ಸುಬ್ರಹ್ಮಣ್ಯ: ಮನೆ ಮೇಲೆ ಗುಡ್ಡ ಕುಸಿತ; ಮಣ್ಣಿನಡಿಗೆ ಸಿಲುಕಿ ಇಬ್ಬರು ಬಾಲಕಿಯರು ಮೃತ್ಯು

Update: 2022-08-01 18:25 GMT

ಸುಬ್ರಹ್ಮಣ್ಯ, ಆ.1: ಭಾರೀ ಮಳೆಗೆ ಸುಬ್ರಹ್ಮಣ್ಯದ ಕುಮಾರಧಾರ ಬಳಿಯ ಪರ್ವತಮುಖಿ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಇಬ್ಬರು ಸಹೋದರಿಯರಾದ ಬಾಲಕಿಯರು ಮಣ್ಣಿನಡಿ ಸಿಲುಕಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.

ಪರ್ವತಮುಖಿ ನಿವಾಸಿ ಕುಸುಮಾಧರ ಎಂಬವರ ಮಕ್ಕಳಾದ ಶ್ರುತಿ(11) ಹಾಗೂ ಜ್ಞಾನಶ್ರೀ (6) ಮೃತಪಟ್ಟ ಬಾಲಕಿಯರು.

ಸೋಮವಾರ ಸಂಜೆಯಿಂದ ಸುಬ್ರಹ್ಮಣ್ಯ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು, ಧಾರಾಕಾರ ಮಳೆಗೆ ಕುಸುಮಾಧರ ಅವರ ಮನೆಯ ಹಿಂಬದಿಯ ಗುಡ್ಡ ಏಕಾಏಕಿ ಮನೆಯ ಮೇಲೆ ಕುಸಿದು ಈ ದುರಂತ ಸಂಭವಿಸಿದೆ.

ಪೊಲೀಸ್ ಇಲಾಖೆ ಹಾಗೂ ಪುತ್ತೂರು ಉಪ ವಿಭಾಗಾಧಿಕಾರಿ ಸೇರಿದಂತೆ ಸ್ಥಳೀಯಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಿದ್ದಾರೆ. 

ಮನೆಯಲ್ಲಿ ತಂದೆ, ತಾಯಿ, ಅಜ್ಜಿ ಹಾಗೂ ಮಕ್ಕಳಿಬ್ಬರಿದ್ದು, ರಾತ್ರಿ ವೇಳೆ ಏಕಾಏಕಿ ಶಬ್ದ ಕೇಳಿದ್ದರಿಂದ ಮೂವರು ಮನೆಯಿಂದ ಹೊರಗೆ ಓಡಿ ಪಾರಾಗಿದ್ದಾರೆ. ಈ ವೇಳೆ ಮಕ್ಕಳಿಬ್ಬರು ಮನೆಯೊಳಗಿದ್ದು, ಏಕಾಏಕಿ ಗೋಡೆ ಕುಸಿದಿದ್ದರಿಂದ ಅವರಿಗೆ ಹೊರ ಬರಲು ಆಗಿಲ್ಲ ಎಂದು ತಿಳಿದುಬಂದಿದೆ. ಮರುಕ್ಷಣವೇ ಮನೆಯ ಮೇಲೆ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದ ಪರಿಣಾಮ ಮಕ್ಕಳಿಬ್ಬರು ಅದರಡಿಗೆ ಸಿಲುಕಿ ಮೃತಪಟ್ಟಿದ್ದಾರೆ. 

ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ಹೊರತೆಗೆಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News