ಬ್ರಿಟಿಷ್ ಸರಕಾರ ನಡುಗಿಸಿದ ಇಂಚಗೇರಿ ಮಠದ ಮಹಾದೇವಪ್ಪ

Update: 2022-08-15 06:28 GMT

ಗಾಂಧೀಜಿಯವರ ಹತ್ಯೆ ಮಾಡಿದ ಕೋಮುವಾದಿ ಶಕ್ತಿಗಳನ್ನು ಕಂಡರೆ ಮಹಾದೇವಪ್ಪನವರಿಗೆ ಆಗುತ್ತಿರಲಿಲ್ಲ. ಕೋಮುವಾದಿ ಸಂಘಟನೆಗಳನ್ನು ತಮ್ಮ ಮಠಕ್ಕೆ ಬಿಟ್ಟು ಕೊಳ್ಳುತ್ತಿರಲಿಲ್ಲ. ಹೀಗೆ ಅವಿಶ್ರಾಂತ ಹೋರಾಟ ಮಾಡುತ್ತಲೇ 1980ರಲ್ಲಿ ಅವರು ಕೊನೆಯುಸಿರೆಳೆದರು. ಇತಿಹಾಸದ ವಿರೂಪೀಕರಣ ಅತ್ಯಂತ ವ್ಯವಸ್ಥಿತವಾಗಿ ನಡೆದಿರುವ ಈ ದಿನಗಳಲ್ಲಿ ಈ ನೆಲದ ತಳ ಸಮುದಾಯಗಳ ಜನ, ಅಲ್ಪಸಂಖ್ಯಾತರು, ಕಡೆಗಣಿಸಲ್ಪಟ್ಟವರು ನಡೆಸಿದ ವೀರೋಚಿತ ಹೋರಾಟದ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿ ಹೇಳುವ ಕಾರ್ಯ ತುರ್ತಾಗಿ ನಡೆಯಬೇಕಿದೆ.



ಭಾರತದ ಸ್ವಾತಂತ್ರ ಹೋರಾಟದ ಅಮೃತ ಮಹೋತ್ಸವ ದ ಸಂದರ್ಭದಲ್ಲಿ ಮುಖ್ಯವಾಹಿನಿಯ ಇತಿಹಾಸದಲ್ಲಿ ಮರೆ ಮಾಚಲ್ಪಟ್ಟ ಜನಸಾಮಾನ್ಯರ ಹೋರಾಟದ ಮೇಲೆ ಬೆಳಕು ಚೆಲ್ಲುವ ಕಾರ್ಯತುರ್ತಾಗಿ ನಡೆಯಬೇಕಿದೆ. ಈ ಚಳವಳಿಯ ಚರಿತ್ರೆಯಲ್ಲಿ ಸರಿಯಾಗಿ ದಾಖಲೆಯಾಗದ ಸಾಕಷ್ಟು ಸಂಗತಿಗಳಿವೆ.

ಇದರ ಜೊತೆಗೆ ಟಿಪ್ಪು ಸುಲ್ತಾನನಂಥ ಭಾರತದ ಮೊದಲ ಸ್ವಾತಂತ್ರ ಹೋರಾಟಗಾರನ ಚರಿತ್ರೆಯ ವಿರೂಪೀಕರಣ ನಡೆದಿದೆ. ಕಾರಣ ಭಾರತ ವಿಮೋಚನಾ ಹೋರಾಟದ ನೈಜ ಸಂಗತಿಗಳನ್ನು ಬೆಳಕಿಗೆ ತರಬೇಕಿದೆ. ಮುಧೋಳ ತಾಲೂಕಿನ ಹಲಗಲಿ ಬೇಡರ ಬಂಡಾಯ, ಬ್ರಿಟಿಷರ ನಿದ್ದೆಗೆಡಿಸಿದ ಸಿಂಧೂರ ಲಕ್ಷ್ಮಣನ ವಿಭಿನ್ನ ಹೋರಾಟದ ವಿವರ ಸಮರ್ಪಕವಾಗಿ ದಾಖಲಾ ಗಿಲ್ಲ. ಅದೇ ರೀತಿ ಬಿಜಾಪುರ ಜಿಲ್ಲೆಯ ಇಂಚಗೇರಿ ಮಠದ ಮಹಾದೇವಪ್ಪ ಮುರಗೋಡ ಮತ್ತು ಅವರ ಅನುಯಾಯಿಗಳ ಸಂಘರ್ಷದ ನೈಜ ಸಂಗತಿಜನ ಮಾನಸದಲ್ಲಿ ಇದ್ದರೂ ಪ್ರಧಾನ ಧಾರೆಯ ಇತಿಹಾಸದಲ್ಲಿ ಕಡೆಗಣಿಸಲ್ಪಟ್ಟಿದೆ.

ಇಂಚಗೇರಿ ಮಠ ಯಾವುದೇ ಜಾತಿ, ಮತಕ್ಕೆ ಸೇರಿದ ಮಠವಲ್ಲ. ಮಹಾ ರಾಷ್ಟ್ರದ ಸಂತರ ವಿಶೇಷವಾಗಿ ಸಂತ ತುಕಾರಾಮ, ನಾಮದೇವ, ಜ್ಞಾನೇಶ್ವರ ಮುಂತಾದವರಿಂದ ಪ್ರಭಾವಿತವಾದ ಈ ಮಠ ಕರ್ನಾಟಕ ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿದೆ. ಮೂಲತಃ ಹುಬ್ಬಳ್ಳಿಯವರಾದ ಮಹಾದೇವಪ್ಪ ಮುರಗೋಡ ಅವರು ಕಳೆದ ನಲವತ್ತರ ದಶಕದಲ್ಲಿ ಈ ಮಠದ ಸಾರಥ್ಯ ವಹಿಸಿಕೊಂಡರು.ಆಗ ಭಾರತದಲ್ಲಿ ಸ್ವಾತಂತ್ರ ಹೋರಾಟದ ಬಿಸಿಯೇರಿತ್ತು.

ಈ ಹೋರಾಟದಲ್ಲಿ ತಮ್ಮ ಸಾವಿರಾರು ಅನುಯಾಯಿಗಳ ಜೊತೆ ಧುಮುಕಿದ ಮಹಾದೇವರಿಗೆ ಜೊತೆಯಾದವರು ಜಮಖಂಡಿ ತಾಲೂಕಿನ ಸಾವಳಗಿಯ ರಾಯಪ್ಪ ಬೆಳಗಲಿ ಮತ್ತು ಧರ್ಮಣ್ಣ ಬೆಳಗಲಿ ಸಹೋದರರು. ಆಗ ಉತ್ತರ ಕರ್ನಾಟಕದ ಬಿಜಾಪುರ, ಬೆಳಗಾವಿ ಮತ್ತು ಧಾರವಾಡ ಹಾಗೂ ಮಹಾರಾಷ್ಟ್ರದ ಸಾಂಗಲಿ, ಸೊಲ್ಲಾಪುರ ಜಿಲ್ಲೆಗಳಲ್ಲಿ ರಾಯಪ್ಪ ಬೆಳಗಲಿ ಮತ್ತು ಅವರ ತಂಡದ ಹೆಸರು ಮನೆ ಮಾತಾಗಿತ್ತು.ಇವರ ಮೇಲೆ ಜನಸಾಮಾನ್ಯರು ಅನೇಕ ಲಾವಣಿ ಪದಗಳನ್ನು ಕಟ್ಟಿ ಹಾಡಿದ್ದನ್ನು ಕೇಳಿರುವೆ.
ಮಹಾತ್ಮಾ ಗಾಂಧೀಜಿಯವರಿಂದ ಪ್ರಭಾವಿತವಾಗಿದ್ದ ಇಂಚಗೇರಿ ಮಠದಲ್ಲಿ ಜಾತಿ ಭೇದಕ್ಕೆ ಅವಕಾಶವಿಲ್ಲ. ಕೋಮುವಾದಿ ಶಕ್ತಿಗಳನ್ನು ಮಠದ ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಸ್ವಾತಂತ್ರ ಹೋರಾಟದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಹಾದೇವಪ್ಪನವರನ್ನು ಮಹಾರಾಷ್ಟ್ರದ ನಾಸಿಕ್ ಜೈಲಿನಲ್ಲಿ ಬಂಧಿಸಿ ಇಡಲಾಗಿತ್ತು. ಅಲ್ಲಿ ಇವರ ಪಕ್ಕದ ಕೋಣೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಸ್ಥಾಪಕರಲ್ಲೊಬ್ಬರಾದ ಶ್ರೀಪಾದ ಅಮೃತ ಡಾಂಗೆಯವರು ಇದ್ದರು.
ಅವರ ಸಂಪರ್ಕದಿಂದ ಎಡಪಂಥೀಯ ವಿಚಾರಗಳತ್ತ ಒಲವು ಬೆಳೆಸಿ ಕೊಂಡ ಮಹಾದೇವಪ್ಪನವರು ಬಿಡುಗಡೆಯಾಗಿ ಬಂದ ನಂತರ ತಮ್ಮ ಮಠವನ್ನು ಒಂದು ಜಾತ್ಯತೀತ ಮಠವನ್ನಾಗಿ ಕಟ್ಟಿದರು.
ಈ ಕಾರ್ಯಕ್ರಮದ ಪ್ರಯುಕ್ತ ಹುಲಕೋಟಿ, ಸಾವಳಗಿ ಮುಂತಾದ ಊರುಗಳ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿ ಆಯುಧಗಳನ್ನು ಅಪಹರಿಸಿ ಒಯ್ಯುವುದು, ಅಂಚೆ ಕಚೇರಿಗೆ ಅಗ್ನಿಸ್ಪರ್ಶ ಮಾಡುವುದು, ರೈಲು ಹಳಿ ಕಿತ್ತು ಹಾಕುವುದು...ಹೀಗೆ ಹಲವಾರು ರೀತಿಯ ಪ್ರತಿರೋಧವನ್ನು ಒಡ್ಡಿ ಬ್ರಿಟಿಷ್ ಆಡಳಿತಕ್ಕೆ ಬಿಸಿ ಮುಟ್ಟಿಸಿದರು.

ಭಾರತದ ಸ್ವಾತಂತ್ರ ಚಳವಳಿ ವಿಭಿನ್ನ ರೀತಿಗಳಲ್ಲಿ ನಡೆಯಿತು. ಮಹಾತ್ಮಾ ಗಾಂಧೀಜಿಯವರು ಅಹಿಂಸಾತ್ಮಕ ರೂಪದಲ್ಲಿ ಅಸಹಕಾರ ಹೋರಾಟದ ನೇತೃತ್ವ ವಹಿಸಿದರು. ಸುಭಾಷ್ ಚಂದ್ರ ಬೋಸ್ ಬಾಪೂಜಿಯವರನ್ನು ಗೌರವಿಸುತ್ತ ವಿದೇಶದಲ್ಲಿ ಸೇನೆ ಕಟ್ಟಿ ತಾಯ್ನಿಡಿನ ವಿಮೋಚನೆಯ ಮಾರ್ಗ ಹಿಡಿದರು. ಭಗತ್ ಸಿಂಗ್, ಚಂದ್ರಶೇಖರ ಆಝಾದ್ ಮುಂತಾದ ಕ್ರಾಂತಿಕಾರಿ ಗಳು ಚಿಕ್ಕ ವಯಸ್ಸಿನಲ್ಲೇ ಎಡಪಂಥೀಯ ವಿಚಾರಧಾರೆಗೆ ಮನಸೋತು ಉಗ್ರ ಹೋರಾಟದ ದಾರಿ ಹಿಡಿದರು.
ಇಂಚಗೇರಿ ಮಠದ ಮಹಾದೇವಪ್ಪ ಮುರಗೋಡ, ರಾಯಪ್ಪ ಬೆಳಗಲಿ, ಧರ್ಮಣ್ಣ ಬೆಳಗಲಿ ತಂಡದವರು ಗಾಂಧೀಜಿಯವರನ್ನು ಆದರ್ಶವಾಗಿ ಇಟ್ಟುಕೊಂಡೇ ಬ್ರಿಟಿಷ್ ಆಡಳಿತ ವ್ಯವಸ್ಥೆ ಅಸ್ತವ್ಯಸ್ತಗೊಳಿಸುವ ಕಾರ್ಯಕ್ರಮ ರೂಪಿಸಿದರು. ಬಿಜಾಪುರ ಜಿಲ್ಲೆಯ ಮಹಾದೇವಪ್ಪನವರ ನೇತೃತ್ವದ ಹೋರಾಟದಲ್ಲಿ ಸಾವಳಗಿ ಭಾಗದ ಬೆಳಗಲಿ, ನಾಂದ್ರೇಕರ, ಹಳಿಂಗಳಿ, ಓಗಿ, ಮಗದುಮ್ ಮನೆತನಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪಾಲ್ಗೊಂಡವು. ಸುರೇಂದ್ರ ನಾಂದ್ರೇಕರ, ಭೂಪಾಲ ನಾಂದ್ರೇಕರ, ಧನವಂತ ಹಳಿಂಗಳಿ ಹೀಗೆ ಆ ಕಾಲದ ಅನೇಕ ಯುವಜನರು ಭಾಗವಹಿಸಿದರು.

ರಾಯಪ್ಪ ಬೆಳಗಲಿ ಅವರು ಯುವಜನರ ತಂಡ ಕಟ್ಟಿಕೊಂಡು ಸಂಗೊಳ್ಳಿ ರಾಯಣ್ಣ, ಸಿಂಧೂರು ಲಕ್ಷ್ಮಣನ ರೀತಿಯಲ್ಲಿ ಊರೂರಿಗೆ ಹೋಗಿ ಸ್ವಾತಂತ್ರ ಹೋರಾಟದ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದರು. ಮಹಾದೇವಪ್ಪ, ರಾಯಪ್ಪ ಮತ್ತು ಧರ್ಮಣ್ಣ ಅವರನ್ನು ಹಿಡಿದುಕೊಟ್ಟವರಿಗೆ 5 ಸಾವಿರ ರೂ. ಇನಾಮು (ಬಹುಮಾನ ) ಕೊಡುವುದಾಗಿ ಬ್ರಿಟಿಷ್ ಸರಕಾರ ಘೋಷಿಸಿತ್ತು. ಆಗಿನ ಐದು ಸಾವಿರ ರೂ. ಅಂದರೆ ಈಗಿನ 50 ಲಕ್ಷ ಆಗಬಹುದು.

ಈ ಹೋರಾಟದಲ್ಲಿ ಬಹುತೇಕ ಎಲ್ಲ ಸಮುದಾಯಗಳ ಜನ ಪಾಲ್ಗೊಂಡರು. ಬನಹಟ್ಟಿಯ ಭಾಸ್ಕರಪ್ಪ ಕೋಪರ್ಡೆ, ಕಲ್ಲಪ್ಪ ಹೂಗಾರ, ಜತ್ತ ತಾಲೂಕಿನ ಬಾಪುರಾವ ಅರಳಿ, ನಾರಾಯಣ ಕಾಟಕರ್ ರಂಥ ಅನೇಕ ಕಾರ್ಯಕರ್ತರು ತೊಡಗಿಸಿಕೊಂಡರು. ರಾಯಪ್ಪ ಬೆಳಗಲಿ ಅವರಿಗೆ ಅಕ್ಷರ ಕಲಿಸಿದ ಅಬ್ದುಲ್ಲಾ ಮಾಸ್ತರ ಅವರು ಹೋರಾಟ ಮಾಡಲು ಹುರಿದುಂಬಿಸುತ್ತಿದ್ದರು.
ಮಹಾದೇವಪ್ಪನವರು ಆ ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಪ್ರತಿರೋಧ ಒಡ್ಡಲು ಮಹಾರಾಷ್ಟ್ರದ ಜತ್ತ ತಾಲೂಕಿನ ಸೊನ್ಯಾಳದಲ್ಲಿ ಹಾಗೂ ಕರ್ನಾಟಕದ ಅಥಣಿ ತಾಲೂಕಿನ ಬಂದೂಕು ತಯಾರು ಮಾಡುವ ಕಾರ್ಖಾನೆಗಳನ್ನು ಮಾಡಿದ್ದರು. ಅಂತಲೇ ಬ್ರಿಟಿಷ್ ಸರಕಾರ ಮಹಾದೇವಪ್ಪ ಮತ್ತು ಇಂಚಗೇರಿ ಮಠದ ಮೇಲೆ ಕಣ್ಣಿಟ್ಟಿತ್ತು.

ನನ್ನ ತಂದೆ ಧರ್ಮಣ್ಣ ಬೆಳಗಲಿ ಅವರಿಗೆ ಬ್ರಿಟಿಷ್ ಪೊಲೀಸರು ಕೈ ಕಾಲಿಗೆ ಬೇಡಿ ಹಾಕಿ, 3 ವರ್ಷ ಸೆರೆಮನೆಯಲ್ಲಿ ಇರಿಸಿದ್ದರು. ನನ್ನ ದೊಡ್ಡಪ್ಪ ರಾಯಪ್ಪ ಬೆಳಗಲಿ ಭೂಗತರಾಗಿ ಅನೇಕ ವರ್ಷ ಬ್ರಿಟಿಷ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದರು. ಕೊನೆಗೆ ಅವರೂ ಬಂಧನಕ್ಕೊಳಗಾಗಿ ಜೈಲುವಾಸ ಅನುಭ ವಿಸಿದರು.
ಮಹಾತ್ಮಾ ಗಾಂಧೀಜಿ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೊತೆಗೆ ನೇರ ಸಂಪರ್ಕ ಹೊಂದಿದ್ದ ಮಹಾದೇವಪ್ಪ ನವರು ಕಳೆದ ಶತಮಾನದ ನಲವತ್ತರ ದಶಕದಲ್ಲಿ ಹುಬ್ಬಳ್ಳಿಯ ಗಿರೀಶ ಆಶ್ರಮದಲ್ಲಿ ನಡೆದ ರಹಸ್ಯ ಸಭೆಗೆ ಸುಭಾಶ್ಚಂದ್ರ ಬೋಸರನ್ನು ಆಹ್ವಾನಿಸಿದ್ದರು. ಸುಭಾಷ್ ಸಭೆಗೆ ಬಂದಿದ್ದರು ಎಂದು ಮಹಾದೇವರೆ ನನಗೆ ಹೇಳಿದ್ದರು.

ಮಹಾದೇವಪ್ಪನವರಿಗೆ ಜನಸಾಮಾನ್ಯರು ಪ್ರೀತಿ ಮತ್ತು ಗೌರವದಿಂದ ದೇವರು ಎಂದು ಕರೆಯುತ್ತಿದ್ದರು. ನಾಸಿಕ್ ಜೈಲಿನಲ್ಲಿ ಇದ್ದಾಗ ಕಮ್ಯುನಿಸ್ಟ್ ನಾಯಕ ಡಾಂಗೆಯವರೂ ಮಹಾತ್ಮಾ ಅವರನ್ನು 'ದೇವರು' ಎಂದು ಸಂಬೋಧಿಸುತ್ತಿದ್ದರು. ಜನ ದೇವರೆಂದು ಕರೆದರೂ ಮಹಾದೇವಪ್ಪನವರು ಮೂಢ ನಂಬಿಕೆ ಮತ್ತು ಕಂದಾಚಾರಗಳಿಗೆ ಅವಕಾಶ ನೀಡಿರಲಿಲ್ಲ.

ಅಂತಲೇ ಅವರ ಬಗ್ಗೆ ಕರ್ನಾಟಕದ ಜನಪರ, ಪ್ರಗತಿಪರ ರಾಜಕೀಯ ಮುತ್ಸದ್ದಿಗಳಾಗಿದ್ದ ಶಾಂತವೇರಿ ಗೋಪಾಲ ಗೌಡರು ಮತ್ತು ಕಮ್ಯುನಿಸ್ಟ್ ನಾಯಕರಾಗಿದ್ದ ಎನ್.ಎಲ್.ಉಪಾಧ್ಯಾಯ ಮತ್ತು ಬಿ.ವಿ.ಕಕ್ಕಿಲ್ಲಾಯರು ಹಾಗೂ ಸಚಿವರೂ ಆಗಿದ್ದ ಬಿ.ಬಸವಲಿಂಗಪ್ಪ, ಕೆ.ಎಚ್.ರಂಗನಾಥ, ಬಂಗಾರಪ್ಪ ಅವರಿಗೆ ಅಪಾರ ಗೌರವವಿತ್ತು.
1939 ರಿಂದ 1946ರವರೆಗಿನ ಸುದೀರ್ಘ ಹೋರಾಟದಲ್ಲಿ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಅನೇಕ ರೈಲು ನಿಲ್ದಾಣಗಳು ಅಗ್ನಿಗೆ ಆಹುತಿಯಾದವು, ತಾರು ತಂತಿಗಳು ಕತ್ತರಿಸಲ್ಪಟ್ಟವು, ಅಂಚೆ ಡಬ್ಬಿಗಳು ಭಸ್ಮವಾದವು.ಬ್ರಿಟಿಷ್ ಆಡಳಿತ ದಿಕ್ಕೆಟ್ಟಿತು.ಇದಕ್ಕೆ ಮೂಲ ಕಾರಣ ಮಹಾದೇವಪ್ಪ ಮತ್ತು ಅವರ ತಂಡದವರು.
ಇವರು ಮಾತ್ರವಲ್ಲ ಹಾವೇರಿ ಹೊಸಮನಿ ಸಿದ್ಧಪ್ಪ, ಹುತಾತ್ಮ ಮೈಲಾರ ಮಹಾದೇವಪ್ಪ,ಅನಂತರಾವ ಸಾಬಡೆ, ನೇಶ್ವಿ ಮಾಸ್ತರ, ಚೆನ್ನಪ್ಪ ವಾಲಿ,ಹೀಗೆ ಅನೇಕ ಹೋರಾಟಗಾರರು ಸಕ್ರಿಯ ಪಾತ್ರ ವಹಿಸಿದರೂ ಇತಿಹಾಸದಲ್ಲಿ ಅವರ ಹೆಸರುಗಳು ಕಡೆಗಣಿಸಲ್ಪಟ್ಟಿವೆ.

ನಲವತ್ತರ ದಶಕದಲ್ಲಿ ಮಹಾತ್ಮಾ ಗಾಂಧೀಜಿಯವರು 'ಮಾಡು ಇಲ್ಲವೆ ಮಡಿ' ಹೋರಾಟಕ್ಕೆ ಕರೆ ನೀಡಿದರು. ಆ ಸಂದರ್ಭದಲ್ಲಿ ಮುನ್ನುಗ್ಗಿದ ಮಹಾದೇವಪ್ಪನವರು ತಮ್ಮ ನೂರಾರು ಅನುಯಾಯಿಗಳ ಜೊತೆಗೆ ಬಂಧನಕ್ಕೆ ಒಳಗಾದರು.ಬ್ರಿಟಿಷ್ ಪೊಲೀಸರು ಇವರನ್ನು ಅಪಖ್ಯಾತಿಗೆ ಗುರಿಪಡಿಸಲು ಸುಳ್ಳು ಖಟ್ಲೆಗಳನ್ನು ಹಾಕಿ ಕ್ರಿಮಿನಲ್ ಗಳಂತೆ ಚಿತ್ರಿಸಲು ಯತ್ನಿಸಿದರು. ಆದರೆ, ಜನ ನಂಬಲಿಲ್ಲ.
ಬ್ರಿಟಿಷರು ತೊಲಗಿದ ನಂತರ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳ ದವರು ಕಾಂಗ್ರೆಸ್ ಸೇರಿ ಮಂತ್ರಿಗಳಾದರು. ಆದರೆ, ಇಂಚಗೇರಿ ಮಠದ ಮಹಾದೇವಪ್ಪ ಮುರಗೋಡ ಮತ್ತು ಅವರ ಅನುಯಾಯಿಗಳು ಜನಸಾಮಾನ್ಯರಿಗೆ ಆರ್ಥಿಕ ಸ್ವಾತಂತ್ರ ಬರುವವರೆಗೆ, ಸಮಾನತೆಯ ಸಮಾಜ ಬರುವವರೆಗೆ ವಿರಮಿಸುವುದಿಲ್ಲ ಎಂದು ಹೋರಾಟ ಮುಂದುವರಿಸಿದರು.

ನಂತರ ನಡೆದ ಕರ್ನಾಟಕ ಏಕೀಕರಣ ಹೋರಾಟ ಮತ್ತು ಗೋವಾ ವಿಮೋಚನಾ ಹೋರಾಟಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಗುರಿ ಸಾಧಿಸಿದರು. ರಾಜಕೀಯ ವಾಗಿ ಎಡಪಂಥೀಯ ಪಕ್ಷಗಳ ಜೊತೆಗೆ ಸೇರಿ ಅನೇಕ ಹೋರಾಟಗಳನ್ನು ಸಂಘಟಿಸಿ ಸ್ವತಂತ್ರ ಭಾರತದಲ್ಲೂ ಹಲವಾರು ಸಲ ಬಂಧಿಸಲ್ಪಟ್ಟರು. ಸಾವಿರಾರು ಅಂತರ್ಜಾತಿ ಮತ್ತು ಅಂತರ ಧರ್ಮೀಯ ಮದುವೆಗಳನ್ನು ಮಾಡಿದರು.

ಇಂಚಗೇರಿ ಮಠದ ಮತ್ತು ಮಹಾದೇವಪ್ಪನವರ ಇತಿಹಾಸ ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಆಗಬೇಕಿತ್ತು. ಇತಿಹಾಸದ ಪುಟಗಳಲ್ಲಿ ಅಗ್ರಸ್ಥಾನ ಪಡೆಯಬೇಕಿತ್ತು. ಆದರೆ, ಬದುಕಿನುದ್ದಕ್ಕೂ ಪ್ರಭುತ್ವವನ್ನು (ಅದು ಬ್ರಿಟಿಷರದ್ದಾಗಿರಲಿ ನಮ್ಮವರದ್ದೇ ಆಗಿರಲಿ) ಹೋರಾಟ ಮಾಡುತ್ತ ಬಂದವರನ್ನು ಆಳುವವರು ಕಡೆಗಣಿಸಿದರು. ಆದರೆ, ಜನಮಾನಸದಲ್ಲಿ ಬಹಳ ಎತ್ತರದ ಸ್ಥಾನದಲ್ಲಿ ಅವರಿದ್ದಾರೆ.
ಗಾಂಧೀಜಿಯವರ ಹತ್ಯೆ ಮಾಡಿದ ಕೋಮುವಾದಿ ಶಕ್ತಿಗಳನ್ನು ಕಂಡರೆ ಮಹಾದೇವಪ್ಪನವರಿಗೆ ಆಗುತ್ತಿರಲಿಲ್ಲ. ಕೋಮುವಾದಿ ಸಂಘಟನೆಗಳನ್ನು ತಮ್ಮ ಮಠಕ್ಕೆ ಬಿಟ್ಟು ಕೊಳ್ಳುತ್ತಿರಲಿಲ್ಲ. ಹೀಗೆ ಅವಿಶ್ರಾಂತ ಹೋರಾಟ ಮಾಡುತ್ತಲೇ 1980ರಲ್ಲಿ ಅವರು ಕೊನೆಯುಸಿರೆಳೆದರು.

ಇತಿಹಾಸದ ವಿರೂಪೀಕರಣ ಅತ್ಯಂತ ವ್ಯವಸ್ಥಿತವಾಗಿ ನಡೆದಿರುವ ಈ ದಿನಗಳಲ್ಲಿ ಈ ನೆಲದ ತಳ ಸಮುದಾಯಗಳ ಜನ, ಅಲ್ಪಸಂಖ್ಯಾತರು, ಕಡೆಗಣಿಸ ಲ್ಪಟ್ಟವರು ನಡೆಸಿದ ವೀರೋಚಿತ ಹೋರಾಟದ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿ ಹೇಳುವ ಕಾರ್ಯ ತುರ್ತಾಗಿ ನಡೆಯಬೇಕಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News