ಜೈಲುಗಳು ವಿಚಾರಣಾಧೀನ ಕೈದಿಗಳಿಂದ ತುಂಬಿವೆ, ಇಲ್ಲಿ ಪೊಲೀಸ್‌ ರಾಜ್ಯ ಇದೆ ಎಂಬ ಭಾವನೆ ಮೂಡಬಾರದು: ಸುಪ್ರೀಂ ಕೋರ್ಟ್

Update: 2022-07-12 09:21 GMT

ಹೊಸದಿಲ್ಲಿ: ಜಾಮೀನು ಮಂಜೂರುಗೊಳಿಸುವ ಕುರಿತಂತೆ  ತನಿಖಾ ಏಜನ್ಸಿ ಹಾಗೂ ಕೆಳಗಿನ ಹಂತದ ನ್ಯಾಯಾಲಯಗಳಿಗೆ ಪ್ರಮುಖ ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್, ಬಂಧನವೆಂಬುದು ಒಂದು ಕಠಿಣ ಕ್ರಮವಾಗಿದೆ ಹಾಗೂ ಇದರಿಂದ ಸ್ವಾತಂತ್ರ್ಯವನ್ನು ಹತ್ತಿಕ್ಕಿದಂತಾಗುವುದರಿಂದ ಅದನ್ನು ಅತ್ಯಂತ ವಿರಳವಾಗಿ ಬಳಸಬೇಕು ಎಂದು ಹೇಳಿದೆ.

"ಪ್ರಜಾಪ್ರಭುತ್ವದಲ್ಲಿ ಅದೊಂದು ಪೊಲೀಸ್ ರಾಜ್ಯವೆಂಬ ಭಾವನೆ ಯಾವತ್ತೂ ಬರಬಾರದು ಏಕೆಂದರೆ ಎರಡೂ ಪರಸ್ಪರ ವಿರುದ್ಧವಾಗಿದೆ,'' ಎಂದು ಜಸ್ಟಿಸ್ ಎಸ್ ಕೆ ಕೌಲ್ ಮತ್ತು ಜಸ್ಟಿಸ್ ಎಂ.ಎಂ ಸುಂದರೇಶ್ ಅವರ ಪೀಠ ಹೇಳಿದೆ. ಜಾಮೀನು ನೀಡಿಕೆ ಪ್ರಕ್ರಿಯೆಯನ್ನು ಕ್ರಮಬದ್ಧಗೊಳಿಸಲು ಜಾಮೀನು ಸಂಬಂಧಿತ ಪ್ರತ್ಯೇಕ ಕಾಯಿದೆ ಜಾರಿಗೆ ತರಬೇಕು ಎಂದು ಪೀಠ ಸರಕಾರಕ್ಕೆ ಸೂಚಿಸಿದೆ.

ಭಾರತದಲ್ಲಿ ಜೈಲುಗಳು ವಿಚಾರಣಾಧೀನ ಕೈದಿಗಳಿಂದ ತುಂಬಿ ತುಳುಕುತ್ತಿವೆ ಹಾಗೂ ಜೈಲುಗಳಲ್ಲಿರುವ ಮೂರನೇ ಎರಡಂಶದಷ್ಟು ಮಂದಿ ವಿಚಾರಣಾಧೀನ ಕೈದಿಗಳು ಎಂಬುದನ್ನು ಅಂಕಿಅಂಶಗಳು ಸೂಚಿಸುತ್ತವೆ ಎಂದು ಪೀಠ ಹೇಳಿದೆ ಇವರ ಪೈಕಿ ಹೆಚ್ಚಿನವರನ್ನು ಬಂಧಿಸುವ ಅಗತ್ಯವೇ ಇಲ್ಲ ಹಾಗೂ ಏಳು ವರ್ಷ ಅಥವಾ ಅದಕ್ಕಿಂತ ಕಡಿಮೆ ಶಿಕ್ಷೆಯೊದಗಿಸಬಹುದಾದ ಅಪರಾಧ ಮಾಡಿರಬಹುದು ಅಷ್ಟೇ ಅಲ್ಲ ಅವರು ಬಡವರು ಅನಕ್ಷರಸ್ಥರು ಮತ್ತು ಮಹಿಳೆಯರನ್ನು ಒಳಗೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಸೆಕ್ಷನ್ 41 ಹಾಗೂ ಸೆಕ್ಷನ್ 41ಎ ಅನುಸರಿಸದೆಯೇ ಬಂಧಿಸುವ ಅಧಿಕಾರಿಗಳನ್ನು ನ್ಯಾಯಾಲಯಗಳು ತರಾಟೆಗೆ ತೆಗೆದುಕೊಳ್ಳಬೇಕು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಒಂದೇ ರೀತಿಯ ಅಪರಾಧ ಮಾಡಿದವರನ್ನು ಅದೇ ಅಥವಾ ಬೇರೆ ನ್ಯಾಯಾಲಯಗಳು ಭಿನ್ನವಾಗಿ  ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

 ಅಪರಾಧ ಯಾವುದೇ ಸ್ವರೂಪದ್ದಾಗಿರಬಹುದು, ವಿಸ್ತರಿತ ವಿಚಾರಣೆ, ಅಪೀಲು ಮುಂತಾದ ಪ್ರಕ್ರಿಯೆ ವಿಳಂಬಿಸುವ ಕ್ರಮಗಳು 21ನೇ ವಿಧಿಗೆ ವಿರುದ್ಧವಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News