ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕುಸ್ತಿಗಿಲ್ಲ ಸ್ಥಾನ!

Update: 2022-10-07 04:47 GMT

ಭಾರತಕ್ಕೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗರಿಷ್ಠ ಪದಕಗಳನ್ನು ತಂದುಕೊಡುವ ಕ್ರೀಡೆಗಳೆಂದರೆ ಶೂಟಿಂಗ್, ಕುಸ್ತಿ ಮತ್ತು ವೇಟ್ ಲಿಫ್ಟಿಂಗ್. ಕಳೆದ ಆವೃತ್ತಿಯಲ್ಲಿ ಶೂಟಿಂಗ್ ಇರಲಿಲ್ಲ. ಮುಂದಿನ ಆವೃತ್ತಿಗೆ ಶೂಟಿಂಗ್ ಸೇರ್ಪಡೆಯಾಗಲಿದೆ. ಆದರೆ ಇದೇ ವೇಳೆ ಕುಸ್ತಿ ಕಣ್ಮರೆಯಾಗಲಿದೆ.

 ಸಂಘಟನಾ ಸಮಿತಿಯು 2026ರಲ್ಲಿ ಆಸ್ಟ್ರೇಲಿಯದ ನಾಲ್ಕು ನಗರಗಳಲ್ಲಿ ನಡೆಯಲಿರುವ ಸಿಡಬ್ಲುಜೆ ಆವೃತ್ತಿಗೆ ಶೂಟಿಂಗ್‌ನ್ನು ಒಳಸೇರಿಸಿಕೊಂಡಿರುವುದು ಭಾರತದ ಪಾಲಿಗೆ ಶುಭ ಸುದ್ದಿ. ಆದರೆ ಇದೇ ವೇಳೆ ಕುಸ್ತಿ ಮತ್ತು ಜುಡೊ ಮುಂದಿನ ಆವೃತ್ತಿಗಿಲ್ಲ. ಕೋಸ್ಟಲ್ ರೋಯಿಂಗ್, ಸೈಕ್ಲಿಂಗ್ (ಬಿಎಂಎಕ್ಸ್), ಗಾಲ್ಫ್ ಮುಂದಿನ ಆವೃತ್ತಿಯಲ್ಲಿ ಮೊದಲ ಬಾರಿ ಸಿಡಬ್ಲುಜಿಯಲ್ಲಿ ಕಾಣಿಸಿಕೊಳ್ಳಲಿವೆ. ಸ್ಥಳೀಯ ಸಂಘಟಕರು ಬುಧವಾರ ನೀಡಿದ್ದ ಅಂತಿಮ ನಿರ್ಧಾರವು ಅನಿರೀಕ್ಷಿತವಲ್ಲ. ಕಳೆದ ಎಪ್ರಿಲ್‌ನಲ್ಲಿ ಶೂಟಿಂಗ್, ಕುಸ್ತಿ ಮತ್ತು ಆರ್ಚರಿಯನ್ನು ಹೊರಗಿಡುವ ನಿಟ್ಟಿನಲ್ಲಿ ಚಿಂತನೆ ನಡೆಸಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಭಾರತದ ಖಾತೆಗೆ ಗರಿಷ್ಠ ಚಿನ್ನದ ಪದಕಗಳನ್ನು ತಂದುಕೊಡುವ ಕ್ರೀಡೆ ಕುಸ್ತಿ. ಈ ವರೆಗೆ ನಾಲ್ಕು ಆವೃತ್ತಿಗಳಲ್ಲಿ ಕುಸ್ತಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಅದರಲ್ಲೂ ಕಳೆದ ಮೂರು ಆವೃತ್ತಿಯಲ್ಲಿ ಕುಸ್ತಿಯಲ್ಲಿ ಭಾರತ ಅಗ್ರಸ್ಥಾನ ತನ್ನದಾಗಿಸಿಕೊಂಡಿತ್ತು. ಇದರಿಂದಾಗಿ ಸಿಡಬ್ಲುಜಿ ಸಂಘಟಕರು ಬುಧವಾರ ಕೈಗೊಂಡಿರುವ ಈ ನಿರ್ಧಾರವು ಭಾರತಕ್ಕೆ, ಕುಸ್ತಿಪಟುಗಳಿಗೆ ಆಘಾತವನ್ನುಂಟು ಮಾಡಿದೆ. ಕಳೆದ ಬರ್ಮಿಂಗ್‌ಹ್ಯಾಮ್ ಆವೃತ್ತಿಯ ಕ್ರೀಡಾಕೂಟದಲ್ಲಿ ಭಾರತ ಕುಸ್ತಿಯಲ್ಲಿ 12 ಪದಕಗಳನ್ನು ಬಾಚಿಕೊಂಡಿತ್ತು. ಇದರಲ್ಲಿ 6 ಚಿನ್ನ. ಭಾರತ ಒಟ್ಟು ಪಡೆದ 61 ಪದಕಗಳಲ್ಲಿ ಕುಸ್ತಿಯ ಕೊಡುಗೆ ದೊಡ್ಡದು. ಇಷ್ಟರ ತನಕ ಕುಸ್ತಿಯಲ್ಲಿ ಭಾರತ ಪಡೆದಿರುವ ಪದಕಗಳ ಸಂಖ್ಯೆ 114(ಚಿನ್ನ 49, ಬೆಳ್ಳಿ 39, ಕಂಚು 26). ಭಾರತ ಈವರೆಗೆ ಭಾಗವಹಿಸಿದ್ದ 17 ಆವೃತ್ತಿಗಳಲ್ಲಿ ಗರಿಷ್ಠ ಚಿನ್ನದ ಪದಕಗಳನ್ನು ತಂದುಕೊಟ್ಟಿರುವ ಕ್ರೀಡೆಗಳಲ್ಲಿ ಕುಸ್ತಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಶೂಟಿಂಗ್‌ಗೆ. ಶೂಟಿಂಗ್‌ನಲ್ಲಿ ಭಾರತ 135 ಪದಕಗಳನ್ನು (63 ಚಿನ್ನ, 44 ಬೆಳ್ಳಿ ಮತ್ತು 28 ಕಂಚು) ಪಡೆದಿದೆ. ವೇಟ್ ಲಿಫ್ಟಿಂಗ್‌ಗೆ ಮೂರನೇ ಸ್ಥಾನ. ಪಡೆದ ಪದಕಗಳು 133 (ಚಿನ್ನ 46, ಬೆಳ್ಳಿ 51, ಕಂಚು 36).

1930ರಲ್ಲಿ ಸಿಡಬ್ಲುಜಿ ಆರಂಭಗೊಂಡ ಬಳಿಕ ನಾಲ್ಕನೇ ಬಾರಿ ಕುಸ್ತಿಯನ್ನು ಕೂಟದಿಂದ ಕೈಬಿಡಲಾಗುತ್ತದೆ. ಆಕ್ಲೆಂಡ್(1990), ಕೌಲಾಲಂಪುರ(1998) ಮತ್ತು ಮೆಲ್ಬೋರ್ನ್(2006) ಗೇಮ್ಸ್ ನಲ್ಲಿ ಕುಸ್ತಿಯನ್ನು ಹೊರಗಿಡಲಾಗಿತ್ತು.

  ಭಾರತದ ಕುಸ್ತಿಗೆ ಇಂದು ದುಃಖದ ದಿನ ಎಂದು ಕುಸ್ತಿಯನ್ನು ಹೊರಗಿಟ್ಟ ವಿಚಾರದ ಬಗ್ಗೆ ಸಿಡಬ್ಲುಜಿಯಲ್ಲಿ ಗೋಲ್ಡನ್ ಹ್ಯಾಟ್ರಿಕ್ ವಿನೇಶ್ ಫೋಗಟ್ ಮತ್ತು ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಪಡೆದ ಸುಶೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

 ಭಾರತದ ಪಾಲಿಗೆ ಸಮಾಧಾನಕರ ವಿಚಾರವೆಂದರೆ ಪ್ಯಾರಾ ಈವೆಂಟ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ, ಪ್ಯಾರಾ ಗೇಮ್ಸ್‌ನ ಪ್ರಮುಖ ಸ್ಪರ್ಧೆಗಳಲ್ಲಿ ಭಾರತೀಯರು ಹೆಚ್ಚು ಪದಕಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಕುಸ್ತಿಯು 2030ರಲ್ಲಿ ಕೆನಡದಲ್ಲಿ ನಡೆಯುವ ಕೂಟದಲ್ಲಿ ವಾಪಸಾಗಬಹುದು. ಸಿಡಬ್ಲುಜಿ ನಿಯಮ ಪ್ರಕಾರ ಕ್ರೀಡಾಕೂಟದಲ್ಲಿ ಅತ್ಲೆಟಿಕ್ಸ್ ಮತ್ತು ಈಜು ಮಾತ್ರ ಎರಡು ಕಡ್ಡಾಯ ಕ್ರೀಡೆಗಳಾಗಿವೆ. ಉಳಿದಂತೆ ಆತಿಥೇಯ ರಾಷ್ಟ್ರಗಳು ಅವರಿಗೆ ಮತ್ತು ಅವರ ಸಂಸ್ಕೃತಿಗೆ ‘ಸಂಬಂಧಿತ’ ಕ್ರೀಡೆಗಳನ್ನು ಆಯ್ಕೆ ಮಾಡಬಹುದು ಎಂದು ಅದು ಸೂಚಿಸುತ್ತದೆ. ಇದರಿಂದಾಗಿ ಕುಸ್ತಿಗೆ ಹಿನ್ನಡೆಯಾಗಿದೆ. 2006ರಲ್ಲಿ ಮೆಲ್ಬೋರ್ನ್‌ನಲ್ಲೂ ಕುಸ್ತಿ ಇರಲಿಲ್ಲ. ಭಾರತ, ಕೆನಡ ಮತ್ತು ಸ್ವಲ್ಪಮಟ್ಟಿಗೆ ನೈಜೀರಿಯಾ ಕುಸ್ತಿಯಲ್ಲಿ ಬಲಿಷ್ಠ ರಾಷ್ಟ್ರಗಳಾಗಿವೆ. ಕುಸ್ತಿ ತಂಡಕ್ಕೆ ಪ್ರವೇಶಿಸುವ ಹೋರಾಟವು ಕ್ರೀಡಾಕೂಟದಲ್ಲಿ ಪದಕವನ್ನು ಗೆಲ್ಲುವುದಕ್ಕಿಂತ ಕಠಿಣವಾಗಿದೆ. ಆಸ್ಟ್ರೇಲಿಯ ಕುಸ್ತಿಯಲ್ಲಿ ದುರ್ಬಲವಾಗಿದೆ. ಕಳೆದ ಆವೃತ್ತಿಯಲ್ಲಿ ಕುಸ್ತಿಯಲ್ಲಿ ಎರಡು ಕಂಚು ಪಡೆದಿತ್ತು. ಆಸ್ಟ್ರೇಲಿಯ ಸಿಡಬ್ಲುಜಿಯಲ್ಲಿ ಯಶಸ್ವಿ ರಾಷ್ಟ್ರವಾಗಿದೆ. ಅದು ಈವರೆಗೆ ಜಯಿಸಿದ ಪದಕಗಳು 2,426 (ಚಿನ್ನ 936, ಬೆಳ್ಳಿ 777, ಕಂಚು 713 ಆದರೆ ಕುಸ್ತಿಯಲ್ಲಿ ಪಡೆದ ಪದಕಗಳು 47( ಚಿನ್ನ 14, ಬೆಳ್ಳಿ 22 , ಕಂಚು 11), ಶೂಟಿಂಗ್‌ನಲ್ಲಿ 171(70 ಚಿನ್ನ, 59 ಬೆಳ್ಳಿ, 42 ಕಂಚು). ಈಜು ಆಸ್ಟ್ರೇಲಿಯಕ್ಕೆ ಗರಿಷ್ಠ ಪದಕಗಳನ್ನು ತಂದುಕೊಡುವ ಈವೆಂಟ್ ಆಗಿದೆ. ಈವರೆಗೆ ಈ ಸ್ಪರ್ಧೆಯಲ್ಲಿ 734 ಪದಕ (307 ಚಿನ್ನ, 225 ಬೆಳ್ಳಿ, 202 ಕಂಚು) ತನ್ನದಾಗಿಸಿಕೊಂಂಡಿದೆ. ಬರ್ಮಿಂಗ್‌ನಲ್ಲಿ ಶೂಟಿಂಗ್ ಸ್ಪರ್ಧೆಗೆ ಪೂರಕ ವಾತಾವರಣ ಇಲ್ಲ. ಈ ಕಾರಣದಿಂದಾಗಿ ಕಳೆದ ಸಿಡಬ್ಲುಜಿ ಆವೃತ್ತಿಯಲ್ಲಿ ಶೂಟಿಂಗ್‌ನ್ನು ಸಂಘಟಕರು ಹೊರಗಿಟ್ಟಿದ್ದರು.

ಆಸ್ಟ್ರೇಲಿಯದಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಶೂಟಿಂಗ್ ಲೀಸ್ಟ್‌ನಲ್ಲಿ ಸ್ಥಾನ ಪಡೆದಿದೆ. 2026ರಲ್ಲಿ ಶೂಟಿಂಗ್ ಈವೆಂಟ್‌ಗಳನ್ನು ಆಯೋಜಿಸುವ ನಗರವನ್ನು ಸಿಜಿಎಫ್ ನಿರ್ದಿಷ್ಟಪಡಿಸಿಲ್ಲ. ಹಿಂದಿನ ಗೇಮ್ಸ್‌ಗಳಿಗೆ ಹೋಲಿಸಿದರೆ ಶೂಟಿಂಗ್‌ನಲ್ಲಿ ಹೆಚ್ಚು ವ್ಯವಸ್ಥಿತವಾಗಿ ಮಾಡುವ ನಿಟ್ಟಿನಲ್ಲಿ ರೈಫಲ್, ಪಿಸ್ತೂಲ್ ಮತ್ತು ಶಾಟ್‌ಗನ್ ಈವೆಂಟ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಆಸ್ಟ್ರೇಲಿಯ ಸಾಂಪ್ರದಾಯಿಕವಾಗಿ ಶಾಟ್‌ಗನ್ ಸ್ಪರ್ಧೆಗಳಲ್ಲಿ ಪ್ರಬಲವಾಗಿದೆ. ಆದರೆ ಭಾರತ ರೈಫಲ್ ಮತ್ತು ಪಿಸ್ತೂಲ್ ವಿಭಾಗಗಳಲ್ಲಿ ಪ್ರಾಬಲ್ಯ ಹೊಂದಿದೆ. ಮುಂದಿನ ದಿನಗಳಲ್ಲಿ ಭಾರತ ಶೂಟಿಂಗ್‌ನಲ್ಲಿ ಬಲಿಷ್ಠವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಾಗಿದೆ.

 ಮುಂದಿನ ಆವೃತ್ತಿಯಲ್ಲಿ ಕುಸ್ತಿ ಇಲ್ಲ ಎಂಬ ಬೇಸರ ಕುಸ್ತಿಪಟುಗಳಿಗೆ ಸಹಜ. ಆದರೆ ಕೆನಡದಲ್ಲಿ 2030ರ ಆವೃತ್ತಿಯಲ್ಲಿ ಕುಸ್ತಿ ಅಖಾಡ ಸಿದ್ಧವಾಗಬಹುದು. ಯಾಕೆಂದರೆ ಕೆನಡ ಕುಸ್ತಿಯಲ್ಲಿ ಬಲಿಷ್ಠ ರಾಷ್ಟ್ರವಾಗಿದೆ.

Writer - ಇಬ್ರಾಹಿಂ ಅಡ್ಕಸ್ಥಳ

contributor

Editor - ಇಬ್ರಾಹಿಂ ಅಡ್ಕಸ್ಥಳ

contributor

Similar News