ಚೀನಾದ 17 ಯುದ್ಧವಿಮಾನ, 5 ನೌಕೆಗಳು ತೈವಾನ್ ಜಲಸಂಧಿಯ ಮಧ್ಯರೇಖೆ ದಾಟಿದ್ದವು: ವರದಿ

Update: 2022-08-17 15:48 GMT

ತೈಪೆ, ಆ.17: ಸ್ವ-ಆಡಳಿತ ವ್ಯವಸ್ಥೆಯಿರುವ ತೈವಾನ್ಗೆ ಅಮೆರಿಕ ಸಂಸತ್ನ ಮತ್ತೊಂದು ನಿಯೋಗ ಭೇಟಿ ನೀಡಿರುವಂತೆಯೇ, ತೈವಾನ್ ಜಲಸಂಧಿಯ ಮಧ್ಯರೇಖೆಯನ್ನು ಚೀನಾದ 17 ಯುದ್ಧವಿಮಾನ ಹಾಗೂ 5 ನೌಕೆಗಳು ದಾಟಿದ್ದವು ಎಂದು ವರದಿಯಾಗಿದೆ.

ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ತೈವಾನ್ ಸುತ್ತಮುತ್ತ ಚೀನಾದ 17 ಯುದ್ಧವಿಮಾನ ಹಾಗೂ 5 ನೌಕೆಗಳನ್ನು ಪತ್ತೆಹಚ್ಚಲಾಗಿದೆ ಎಂದು ತೈವಾನ್ನ ರಾಷ್ಟ್ರೀಯ ಭದ್ರತಾ ಇಲಾಖೆ(ಎಂಎನ್ಡಿ)ಯನ್ನು ಉಲ್ಲೇಖಿಸಿ ‘ತೈವಾನ್ ನ್ಯೂಸ್’ ವರದಿ ಮಾಡಿದೆ.

ಇದರಲ್ಲಿ 4 ಸುಕೋಯಿ-30 ಯುದ್ಧವಿಮಾನ ಸೇರಿದಂತೆ 10 ಚೀನಾದ ಯುದ್ಧವಿಮಾನ, 3 ಶೆನ್ಯಾಂಗ್ ಜೆ-11 ಯುದ್ಧವಿಮಾನ, ಒಂದು ಶಾಂಕ್ಸಿ ವೈ-8 ಸಾರಿಗೆ ವಿಮಾನ ಸೇರಿದೆ ಎಂದು ವರದಿ ಹೇಳಿದೆ. ತಕ್ಷಣ ತೈವಾನ್ನ ಯುದ್ಧವಿಮಾನ , ಕ್ಷಿಪಣಿ ವ್ಯವಸ್ಥೆ ಹಾಗೂ ಸಮರನೌಕೆಗಳನ್ನು ಅಲ್ಲಿಗೆ ರವಾನಿಸಿ ಪರಿಸ್ಥಿತಿಯ ಮೇಲೆ ನಿಗಾ ಇರಿಸಲಾಗಿದೆ ಎಂದು ತೈವಾನ್ ನ್ಯೂಸ್ ವರದಿ ಮಾಡಿದೆ. ಅಮೆರಿಕದ ಸಂಸತ್ನ ಮತ್ತೊಂದು ನಿಯೋಗ ತೈವಾನ್ಗೆ ಭೇಟಿ ನೀಡಿದ ಮರುದಿನ , ಅಂದರೆ ಸೋಮವಾರ ತೈವಾನ್ ಸುತ್ತಮುತ್ತಲಿನ ಸಮುದ್ರದಲ್ಲಿ ಯುದ್ಧ ಎಚ್ಚರಿಕೆ ಗಸ್ತು ಮತ್ತು ಸಮರಾಭ್ಯಾಸ ನಡೆಸಲಾಗಿದೆ ಎಂದು ಚೀನಾದ ಸೇನೆ ಹೇಳಿದೆ.

ಸೆನ್ ಎಡ್ ಮಾರ್ಕೆ ನೇತೃತ್ವದ ಮತ್ತೊಂದು ಅಮೆರಿಕ ಸಂಸತ್ ನಿಯೋಗ ರವಿವಾರ ತೈವಾನ್ಗೆ ಪೂರ್ವನಿಗದಿತವಲ್ಲದ ಭೇಟಿ ನೀಡಿದೆ. ತೈವಾನ್ಗೆ ಅಮೆರಿಕದ ಬೆಂಬಲವನ್ನು ಪುನರುಚ್ಚರಿಸುವ ಮತ್ತು ತೈವಾನ್ ಜಲಸಂಧಿಯಾದ್ಯಂತ ಶಾಂತಿ ಮತ್ತು ಸ್ಥಿರತೆ ನೆಲೆಸಲು ಈ ಭೇಟಿ ಪೂರಕವಾಗಿದೆ ಎಂದು ನಿಯೋಗ ಹೇಳಿದೆ. ಇದು ಚೀನಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುವ ಹೊಂಚುದಾಳಿ ಭೇಟಿಯಾಗಿದೆ ಎಂದು ಚೀನಾದ ರಕ್ಷಣಾ ಇಲಾಖೆ ಪ್ರತಿಕ್ರಿಯಿಸಿದೆ. ಚೀನಾ-ಅಮೆರಿಕ ಸಂಬಂಧಕ್ಕೆ ಮತ್ತಷ್ಟು ಹಾನಿಯಾಗುವ ಮತ್ತು ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ತರುವ ಕಾರ್ಯ ಮಾಡಬೇಡಿ ಎಂದು ವಿದೇಶಾಂಗ ಇಲಾಖೆಯ ವಕ್ತಾರ ವಾಂಗ್ ವೆನ್ಬಿನ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News