ಬಗ್ದಾದ್‌ನಲ್ಲಿ ಇರಾನ್- ಸೌದಿ ಮಧ್ಯೆ 5ನೇ ಸುತ್ತಿನ ಮಾತುಕತೆ

Update: 2022-04-23 16:36 GMT

ಟೆಹ್ರಾನ್, ಎ.23: ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿ ಇರಾನ್ ಮತ್ತು ಸೌದಿ ಅರೆಬಿಯಾದ ಮಧ್ಯೆ 5ನೇ ಸುತ್ತಿನ ನೇರ ಮಾತುಕತೆ ನಡೆದಿದೆ ಎಂದು ಇರಾನ್‌ನ ಭದ್ರತಾ ಪಡೆಗಳಿಗೆ ನಿಕಟವಾಗಿರುವ ಅಧಿಕಾರಿಗಳು ದೃಢಪಡಿಸಿದ್ದಾರೆ.

ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್(ಎಸ್‌ಎನ್‌ಎಸ್‌ಸಿ)ಯ ಉನ್ನತ ಅಧಿಕಾರಿ ಹಾಗೂ ಸೌದಿ ಅರೆಬಿಯಾದ ಗುಪ್ತಚರ ವಿಭಾಗದ ಮುಖ್ಯಸ್ಥ ಖಾಲಿದ್ ಬಿನ್ ಅಲಿ ಅಲ್ ಹುಮೈದನ್ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು ಎಂದು ಎಸ್‌ಎನ್‌ಎಸ್‌ಸಿಗೆ ನಿಕಟವಾಗಿರುವ ನೂರ್‌ನ್ಯೂಸ್ ವರದಿ ಮಾಡಿದೆ.

ಉಭಯ ದೇಶಗಳ ನಡುವಿನ ಸಂಬಂಧವನ್ನು ಮರುಸ್ಥಾಪಿಸಲು ಅಡ್ಡಿಯಾಗಿರುವ ಪ್ರಮುಖ ಸವಾಲುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ . ಧನಾತ್ಮಕ ರೀತಿಯಲ್ಲಿ ನಡೆದಿರುವ ಸಭೆಯು ದ್ವಿಪಕ್ಷೀಯ ಸಂಬಂಧದ ಉತ್ತಮ ಭವಿಷ್ಯವನ್ನು ತೆರೆದಿಟ್ಟಿದೆ. ಈ ಸಭೆಯು ಮುಂದಿನ ಹಂತದಲ್ಲಿ ಉಭಯ ದೇಶಗಳ ವಿದೇಶ ಸಚಿವರ ಮಟ್ಟದ ಸಭೆಗೆ ಹಾದಿ ಸುಗಮಗೊಳಿಸಿದೆ ಎಂದು ವರದಿ ಹೇಳಿದೆ.

    2016ರಲ್ಲಿ ಟೆಹ್ರಾನ್‌ನಲ್ಲಿನ ಸೌದಿ ಅರೆಬಿಯಾ ದೂತಾವಾಸದ ಮೇಲೆ ಜನರ ತಂಡವೊಂದು ದಾಳಿ ನಡೆಸಿದ ಬಳಿಕ ಇರಾನ್ ಮತ್ತು ಸೌದಿ ಅರೆಬಿಯಾ ನಡುವಿನ ರಾಜತಾಂತ್ರಿಕ ಬಾಂಧವ್ಯ ರದ್ದಾಗಿದೆ. ಆ ಬಳಿಕ ಯೆಮನ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಇರಾನ್ ಮತ್ತು ಸೌದಿ ಅರೆಬಿಯಾ ಎದುರಾಳಿ ತಂಡದಲ್ಲಿ ಗುರುತಿಸಿಕೊಂಡಿವೆ. ಯೆಮನ್‌ನ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರವನ್ನು ಪ್ರತಿನಿಧಿಸುತ್ತಿರುವ ಸೇನೆಯನ್ನು ಸೌದಿ ಅರೆಬಿಯಾ ಬೆಂಬಲಿಸಿದರೆ, ಹೌದಿ ಬಂಡುಗೋರರಿಗೆ ಇರಾನ್ ಬೆಂಬಲ ನೀಡುತ್ತಿದೆ. ಇದೀಗ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ಬಳಿಕ ಯೆಮನ್‌ನಲ್ಲಿ 2 ತಿಂಗಳ ಯುದ್ಧವಿರಾಮ ಜಾರಿಯಲ್ಲಿದೆ.

 ನೇರ ಮಾತುಕತೆಯಿಂದ ದ್ವಿಪಕ್ಷೀಯ ಸಂಬಂಧ ಸುಧಾರಿಸಲಿದೆ ಮತ್ತು ಪ್ರಾದೇಶಿಕ ಉದ್ವಿಗ್ನತೆ ಕಡಿಮೆಯಾಗಲಿದೆ ಎಂದು ಉಭಯ ದೇಶಗಳೂ ಆ ಬಳಿಕ ಪ್ರತಿಪಾದಿಸುತ್ತಾ ಬಂದಿದ್ದವು. ಇದೀಗ ಇರಾಕ್ ಹಾಗೂ ಒಮನ್ ಆಸಕ್ತಿ ವಹಿಸಿ ಉಭಯ ದೇಶಗಳ ನಡುವಿನ ನೇರ ಮಾತುಕತೆಗೆ ವೇದಿಕೆ ಕಲ್ಪಿಸಿದೆ. ಜಿದ್ದಾದಲ್ಲಿರುವ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಆಪರೇಷನ್(ಒಐಸಿ)ಯಲ್ಲಿ ಇರಾನ್‌ನ ರಾಜತಾಂತ್ರಿಕ ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಮಾತುಕತೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News