ಟ್ವಿಟರ್‌ ನಲ್ಲಿ ಖಾಸಗಿ ದತ್ತಾಂಶ ಕಳವು; 150 ದಶಲಕ್ಷ ಡಾಲರ್ ಪರಿಹಾರ

Update: 2022-05-27 01:52 GMT

ವಾಷಿಂಗ್ಟನ್: ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟರ್, ಬಳಕೆದಾರರ ದತ್ತಾಂಶಗಳನ್ನು ಕಳೆದ ಆರು ವರ್ಷಗಳಲ್ಲಿ ಕಳವಿನಿಂದ ರಕ್ಷಿಸಲು ವಿಫಲವಾದ ಹಿನ್ನೆಲೆಯಲ್ಲಿ 150 ದಶಲಕ್ಷ ಡಾಲರ್ ದಂಡ ಪಾವತಿಸಬೇಕಾಗಿದೆ.

ಭಾರಿ ಮೊತ್ತದ ದಂಡ ಪಾವತಿಸುವ ಜತೆಗೆ ಹೊಸ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ನ್ಯಾಯಾಂಗ ಇಲಾಖೆ ಮತ್ತು ಫೆಡೆರಲ್ ಟ್ರೇಡ್ ಕಮಿಷನ್ ಬುಧವಾರ ಟ್ವಿಟರ್ ವಿವಾದ ಪರಿಹರಿಸಿದ ಬಗ್ಗೆ ಹೇಳಿಕೆ ನೀಡಿವೆ.

2013ರ ಮೇ ತಿಂಗಳಿನಿಂದ 2019ರ ಸೆಪ್ಟೆಂಬರ್ ವರೆಗೆ, ಖಾತೆ ಸುರಕ್ಷತೆ ದೃಷ್ಟಿಯಿಂದ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ಐಡಿ ಸೇರಿದಂತೆ ತನ್ನ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುವುದಾಗಿ ಟ್ವಿಟ್ಟರ್ ಹೇಳಿತ್ತು.  ಆದರೆ ಇದನ್ನು ತನ್ನ ಬಳೆದಾರರಿಗೆ ನಿಗದಿತ ಆನ್‍ಲೈನ್ ಜಾಹೀರಾತುಗಳನ್ನು ಕಳುಹಿಸಲು ಬಳಸಲಾಗುತ್ತದೆ ಎಂದು ಹೇಳಿರಲಿಲ್ಲ ಎನ್ನುವುದು ಸರ್ಕಾರದ ಆರೋಪ.

ಫೆಡರಲ್ ಕಾನೂನು ದಾವೆಯನ್ನು ಕೂಡಾ ಬುಧವಾರ ಸಲ್ಲಿಸಲಾಗಿದ್ದು, ಅಮೆರಿಕವು ಯೂರೋಪಿಯನ್ ಒಕ್ಕೂಟ ಮತ್ತು ಸ್ವಿಡ್ಝರ್‍ಲೆಂಡ್ ಜತೆ ಮಾಡಿಕೊಂಡ ಚೌರ್ಯ ವಿರುದ್ಧದ ಒಪ್ಪಂದಗಳನ್ನು ಅನುಸರಿಸುತ್ತಿರುವುದಾಗಿ ಟ್ವಿಟ್ಟರ್ ಸುಳ್ಳು ಹೇಳಿಕೆ ನೀಡಿದೆ ಎಂದು ನಿಯಂತ್ರಕರು ದೂರಿದ್ದಾರೆ. ಇದರ ಅನ್ವಯ ಕಂಪನಿಗಳು ಯಾವ ಉದೇಶಕ್ಕೆ ದತ್ತಾಂಶಗಳನ್ನು ಪಡೆದಿದ್ದಾರೆಯೋ ಅದೇ ಉದ್ದೇಶ ಹೊರತುಪಡಿಸಿ ಉಳಿದ ಉದ್ದೇಶಗಳಿಗೆ ಬಳಕೆ ಮಾಡುವುದು ನಿಷಿದ್ಧ.

ಇದರ ಉಲ್ಲಂಘನೆಯಾಗಿ ಟ್ವಿಟರ್ 150 ದಶಲಕ್ಷ ಡಾಲರ್ ದಂಡ ಪಾವತಿಸಬೇಕು ಹಾಗೂ ಹೊಸ ಅನುಸರಣೆ ಕ್ರಮಗಳಿಗೆ ಬದ್ಧವಾಗಬೇಕು. ಈ ಇತ್ಯರ್ಥವನ್ನು ಕ್ಯಾಲಿಫೋರ್ನಿಯಾದಲ್ಲಿರುವ ಫೆಡರಲ್ ಕೋರ್ಟ್ ಮಾನ್ಯ ಮಾಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News