ಭಾರತೀಕರಣದ ಹೆಸರಿನಲ್ಲಿ ಬ್ರಾಹ್ಮಣೀಕರಣ
ಬಿಜೆಪಿಯ ‘‘ಭಾರತದ ಜ್ಞಾನ’’ ಅಧಿಕೃತ ಭಾರತೀಯ ಎಂದು ಪರಿಗಣಿಸುವುದು ವೇದಗಳನ್ನು, ಸ್ಮತಿ ಪುರಾಣಗಳನ್ನು ಮಾತ್ರ. ಉಳಿದವುಗಳನ್ನು ಭಾರತೀಯ ಎಂದು ಪರಿಗಣಿಸುವುದಿರಲಿ ಹೆಸರಿಸುವುದೂ ಇಲ್ಲ. ಹೀಗಾಗಿ ಅದು ಭಾರತದ ಯುವಜನಾಂಗಕ್ಕೆ ಅರ್ಥಶಾಸ್ತ್ರವನ್ನು ಕಲಿಸಬೇಕಾದರೆ ಕೌಟಿಲ್ಯನ ಅರ್ಥಶಾಸ್ತ್ರವನ್ನು ಬೋಧಿಸಬೇಕೆಂದೂ, ಸಾರ್ವಜನಿಕ ಆಡಳಿತವನ್ನು ಬೋಧಿಸಬೇಕಾದರೆ ಮಹಾಭಾರತದ ಶಾಂತಿಪರ್ವವನ್ನು ಬೋಧಿಸಬೇಕೆಂದೂ, ಆಗ್ರಹಿಸುತ್ತದೆ.
ರೋಹಿತ್ ಚಕ್ರತೀರ್ಥ ಸಮಿತಿಯು ಕರ್ನಾಟಕದ ಪಠ್ಯಗಳ ಬಗ್ಗೆ ಮಾಡಿರುವ ಸಂಘನಿಷ್ಠ ಅವಾಂತರಗಳ ಬಗ್ಗೆ ಇಡೀ ನಾಡು ಹೋರಾಡುತ್ತಿರುವ ಹೊತ್ತಿನಲ್ಲೇ ಶಿಕ್ಷಣದ ಉದ್ದೇಶ, ಕಲಿಕಾ ವಿಧಾನ, ಪಠ್ಯಕ್ರಮ ಮತ್ತು ಪಠ್ಯಗಳನ್ನು ಆಮೂಲಾಗ್ರವಾಗಿ ಬ್ರಾಹ್ಮಣೀಕರಿಸುವ ಬೃಹತ್ ಯೋಜನೆಯೊಂದು ಸದ್ದಿಲ್ಲದೆ ನಡೆಯುತ್ತಿದೆ. ಚಕ್ರತೀರ್ಥ ಸಮಿತಿಯು ಭಾಷಾ ಹಾಗೂ ಸಮಾಜ ವಿಜ್ಞಾನ ಪಠ್ಯಗಳನ್ನು ಮಾತ್ರ ಬ್ರಾಹ್ಮಣೀಕರಿಸುವ ಮತ್ತು ಸಂಘೀಕರಿಸುವ ಪ್ರಯತ್ನಗಳನ್ನಷ್ಟೆ ಮಾಡಿತ್ತು. ಆದರೆ ಇದೀಗ ಕರ್ನಾಟಕ ಸರಕಾರದ DSERT ರಾಜ್ಯ ಶೈಕ್ಷಣಿಕ ಸಂಪನ್ಮೂಲ ಮತ್ತು ತರಬೇತಿ ಇಲಾಖೆ)ಯು ನಿವೃತ್ತ ಅಧಿಕಾರಿ ಮದನ್ ಗೋಪಾಲ್ ಅವರ ನೇತೃತ್ವದಲ್ಲಿ ಎನ್‌ಇಪಿ-2020 ಅನ್ನು ಅನುಷ್ಠಾನಗೊಳಿಸಲು ಸಿದ್ಧಪಡಿಸಿರುವ 26 ಪೊಸಿಷನ್ ಪೇಪರ್‌ಗಳು ಭಾಷೆ ಮತ್ತು ಸಮಾಜ ವಿಜ್ಞಾನಗಳನ್ನು ಮಾತ್ರವಲ್ಲದೆ ಗಣಿತ, ವಿಜ್ಞಾನ, ಪರಿಸರ, ಪ್ರಾಥಮಿಕ ಕಲಿಕೆ, ಕಲಿಕಾ ವಿಧಾನ, ಆರೋಗ್ಯ ಮತ್ತು ಯೋಗಕ್ಷೇಮ, ತತ್ವಶಾಸ್ತ್ರ, ಶಿಕ್ಷಕರ ತರಬೇತಿ, ಪಠ್ಯಕ್ರಮ ಸಿದ್ಧತೆ, ಶಾಲಾ ಪರಿಸರ, ಮೌಲ್ಯ ಶಿಕ್ಷಣ..ಇನ್ನಿತ್ಯಾದಿ 26 ಶಿಸ್ತುಗಳಲ್ಲೂ ರೋಹಿತ್ ಚಕ್ರತೀರ್ಥ ಸಮಿತಿ ಪ್ರಸ್ತಾಪಿಸಿರುವ ಜನವಿರೋಧಿ-ಸಂವಿಧಾನ ಬಾಹಿರ ತಿದ್ದುಪಡಿಗಳಿಗಿಂತಲೂ ಸಮಗ್ರವಾದ ಹಾಗೂ ಆಮೂಲಾಗ್ರವಾದ ಬ್ರಾಹ್ಮಣೀಕರಣವನ್ನು ಮಾಡಲಿದೆ.
ಈ ಎಲ್ಲಾ 26 ಪೊಸಿಷನ್ ಪೇಪರ್‌ಗಳೂ ಸರಕಾರದ ಈ ವೆಬ್ ವಿಳಾಸದಲ್ಲಿ: https://dsert.kar.nic.in/kasp/nepresources.asp ಲಭ್ಯವಿದ್ದು ನಾಡಿನ ಬಗ್ಗೆ ಕಾಳಜಿ ಇರುವವರೆಲ್ಲರೂ ಇದನ್ನು ಕೂಲಂಕಷವಾಗಿ ಓದಿ ಎದುರಾಗುತ್ತಿರುವ ಅಪಾಯವನ್ನು ಅರಿಯಬೇಕಿದೆ. ಎಲ್ಲಾ 26 ಪೇಪರ್‌ಗಳಿಗೂ ಒಂದೊಂದು ಸಮಿತಿಯಿದ್ದು ಅದರಲ್ಲಿರುವ ಎಲ್ಲರೂ ಪ್ರಖರ ಸಂಘೀವಾದಿಗಳು ಅಥವಾ ಪ್ರಚ್ಛನ್ನ ಸಂಘಿ ಭಾರತ ಸಮರ್ಥಕರು. ಇವುಗಳ ಸಂಯೋಜನೆ ಮಾಡಲು ನೇಮಿಸಲಾಗಿದ್ದ ಮಾಜಿ ಅಧಿಕಾರಿ ಮದನ್ ಗೋಪಾಲ್ ಅವರಂತೂ ಅಧಿಕಾರದಲ್ಲಿದ್ದಾಗ ಜನಪರರು ಎಂದು ಹೆಸರು ಮಾಡಿದ್ದರೂ ನಿವೃತ್ತರಾದ ಮೇಲೆ ಸಂಘ ರಾಜಕೀಯದ ಪೂರ್ಣಾವಧಿ ರಾಜಕೀಯ ಕಾರ್ಯಕರ್ತರಾಗಿ ಬದಲಾಗಿದ್ದಾರೆ. ಹೀಗಾಗಿಯೇ ಈ ಮೊದಲು ವೈಚಾರಿಕವಾಗಿ ಮತ್ತು ತಾರ್ಕಿಕವಾಗಿ ತಮ್ಮ ನಿಲುವುಗಳನ್ನು ಪ್ರತಿಪಾದಿಸುತ್ತಿದ್ದ ಮಾನ್ಯರು ಈಗ ಈ ಪೇಪರ್‌ಗಳಲ್ಲಿ ಪ್ರಸ್ತಾಪಿಸಲಾಗಿರುವ ತಿದ್ದುಪಡಿಗಳಿಗೆ ಗೂಗಲ್, ಕೋರಾದಂಥ ಅಭಿಪ್ರಾಯ ವಿನಿಮಯ ವೇದಿಕೆಗಳಲ್ಲಿ ಪ್ರಸ್ತಾಪಿಸಲಾಗಿರುವ ಸಂಗತಿಗಳನ್ನು ಅತ್ಯಂತ ವಿದ್ವತ್ಪೂರ್ಣ ಪುರಾವೆಗಳೆಂದು ಹೇಳುತ್ತಾ ಸಾರ್ವಜನಿಕವಾಗಿ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ.
ಎನ್‌ಇಪಿ-2020ರ ಮೂಲ ನೀತಿಯ ಕರಡಿನಲ್ಲೇ ಸುಮಾರು 19 ಪ್ಯಾರಾಗಳಲ್ಲಿ ಶಿಕ್ಷಣದಲ್ಲಿ ತರಲಿರುವ ಹಿಂದುತ್ವವಾದಿ ಬದಲಾವಣೆಗಳ ಕುರುಹನ್ನು ನೀಡಲಾಗಿತ್ತು. ಈಗ ಅವೆಲ್ಲವನ್ನು ಇನ್ನೂ ನಿರ್ದಿಷ್ಟವಾಗಿ ‘‘ಭಾರತದ ಜ್ಞಾನ’’ ಎಂಬ ಪೇಪರ್‌ನಲ್ಲಿ ಅಡಕಗೊಳಿಸಿ ಮಾರ್ಗದರ್ಶಿ ಪತ್ರಿಕೆಯನ್ನಾಗಿಸಲಾಗಿದೆ. ಉಳಿದ 25 ವಿಷಯಗಳಲ್ಲಿನ ತಿದ್ದುಪಡಿಗಳಿಗೆ ಸೈದ್ಧಾಂತಿಕ ಹಾಗೂ ರಾಜಕೀಯ ಮಾರ್ಗದರ್ಶನ ನೀಡಿರುವುದು ಈ ‘‘ಭಾರತದ ಜ್ಞಾನ’’ವೇ. ದೇಶದ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೂ ಹೀಗೆ ತಲಾ 26 ಪೇಪರ್‌ಗಳನ್ನು ಸಿದ್ಧಪಡಿಸುತ್ತವೆ. ಈ ಎಲ್ಲಾ ರಾಜ್ಯವಾರು ಪ್ರಸ್ತಾಪಗಳಲ್ಲಿ ಏಕರೂಪತೆ ತರಲು ಕೇಂದ್ರದಿಂದಲೇ ಸೂಚ್ಯ ಪದ ಹಾಗೂ ಅಂತಹ ಪದಗಳನ್ನು ಆಧರಿಸಿದ ಪರಿಕಲ್ಪನೆಗಳನ್ನೇ ಬಳಸಲು ಕಡ್ಡಾಯಗೊಳಿಸುವ ಸಾಫ್ಟ್‌ವೇರ್ ತಂತ್ರಜ್ಞಾನವನ್ನೂ ಒದಗಿಸಲಾಗಿದೆ. ಹೀಗಾಗಿ ಅದರಾಚೆಗೆ ಇರುವ ವಿವರಣಾತ್ಮಕ ವಿಷಯಗಳು ಮೂಲಪತ್ರದ ಸಾರವನ್ನು ಗಟ್ಟಿಗೊಳಿಸಲು ಉದಾಹರಣೆಗಳಂತೆ ಬಳಸಿಕೊಳ್ಳಲಾಗುತ್ತದೆಯೇ ವಿನಾ ಚರ್ಚೆಗಳಿಗಲ್ಲ. ಹೀಗೆ ಬಳಸಲ್ಪಡುವ ತಂತ್ರಜ್ಞಾನವೂ ಶಿಕ್ಷಣದಲ್ಲಿ ಸನಾತನೀ ಏಕರೂಪತೆಯನ್ನು ತರುವಂತೆ ರೂಪಿಸಲಾಗಿದೆ.
ಆದ್ದರಿಂದ ಮೊದಲು ‘‘ಭಾರತದ ಜ್ಞಾನ’’ ಎಂಬ ಪೊಸಿಷನ್ ಪೇಪರ್ ನಲ್ಲಿರುವ ಸಾರವನ್ನು ಗ್ರಹಿಸಿದರೆ ಉಳಿದಂತೆ ಇಡೀ ಶಿಕ್ಷಣದಲ್ಲಿ ತರಲಾಗುತ್ತಿರುವ ಆಮೂಲಾಗ್ರ ಬದಲಾವಣೆಯ ಸ್ವರೂಪ ಅರ್ಥವಾಗುತ್ತದೆ. ‘‘ಭಾರತದ ಜ್ಞಾನ’’ ಪೊಸಿಷನ್ ಪೇಪರ್ ಈ ವೆಬ್ ವಿಳಾಸದಲ್ಲಿ ಲಭ್ಯ: https://dsert.kar.nic.in/nep/13_Knowledge_of_india1.pdf
ಭಾರತದ ಜ್ಞಾನವೋ, ಬ್ರಾಹ್ಮಣೀಯ ದುರಹಂಕಾರವೋ?
‘‘ಭಾರತದ ಜ್ಞಾನ’’ ಎಂಬ ಪರಿಕಲ್ಪನೆಯನ್ನು ಎನ್‌ಇಪಿ-2020ರಲ್ಲಿ ಹೊಸದಾಗಿ ತೂರಿಸಲಾಗಿದೆ. ಮೇಲ್ನೋಟಕ್ಕೆ ಇದು ಜ್ಞಾನದ ಭಾರತೀಕರಣದ ಉದ್ದೇಶಗಳನ್ನು ಪ್ರತಿಪಾದಿಸುತ್ತದೆ. ಆ ಪೇಪರಿನ ಕೆಲವು ಪ್ಯಾರಾಗಳಲ್ಲಿ ಭಾರತೀಯ ಯುವಜನಾಂಗ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ತನ್ನ ಸನಾತನ ಇತಿಹಾಸದ ಬಗ್ಗೆ ಕೀಳರಿಮೆಯನ್ನೇ ಬೆಳೆಸಿಕೊಂಡಿದೆ. ಪಾಶ್ಚಿಮಾತ್ಯ ಜ್ಞಾನವನ್ನೇ ಪರಮ ಶ್ರೇಷ್ಠ ಎಂದುಕೊಂಡಿದೆ. ತನ್ನ ಬೇರುಗಳನ್ನೇ ಕಳೆದುಕೊಂಡಿದೆ. ಈ ವಸಾಹತುಶಾಹಿ ಕೀಳರಿಮೆಯಿಂದ ಭಾರತೀಯ ಯುವಜನಾಂಗವನ್ನು ಮುಕ್ತಗೊಳಿಸಿ ಭಾರತದ ಬಗ್ಗೆ ಹೆಮ್ಮೆ ಹಾಗೂ ಆತ್ಮವಿಶ್ವಾಸ ಮೂಡಿಸುವ ರಾಷ್ಟ್ರೀಯವಾದಿ ಶಿಕ್ಷಣ ಅತ್ಯಂತ ಅಗತ್ಯ ಎಂದು ಎನ್‌ಇಪಿ-2020 ಹಾಗೂ ಈ ‘‘ಭಾರತದ ಜ್ಞಾನ’’ ವಿಷಯಸೂಚಿ ಪತ್ರ ಪ್ರತಿಪಾದಿಸುತ್ತದೆ. ಹೀಗಾಗಿ ಈ ‘‘ಭಾರತದ ಜ್ಞಾನ’’ ಕೇವಲ ಪ್ರತ್ಯೇಕ ವಿಷಯವಾಗಿ ಮಾತ್ರವಲ್ಲದೆ ಎಲ್ಲಾ ಜ್ಞಾನ ಶಾಖೆಗಳಲ್ಲೂ ಪ್ರವಹಿಸಬೇಕು ಎಂದು ಘೋಷಿಸುತ್ತದೆ. ಜ್ಞಾನದ ನಿರ್ವಸಾಹತೀಕರಣವೇ ಈ ಯೋಜನೆಯ ಉದ್ದೇಶವಾದರೆ ಸಮಸ್ಯೆ ಇರುತ್ತಿರಲಿಲ್ಲ.
ಆದರೆ ಅದು ‘‘ಭಾರತದ ಜ್ಞಾನ’’ದ ಹೆಸರಲ್ಲಿ ಮುಂದಿಡುತ್ತಿರುವ ‘ಪರಮ ಜ್ಞಾನ’ ಬೇರೆಯದೇ ಆಗಿದೆ.
ಮೊದಲನೆಯದಾಗಿ ಅದರ ಪ್ರಕಾರ ಭಾರತ ಎಂದರೆ ಯಾವುದು? ಅದು ಸಂವಿಧಾನದಲ್ಲಿ ನಿರ್ವಚನಗೊಂಡಿರುವ ಸಕಲ ಧರ್ಮ, ಭಾಷೆ, ವರ್ಣ ಮತ್ತು ವರ್ಗಗಳಿಗೆ ಸಮಾನ ಸ್ಥಾನಮಾನ ಕಲ್ಪಿಸುವ ನಾವು ಈ ದೇಶದ ಜನ ಇರುವ ಭಾರತ ಅಲ್ಲ. ಬದಲಿಗೆ ‘‘ಭಾರತದ ಜ್ಞಾನ’’ ಪೇಪರಿನ ಮೊದಲ ಪ್ಯಾರಾದಲ್ಲೇ ಭಾರತವೆಂದರೆ ಸಂವಿಧಾನದಲ್ಲಿರುವ ಭಾರತವಲ್ಲವೆಂದೂ, ವಿಷ್ಣು ಪುರಾಣದಲ್ಲಿ ಹೇಳಿರುವ, ರಾಮಾಯಣದಲ್ಲಿ ಹೇಳಿರುವ ಹಾಗೂ ಬ್ರಿಟಿಷರನ್ನು ಸ್ನೇಹಿತರೆಂದೂ, ಮುಸ್ಲಿಮರು ಮಾತ್ರ ಶತ್ರುಗಳೆಂದೂ ಬೋಧಿಸುವ ಬಂಕಿಮ ಚಂದ್ರರ ‘ಆನಂದ ಮಠ’ ಕಾದಂಬರಿಯಲ್ಲಿರುವ ‘ವಂದೇಮಾತರಂ’ ಗೀತೆಯಲ್ಲಿ ಬಣ್ಣಿಸಿರುವ ಭಾರತವೆಂದು ಸ್ಪಷ್ಟವಾಗಿ ಹೇಳಲಾಗಿದೆ ಹಾಗೂ ಸ್ವಾತಂತ್ರ್ಯಾನಂತರದಲ್ಲಿ ಭಾರತವು ಅನುಸರಿಸಿದ ಸೆಕ್ಯುಲರ್ ಶಿಕ್ಷಣ ಭಾರತದ ಈ ಸನಾತನೀ ಸ್ವರೂಪವನ್ನು ಮರೆಮಾಚಿದೆ ಎಂದು ಆರೋಪಿಸುತ್ತದೆ.
ಅಶೋಕನೂ ಇಲ್ಲದ ಅಕ್ಬರನೂ ಇಲ್ಲದ- ಕೇವಲ ಆರ್ಯ ಭಾರ
ಅದೇ ಉಸಿರಿನಲ್ಲಿ ‘‘ಒಂದು ಸಾವಿರ ವರ್ಷದ ಗುಲಾಮಗಿರಿಯಲ್ಲಿದ್ದ ಭಾರತವು ಇದೀಗ ತಾನೇ ವಸಾಹತೀಕರಣದಿಂದ ಕಳಚಿಕೊಳ್ಳುತ್ತಿದೆ’’ ಎಂದು ಘೋಷಿಸುತ್ತದೆ. ಈ ಉಲ್ಲೇಖವು ಸ್ಪಷ್ಟಗೊಳಿಸುವಂತೆ ಬ್ರಿಟಿಷರ 250 ವರ್ಷಗಳು ಮಾತ್ರವಲ್ಲದೆ, ಹಿಂದುತ್ವವಾದಿಗಳು ತಪ್ಪುತಪ್ಪಾಗಿ ಹೇಳಿಕೊಂಡು ಬಂದ 750 ವರ್ಷಗಳ ಮುಸ್ಲಿಮರ ಆಳ್ವಿಕೆಯ ಕಾಲಘಟ್ಟವನ್ನೂ ವಸಾಹತುಶಾಹಿ ಎಂದು ಗುರುತಿಸಲಾಗಿದೆ. ಹೀಗಾಗಿ ಭಾರತದ ಭಾಷೆ, ಬದುಕು ಮತ್ತು ಸಂಸ್ಕೃತಿಗಳಲ್ಲಿ ಹಾಸುಹೊಕ್ಕಾಗಿರುವ ಇಸ್ಲಾಮಿನ ಕೊಡುಗೆಗಳನ್ನು ನಿರಾಕರಿಸಲಾಗಿದೆ ಮತ್ತು ಹಾಲೀ ಭಾರತವನ್ನು ಕಟ್ಟುವಲ್ಲಿ ಸಮಾನ ಕೊಡುಗೆ ನೀಡಿರುವ ಮುಸ್ಲಿಮರನ್ನು ಒಂದೇ ಏಟಿಗೆ ಅನ್ಯಗೊಳಿಸಲಾಗಿದೆ. ಅದೇ ಸಮಯದಲ್ಲಿ ಅತ್ಯಂತ ಕುತಂತ್ರದಿಂದ ಸಾವಿರ ವರ್ಷದ ಹಿಂದೆ ಈ ದೇಶಕ್ಕೆ ವಲಸೆ ಬಂದವರೆಲ್ಲಾ ಅರ್ಥಾತ್ ಆರ್ಯನರು ಈ ದೇಶದ ಮೂಲನಿವಾಸಿಗಳೆಂದು ಸ್ಥಾಪಿಸಲಾಗಿದೆ.
ಹಾಗಿದ್ದಲ್ಲಿ ಮುಸ್ಲಿಮ್ ಪೂರ್ವದಲ್ಲಿ ಈ ದೇಶದಲ್ಲಿ ಆಗಿಹೋದ ಎಲ್ಲವನ್ನೂ ಭಾರತೀಯ ಎಂದು ಪರಿಗಣಿಸಲಾಗಿದೆಯೇ ಎಂದರೆ ಅದೂ ಇಲ್ಲ. ಉದಾಹರಣೆಗೆ ಈ ದೇಶದ ಜ್ಞಾನಶಾಖೆಗಳಲ್ಲಿ ಪ್ರಧಾನವಾಗಿ ವೈದಿಕ ಮತ್ತು ಅವೈದಿಕ ಎಂಬ ಕವಲುಗಳನ್ನು ಗುರುತಿಸಬಹುದು. ವೈದಿಕ ಜ್ಞಾನಮೂಲಗಳಲ್ಲಿ ವೇದಗಳು, ಬ್ರಾಹ್ಮಣಗಳು, ಸ್ಮತಿ, ಶೃತಿಗಳು, ಪುರಾಣಗಳು, ಅದನ್ನು ಆಧರಿಸಿ ವರ್ಣ-ಜಾತಿಗಳಂತಹ ಶೋಷಕ ಸಾಮಾಜಿಕ-ಆರ್ಥಿಕ ಜೀವನ ಸೂತ್ರಗಳನ್ನು ರೂಪಿಸಿದ ಮನುಸ್ಮತಿ, ಕೌಟಿಲ್ಯನ ಅರ್ಥಶಾಸ್ತ್ರ ಇತ್ಯಾದಿಗಳಿವೆ. ಅದೇ ರೀತಿ ಈ ಜೀವನ ದರ್ಶನಗಳಿಗೆ ತದ್ವಿರುದ್ಧವಾದ ಸಾಮಾಜಿಕ-ಆರ್ಥಿಕ-ಪಾರಮಾರ್ಥಿಕ ದರ್ಶನಗಳನ್ನು ಬೋಧಿಸಿದ ಬೌದ್ಧ, ಜೈನ, ಚಾರ್ವಾಕ, ಲೋಕಾಯತ, ನಂತರದ ಭಕ್ತಿ ಪರಂಪರೆ, ಕರ್ನಾಟಕದಲ್ಲಾದರೆ ವಚನ ಚಳವಳಿ ಇತ್ಯಾದಿ ಬೃಹತ್ ಮತ್ತು ಅಪಾರ ಜ್ಞಾನಗಳ ಮೊತ್ತವಾಗಿರುವ ಅವೈದಿಕ ಜ್ಞಾನ ಪರಂಪರೆಗಳಿವೆ. ಇದಲ್ಲದೆ ಕಳೆದ ಒಂದು ಸಾವಿರ ವರ್ಷಗಳಲ್ಲಿ ಇಸ್ಲಾಮಿನ ಸೂಫಿ ಕವಲು ಈ ದೇಶದ ಅವೈದಿಕ ನಾಥ ಪರಂಪರೆಯೊಂದಿಗೆ ಬೆರೆತು ಹೊಸದಾಗಿ ಸೃಷ್ಟಿಸಿದ ಭಾರತೀಯವಾದದ್ದೇ ಆದ ಜ್ಞಾನವಿದೆ.
ಆದರೆ ಬಿಜೆಪಿಯ ‘‘ಭಾರತದ ಜ್ಞಾನ’’ ಅಧಿಕೃತ ಭಾರತೀಯ ಎಂದು ಪರಿಗಣಿಸುವುದು ವೇದಗಳನ್ನು, ಸ್ಮತಿ ಪುರಾಣಗಳನ್ನು ಮಾತ್ರ. ಉಳಿದವುಗಳನ್ನು ಭಾರತೀಯ ಎಂದು ಪರಿಗಣಿಸುವುದಿರಲಿ ಹೆಸರಿಸುವುದೂ ಇಲ್ಲ. ಹೀಗಾಗಿ ಅದು ಭಾರತದ ಯುವಜನಾಂಗಕ್ಕೆ ಅರ್ಥಶಾಸ್ತ್ರವನ್ನು ಕಲಿಸಬೇಕಾದರೆ ಕೌಟಿಲ್ಯನ ಅರ್ಥಶಾಸ್ತ್ರವನ್ನು ಬೋಧಿಸಬೇಕೆಂದೂ, ಸಾರ್ವಜನಿಕ ಆಡಳಿತವನ್ನು ಬೋಧಿಸಬೇಕಾದರೆ ಮಹಾಭಾರತದ ಶಾಂತಿಪರ್ವವನ್ನು ಬೋಧಿಸಬೇಕೆಂದೂ, ಆಗ್ರಹಿಸುತ್ತದೆ.
ಸಂಸ್ಕೃತ ಭಾಷೆ ಮಾತ್ರ ಭಾರತೀಯ ಸಂಸ್ಕೃತಿಯ ವಾಹಕವಂತೆ!
ಭಾರತೀಯ ಜ್ಞಾನವೆಲ್ಲಾ ಸಂಸ್ಕೃತ ಭಾಷೆಯಲ್ಲಿದೆಯೆಂದು ಅತ್ಯಂತ ದುರಹಂಕಾರ ಹಾಗೂ ಇತರ ಭಾರತೀಯ ಭಾಷೆಗಳ ಪುರಾತನತೆಯ ಬಗ್ಗೆ ತಿರಸ್ಕಾರವನ್ನು ತೋರುವ ಬಿಜೆಪಿ-ಆರೆಸ್ಸೆಸ್‌ನ ಈ ‘‘ಭಾರತದ ಜ್ಞಾನ’’ವು ಮಕ್ಕಳಿಗೆ 3ನೇ ವಯಸ್ಸಿನಿಂದಲೇ ಸಂಸ್ಕೃತವನ್ನು ಪರಿಚಯಿಸಬೇಕೆಂದು ಸಲಹೆ ಮಾಡುತ್ತದೆ. ತನ್ನ ತಾಯಿಭಾಷೆಯಲ್ಲಿ ಮಗು ಪರಿಚಯ ಮಾಡಿಕೊಳ್ಳುವ ಪಕ್ಷಿ, ಪ್ರಾಣಿ, ವಸ್ತುಗಳ ಹೆಸರನ್ನೆಲ್ಲಾ ಸಂಸ್ಕೃತದಲ್ಲಿ ಪರಿಚಯಿಸಬೇಕೆಂದು ಸಲಹೆ ಮಾಡಿದೆ ಹಾಗೂ ಭಾವೀ ಭಾರತದ ಯುವ ಜನಾಂಗ ‘‘ಭಾರತದ ಜ್ಞಾನ’’ವನ್ನು ಅರಿಯಬೇಕೆಂದರೆ ಸಂಸ್ಕೃತವನ್ನು ಕಡ್ಡಾಯವಾಗಿ ಮೂರನೇ ಭಾಷೆಯನ್ನಾಗಿ ಕಲಿಸುವುದು ಸೂಕ್ತ ಎಂದು ಸಲಹೆ ಮಾಡುತ್ತದೆ.
ಹೀಗೆ ಸಂಸ್ಕೃತದಲ್ಲಿ ಇರುವುದು ಮಾತ್ರ ‘‘ಭಾರತದ ಜ್ಞಾನ’’ ಎಂದು ಘೋಷಿಸುವ ಮೂಲಕ ಸಂಘಿಗಳು ಬ್ರಾಹ್ಮಣ ಜ್ಞಾನವನ್ನು ಮಾತ್ರ ‘‘ಭಾರತೀಯ ಜ್ಞಾನ’’ವೆಂದು ಅಧಿಕೃತಗೊಳಿಸುತ್ತಿದ್ದಾರೆ.
ಭಾರತೀಯರು ತಮ್ಮ ಇತಿಹಾಸದ ಬಗ್ಗೆ ಪೂರ್ವಿಕರ ಸಾಧನೆಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕಾದುದು ಸಾಕಷ್ಟಿದೆ. ಅದು ನಮ್ಮ ದೇಶದ ದುಡಿಯುವ ಜನ ತಮ್ಮ ಸತತ ಶ್ರಮದಿಂದ ಹಾಗೂ ಶ್ರಮದಿಂದ ಹುಟ್ಟಿದ ಜ್ಞಾನಗಳ ವಿನಿಮಯದಿಂದ ಕಳೆದ 4-5 ಸಾವಿರ ವರ್ಷಗಳಿಂದ ಕಟ್ಟಿದ ನಾಗರಿಕತೆ. ಆದರೆ ಎಲ್ಲಾ ನಾಗರಿಕತೆಗಳಲ್ಲೂ ಶೋಷಿತರ ಜ್ಞಾನ ಮತ್ತು ಶ್ರಮದ ಫಲಗಳು ಶೋಷಕರ ಪಾಲಾಗಿವೆ. ಭಾರತವನ್ನೂ ಒಳಗೊಂಡಂತೆ ಎಲ್ಲಾ ನಾಗರಿಕತೆಗಳಲ್ಲೂ ಈ ಶೋಷಿತರು ಶೋಷಕರ ಶ್ರಮ ಮತ್ತು ಜ್ಞಾನವನ್ನು ದರೋಡೆ ಮಾಡಿ ತಮ್ಮದೇ ಜ್ಞಾನವೆಂದು ಘೋಷಿಸಿಕೊಂಡಿದ್ದಾರೆ. ಶೋಷಿತರು ಶೋಷಣೆಯನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳುವಂತಹ ಸಾಮಾಜಿಕ ರಚನೆಗಳನ್ನು ರೂಪಿಸಿದ್ದಾರೆ. ಇತರ ನಾಗರಿಕತೆಗಳಲ್ಲಿ ಗುಲಾಮಿ ಸಮಾಜ, ಧರ್ಮ, ದೇವರು, ಭಕ್ತಿಗಳು ಈ ದರೋಡೆಯನ್ನು ಆಗುಗೊಳಿಸಿವೆ. ಭಾರತದಲ್ಲೂ ವರ್ಣಾಶ್ರಮ ಮತ್ತು ಆನಂತರದ ಜಾತಿ ವ್ಯವಸ್ಥೆ, ಅದನ್ನು ದೈವಿಕ ಸಾಮಾಜಿಕ ಸೂತ್ರವನ್ನಾಗಿಸಿದ ಮನುಸ್ಮತಿ, ಬ್ರಾಹ್ಮಣ್ಯಗಳಿವೆ. ಹೀಗಾಗಿ ಇತಿಹಾಸವನ್ನು ಅರ್ಥಮಾಡಿಕೊಳ್ಳುವಾಗ ಈ ಶೋಷಣೆಯ ಚರಿತ್ರೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಆದರೆ ಶೋಷಕರೇ ಚರಿತ್ರೆಯನ್ನು ಬರೆದಾಗ ಶೋಷಣೆಯನ್ನು ಮರೆಮಾಚುತ್ತಾರೆ ಅಥವಾ ಶೋಷಣೆಯನ್ನೇ ವಿಮೋಚನೆಯೆಂದು ದಾಖಲಿಸುತ್ತಾರೆ.
ಸಂಘಿಗಳು ‘‘ಭಾರತದ ಜ್ಞಾನ’’ದಲ್ಲೂ ಮಾಡಿರುವುದು ಅದೇ. ಭಾರತದ ಇತಿಹಾಸದ ಬಗ್ಗೆ ಯುವಜನಾಂಗ ಹೆಮ್ಮೆ ಪಡುವಂತೆ ಬೋಧಿಸಬೇಕು ಎನ್ನುವ ನೆಪದಲ್ಲಿ ಎಲ್ಲಾ ಶೋಷಣೆಗಳನ್ನು ವಿಮೋಚನಾ ಮಾರ್ಗವೆಂದು ಚಿತ್ರಿಸಲಾಗಿದೆ. ಉದಾಹರಣೆಗೆ ಅಂಬೇಡ್ಕರ್ ಹೇಳುವಂತೆ ಗುಪ್ತರ ಕಾಲದಲ್ಲಿ ಸಮಾನತೆಯನ್ನು ಆಧರಿಸಿದ ಬೌದ್ಧ ಧರ್ಮವನ್ನು ಕಗ್ಗೊಲೆ ಮಾಡಿ ದೇಶಬಿಟ್ಟು ಓಡಿಸಲಾಯಿತು. ಬುದ್ಧರ ಕಾಲದಲ್ಲಿ ಅಪಜಯಹೊಂದಿದ್ದ ಬ್ರಾಹ್ಮಣ್ಯವು ಗುಪ್ತರ ಕಾಲದಲ್ಲಿ ದಿಗ್ವಿಜಯ ಸಾಧಿಸಿತು. ಇದನ್ನು ಅಂಬೇಡ್ಕರ್ ಅವರು ಶೂದ್ರ, ದಲಿತ ಹಾಗೂ ಭಾರತೀಯ ಮಹಿಳೆಯರ ಚಾರಿತ್ರಿಕ ಅಪಜಯ ಎಂದು ಬಣ್ಣಿಸುತ್ತಾರೆ.
ಭಾರತದಲ್ಲಿ ಜಾತಿ ವ್ಯವಸ್ಥೆ ಇರಲೇ ಇಲ್ಲವಂತೆ!
ಆದರೆ ‘‘ಭಾರತದ ಜ್ಞಾನ’’ದಲ್ಲಿ ಗುಪ್ತರ ಕಾಲವನ್ನು ಭಾರತೀಯ ಸಮಾಜವು ಸ್ಥಿರತೆ, ಶಾಂತಿ ಮತ್ತು ಸಮೃದ್ಧಿಯನ್ನು ಪಡೆದ ಕಾಲವೆಂದು ಬಣ್ಣಿಸಲಾಗಿದೆ. ಮನುಸ್ಮತಿಯನ್ನು ವಿನಾಕಾರಣ ಪಾಶ್ಚಿಮಾತ್ಯ ಗ್ರಹಿಕೆಯ ಹಿನ್ನೆಲೆಯಲ್ಲಿ ಹೀಯಾಳಿಸಲಾಗುತ್ತಿದೆಯೇ ಹೊರತು ಅದು ಭಾರತದ ಸಮಾಜಕ್ಕೆ ಅಪಾರವಾದ ನೈತಿಕತೆಯನ್ನು ಕಲಿಸಿಕೊಟ್ಟಿದೆ ಎಂದು ಬೋಧಿಸಲಾಗಿದೆ. ಸಂಘಿಗಳ ರಾಜಗುರುವಾದ ಸಾವರ್ಕರ್ ಅವರೇ ಭಾರತದಲ್ಲಿ ಬೌದ್ಧ ಧರ್ಮದ ಅವಸಾನ ಅತ್ಯಗತ್ಯವಾಗಿತ್ತೆಂದು, ಹಿಂಸಾತ್ಮಕವಾಗಿ ಅದನ್ನು ನರಮೇಧಗಳ ಮೂಲಕ ಸಾಧಿಸಿದ ಪುಶ್ಯಮಿತ್ರ ಶೃಂಗ ಭಾರತದ ಪುನರುತ್ಥಾನಕ್ಕೆ ದೊಡ್ಡ ಕೊಡುಗೆ ನೀಡಿದನೆಂದು ತಮ್ಮ ‘ಭಾರತೀಯ ಇತಿಹಾಸದ ಆರು ಉಜ್ವಲ ಯುಗಗಳು’ ಎಂಬ ಪುಸ್ತಕದಲ್ಲಿ ಪದೇಪದೇ ಹೇಳಿದ್ದರೂ, ಬೌದ್ಧ ಧರ್ಮದ ಅವಸಾನಕ್ಕೆ ಇಸ್ಲಾಮಿನ ದಾಳಿ ಕಾರಣ ಎಂದು ಈ ಪಠ್ಯವು ಹೇಳುತ್ತದೆ.
ಅಷ್ಟು ಮಾತ್ರವಲ್ಲ, ಈ ಪೊಸಿಷನ್ ಪೇಪರಿನಲ್ಲಿ ಮಾತ್ರವಲ್ಲದೆ, ಸಮಾಜ ವಿಜ್ಞಾನ ಮತ್ತು ತತ್ವಶಾಸ್ತ್ರಗಳ ಪೊಸಿಷನ್ ಪೇಪರ್‌ಗಳಲ್ಲೂ ಪದೇಪದೇ ಈ ದೇಶದಲ್ಲಿ ವಸಾಹತುಶಾಹಿಗಳ ಆಗಮನಕ್ಕೆ ಮುನ್ನ ಜಾತಿ ವ್ಯವಸ್ಥೆಯೇ ಇರಲಿಲ್ಲವೆಂದು ಘೋಷಿಸಲಾಗಿದೆ ಹಾಗೂ ಜಾತಿ ಗಟ್ಟಿಗೊಳ್ಳಲು ಬ್ರಿಟಿಷರು ಪರಿಚಯಿಸಿದ ಜಾತಿ ಸೆನ್ಸಸ್ ಕಾರಣವೆಂದು ಬಾಲಿಶವಾಗಿ ಹೇಳಲಾಗಿದೆ. ಅಷ್ಟು ಮಾತ್ರವಲ್ಲ. ಈ ದೇಶದಲ್ಲಿ ಮಹಿಳೆಯರಿಗೆ ಮತ್ತು ತಳಸಮುದಾಯಗಳಿಗೆ ಶಿಕ್ಷಣಕೊಡುವ ಮೊತ್ತಮೊದಲ ಪ್ರಯತ್ನ ನಡೆಸಿದ ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ, ಫಾತಿಮಾ ಶೇಕ್ ಅವರಲ್ಲದೆ ಕುವೆಂಪು ಅವರೂ ಈ ದೇಶಕ್ಕೆ ಬ್ರಿಟಿಷರು ಬಂದ ನಂತರವೇ ಬ್ರಾಹ್ಮಣರಿಗೆ ಮತ್ತು ಮೇಲ್ಜಾತಿಗಳಿಗೆ ಸೀಮಿತವಾಗಿದ್ದ ಶಿಕ್ಷಣ ತಳಸಮುದಾಯಗಳಿಗೂ ತೆರೆದುಕೊಂಡಿತು ಎಂದು ದಾಖಲಿಸಿದ್ದಾರೆ. ಆದರೆ ಸಂಘಿಗಳ ‘‘ಭಾರತದ ಜ್ಞಾನ’’ವು ಬ್ರಿಟಿಷರು ಭಾರತಕ್ಕೆ ಬರುವ ಮುಂಚೆ ಭಾರತದ ದೇವಾಲಯಗಳಲ್ಲಿ ಕೊಡುತ್ತಿದ್ದ ಶಿಕ್ಷಣದಲ್ಲಿ ಯಾವುದೇ ಜಾತಿ ತಾರತಮ್ಯಗಳು ಇರಲಿಲ್ಲವೆಂದು ಘೋಷಿಸುತ್ತದೆ ಹಾಗೂ ದೇವಾಲಯಗಳಿಗೆ ಕಾಲಿಟ್ಟಿದ್ದಕ್ಕೆ ಪ್ರತಿನಿತ್ಯ ದಲಿತರ ಕಗ್ಗೊಲೆಗಳು ನಡೆಯುತ್ತಿರುವ ಈ ದೇಶದಲ್ಲಿ ಬರಲಿರುವ ದಿನಗಳಲ್ಲೂ ದೇವಾಲಯಗಳನ್ನು ಶಿಕ್ಷಣದ ಕೇಂದ್ರವನ್ನಾಗಿ ಮಾಡಿಕೊಳ್ಳಬೇಕೆಂದು ಆಗ್ರಹಿಸಲಾಗಿದೆ.
ದಲಿತರ ಹತ್ಯಾಕಾಂಡವಲ್ಲವಂತೆ-ಬ್ರಾಹ್ಮಣರ ಹತ್ಯಾಕಾಂಡವಂತೆ
ಭಾರತದಲ್ಲಿ ಬ್ರಾಹ್ಮಣೀಯ ಸವರ್ಣೀಯ ಸಮಾಜವು ಇತಿಹಾಸದಲ್ಲೂ, ವರ್ತಮಾನದಲ್ಲೂ ಪ್ರತಿನಿತ್ಯ ದಲಿತರ ಹತ್ಯಾಕಾಂಡಗಳು ನಡೆಸುತ್ತಿದ್ದರೂ ಅದರ ಬಗ್ಗೆ ಒಂದಕ್ಷರವನ್ನು ಬರೆಯಬೇಕೆಂದು ಹೇಳದ ಈ ‘‘ಭಾರತದ ಜ್ಞಾನ’’ದ ಕರ್ತೃಗಳು, ಭಾರತದ ಇತಿಹಾಸವನ್ನು ಬೋಧಿಸುವಾಗ 1920ರಲ್ಲಿ ಮಲಬಾರಿನ ಮಾಪ್ಲದಲ್ಲಿ ಮೇಲ್ಜಾತಿ ಮತ್ತು ಬ್ರಾಹ್ಮಣರ, ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣರ ಹಾಗೂ ಕಾಶ್ಮೀರಿ ಪಂಡಿತರ ಹತ್ಯೆಗಳನ್ನು ಮಾತ್ರ ಪಠ್ಯವನ್ನಾಗಿಸಲು ಧೈರ್ಯಮಾಡಬೇಕೆಂದು ಕರೆ ಕೊಡುತ್ತಾರೆ.
ನ್ಯೂಟನ್-ಪೈಥಾಗರಸ್ ಸುಳ್ಳು!
ಹಾಗೆಯೇ ಮರದಿಂದ ಸೇಬು ಕೆಳಗೆ ಬಿದ್ದಿದ್ದನ್ನು ಗಮನಿಸಿ ನ್ಯೂಟನ್ ಗುರುತ್ವಾಕರ್ಷಣ ಸಿದ್ಧಾಂತ ಕಂಡುಹಿಡಿದದ್ದು, ಪೈಥಾಗರಸ್ ಜ್ಯಾಮಿತಿಯ ಪ್ರಮೇಯ ಕಂಡುಹಿಡಿದ ಎನ್ನುವ ಕಥೆಗಳನ್ನು ಒಪ್ಪಿಕೊಳ್ಳದೆ ವಿಮರ್ಶಾತ್ಮಕವಾಗಿ ಪ್ರಶ್ನಿಸಬೇಕೆಂದು ಆಗ್ರಹಿಸುವ ‘‘ಭಾರತದ ಜ್ಞಾನ’’ವು ಪುರಾಣಗಳ ಕಾಲದಲ್ಲೇ ಪುಷ್ಪಕ ವಿಮಾನವಿತ್ತೆಂಬ, ಗಣೇಶನ ಪ್ಲಾಸ್ಟಿಕ್ ಸರ್ಜರಿ ಆಗಿತ್ತೆಂಬ ಕಥನಗಳನ್ನು ಮಾತ್ರ ಪ್ರಶ್ನಿಸಬಾರದೆಂದೂ, ಹಾಗೆ ಪ್ರಶ್ನಿಸುವುದು ಭಾರತೀಯ ಜ್ಞಾನಕ್ಕೆ ಮಾಡುವ ಅವಮಾನವೆಂದೂ, ವಸಾಹತುಶಾಹಿ ಕೀಳರಿಮೆಯೆಂದೂ ಬೋಧಿಸುತ್ತದೆ.
ಹೀಗೆ ಭಾರತೀಕರಣವೆನ್ನುವ ಹೆಸರಿನಲ್ಲಿ ಬ್ರಾಹ್ಮಣೀಕರಣವನ್ನು ಪ್ರತಿಪಾದಿಸುವ ಈ ‘‘ಭಾರತದ ಜ್ಞಾನ’’ದ ಮಾರ್ಗದರ್ಶನವೇ ಇತರ ಜ್ಞಾನ ಶಿಸ್ತುಗಳ ಪೇಪರ್‌ಗಳಿಗೂ ವಿಸ್ತರಿಸಿದೆ.
ವೇದ ತತ್ವ, ಉರು ಕಲಿಕೆ ಮತ್ತು ಶಾಖಾಹಾರ-ಅಧಿಕೃತ ಭಾರತೀಯತೆ
ಉದಾಹರಣೆಗೆ ತತ್ವಶಾಸ್ತ್ರದ ಪೊಸಿಷನ್ ಪೇಪರಿನಲ್ಲಿ ಸಂಪೂರ್ಣವಾಗಿ ವೈದಿಕ ಬ್ರಾಹ್ಮಣ ತತ್ವ ಪರಂಪರೆಯಾದ ಜ್ಞಾನ ಮತ್ತು ವಿದ್ಯೆಯೇ ಭಾರತದ ಅಧಿಕೃತ ತತ್ವಶಾಸ್ತ್ರವೆಂದು ಪ್ರತಿಪಾದಿಸಲಾಗಿದೆ. ವೇದಗಳ ಕಾಲದಲ್ಲಿ ಅದಕ್ಕೆ ಪ್ರತಿಯಾಗಿ ಮತ್ತು ಅದನ್ನು ತಿರಸ್ಕರಿಸುತ್ತಾ ಭಾರತದಲ್ಲೇ ಹುಟ್ಟಿದ ತತ್ವಶಾಸ್ತ್ರ ಪರಂಪರೆಯಾದ ಚಾರ್ವಾಕ, ಲೋಕಾಯತಗಳನ್ನು ಪರಿಗಣಿಸಿಯೂ ಇಲ್ಲ. ಜ್ಞಾನ ಮತ್ತು ವಿದ್ಯೆಗೆ ಮಾತ್ರ ಮನುಷ್ಯ ಸೀಮಿತನಾದರೆ ಪಶು ಸಮಾನನಾಗುತ್ತಾನಾದ್ದರಿಂದ ಜ್ಞಾನದ ಜೊತೆಗೆ ಶೀಲ, ಕರುಣ ಮತ್ತು ಮೈತ್ರಿಗಳು ಸೇರಿರಬೇಕೆಂದು ಪರ್ಯಾಯ ಜ್ಞಾನ ಪರಂಪರೆಯನ್ನು ಹುಟ್ಟುಹಾಕಿದ ಬೌದ್ಧ ಜ್ಞಾನದ ವಿವರಣೆಯೇ ಭಾರತೀಯ ತತ್ವಶಾಸ್ತ್ರದ ಆ ಪ್ರಸ್ತಾಪಗಳಲ್ಲಿಲ್ಲ. ಅಂದರೆ ಬ್ರಾಹ್ಮಣ ತತ್ವಶಾಸ್ತ್ರ ಮಾತ್ರ ಅಧಿಕೃತ ಭಾರತೀಯ ತತ್ವ ಶಾಸ್ತ್ರ ಎಂಬ ಇಂಗಿತ ಅದರಲ್ಲೂ ಸ್ಪಷ್ಟವಾಗಿದೆ.
ಹಾಗೆಯೇ ‘ಆರೋಗ್ಯ ಮತ್ತು ಯೋಗಕ್ಷೇಮ’ ಪೇಪರಿನಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ಮತ್ತು ಮಾಂಸ ನೀಡುವುದು ಶಾಖಾಹಾರಿಗಳಲ್ಲಿ ಕೀಳರಿಮೆ ಮತ್ತು ಪಂಕ್ತಿಭೇದ ಪ್ರಜ್ಞೆಯನ್ನು ಉಂಟುಮಾಡುವುದರಿಂದ ನಿಷೇಧಿಸಬೇಕೆಂದು ಸಲಹೆ ಮಾಡಿದೆ. ಈ ದೇಶದ ಬಹುಪಾಲು ಮಕ್ಕಳು ಎದುರಿಸುತ್ತಿರುವ ಪೌಷ್ಟಿಕಾಂಶದ ಕೊರತೆ ಈ ಮೊಟ್ಟೆ, ಮಾಂಸಗಳಿಂದ ತಕ್ಕಮಟ್ಟಿಗೆ ಬಗೆಹರಿಯುವ ಸಾಧ್ಯತೆ ಇದ್ದರೂ ಈ ಭಾರತೀಯ ಜ್ಞಾನದಿಂದ ಪ್ರೇರೇಪಿತವಾದ ಆರೋಗ್ಯ ಸಂಬಂಧಿ ಭಾರತದ ಮಕ್ಕಳ ಸಮಸ್ಯೆಯು ಪೌಷ್ಟಿಕಾಂಶ ಕೊರತೆಗಿಂತ ಜ�