ಉ.ಕೊರಿಯಾ ಪರಮಾಣು ಬೆದರಿಕೆ ಬಗ್ಗೆ ಬೈಡನ್, ದಕ್ಷಿಣ ಕೊರಿಯಾ ಅಧ್ಯಕ್ಷರ ಚರ್ಚೆ
ಸಿಯೋಲ್, ಮೇ 21: ಉತ್ತರ ಕೊರಿಯಾದಿಂದ ಹೆಚ್ಚುತ್ತಿರುವ ಪರಮಾಣು ಬೆದರಿಕೆಗೆ ಪ್ರತಿಯಾಗಿ ಜಂಟಿ ಮಿಲಿಟರಿ ಕವಾಯತನ್ನು ಹೆಚ್ಚಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಚರ್ಚೆ ನಡೆಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕ ದಕ್ಷಿಣ ಕೊರಿಯಾ ಮೈತ್ರಿಯು ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಆಧಾರಸ್ಥಂಭವಾಗಿದೆ ಎಂದು ಸಭೆಯ ಬಳಿಕ ಬೈಡನ್ ಹೇಳಿದರು.
ಅಮೆರಿಕ ಅಧ್ಯಕ್ಷರಾಗಿ ಏಶ್ಯಾಕ್ಕೆ ನೀಡಿದ ಪ್ರಪ್ರಥಮ ಭೇಟಿಯ ಅಂಗವಾಗಿ ದಕ್ಷಿಣ ಕೊರಿಯಾಕ್ಕೆ ಶುಕ್ರವಾರ ಆಗಮಿಸಿದ ಜೋ ಬೈಡನ್, ದಕ್ಷಿಣ ಕೊರಿಯಾ ಅಧ್ಯಕ್ಷರ ಜತೆ ವಿಸ್ತತ ಮಾತುಕತೆ ನಡೆಸಿದರು. ‘ಉತ್ತರ ಕೊರಿಯಾದಿಂದ ಹೆಚ್ಚುತ್ತಿರುವ ಬೆದರಿಕೆಯನ್ನು ಪರಿಗಣಿಸಿ ಕೊರಿಯಾದ ಪರ್ಯಾಯ ದ್ವೀಪದಲ್ಲಿ ಮತ್ತು ಅದರ ಸುತ್ತಲೂ ಸಂಯೋಜಿತ ಮಿಲಿಟರಿ ಕವಾಯತ್ ಮತ್ತು ತರಬೇತಿಯ ಪ್ರಮಾಣ ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು ಉಭಯ ಮುಖಂಡರು ನಿರ್ಧರಿಸಿದ್ದಾರೆ’ ಎಂದು ಬಳಿಕ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಉತ್ತರ ಕೊರಿಯಾವನ್ನು ಪರಮಾಣು ಅಸ್ತ್ರ ಮುಕ್ತಗೊಳಿಸುವುದಕ್ಕೆ ತಮ್ಮ ಬದ್ಧತೆಯನ್ನು ಉಭಯ ಮುಖಂಡರೂ ಮತ್ತೆ ದೃಢಪಡಿಸಿದರು ಎಂದು ವರದಿಯಾಗಿದೆ.
ಜೊತೆಗೆ, ಉತ್ತರಕೊರಿಯಾದಲ್ಲಿ ಉಲ್ಬಣಿಸಿರುವ ಕೋವಿಡ್ ಸೋಂಕಿನ ಪ್ರಕರಣದ ಬಗ್ಗೆ ಉಭಯ ಮುಖಂಡರೂ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸೋಂಕಿನ ವಿರುದ್ಧದ ಹೋರಾಟದಲ್ಲಿ ಉತ್ತರ ಕೊರಿಯಾಕ್ಕೆ ನೆರವಾಗಲು ಅಂತರಾಷ್ಟ್ರೀಯ ಸಮುದಾಯದೊಂದಿಗೆ ಸೇರಿ ಕೆಲಸ ಮಾಡಲು ಸಿದ್ಧ ಎಂದು ಘೋಷಿಸಿದ್ದಾರೆ. ಉತ್ತರ ಕೊರಿಯಾದೊಂದಿಗಿನ ರಾಜಕೀಯ ಅಥವಾ ಮಿಲಿಟರಿ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಮಾನವೀಯ ತತ್ವದ ಆಧಾರದಲ್ಲಿ ನೆರವು ನೀಡಲಾಗುವುದು ಎಂದು ಹೇಳಿಕೆ ತಿಳಿಸಿದೆ.
ಇಂಡೊ ಪೆಸಿಫಿಕ್ ವಲಯವನ್ನು ಮುಕ್ತಗೊಳಿಸುವ ಮತ್ತು ಈ ವಲಯದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವವನ್ನು ನಿಯಂತ್ರಿಸಲು ಅಮೆರಿಕ ಉದ್ದೇಶಿಸಿದ್ದು, ಜಪಾನ್ ಮತ್ತು ದಕ್ಷಿಣ ಕೊರಿಯಾಗಳಿಗೆ ಈ ಯೋಜನೆಯಲ್ಲಿ ಮಹತ್ವದ ಪಾತ್ರವಿದೆ . ಏಕತೆಯ ಪ್ರದರ್ಶನ ಮತ್ತು ಅಮೆರಿಕದ ನಿಕಟ ಮಿತ್ರದೇಶಗಳ ಮಧ್ಯೆ ಸಮನ್ವಯ ಬಲಪಡಿಸುವುದು ಬೈಡನ್ ಅವರ ಏಶ್ಯಾ ಪ್ರವಾಸದ ಪ್ರಮುಖ ಉದ್ದೇಶವಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ .