ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸೈನಿಕರಿಂದ ಫೆಲೆಸ್ತೀನ್ ವ್ಯಕ್ತಿಯ ಹತ್ಯೆ
ರಮಲ್ಲಾ (ಫೆಲೆಸ್ತೀನ್), ಆ. 19: ಉತ್ತರ ಪಶ್ಚಿಮ ದಂಡೆಯ ನಗರ ತೂಬಸ್ ಮೇಲೆ ದಾಳಿ ನಡೆಸಿದ ವೇಳೆ, ಇಸ್ರೇಲಿ ಸೈನಿಕರು ಫೆಲೆಸ್ತೀನ್ ವ್ಯಕ್ತಿಯೊಬ್ಬರನ್ನು ಕೊಂದಿವೆ.
58 ವರ್ಷದ ವ್ಯಕ್ತಿಯ ತಲೆಗೆ ಶುಕ್ರವಾರ ಬೆಳಗ್ಗೆ ಇಸ್ರೇಲ್ ಸೈನಿಕರು ಗುಂಡು ಹಾರಿಸಿದರು ಹಾಗೂ ಬಳಿಕ ಅವರು ಆ ಗಾಯದಿಂದಾಗಿ ಕೊನೆಯುಸಿರೆಳೆದರು ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಮೃತರು ತನ್ನ ಮನೆ ಸಮೀಪದ ಮಸೀದಿಯಲ್ಲಿ ಮುಂಜಾನೆ ಪ್ರಾರ್ಥನೆ ಸಲ್ಲಿಸಿ ಮನೆಗೆ ವಾಪಸಾಗುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಯಿತು ಎಂದು ಫೆಲೆಸ್ತೀನ್ನ ಸರಕಾರಿ ಸುದ್ದಿ ಸಂಸ್ಥೆ ವಫ ಮತ್ತು ಇತರ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಗುಂಡಿನ ದಾಳಿಗೆ ಒಳಗಾಗುವ ಮೊದಲು, ನಿರಾಯುಧರಾಗಿದ್ದ ಆ ವ್ಯಕ್ತಿಯು ಅಂಗಡಿಯೊಂದನ್ನು ಪ್ರವೇಶಿಸುತ್ತಿರುವುದನ್ನು ವೀಡಿಯೊ ತುಣುಕೊಂದು ತೋರಿಸಿದೆ.
ಶುಕ್ರವಾರ ಮುಂಜಾನೆ ಇಸ್ರೇಲಿ ಸೈನಿಕರು ತೂಬಸ್ ಮೇಲೆ ದಾಳಿ ನಡೆಸಿದರು. ‘‘ತೂಬಸ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದಾಗ ಹಲವು ಆಯುಧಧಾರಿ ವ್ಯಕ್ತಿಗಳು ಸೈನಿಕರತ್ತ ಮೊಲೊಟೊವ್ ಕಾಕ್ಟೇಲ್ಗಳನ್ನು ಎಸೆದರು ಮತ್ತು ಗುಂಡು ಹಾರಿಸಿದರು. ಸೈನಿಕರು ಅವರತ್ತ ಗುಂಡು ಪ್ರತಿ ಗುಂಡು ಹಾರಿಸಿದರು’’ ಎಂದು ಇಸ್ರೇಲ್ ಸೇನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.