ಕನಸು ಕಟ್ಟುವ ಮನಸ್ಸು ಬೆಸೆಯುವ ಯಾತ್ರೆ

Update: 2022-10-03 04:09 GMT

ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯನವರಂಥ ಕೆಲವರಿಗೆ ಫ್ಯಾಶಿಸ್ಟ್ ಅಪಾಯದ ಬಗ್ಗೆ ಸ್ಪಷ್ಟತೆ ಇದೆ. ಆದರೆ ಉಳಿದವರಿಗೆ ಏನೂ ಗೊತ್ತಿಲ್ಲ. ಅಧಿಕಾರ ಮತ್ತು ಅದರಿಂದ ಸಿಗುವ ದೌಲತ್ತಿಗಾಗಿ ಅನೇಕರು ಕಾಂಗ್ರೆಸ್ ಜೊತೆಗಿದ್ದಾರೆ.ಇನ್ನು ಹೊಸದಾಗಿ ಬರುವ ಕಾರ್ಯಕರ್ತರಿಗೆ ಸೈದ್ಧಾಂತಿಕ ತರಬೇತಿಯ ವ್ಯವಸ್ಥೆ ಕಾಂಗ್ರೆಸ್‌ನಲ್ಲಿ ಇಲ್ಲ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಿಂದೆಂದೂ ಕಂಡರಿಯದ ಬಿಕ್ಕಟ್ಟು ಎದುರಾದಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಭಾರತವನ್ನು ಜೋಡಿಸುವ ಕಾಲ್ನಡಿಗೆ ಆರಂಭಿಸಿದ್ದಾರೆ. ಕನ್ನಡನಾಡಿಗೂ ಬಂದಿದ್ದಾರೆ. ಮೈಸೂರಿನಲ್ಲಿ ನಮ್ಮ ನಡುವಿನ ಜೀವಪರ ಲೇಖಕ ದೇವನೂರ ಮಹಾದೇವ ಈ ಏಕತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಮಾಧ್ಯಮಗಳಲ್ಲಿ ಅಷ್ಟಾಗಿ ಪ್ರಚಾರ ಸಿಗದ ಈ ಕಾಲ್ನಡಿಗೆ ಬಿಜೆಪಿಯನ್ನು ಭಯದ ಮಡುವಿಗೆ ತಳ್ಳಿದೆ.

ರಾಹುಲ್ ಗಾಂಧಿಯವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ಕರ್ನಾಟಕದಲ್ಲಿ ಕಾಲಿಡುತ್ತಿದ್ದಂತೆ ದಿಗಿಲುಗೊಂಡ ಬಿಜೆಪಿ ನಾಯಕರು ಹೇಗೆ ಪ್ರತಿಕ್ರಿಯೆ ವ್ಯಕ್ತಪಡಿಸಬೇಕು ಎಂಬುದು ಗೊತ್ತಾಗದೇ ರಾಹುಲ್ ಗಾಂಧಿಯ ತಾತ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ ಕೀಳು ಮಟ್ಟದ ಅಪಪ್ರಚಾರ ಆರಂಭಿಸಿದರು. ಭಾರತದ ವಿಭಜನೆಗೆ ನೆಹರೂ ಕಾರಣ ಎಂದು ಸುಳ್ಳು ಜಾಹೀರಾತು ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೇರವಾಗಿ ನೆಹರೂ ಹೆಸರು ಹೇಳದಿದ್ದರೂ ಪರೋಕ್ಷವಾಗಿ ಇದೇ ರೀತಿ ಹೇಳಿಕೆ ನೀಡಿದರು.

ಭಾರತವನ್ನು ವಿಭಜಿಸುವ ಬ್ರಿಟಿಷ್ ಸರಕಾರದ ಪ್ರಸ್ತಾವನೆಯನ್ನು ಸಮರ್ಥಿಸಿದ ಸಾವರ್ಕರ್ ಸಿಂಧ್ ಪ್ರಾಂತದಲ್ಲಿ ಮುಸ್ಲಿಮ್ ಲೀಗ್ ಜೊತೆಗೆ ಸೇರಿ ಸರಕಾರ ರಚಿಸಿದ್ದರು. ಈಗ ಇತಿಹಾಸವನ್ನು ತಿರುಚಿ ಭಾರತ ವಿಭಜನೆಯ ಮಸಿಯನ್ನು ನೆಹರೂ ಅವರ ಮುಖಕ್ಕೆ ಹಚ್ಚಲು ಹೊರಟಿದ್ದಾರೆ.

ರಾಹುಲ್ ಗಾಂಧಿಯವರ ಭಾರತ ಜೋಡಿಸುವ ಯಾತ್ರೆಯಿಂದ ಬಿಜೆಪಿ ಎಷ್ಟು ಹತಾಶೆಯಾಗಿದೆ ಎಂಬುದಕ್ಕೆ ಪತ್ರಿಕೆಯೊಂದಕ್ಕೆ ಕೊಟ್ಟ ಜಾಹೀರಾತು ಉದಾಹರಣೆ. ಸ್ವಾತಂತ್ರ್ಯ ಹೋರಾಟದ ನೇತಾರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತೇಜೋವಧೆಗೆ ಈ ನಿರ್ಲಜ್ಜ ಕೋಮುವಾದಿ ಪಕ್ಷ ಮುಂದಾಗಿದೆ. ಈ ಜಾಹೀರಾತಿನಲ್ಲಿ ಬರೆದದ್ದು ನಿಜವೇ ಆಗಿದ್ದರೆ ನೆಹರೂ ಜಯಂತಿ ದಿನ ಪ್ರಧಾನಿ ಮೋದಿ ನೆಹರೂ ಭಾವಚಿತ್ರಕ್ಕೆ ಹಾರ ಹಾಕಿ ಗೌರವಿಸಿದ್ದೇಕೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೆಹರೂ ಅವರ ಕೊಡುಗೆಯನ್ನು ಹಾಡಿ ಹೊಗಳಿದ್ದೇಕೆ. ಬಸವರಾಜ ಬೊಮ್ಮಾಯಿಯವರ ತಂದೆ ಜವಾಹರಲಾಲ್ ನೆಹರೂ ಅವರ ಅಭಿಮಾನಿಯಾಗಿದ್ದರು ಎಂಬುದನ್ನು ನೆನಪಿಸಬೇಕಾಗಿ ಬಂದಿದೆ.

ವಾಸ್ತವವಾಗಿ ದ್ವಿರಾಷ್ಟ್ರದ ಮೊದಲ ಪ್ರತಿಪಾದಕ ಹಿಂದೂ ಮಹಾಸಭೆಯ ನಾಯಕ ವಿನಾಯಕ ದಾಮೋದರ ಸಾವರ್ಕರ್. ನಂತರ ಜಿನ್ನಾ ಧ್ವನಿಯೆತ್ತಿದರು. ಹಿಂದೂಗಳು ಮತ್ತು ಮುಸಲ್ಮಾನರು ಒಂದೇ ರಾಷ್ಟ್ರದಲ್ಲಿ ಜೊತೆಯಾಗಿರಲು ಸಾಧ್ಯವಿಲ್ಲ ಎಂದು ಹೇಳಿದವರು ಸಾವರ್ಕರ್. ಆದರೆ ಮಹಾತ್ಮಾ ಗಾಂಧಿ ಮತ್ತು ಜವಾಹರಲಾಲ್ ನೆಹರೂ ವಿಭಜನೆಯ ವಿರೋಧವಾಗಿದ್ದರು.

 ಭಾರತಕ್ಕೆ ಯಾತ್ರೆಗಳು ಹೊಸದಲ್ಲ. ಕಾಲ್ನಡಿಗೆಯಲ್ಲಿ ಸಾವಿರಾರು ಮೈಲಿ ಸುತ್ತಾಡಿದ ಸನ್ಯಾಸಿಗಳು, ಮಹಾತ್ಮರು, ಹೋರಾಟಗಾರರು ಇಲ್ಲಿ ಆಗಿ ಹೋಗಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಗಾಂಧಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕುವ ಮುನ್ನ ರೈಲಿನಲ್ಲಿ ಇಡೀ ಭಾರತವನ್ನು ಸುತ್ತಾಡಿದರು.ಉಪ್ಪಿನ ಸತ್ಯಾಗ್ರಹ ನಡೆಸಲು ದಂಡಿಯಾತ್ರೆ ಹೊರಟರು. ವಿದೇಶದಲ್ಲಿ ವ್ಯಾಸಂಗ ಮಾಡಿ ವಾಪಸ್ ಬಂದ ಬಾಬಾಸಾಹೇಬ ಅಂಬೇಡ್ಕರ್ ದಕ್ಷಿಣ, ಉತ್ತರ, ಪಶ್ಚಿಮ, ಪೂರ್ವ ಹೀಗೆ ಎಲ್ಲಾ ದಿಕ್ಕುಗಳಲ್ಲಿ ಸಂಚರಿಸಿ ತಳ ಸಮುದಾಯಗಳಲ್ಲಿ ಹೊಸ ಜಾಗೃತಿ ಮೂಡಿಸಿದರು. ವಿನೋಬಾ ಭಾವೆ ಅವರ ಭೂದಾನ ಯಾತ್ರೆ ಮನೆ ಮಾತಾಗಿತ್ತು. ಮಾಜಿ ಪ್ರಧಾನಿ ಚಂದ್ರಶೇಖರ್ ಪಾದಯಾತ್ರೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ನರಗುಂದ ರೈತ ಜಾಥಾದಲ್ಲಿ ನಾನೂ ಪಾಲ್ಗೊಂಡಿದ್ದೇನೆ.

ಹೆಸರಾಂತ ಗಾಂಧಿವಾದಿ ಬಾಬಾ ಆಮ್ಟೆ ಅವರು ಭಾರತವನ್ನು ಜೋಡಿಸುವ ಯಾತ್ರೆಯನ್ನು ನಡೆಸಿದರು. ಎಡಪಂಥೀಯ ಮತ್ತು ದಲಿತ ಹಾಗೂ ರೈತಪರ, ಮಹಿಳಾಪರ ಸಂಘಟನೆಗಳು ಆಗಾಗ ಜನರಲ್ಲಿ ಎಚ್ಚರ ಮೂಡಿಸುವ ಯಾತ್ರೆಗಳನ್ನು ಸಂಘಟಿಸುತ್ತ ಬಂದಿವೆ.

ಈ ಭಾರತ ಜನಪರವಾದ, ಜೀವಪರವಾದ ಒಳ್ಳೆಯ ಯಾತ್ರೆಗಳ ಜೊತೆ ಜೊತೆಗೆ ಅಡ್ವಾಣಿಯವರ ರಕ್ತಪಾತದ ರಥಯಾತ್ರೆಯನ್ನು ಕಂಡಿದೆ. ದೇಶ ಒಡೆಯುವ, ದ್ವೇಷದ ವಿಷ ಬೀಜ ಬಿತ್ತುವ ಇಟ್ಟಿಗೆ ಯಾತ್ರೆಯನ್ನು ಕಂಡಿದೆ.

ಭಾರತದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಕಮ್ಯುನಿಸ್ಟ್ ಪಕ್ಷಗಳು ಕಳೆದ ಶತಮಾನದ ಒಂದೇ ವರ್ಷದಲ್ಲಿ ಹುಟ್ಟಿದವು. ೧೯೨೫ರಲ್ಲಿ ನಾಗಪುರದಲ್ಲಿ ಆರೆಸ್ಸೆಸ್, ಕಾನ್ಪುರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷಗಳು ಅಸ್ತಿತ್ವಕ್ಕೆ ಬಂದವು. ನಾಗಪುರದ ಸಂಘಟನೆಗೆ ಜರ್ಮನಿಯ ಹಿಟ್ಲರ್ ಮತ್ತು ಇಟಲಿಯ ಮುಸ್ಸಲೋನಿ ಸ್ಫೂರ್ತಿಯಾದರು.ಕಮ್ಯುನಿಸ್ಟರಿಗೆ ಸೋವಿಯತ್ ರಶ್ಯದ ಸಮಾಜವಾದಿ ಕ್ರಾಂತಿ ಪ್ರೇರಣೆಯಾಯಿತು.

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ ಈ ಯಾತ್ರೆಗೆ ವಿಶೇಷ ಮಹತ್ವವಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಬಹುತ್ವ ಭಾರತದ ಚಿತ್ರ ಸಂಪೂರ್ಣ ಬದಲಾಗಲಿದೆ. ಆರೆಸ್ಸೆಸ್‌ನ ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯಸೂಚಿ ಜಾರಿಗೆ ಬರಲಿದೆ. ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷದ ನಾಯಕರನ್ನು ಜನಪರ, ಎಡಪಂಥೀಯ ಸಂಘಟನೆಗಳನ್ನು ಹೊಸಕಿ ಹಾಕಿದಂತೆ ಭಾರತದಲೂ ದಮನ ಸತ್ರ ಆರಂಭವಾದರೆ ಅಚ್ಚರಿ ಪಡಬೇಕಾಗಿಲ್ಲ.

ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯನವರಂಥ ಕೆಲವರಿಗೆ ಫ್ಯಾಶಿಸ್ಟ್ ಅಪಾಯದ ಬಗ್ಗೆ ಸ್ಪಷ್ಟತೆ ಇದೆ. ಆದರೆ ಉಳಿದವರಿಗೆ ಏನೂ ಗೊತ್ತಿಲ್ಲ. ಅಧಿಕಾರ ಮತ್ತು ಅದರಿಂದ ಸಿಗುವ ದೌಲತ್ತಿಗಾಗಿ ಅನೇಕರು ಕಾಂಗ್ರೆಸ್ ಜೊತೆಗಿದ್ದಾರೆ.ಇನ್ನು ಹೊಸದಾಗಿ ಬರುವ ಕಾರ್ಯಕರ್ತರಿಗೆ ಸೈದ್ಧಾಂತಿಕ ತರಬೇತಿಯ ವ್ಯವಸ್ಥೆ ಕಾಂಗ್ರೆಸ್‌ನಲ್ಲಿ ಇಲ್ಲ.

ಇನ್ನೆರಡು ವರ್ಷಗಳಲ್ಲಿ ಆರೆಸ್ಸೆಸ್‌ಶತಮಾನೋತ್ಸವ ಆಚರಿಸಲಿದೆ. ಆ ಸಂದರ್ಭದಲ್ಲಿ ಗೋಳ್ವಾಲ್ಕರ್ ಮತ್ತು ಸಾವರ್ಕರ್ ಕಲ್ಪನೆಯ ಹಿಂದೂ ರಾಷ್ಟ್ರ ನಿರ್ಮಾಣದ ಗುರಿ ಸಾಧಿಸಲು ಇನ್ನಷ್ಟು ಉಗ್ರವಾದ ಕಾರ್ಯಕ್ರಮಗಳನ್ನು ರೂಪಿಸಲಿದೆ. ಅದನ್ನೆದುರಿಸಲು ಪ್ರತಿಪಕ್ಷ ಗಳು ಒಂದೇ ವೇದಿಕೆಗೆ ಬರಬೇಕಾಗಿದೆ. ಪ್ರತಿಪಕ್ಷಗಳಲ್ಲಿ ಎಡಪಂಥೀಯರನ್ನು ಹೊರತುಪಡಿಸಿ ಉಳಿದ ಪಕ್ಷಗಳಿಗೆ ಸ್ಪಷ್ಟತೆ ಇಲ್ಲ.

ನೆಹರೂ ಕುಟುಂಬದ ವಂಶಾಧಿಪತ್ಯ ವ್ಯವಸ್ಥೆಯನ್ನು ಟೀಕಿಸುವವರು ಆ ಕುಟುಂಬದ ಸೈದ್ಧಾಂತಿಕ ಬದ್ಧತೆಯ ಬಗ್ಗೆ ಮಾತಾಡುವುದಿಲ್ಲ. ಆ ಕುಟುಂಬದ ಇಬ್ಬರು ( ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ) ದೇಶದ ಸೌಹಾರ್ದಕ್ಕಾಗಿ ಬಲಿದಾನ ಮಾಡಿದರು. ಇವರ ಬಲಿದಾನವನ್ನು ಬಂಡವಾಳ ಮಾಡಿಕೊಂಡು ಅಧಿಕಾರ ಮತ್ತು ಸಕಲ ಸೌಕರ್ಯಗಳನ್ನು ಅನುಭವಿಸಿದವರು ಯಾರೆಂದು ಎಲ್ಲರಿಗೂ ಗೊತ್ತಿರುವ ಸಂಗತಿ.

ಎರಡನೆಯದಾಗಿ ನೆಹರೂ ಕುಟುಂಬದ ಸದಸ್ಯರು ಜಾತಿ ಮತವನ್ನು ಧಿಕ್ಕರಿಸಿ ಮದುವೆಯಾದವರು. ಸ್ವತಃ ಇಂದಿರಾ ಗಾಂಧಿ ಪಾರ್ಸಿ ಕುಟುಂಬದ ಫಿರೋಝ್ ಗಾಂಧಿ ಅವರನ್ನು, ರಾಜೀವ್ ಗಾಂಧಿ ಇಟಲಿಯ ಸೋನಿಯಾ ಗಾಂಧಿ ಅವರನ್ನು ಮತ್ತು ಸಂಜಯ್ ಗಾಂಧಿ ಸಿಖ್ ಧರ್ಮದ ಮೇನಕಾರನ್ನು ವಿವಾಹವಾದವರು. ನೆಹರೂ ಕುಟುಂಬ ಸೆಕ್ಯುಲರ್ ಕುಟುಂಬ. ಸಂಪ್ರದಾಯವಾದಿ ಮನಸ್ಸು ಇದನ್ನು ಇಷ್ಟಪಡುವುದಿಲ್ಲ.

ನೆಹರೂ ಅವರ ಮೇಲೆ ಮನುವಾದಿ ಶಕ್ತಿಗಳಿಗೆ ಯಾಕೆ ಕೋಪವೆಂದರೆ ಭಾರತ ಸ್ವತಂತ್ರ ಗೊಂಡಾಗ ಇದನ್ನು ಮನುವಾದಿ ಹಿಂದೂರಾಷ್ಟ್ರ ಮಾಡಲು ನೆಹರೂ ,ಅಂಬೇಡ್ಕರ್ ಮತ್ತು ಗಾಂಧಿ ಅವಕಾಶ ನೀಡಲಿಲ್ಲ. ಆರೆಸ್ಸೆಸ್ ಬಾಲ ಬಿಚ್ಚಲು ಬಿಡಲಿಲ್ಲ. ಅದಕ್ಕಾಗಿ ಇನ್ನೂ ನೆಹರೂ ಕುಟುಂಬ ಫ್ಯಾಶಿಸ್ಟ್ ಶಕ್ತಿಗಳ ದ್ವೇಷಕ್ಕೆ ಗುರಿಯಾಗಬೇಕಾಗಿದೆ.

ಒಂದೇ ಧರ್ಮ, ಒಂದೇ ಭಾಷೆ, ಏಕ ಸಂಸ್ಕೃತಿಯನ್ನು ಭಾರತದ ಮೇಲೆ ಹೇರಿ ಬಹುತ್ವ ಸಂಸ್ಕೃತಿಯನ್ನು ನಾಶ ಮಾಡಲು ಹೊರಟಿರುವ ಫ್ಯಾಶಿಸ್ಟ್ ಶಕ್ತಿಗಳು ಬಹುಸಂಖ್ಯಾತ ಯುವಕರ ಮೆದುಳಿಗೆ ವಿಷ ತುಂಬುತ್ತಿವೆ. ಅಖಿಲ ಭಾರತ ಮಟ್ಟದಲ್ಲಿ ಇದನ್ನೆದುರಿಸಲು ಇರುವ ಏಕೈಕ ಪಕ್ಷ ಕಾಂಗ್ರೆಸ್. ದೇಶದ ಹಳ್ಳಿ ,ಹಳ್ಳಿಗಳಲ್ಲಿ ಬೇರು ಬಿಟ್ಟಿರುವ, ಎಲ್ಲ ಜಾತಿ,ಮತ,ಸಮುದಾಯಗಳನ್ನು ಒಳಗೊಂಡಿರುವ ಕಾಂಗ್ರೆಸನ್ನು ಹೊರಗಿಟ್ಟು ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳನ್ನು ಎದುರಿಸಿ ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಆರ್ಥಿಕ ಧೋರಣೆಗಳಲ್ಲಿ ನರಸಿಂಹರಾವ್ ಕಾಲದಲ್ಲಿ ಹಳಿ ತಪ್ಪಿದ ಕಾಂಗ್ರೆಸ್ ಮತ್ತೆ ಹಳಿಗೆ ಬರುವ ಸೂಚನೆಗಳಿವೆ. ರಾಹುಲ್ ಗಾಂಧಿ ಕೋಮುವಾದ ವಿರುದ್ಧ ಮಾತ್ರವಲ್ಲ, ಕಾರ್ಪೊರೇಟ್ ಬಂಡವಾಳಶಾಹಿಯ ಬಗ್ಗೆ ಮಾತಾಡುತ್ತಿದ್ದಾರೆ.ಅಂಬಾನಿ, ಅದಾನಿಗಳನ್ನು ನೇರವಾಗಿ ಜಾಡಿಸುತ್ತಿದ್ದಾರೆ. ಅವರ ಪ್ರಾಮಾಣಿಕತೆ, ಬದ್ಧತೆ ಪ್ರಶ್ನಾತೀತ. ಅಂತಲೇ ಭಾರತದ ಒಡೆದು ಹೋಗಿರುವ ಮನಸ್ಸುಗಳನ್ನು ಬೆಸೆದು ಕನಸುಗಳನ್ನು ಕಟ್ಟುವ ಈ ಭಾರತ ಜೋಡಿಸುವ ಯಾತ್ರೆಯ ಬಗ್ಗೆ ಭರವಸೆ ಇಟ್ಟುಕೊಳ್ಳೋಣ.

ಇಂಥ ಮನೆತನದಲ್ಲಿ ಬೆಳೆದು ಬಂದ ರಾಹುಲ ಗಾಂಧಿ ಕನಸು ಕಟ್ಟುವ, ಮನಸ್ಸು ಬೆಸೆಯುವ ಸದಾಶಯದಿಂದ ನಡೆಸಿರುವ ಪಾದಯಾತ್ರೆ ಬಹುತ್ವ ಭಾರತದ ಉಳಿವಿಗೆ ಹೊಸ ದಿಕ್ಕು ತೋರಿಸಬಹುದೇ ಕಾದು ನೋಡಬೇಕು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ