ ಕೆಲಸಗಳು ಜನರ ಹಕ್ಕು ಎಂಬುದಾಗಿ ಯುಪಿಎ ಸರಕಾರ ಭಾವಿಸಿತು. ಅದು ಮಾಹಿತಿ ಹಕ್ಕನ್ನು ಜಾರಿಗೆ ತಂದಿತು ಹಾಗೂ ಅದಕ್ಕೆ ಪೂರಕವಾಗಿ ಆಹಾರ, ಆರೋಗ್ಯ ಮತ್ತು ಶಿಕ್ಷಣದ ಹಕ್ಕನ್ನು ಜಾರಿಗೆ ತಂದಿತು. ಈ ಮೂಲಕ ಅದು ಪರೋಪಕಾರದ ಮಾದರಿಯೊಂದನ್ನು ಜಾರಿಗೊಳಿಸಿತು. ಆದರೆ, 2022ರ ಚುನಾವಣೆಗಳಲ್ಲಿ, ಉಚಿತ ರೇಶನ್ ಕಾರ್ಯಕ್ರಮವು ಬಿಜೆಪಿಯ ಕಾರ್ಯಕ್ರಮ ಎಂಬುದಾಗಿ ವ್ಯಾಪಕ ಪ್ರಚಾರ ಮಾಡಲಾಯಿತು. ಬಿಜೆಪಿಯಿಂದಾಗಿ ಬಡವರು ಉಚಿತ ರೇಶನ್ ಪಡೆಯುತ್ತಿದ್ದಾರೆ; ಜನರು ಬಿಜೆಪಿ ಯೋಜನೆಗಳ ಫಲಾನುಭವಿಗಳು ಎಂಬ ಪ್ರಚಾರವನ್ನು ಹರಿಯಬಿಡಲಾಯಿತು.
ತುಳಿತಕ್ಕೊಳಗಾದವರು ಬಿಜೆಪಿಯ ಕಡೆ ವಾಲುವಂತೆ ಮಾಡುವಲ್ಲಿ ಈ ಹಿಂದೂ ರಾಷ್ಟ್ರೀಯವಾದಿ ಸಂಘಟನೆಗಳು ಪ್ರಮುಖ ಪಾತ್ರ ವಹಿಸಿದವು. ಅದರ ಜೊತೆಗೆ, ತಾವು ಕೆಲಸ ಮಾಡುವ ಪ್ರದೇಶಗಳಲ್ಲಿ ಬ್ರಾಹ್ಮಣ ಕೇಂದ್ರೀಕೃತ ಧರ್ಮಕ್ಕೆ ಒತ್ತು ನೀಡಿದವು. ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಜನರಿಗೆ ಸಂಬಂಧಪಟ್ಟ ವಿಚಾರಗಳನ್ನು ಸಂಸ್ಕೃತ ಭಾಷೆಯಲ್ಲಿ ಹೇಳಿದಾಗ ಅವರು ಹೆಮ್ಮೆಪಟ್ಟರು. ತಮಗೆ ಮೇಲ್ಜಾತಿಗಳ ಜನರು ಗೌರವ ನೀಡುತ್ತಿದ್ದಾರೆ ಎನ್ನುವ ಕೃತಜ್ಞತಾ ಭಾವನೆಯಿಂದ ಅವರು ತುಂಬಿಹೋದರು. ಇದರೊಂದಿಗೆ ಅವರ ಚುನಾವಣಾ ಆಯ್ಕೆಗಳು ಬಿಜೆಪಿಯತ್ತ ವಾಲಿದವು. ಎಲ್ಲಕ್ಕಿಂತ ಹೆಚ್ಚಾಗಿ, ಕೇವಲ ಆರೆಸ್ಸೆಸ್ ವ್ಯಕ್ತಿಗಳು ಮಾತ್ರ ದಲಿತ ಸಮುದಾಯಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಮತ್ತು ಸಂವಹನ ನಡೆಸುವಂತೆ ಕಂಡುಬಂದರು.
ಹಿಂದೂ ರಾಷ್ಟ್ರವು ಜನಸಂಖ್ಯೆಯ ಬೃಹತ್ ವರ್ಗಗಳಿಗೆ, ಅದರಲ್ಲೂ ಮುಖ್ಯವಾಗಿ ದಲಿತರಿಗೆ ಅನಾಹುತಕಾರಿಯಾಗಿದೆ ಎಂಬುದಾಗಿ ಬಾಬಾಸಾಹೇಬ್ ಹೇಳಿದ್ದಾರೆ. ಆದರೆ, ಇದೇ ಹಿಂದೂ ರಾಷ್ಟ್ರಕ್ಕಾಗಿ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗದವರು ಕೆಲಸ ಮಾಡುತ್ತಿದ್ದಾರೆ. ಹಿಂದೂ ರಾಷ್ಟ್ರದ ಕಾರ್ಯಸೂಚಿಯನ್ನು ಹೊಂದಿರುವ ಬಿಜೆಪಿಯು, ತನ್ನ ಸಾಂಪ್ರದಾಯಿಕ ಮತದಾರರಲ್ಲದವರಿಂದ ಮತಗಳನ್ನು ಪಡೆದು ಅಗಾಧ ಚುನಾವಣಾ ಲಾಭಗಳನ್ನು ಪಡೆದುಕೊಳ್ಳುತ್ತಿದೆ. 2014ರ ಚುನಾವಣೆಗಳ ಬಳಿಕ, ಹಲವು ದಲಿತ-ಒಬಿಸಿ ಪ್ರದೇಶಗಳಲ್ಲಿ ಬಿಜೆಪಿಯು ಹೆಚ್ಚಿನ ಲಾಭಗಳನ್ನು ಪಡೆದುಕೊಳ್ಳುತ್ತಿದೆ.
2014ರಲ್ಲಿ ಬಿಜೆಪಿ ಗಳಿಸಿದ ಬೃಹತ್ ವಿಜಯದಲ್ಲಿ ದಲಿತ ಮತಗಳು ದೊಡ್ಡ ಪಾತ್ರವನ್ನು ವಹಿಸಿವೆ. ಪ್ರಸಕ್ತ, ಸಂಸತ್‌ನಲ್ಲಿ 84 ಸ್ಥಾನಗಳು ದಲಿತರಿಗೆ ಮೀಸಲಾಗಿವೆ. 2014ರಲ್ಲಿ, ಬಿಜೆಪಿಯು 40 ಸ್ಥಾನಗಳನ್ನು ಗೆದ್ದಿತು ಎಂಬುದಾಗಿ ಸೆಂಟರ್ ಫಾರ್ ದ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್)ನ ಅಧ್ಯಯನವೊಂದು ತಿಳಿಸಿದೆ. 2019ರ ಲೋಕಸಭಾ ಚುನಾವಣೆಯ ಬಳಿಕ ಸಿಎಸ್‌ಡಿಎಸ್ ಮಾಡಿದ ಇನ್ನೊಂದು ಅಧ್ಯಯನದ ಪ್ರಕಾರ, 2014 ಮತ್ತು 2019ರ ನಡುವಿನ ಅವಧಿಯಲ್ಲಿ ಬಿಜೆಪಿಗೆ ದಲಿತರು, ಆದಿವಾಸಿಗಳು ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ)ಗಳ ಬೆಂಬಲ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. 2021ರಲ್ಲಿ ನಡೆದ ಚುನಾವಣೋತ್ತರ ಸಮೀಕ್ಷೆಯಲ್ಲೂ, ಬಿಜೆಪಿಗೆ ಮೇಲ್ಜಾತಿಗಳ ಜನರಿಗಿಂತಲೂ ಹೆಚ್ಚಿನ ಬೆಂಬಲ ದಲಿತರು ಮತ್ತು ಒಬಿಸಿಗಳಿಂದ ವ್ಯಕ್ತವಾಗಿದೆ.
ಬಿಜೆಪಿಯ ನೀತಿಗಳು ದಲಿತರ ಮೀಸಲಾತಿಯ ಬೇರುಗಳನ್ನು ಅಲುಗಾಡಿಸುತ್ತಿರುವುದರ ಹೊರತಾಗಿಯೂ ಈ ಬೆಳವಣಿಗೆಗಳು ನಡೆದಿವೆ. ಅದೂ ಅಲ್ಲದೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ತುಳಿತಕ್ಕೊಳಗಾದ ಪಂಗಡಗಳಿಗೆ ಸಂಬಂಧಿಸಿ ತನ್ನ ತಂತ್ರಗಾರಿಕೆಯಲ್ಲಿ ಆರೆಸ್ಸೆಸ್ ಮಾಡಿಕೊಂಡಿರುವ ಬದಲಾವಣೆಯು ಚುನಾವಣೆಯಲ್ಲಿ ಅದಕ್ಕೆ ಭರ್ಜರಿ ಪ್ರತಿಫಲವನ್ನು ನೀಡುತ್ತಿದೆ.