ವಿಶ್ವ ಹಿಂದೂ ಪರಿಷತ್ ಕಾನೂನಿಗಿಂತ ಮೇಲೆಯೇ?: ಅಮಿತ್ ಶಾರನ್ನು ಪ್ರಶ್ನಿಸಿದ ಟಿಆರ್‌ಎಸ್ ನಾಯಕ
ಹೊಸದಿಲ್ಲಿ: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರು ಏಪ್ರಿಲ್ 19 ರಂದು, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ದೇಶದ ಕಾನೂನನ್ನು ಮೀರಿದೆಯೇ ಎಂದು ಪ್ರಶ್ನಿಸಿದ್ದಾರೆ.
ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನ್ನ ಕಾರ್ಯಕರ್ತರ ವಿರುದ್ಧ ಯಾವುದೇ ಕ್ರಮ ಕೈಗೊಂಡರೆ ದೆಹಲಿ ಪೊಲೀಸರ ವಿರುದ್ಧ ಹೋರಾಟ ನಡೆಸುವುದಾಗಿ ವಿಎಚ್‌ಪಿ ಬೆದರಿಕೆ ಹಾಕಿರುವ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.
ದೆಹಲಿ ಪೊಲೀಸರ ವಿರುದ್ಧ ಇಂತಹ ಅತಿರೇಕದ ಅಸಂಬದ್ಧತೆಯನ್ನು ಸಹಿಸುತ್ತೀರಾ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಶ್ನಿಸಿದ ಕೆಟಿಆರ್, "ಗೃಹ ಸಚಿವ ಅಮಿತ್ ಶಾ ಅವರೇ, ಈ ವ್ಯಕ್ತಿಗಳು ದೇಶದ ಕಾನೂನು ಮತ್ತು ಐಪಿಸಿ (ಭಾರತೀಯ ದಂಡ ಸಂಹಿತೆ) ಗಿಂತ ಮೇಲಿರುವರೇ?" ಎಂದು ಟ್ವೀಟ್ ಮೂಲಕ ಕೇಳಿದ್ದಾರೆ.
"ನಿಮಗೆ ನೇರವಾಗಿ ವರದಿ ಮಾಡುವ ದೆಹಲಿ ಪೊಲೀಸರ ವಿರುದ್ಧ ಇಂತಹ ಅತಿರೇಕದ ಅಸಂಬದ್ಧತೆಯನ್ನು ನೀವು ಸಹಿಸಿಕೊಳ್ಳುತ್ತೀರಾ?" ಎಂದು ಕೆಟಿಆರ್ ಪ್ರಶ್ನಿಸಿದ್ದಾರೆ.
ಎರಡು ದಿನಗಳ ಹಿಂದೆ ಕೋಮುಗಲಭೆ ಭುಗಿಲೆದ್ದ ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆಯನ್ನು ಅನುಮತಿಯಿಲ್ಲದೆ ನಡೆಸಿದ್ದಕ್ಕಾಗಿ ಆಯೋಜಕರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರ ವಿಎಚ್‌ಪಿ ಬೆದರಿಕೆ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಸಂಜೆ ರ್ಯಾಲಿಯ ಸಂಘಟಕರ ವಿರುದ್ಧ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಾಯುವ್ಯ ದೆಹಲಿಯ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಉಷಾ ರಂಗನಾನಿ ಹೇಳಿದ್ದಾರೆ. ಇದಕ್ಕೂ ಮುನ್ನ ಡಿಸಿಪಿ ಅಧಿಕೃತ ಸಂದೇಶ ರವಾನಿಸಿದ್ದು, ಅನುಮತಿ ಇಲ್ಲದೆ ಧಾರ್ಮಿಕ ಮೆರವಣಿಗೆ ನಡೆಸಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.