ಜೆಎನ್‌ಯು: ವಿದ್ಯಾರ್ಥಿ ವೇತನ ಬಾಕಿ ಕೇಳಲು ಹೋದ ವಿದ್ಯಾರ್ಥಿಗಳ ಮೇಲೆ ಸಿಬ್ಬಂದಿಗಳಿಂದ ಹಲ್ಲೆ; ಎಬಿವಿಪಿ ಆರೋಪ

Update: 2022-08-22 15:54 GMT
Photo: Twitter

ಹೊಸದಿಲ್ಲಿ,ಆ.22: ಕಳೆದ ಎರಡು ವರ್ಷಗಳಿಗೂ ಅಧಿಕ ಸಮಯದಿಂದ ತಡೆಹಿಡಿಯಲಾಗಿರುವ ತಮ್ಮ ವಿದ್ಯಾರ್ಥಿ ವೇತನದ ಬಿಡುಗಡೆಗಾಗಿ ತಾವು ಶಾಂತಿಯುತವಾಗಿ ಆಗ್ರಹಿಸುತ್ತಿದ್ದಾಗ ಸೆಕ್ಯೂರಿಟಿ ಗಾರ್ಡ್ಗಳು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಜೆಎನ್ಯುದ ವಿದ್ಯಾರ್ಥಿಗಳ ಗುಂಪೊಂದು ಸೋಮವಾರ ಹೇಳಿದೆ. ಬಿಜೆಪಿ ಸಂಯೋಜಿತ ಎಬಿವಿಪಿ ಸದಸ್ಯರು ಮತ್ತು ಕ್ಯಾಂಪಸ್ ಸೆಕ್ಯೂರಿಟಿ ಗಾರ್ಡ್ಗಳ ನಡುವಿನ ಘರ್ಷಣೆಗಳಲ್ಲಿ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.

 ‌ಐವರು ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಕುರಿತು ವಿಚಾರಣೆಗೆ ನಿಗದಿತ ಸಮಯವಾಗಿರುವ ಪೂರ್ವಾಹ್ನ 11 ಗಂಟೆಯ ಸುಮಾರಿಗೆ ವಿದ್ಯಾರ್ಥಿ ವೇತನ ವಿಭಾಗಕ್ಕೆ ತೆರಳಿದ್ದರು. ಈ ವೇಳೆ ಸೆಕ್ಯೂರಿಟಿ ಗಾರ್ಡಗಳು ಅವರನ್ನು ನಿಂದಿಸಿ,ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ತಿಳಿಸಿದ ಎಬಿವಿಪಿ ಜೆಎನ್ಯು ಅಧ್ಯಕ್ಷ ರೋಹಿತ ಕುಮಾರ್ ಅವರು, ಇದು ಒಂದು ಕಾಲದಲ್ಲಿ 17 ಸಿಬ್ಬಂದಿಗಳನ್ನು ಹೊಂದಿದ್ದು,ಈಗ ಕೇವಲ ನಾಲ್ಕು ಸಿಬ್ಬಂದಿಗಳನ್ನು ಹೊಂದಿರುವ ಈ ವಿಭಾಗದ ಸ್ಥಿತಿಯಾಗಿದೆ. ಕಳೆದ ಎರಡು ವರ್ಷಕ್ಕೂ ಅಧಿಕ ಸಮಯದಿಂದ ವಿದ್ಯಾರ್ಥಿಗಳು ಬವಣೆ ಪಡುತ್ತಿದ್ದಾರೆ. ನಾನ್-ಎನ್ಇಟಿ ಮತ್ತು ಎಂಸಿಎಂ ಸೇರಿದಂತೆ ಯಾವುದೇ ವಿದ್ಯಾರ್ಥಿ ವೇತನ ಅವರಿಗೆ ಲಭಿಸುತ್ತಿಲ್ಲ ಎಂದು ಹೇಳಿದರು. ಶೀಘ್ರವೇ ದಿಲ್ಲಿ ಪೊಲೀಸರಿಗೆ ದೂರು ಸಲ್ಲಿಸುವುದಾಗಿ ಗಾಯಾಳು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಆಡಳಿತಾತ್ಮಕ ಕಚೇರಿಯಂತೆ ಕಂಡು ಬರುತ್ತಿರುವ ಸ್ಥಳದಲ್ಲಿ ಸಮವಸ್ತ್ರದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ಗಳು ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ತಳ್ಳುತ್ತ ಅವರನ್ನು ತಡೆಯಲು ಪ್ರಯತ್ನಿಸುತ್ತಿರುವುದು ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ. ಕೆಲವು ವೀಡಿಯೊಗಳು ನೆಲದಲ್ಲಿ ರಕ್ತದ ಕಲೆಗಳು,ಕಸದ ಬುಟ್ಟಿಯಲ್ಲಿ ರಕ್ತ ಅಂಟಿಕೊಂಡ ಬಟ್ಟೆಗಳು ಮತ್ತು ನೆಲದಲ್ಲಿ ಹರಡಿದ್ದ ಗಾಜಿನ ಚೂರುಗಳನ್ನು ತೋರಿಸುತ್ತಿವೆ.

ಅಧಿಕಾರಿಗಳು ಆಗಾಗ್ಗೆ ತಮ್ಮೆಂದಿಗೆ ದುರ್ವರ್ತನೆ ತೋರಿಸುತ್ತಾರೆ, ತಮಗೆ ಸುಳ್ಳು ಹೇಳುತ್ತಾರೆ ಮತ್ತು ಸಮಯಾವಕಾಶ ನೀಡಿದ ಬಳಿಕವೂ ತಮ್ಮ ದೂರುಗಳನ್ನು ಬಗೆಹರಿಸುತ್ತಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದರು. ವಿದ್ಯಾರ್ಥಿ ವೇತನಗಳನ್ನು ಬಿಡುಗಡೆಗೊಳಿಸಿದ ಹೊರತು ಅಲ್ಲಿಂದ ಕದಲುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ.

ವಿವಿಯ ಆಡಳಿತವು ಈ ಬಗ್ಗೆ ಈವರೆಗೆ ಯಾವುದೇ ಹೇಳಿಕೆಯನ್ನು ಹೊರಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News