ಸಿರಿಯಾದಲ್ಲಿ ನಿಯೋಜನೆಗೊಂಡಿದ್ದ ಇರಾನ್ ಯೋಧನ ಮೃತ್ಯು
Update: 2022-08-23 16:12 GMT
ಟೆಹ್ರಾನ್, ಆ.೨೩: ಸಿರಿಯಾದಲ್ಲಿ ರಕ್ಷಣಾ ಸಲಹೆಗಾರನಾಗಿ ನಿಯೋಜನೆಗೊಂಡಿದ್ದ ಇರಾನ್‌ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್(ಐಆರ್‌ಜಿಸಿ)ನ ಯೋಧ ರವಿವಾರ ಕರ್ತವ್ಯದಲ್ಲಿದ್ದ ಸಂದರ್ಭ ಹತರಾಗಿದ್ದಾರೆ ಎಂದು ಇರಾನ್‌ನ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
ಐಆರ್‌ಜಿಸಿಯ ಭೂಸೇನೆಯ ಸದಸ್ಯರಾಗಿದ್ದ ಜನರಲ್ ಅಬುಲ್‌ಫಝಲ್ ಅಲಿಜಾನಿ ರವಿವಾರ ಸಿರಿಯಾದಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ವೀರಮರಣ ಹೊಂದಿದ್ದಾರೆ. ಅವರು ಪವಿತ್ರಸ್ಥಳದ ರಕ್ಷಣೆಗಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಇರಾನ್‌ನ ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇಸ್ರೇಲ್ ವಿರುದ್ಧ ಸಂಘರ್ಷದಲ್ಲಿ ನಿರತವಾಗಿರುವ ಸಿರಿಯಾದ ಸೇನೆಯ ಆಹ್ವಾನದ ಮೇರೆಗೆ ತನ್ನ ಪಡೆಗಳನ್ನು ಸಿರಿಯಾದಲ್ಲಿ ನಿಯೋಜಿಸಲಾಗಿದ್ದು ಅವರು ಯುದ್ಧದಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿಲ್ಲ, ಕೇವಲ ಸಲಹೆಗಾರರಾಗಿ ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಇರಾನ್ ಹೇಳಿದೆ.