ಪಶ್ಚಿಮದಂಡೆಯಲ್ಲಿ ಮತ್ತೆ ಘರ್ಷಣೆ; ಫೆಲೆಸ್ತೀನ್ ವ್ಯಕ್ತಿ ಮೃತ್ಯು

Update: 2022-08-18 16:59 GMT

ರಮಲ್ಲಾ, ಆ.18: ಆಕ್ರಮಿತ ಪಶ್ಚಿಮದಂಡೆಯ ನಬ್ಲೂಸ್ನಲ್ಲಿ ಇಸ್ರೇಲ್ ಸೇನೆ ನಡೆಸಿದ ಕಾರ್ಯಾಚರಣೆಯ ಬಳಿಕ ಘರ್ಷಣೆ ಭುಗಿಲೆದ್ದು ಫೆಲೆಸ್ತೀನ್ ನ ಪ್ರಜೆ ಇಸ್ರೇಲ್ ಸೇನೆಯ ಗುಂಡೇಟಿನಿಂದ ಮೃತಪಟ್ಟಿದ್ದು, 4 ಮಂದಿ ಗಾಯಗೊಂಡಿದ್ದಾರೆ. ಬಳಿಕ ಇಸ್ರೇಲ್ ಸೇನೆ ಈ ಪ್ರದೇಶದಲ್ಲಿದ್ದ ಹಲವು ಫೆಲೆಸ್ತೀನ್ ಸರಕಾರೇತರ ಸಂಘಟನೆ (ಎನ್ಜಿಒ)ಗಳನ್ನು ಮುಚ್ಚಿದೆ ಎಂದು ವರದಿಯಾಗಿದೆ.

ಬುಧವಾರ ಮಧ್ಯರಾತ್ರಿಯ ವೇಳೆ ಯೆಹೂದಿ ವಸಾಹತುಗಾರರು ನಬ್ಲೂಸ್ ನ ಪೂರ್ವದಲ್ಲಿರುವ ‘ಜೋಸೆಫ್ಸ್ ಟೋಂಬ್’ ಪ್ರದೇಶವನ್ನು ತಲುಪಲು ಅನುಕೂಲವಾಗುವ ನಿಟ್ಟಿನಲ್ಲಿ ಇಸ್ರೇಲ್ ಪಡೆಗಳು ಕಾರ್ಯಾಚರಣೆ ನಡೆಸಿದವು. ಆಗ ನಬ್ಲೂಸ್ ನಗರದ ಹೊರವಲಯದಲ್ಲಿ ಬಲಾಟ ನಿರಾಶ್ರಿತರ ಶಿಬಿರದಲ್ಲಿದ್ದ 20 ವರ್ಷದ ವಸೀಂ ನಾಸರ್ ಖಲೀಫಾ ಇಸ್ರೇಲ್ ಸೇನೆಯ ಗುಂಡೇಟಿನಿಂದ ಮೃತಪಟ್ಟಿದ್ದಾನೆ . ಇತರ 4 ಮಂದಿಗೆ ಗುಂಡೇಟು ತಗುಲಿದ್ದು ಇವರಲ್ಲಿ ಮೂವರ ಪರಿಸ್ಥಿತಿ ಗಂಭೀರವಾಗಿದೆ ಎಂದು ವಫಾ ಸುದ್ಧಿಸಂಸ್ಥೆ ವರದಿ ಮಾಡಿದೆ.

ಖಲೀಫಾ ಇಸ್ರೇಲ್ ಯೋಧರತ್ತ ಗುಂಡು ಹಾರಿಸಲು ಮುಂದಾದಾಗ ಯೋಧರು ಆತ್ಮರಕ್ಷಣೆಗೆ ಪ್ರತಿದಾಳಿ ನಡೆಸಿದ್ದಾರೆ ಎಂದು ಇಸ್ರೇಲ್ ಸೇನೆ ಪ್ರತಿಪಾದಿಸಿದೆ. ಗುರುವಾರ ನಡೆದ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಇಸ್ರೇಲ್ನ ಸೇನೆ ಆಕ್ರಮಿತ ಪಶ್ಚಿಮ ದಂಡೆಯ ರಮಲ್ಲಾ ನಗರದ ಮೇಲೆ ದಾಳಿ ನಡೆಸಿ ಅಲ್ಲಿದ್ದ ಹಲವು ಎನ್ಜಿಒ ಹಾಗೂ ಮಾನವ ಹಕ್ಕುಗಳ ಹೋರಾಟ ಸಂಸ್ಥೆಗಳನ್ನು ಮುಚ್ಚಿವೆ. ಇದರಲ್ಲಿ 6 ಸಂಘಟನೆಗಳನ್ನು ‘ಭಯೋತ್ಪಾದಕ ಗುಂಪು’ ಎಂದು 2021ರ ಅಕ್ಟೋಬರ್ನಲ್ಲಿ ಇಸ್ರೇಲ್ ಘೋಷಿಸಿತ್ತು.

‘ಅದ್ದಾಮೀರ್ ಪ್ರಿಸನರ್ ಸಪೋರ್ಟ್ ಆ್ಯಂಡ್ ಹ್ಯೂಮನ್ ರೈಟ್ಸ್ ಅಸೋಸಿಯೇಷನ್, ಅಲ್-ಹಖ್ ರೈಟ್ಸ್ ಗ್ರೂಫ್, ದಿ ಯೂನಿಯನ್ ಆಫ್ ಪೆಲೆಸ್ತೀನಿಯನ್ ವುಮೆನ್ ಕಮಿಟೀಸ್, ದಿ ಯೂನಿಯನ್ ಆಫ್ ಅಗ್ರಿಕಲ್ಚರಲ್ ವರ್ಕ್ ಕಮಿಟೀಸ್, ದಿ ಬಿಸಾನ್ ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್, ಡಿಫೆನ್ಸ್ ಫಾರ್ ಚಿಲ್ಡ್ರನ್ ಇಂಟರ್ನ್ಯಾಷನಲ್ನ ಪೆಲೆಸ್ತೀನ್ ಘಟಕ’ ಇದರಲ್ಲಿ ಸೇರಿವೆ. ಈ ಸಂಘಟನೆಗಳ ಕಚೇರಿಯಲ್ಲಿನ ದಾಖಲೆ ಪತ್ರಗಳನ್ನು ಪರಿಶೀಲಿಸಲಾಗಿದ್ದು ಬಾಗಿಲನ್ನು ಸೀಲ್ ಮಾಡಲಾಗಿದೆ. ಪ್ರವೇಶ ದ್ವಾರದ ಬಳಿ ‘ಕಾನೂನುಬಾಹಿರ ಸಂಘಟನೆ’ ಎಂದು ಪೋಸ್ಟರ್ ಅಂಟಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News