ಮಸೀದಿಗಳು ಮತ್ತು ಶಿವಲಿಂಗಗಳು
ದ್ವೇಷವನ್ನು ಹರಡುವ ಕೆಲಸದಲ್ಲಿ ಮುಂಚೂಣಿಯಲ್ಲಿರುವವರ ಪೈಕಿ ತೇಜಸ್ವಿ ಸೂರ್ಯ ಒಬ್ಬರು. ಇತ್ತೀಚೆಗೆ ಅವರನ್ನು ಆಸ್ಟ್ರೇಲಿಯಕ್ಕೆ ಆಹ್ವಾನಿಸಲಾಗಿತ್ತು. ಆದರೆ ಸ್ಥಳೀಯರ ಪ್ರತಿಭಟನೆಗಳಿಂದಾಗಿ ಅವರ ಕಾರ್ಯಕ್ರಮಗಳನ್ನು ರದ್ದುಪಡಿಸಲಾಯಿತು. ಕೊಲ್ಲಿ ದೇಶಗಳ ಪ್ರತಿಭಟನೆಗಳ ಬಳಿಕವಾದರೂ ನೂಪುರ್ ಶರ್ಮಾ ಮತ್ತು ತೇಜಸ್ವಿ ಸೂರ್ಯ ಮುಂತಾದವರನ್ನು ನಿಯಂತ್ರಿಸಲಾಗುತ್ತದೆ ಎಂಬುದಾಗಿ ಭಾವಿಸಲು ಅವಕಾಶವಿದೆಯೇ? ಅದೇನಿದ್ದರೂ, ಕೇವಲ ತಾತ್ಕಾಲಿಕ ವಿದ್ಯಮಾನ ಅಷ್ಟೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ಅಡಿಯಲ್ಲಿ ನೂರಾರು ಸಂಘಟನೆಗಳು ಬರುತ್ತವೆ. ಅವುಗಳಲ್ಲಿ ಮುಖ್ಯವಾದವು ಬಿಜೆಪಿ, ವಿಎಚ್‌ಪಿ, ಎಬಿವಿಪಿ ಮತ್ತು ಬಜರಂಗ ದಳ. ಆದರೆ ಅದಕ್ಕೆ ಸೇರಿದ ಲೆಕ್ಕವಿಲ್ಲದಷ್ಟು ಸಂಘಟನೆ ಗಳು ನಮ್ಮ ದೇಶದ ಅಕ್ಷರಶಃ ಮೂಲೆಮೂಲೆಗಳಲ್ಲೂ ಹರಡಿಕೊಂಡಿವೆ. ಬಿಜೆಪಿ ಸರಕಾರಗಳು ಇಲ್ಲದ ರಾಜ್ಯಗಳಲ್ಲೂ ಆರೆಸ್ಸೆಸ್‌ನ ಸಹ ಸಂಘಟನೆಗಳು ಮತ್ತು ಸ್ವತಃ ಆರೆಸ್ಸೆಸ್ ಕಳೆದ ಹಲವು ದಶಕಗಳಲ್ಲಿ ಹಾಗೂ ಮುಖ್ಯವಾಗಿ ಕಳೆದ 8 ವರ್ಷಗಳಲ್ಲಿ ಅತ್ಯಂತ ಸಕ್ರಿಯವಾಗಿವೆ. ಆರೆಸ್ಸೆಸ್ ಮುಖ್ಯಸ್ಥರು ಏನು ಹೇಳುತ್ತಾರೋ ಅದನ್ನು ಅದರ ಅಡಿಯಲ್ಲಿ ಬರುವ ಸಂಘಟನೆಗಳು ವೇದವಾಕ್ಯವಾಗಿ ಪರಿಗಣಿಸುತ್ತವೆ ಹಾಗೂ ಅವರು ಹೇಳಿರುವುದನ್ನು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಜಾರಿಗೆ ತರುತ್ತವೆ.
ಮೋಹನ್ ಭಾಗವತ್ ಜೂನ್ 3ರಂದು ನೀಡಿರುವ ಹೇಳಿಕೆಯನ್ನು ನಾವು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಕಾಶಿ-ಮಥುರಾ ದೇವಾಲಯಗಳಿಗಾಗಿ ನಾವು ಯಾವುದೇ ಚಳವಳಿಯನ್ನು ಆರಂಭಿಸುವುದಿಲ್ಲ ಎಂದು ಭಾಗವತ್ ಹೇಳಿದರು. ನಾವು ಅವುಗಳನ್ನು ನ್ಯಾಯಾಲಯಗಳ ಮೂಲಕ ಪಡೆದುಕೊಳ್ಳುತ್ತೇವೆ ಎಂದರು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ಬಯಸುವವರು ಇದನ್ನು ಭರವಸೆಯ ಸಂಕೇತವೆಂಬಂತೆ ನೋಡಿದರು. ಜ್ಞಾನವಾಪಿ ಮಸೀದಿ ಪ್ರಕರಣದ ಬಳಿಕ, ‘‘ದೇವಾಲಯಗಳ ಮೇಲೆ ಮಸೀದಿಗಳನ್ನು ಕಟ್ಟಲಾಗಿದೆ’’ ಎನ್ನಲಾದ ನೂರಾರು ಪ್ರಕರಣಗಳ ಬಗ್ಗೆ ಆರೆಸ್ಸೆಸ್ ಸಿದ್ಧಾಂತದ ಅನುಯಾಯಿಗಳು ಒಮ್ಮೆಲೆ ಮಾತನಾಡಲು ಆರಂಭಿಸಿದರು.
ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪರ ಹೇಳಿಕೆಯನ್ನು ಇದಕ್ಕೆ ಒಂದು ಮಾದರಿ ಉದಾಹರಣೆಯಾಗಿ ಪರಿಗಣಿಸಬಹುದು. ‘‘36,000 ಮಸೀದಿಗಳನ್ನು ದೇವಾಲಯಗಳ ಮೇಲೆ ನಿರ್ಮಿಸಲಾಗಿದೆ ಹಾಗೂ ಈ ದೇವಸ್ಥಾನ ಗಳನ್ನು ಕಾನೂನು ಮಾರ್ಗದ ಮೂಲಕ ವಾಪಸ್ ಪಡೆಯಲಾಗುವುದು’’ ಎಂಬುದಾಗಿ ಈಶ್ವರಪ್ಪ ಹೇಳಿದರು. ಆದರೆ, ಬಿಜೆಪಿಯ ಹಿರಿಯ ನಾಯಕ ಮತ್ತು ಆರೆಸ್ಸೆಸ್‌ನ ಸರಸಂಘಚಾಲಕನಿಗೆ 1991ರ ‘ಧಾರ್ಮಿಕ ಆರಾಧನಾ ಸ್ಥಳಗಳ ಕಾಯ್ದೆ’ಯೊಂದು ಇರುವ ಬಗ್ಗೆ ಗೊತ್ತಿಲ್ಲವೇ? 1947ರ ಆಗಸ್ಟ್ 15ರಂದು ಆರಾಧನಾ ಸ್ಥಳಗಳು ಯಾವ ಸ್ಥಾನಮಾನವನ್ನು ಹೊಂದಿದ್ದವೋ ಅದೇ ಸ್ಥಾನಮಾನವನ್ನು ಖಾಯಂ ಆಗಿ ಕಾಪಾಡಿಕೊಂಡು ಬರಬೇಕು ಎಂದು ಈ ಕಾಯ್ದೆ ಹೇಳುತ್ತದೆ.
ಅದೂ ಅಲ್ಲದೆ, ಪ್ರತಿಕೂಲ ಒಡೆತನ (adverse possession) ದ ಕಾನೂನು ಕೂಡ ಜಾರಿಯಲ್ಲಿದೆ. ಈಗ ಯಾವ ಮಸೀದಿಗಳ ಬಗ್ಗೆ ಮಾತನಾಡಲಾಗುತ್ತಿದೆಯೋ ಅವುಗಳ ಪೈಕಿ ಹೆಚ್ಚಿನವು ನೂರು ವರ್ಷಗಳಿಗಿಂತಲೂ ಹಿಂದಿನವು. ಹಾಗಾಗಿ, ಈ ಕಾನೂನುಗಳು ಅಸ್ತಿತ್ವದಲ್ಲಿರುವವರೆಗೆ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಬದಲಾಯಿಸುವುದು ಸಾಧ್ಯವಿಲ್ಲ.
ಭಾಗವತರ ಇನ್ನೊಂದು ಹೇಳಿಕೆಯನ್ನು ಗಮನಿಸಿ: ‘‘ಇದು ಕೇವಲ ನಂಬಿಕೆಯ ಪ್ರಶ್ನೆಯಾಗಿದೆ. ಹಿಂದೂಗಳು ಮುಸ್ಲಿಮರಿಗೆ ವಿರುದ್ಧವಾಗಿಲ್ಲ. ಹಿಂದೂಗಳು ವಿಶೇಷ ನಂಬಿಕೆ ಹೊಂದಿರುವ ಸ್ಥಳಗಳ ಬಗ್ಗೆ ಮಾತ್ರ ಈಗ ಮಾತನಾಡಲಾಗುತ್ತಿದೆ’’. ಇದು ಕೇವಲ ಕಣ್ಕಟ್ಟು. ಹಿಂದೂಗಳು ನೂರಾರು ಪೂಜಾ ಸ್ಥಳಗಳನ್ನು ಹೊಂದಿದ್ದಾರೆ. ಕೇದಾರ ನಾಥ, ಹರಿದ್ವಾರ, ದ್ವಾರಕಾ, ಜಗನ್ನಾಥ ಪುರಿ ಮತ್ತು ರಾಮೇಶ್ವರಮ್ ಅವುಗಳ ಪೈಕಿ ಕೆಲವು. ನಾವು ಚಿಕ್ಕವರಾಗಿದ್ದಾಗ ನಮ್ಮಜ್ಜ ನಮ್ಮನ್ನು ಹರಿದ್ವಾರ ಮತ್ತು ಪ್ರಯಾಗ್‌ರಾಜ್‌ಗೆ ತೀರ್ಥಯಾತ್ರೆಗೆ ಕರೆದುಕೊಂಡು ಹೋಗಿದ್ದರು. ಹಾಗೂ ಮುಂದಿನ ಬಾರಿ ಕುರುಕ್ಷೇತ್ರಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು.
ಅಯೋಧ್ಯೆ, ಕಾಶಿ, ಮಥುರಾ ಮುಂತಾದುವು ಅತ್ಯಂತ ಪವಿತ್ರ ಸ್ಥಳಗಳು. ಈ ಆರಾಧನಾ ಸ್ಥಳಗಳ ಸುತ್ತ ವಿವಾದ ಸೃಷ್ಟಿಸಲು ಅವಕಾಶವಿದೆ ಎನ್ನುವ ಕಾರಣಕ್ಕಾಗಿ ಈಗ ಆ ಸ್ಥಳಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಆರೆಸ್ಸೆಸ್ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆಯಿಲ್ಲ- ‘‘ಮುಸ್ಲಿಮ್ ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದು ಮತ್ತು ಹಿಂದಿನ ಕಾಲವನ್ನು ಸ್ವರ್ಣಯುಗವೆಂಬಂತೆ ವೈಭವೀಕರಿಸುವುದು’’. ‘‘ಎಲ್ಲಾ ಮಸೀದಿ ಗಳಲ್ಲಿ ಶಿವಲಿಂಗವನ್ನು ಹುಡುಕುವ ಅಗತ್ಯವಿಲ್ಲ’’ ಎನ್ನುವ ಭಾಗವತರ ಹೇಳಿಕೆ ಕೂಡ, ‘ಮುಸ್ಲಿಮ್ ದೊರೆಗಳು ದೇವಸ್ಥಾನವನ್ನು ನಾಶಪಡಿಸಿದ್ದಾರೆ’ ಎನ್ನುವ ಪ್ರಚಾರವನ್ನೇ ಎತ್ತಿಹಿಡಿಯುತ್ತದೆ. ಧ್ವಂಸಗೊಂಡಿರುವ ದೇವಾಲಯಗಳ ಸಂಖ್ಯೆಯನ್ನು ಅತಿರಂಜಿತ ಗೊಳಿಸಲಾಗಿದೆ ಹಾಗೂ ಹಿಂದೂ ದೊರೆಗಳು ಕೂಡ ಎದುರಾಳಿ ಹಿಂದೂ ದೊರೆಗಳ ದೇವಸ್ಥಾನಗಳನ್ನು ನಾಶಗೊಳಿಸಿದ್ದಾರೆ ಎಂಬುದಾಗಿ ರಿಚರ್ಡ್ ಈಟನ್ ಮುಂತಾದ ವಿದ್ವಾಂಸರು ಹೇಳುತ್ತಾರೆ.
ಆಕ್ರಮಣಕಾರಿಗಳು ಇಸ್ಲಾಮ್ ಧರ್ಮವನ್ನು ಹರಡಿದರು ಎನ್ನುವ ವಾದವನ್ನೂ ಆರೆಸ್ಸೆಸ್ ಮುಖ್ಯಸ್ಥರ ಹೇಳಿಕೆಯು ಪುನರುಚ್ಚರಿಸುತ್ತದೆ. ಇದು ಕೂಡ ಬಾಲಿಶತನದ ಹೇಳಿಕೆಯಾಗಿದೆ ಮತ್ತು ಇತಿಹಾಸದ ಆಯ್ದ ಭಾಗದ ಪ್ರದರ್ಶನವಾಗಿದೆ. ಅರಬ್ ವ್ಯಾಪಾರಿಗಳಿಂದ ಇಸ್ಲಾಮ್ ಭಾರತಕ್ಕೆ ಬಂತು ಎನ್ನುವುದು ನಮಗೆ ಗೊತ್ತಿದೆ. ಬಳಿಕ ಜಾತೀಯತೆಯ ನರಕದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹಲವರು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು.
ಮತಾಂತರಕ್ಕೆ ಕಾರಣವೇನು ಎನ್ನುವುದನ್ನು ಸ್ವಾಮಿ ವಿವೇಕಾನಂದರು ತನ್ನ ಎರಡು ಪತ್ರಗಳಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಅವರು ಒಂದು ಪತ್ರವನ್ನು ಖೇತ್ರಿಯ ಪಂಡಿತ್ ಶಂಕರ್‌ಲಾಲ್ (1892 ಸೆಪ್ಟಂಬರ್ 20)ಗೆ ಬರೆದರೆ, ಇನ್ನೊಂದನ್ನು ಹರಿದಾಸ್ ವಿಠಲದಾಸ್ ದೇಸಾಯಿ (1894 ನವೆಂಬರ್)ಗೆ ಬರೆದಿದ್ದಾರೆ. ‘‘ಕ್ರೈಸ್ತರು ಮತ್ತು ಮುಸ್ಲಿಮರ ದೌರ್ಜನ್ಯಗಳಿಂದಾಗಿ ಧಾರ್ಮಿಕ ಮತಾಂತರಗಳು ನಡೆದಿಲ್ಲ, ಬದಲಿಗೆ ಮೇಲ್ಜಾತಿಯ ದೌರ್ಜನ್ಯಗಳಿಂದಾಗಿ ನಡೆದಿವೆ’’ ಎಂಬುದಾಗಿ ಅವರು ತನ್ನ ಪತ್ರಗಳಲ್ಲಿ ಬೆಟ್ಟು ಮಾಡಿದ್ದಾರೆ.
ದ್ವೇಷವನ್ನು ಹರಡುವ ಕೆಲಸದಲ್ಲಿ ಮುಂಚೂಣಿಯಲ್ಲಿರುವವರ ಪೈಕಿ ತೇಜಸ್ವಿ ಸೂರ್ಯ ಒಬ್ಬರು. ಇತ್ತೀಚೆಗೆ ಅವರನ್ನು ಆಸ್ಟ್ರೇಲಿಯಕ್ಕೆ ಆಹ್ವಾನಿಸಲಾಗಿತ್ತು. ಆದರೆ ಸ್ಥಳೀಯರ ಪ್ರತಿಭಟನೆಗಳಿಂದಾಗಿ ಅವರ ಕಾರ್ಯಕ್ರಮಗಳನ್ನು ರದ್ದುಪಡಿಸಲಾಯಿತು. ಕೊಲ್ಲಿ ದೇಶಗಳ ಪ್ರತಿಭಟನೆಗಳ ಬಳಿಕವಾದರೂ ನೂಪುರ್ ಶರ್ಮಾ ಮತ್ತು ತೇಜಸ್ವಿ ಸೂರ್ಯ ಮುಂತಾದವರನ್ನು ನಿಯಂತ್ರಿಸಲಾಗುತ್ತದೆ ಎಂಬುದಾಗಿ ಭಾವಿಸಲು ಅವಕಾಶವಿದೆಯೇ? ಅದೇನಿದ್ದರೂ, ಕೇವಲ ತಾತ್ಕಾಲಿಕ ವಿದ್ಯಮಾನ ಅಷ್ಟೆ.
2018ರಲ್ಲಿ ಭಾಗವತರು ವಿಜ್ಞಾನಭವನದಲ್ಲಿ ಮೂರು ಭಾಷಣಗಳನ್ನು ಮಾಡಿದ್ದರು. ಆಗ, ಆರೆಸ್ಸೆಸ್‌ನ ದಾರಿಯಲ್ಲಿ ಕೊಂಚವಾದರೂ ಬದಲಾವಣೆಯಾಗಬಹುದು ಎಂಬ ಆಶಾಭಾವವನ್ನು ಕೆಲವರು ವ್ಯಕ್ತಪಡಿಸಿದ್ದರು. ಆದರೆ, ಅದು ಸಂಪೂರ್ಣ ತಪ್ಪಾಗಿದೆ. ಯಾಕೆಂದರೆ, ಈಗ ಪರಿಸ್ಥಿತಿ ಹಿಂದಿಗಿಂತಲೂ ಹೆಚ್ಚು ಹದಗೆಟ್ಟಿದೆ. ಹಾಗಾಗಿ, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಭಾಗತವರು ಈ ಹೇಳಿಕೆಯನ್ನು ನೀಡಿದ್ದಾರಷ್ಟೆ.
ಹಿಂದೂ ಸಮಾಜದ ಒಂದು ವರ್ಗದಲ್ಲಿ ‘ಘಾಸಿಗೊಂಡ ಭಾವನೆಗಳನ್ನು ಸೃಷ್ಟಿಸಿರುವ’ ಸುನಾಮಿಯಂಥ ಪ್ರಚಾರ ಅಭಿಯಾನವು ಒಂದು ಕಡೆ ನಡೆಯುತ್ತಿದೆ. ಅದೇ ವೇಳೆ, ಪೂಜಾ ಸ್ಥಳಗಳ ನಾಶ ಮತ್ತು ದೇಶದಲ್ಲಿ ವಿವಿಧ ಧರ್ಮಗಳ ಪ್ರಸಾರಕ್ಕೆ ಸಂಬಂಧಿಸಿದ ತಾರ್ಕಿಕ ವಿವರಣೆಗಳನ್ನು ಹರಡುವ ಪ್ರಯತ್ನಗಳು ಅತ್ಯಂತ ಸಣ್ಣ ಮಟ್ಟದಲ್ಲಿ ನಡೆಯುತ್ತಿದೆ. ಅದೃಷ್ಟವಶಾತ್, ಪುಶ್ಯಮಿತ್ರ ಶುಂಗ ಮತ್ತು ಶಶಕ ಬೌದ್ಧ ವಿಹಾರಗಳನ್ನು ಧ್ವಂಸಗೊಳಿಸಿರುವುದು ನಮ್ಮ ಧೂಳು ಹಿಡಿದ ಇತಿಹಾಸದ ಪುಸ್ತಕಗಳಲ್ಲಿ ಅಡಗಿಹೋಗಿದೆ. ಇಲ್ಲದಿದ್ದರೆ, ಧ್ವಂಸ ಆಧಾರಿತ ಅಭಿಯಾನಗಳಿಗೆ ಇನ್ನೊಂದು ವಿಷಯ ಸೇರ್ಪಡೆಗೊಳ್ಳುತ್ತಿತ್ತು!