ಬ್ರಿಟನ್‌ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆ

Update: 2022-10-24 16:28 GMT

ಲಂಡನ್:‌ ಲಿಜ್ ಟ್ರಸ್ ನಿರ್ಗಮನದ ಬಳಿಕ ತೆರವಾದ ಬ್ರಿಟನ್ ಪ್ರಧಾನಿ ಹುದ್ದೆಗೆ ನಂತರ ಭಾರತೀಯ ಮೂಲದ ರಿಷಿ ಸುನಕ್ (Rishi Sunak ) ಆಯ್ಕೆಯಾಗಿದ್ದಾರೆ. ಆ ಮೂಲಕ ಯುಕೆ ಪ್ರಧಾನಿ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಸುನಕ್‌ ಪಾತ್ರರಾಗಿದ್ದಾರೆ.

 ಸುನಕ್ 190 ಸಂಸದರ ಬೆಂಬಲವನ್ನು ಗೆದ್ದುಕೊಂಡಿದ್ದು,ಈ ಹಿನ್ನೆಲೆಯಲ್ಲಿ ಅವರ ಏಕೈಕ ಪ್ರತಿಸ್ಪರ್ಧಿ ಪೆನ್ನಿ ಮೊಡಂಟ್ ಅವರು ಪ್ರಧಾನಿ ಹುದ್ದೆಯ ಸ್ಪರ್ಧೆಯಿಂದ ಹೊರಬೀಳುವುದು ಅನಿವಾರ್ಯವಾಗಿತ್ತು.

ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನಕ್ಕೆ ಸ್ಪರ್ಧೆಯಲ್ಲಿ ಗೆದ್ದಿರುವ ಮಾಜಿ ಹಣಕಾಸು ಸಚಿವ ಸುನಕ್ ಬ್ರಿಟನ್ ನ ಮುಂದಿನ ಪ್ರಧಾನಿಯಾಗಲಿದ್ದಾರೆ. ಈ ವರ್ಷದಲ್ಲಿ ಮೂರನೇ ಪ್ರಧಾನಿಯಾಗಿ ಅವರು ನೇಮಕಗೊಳ್ಳುತ್ತಿದ್ದಾರೆ. ಬ್ರಿಟನ್‌ ನ ಮೊದಲ ಶ್ವೇತವರ್ಣೀಯನಲ್ಲದ ಪ್ರಧಾನಿ ಎಂಬ ಹೆಗ್ಗಳಿಕೆಯೂ ಅವರದಾಗಲಿದೆ.

ಆರ್ಥಿಕ ಮತ್ತು ರಾಜಕೀಯ ಕ್ಷೋಭೆಯ ಈ ಸಂದರ್ಭದಲ್ಲಿ ಸುನಕ್ ಪ್ರಧಾನಿಯಾಗಿ ಪಕ್ಷ ಮತ್ತು ದೇಶದ ಸ್ಥಿರತೆಯನ್ನು ಕಾಯ್ದುಕೊಳ್ಳುವ ಸವಾಲನ್ನು ಎದುರಿಸಲಿದ್ದಾರೆ.

ಆಡಳಿತ ಪಕ್ಷದ ನಾಯಕರಾಗಿ ಸುನಕ್ ಆರ್ಥಿಕ ಬಿಕ್ಕಟ್ಟಿನ ನಡುವೆಯೇ 45 ದಿನಗಳ ಅಧಿಕಾರದ ಬಳಿಕ ಕಳೆದ ವಾರ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಲಿಝ್ ಟ್ರುಸ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ.

ಹಗರಣಗಳಿಂದ ಕಳಂಕಿತ ಬೋರಿಸ್ ಜಾನ್ಸನ್ ಅವರ ಬದಲು ಕನ್ಸರ್ವೇಟಿವ್ ಪಕ್ಷದ ನಾಯಕ ಹಾಗೂ ಪ್ರಧಾನಿ ಹುದ್ದೆಗೆ ಆಯ್ಕೆಗಾಗಿ ನಡೆದಿದ್ದ ಸ್ಪರ್ಧೆಯಲ್ಲಿ ಟ್ರುಸ್ ಸುನಕ್ ರನ್ನು ಹಿಂದಿಕ್ಕಿ ಪ್ರಧಾನಿ ಹುದ್ದೆಗೇರಿದ್ದರು. ಆದರೆ 45 ದಿನಗಳ ಬಳಿಕ ಹುದ್ದೆಯಿಂದ ಕೆಳಕ್ಕಿಳಿದಿದ್ದರು. ಮರಳಿ ಪ್ರಧಾನಿ ಹುದ್ದೆಗೇರುವ ಪ್ರಯತ್ನಕ್ಕೆ ಜಾನ್ಸನ್ ಮುಂದಾಗಿರಲಿಲ್ಲ. ಹೀಗಾಗಿ ಎರಡು ತಿಂಗಳ ಹಿಂದೆ ಕೈತಪ್ಪಿದ್ದ ಪ್ರಧಾನಿ ಹುದ್ದೆಗೆ ಸುನಕ್ ಪ್ರಬಲ ಅಭ್ಯರ್ಥಿಯಾಗಿದ್ದರು.

 ಪ್ರಧಾನಿ ಹುದ್ದೆಗೆ ಕಣಕ್ಕಿಳಿಯಲು ಕನಿಷ್ಠ 100 ಸಂಸದರ ಬೆಂಬಲ ಹೊಂದಿರುವುದು ಅಗತ್ಯವಾಗಿದೆ. ಆದರೆ ಇದನ್ನು ಗಳಿಸಲು ಮೊಡಂಟ್ ವಿಫಲರಾಗಿದ್ದರೆ ಸುನಕ್ 190ಕ್ಕೂ ಅಧಿಕ ಸಂಸದರ ಬೆಂಬಲವನ್ನು ಗಳಿಸಿದ್ದರು. ಈ ಹಿನ್ನೆಲೆಯಲ್ಲಿ 1992 ಸಮಿತಿ ಮುಖ್ಯಸ್ಥ ಸರ್ ಗ್ರಹಾಂ ಬ್ರಾಡಿ ಅವರು ಫಲಿತಾಂಶಗಳನ್ನು ಪ್ರಕಟಿಸುವ ನಿಮಿಷಗಳ ಮುನ್ನ ಮೊಡಂಟ್ ಸ್ಪರ್ಧೆಯಿಂದ ಹಿಂದೆ ಸರಿದರು.

ಟ್ರುಸ್ ಮತ್ತು ಸುನಕ್ ದೊರೆ ಚಾರ್ಲ್ಸ್ ಅವರನ್ನು ಭೇಟಿಯಾಗಲಿದ್ದು, ಅವರ ಆಹ್ವಾನದ ಬಳಿಕವಷ್ಟೇ ಸುನಕ್ ತನ್ನ ಸರಕಾರವನ್ನು ರಚಿಸಬಹುದು.

ಸುನಕ್ ಅವರು 2015 ರಲ್ಲಿ ರಿಚ್ಮಂಡ್ (ಯಾರ್ಕ್ಸ್) ಕ್ಷೇತ್ರದಿಂದ ಮೊದಲು ಸಂಸದರಾಗಿ ಆಯ್ಕೆಯಾದರು ಮತ್ತು 2017 ಮತ್ತು 2019 ರಲ್ಲಿ ಮರು ಆಯ್ಕೆಯಾದ ಅವರು ಸಂಸದರಾಗಿ ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದರು.‌

ಜುಲೈ 2019 ರಲ್ಲಿ, ಸುನಕ್ ಅವರನ್ನು ಖಜಾನೆಗೆ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು, ಜನವರಿ 2018 ರಲ್ಲಿ ಸ್ಥಳೀಯ ಸರ್ಕಾರದ ಸಚಿವರಾಗಿ ಸರ್ಕಾರಿ ಸೇವೆಗೆ ಪ್ರವೇಶಿಸಿದರು. ಫೆಬ್ರವರಿ 2020 ರಲ್ಲಿ, ಅವರು ಖಜಾನೆಯ ಕುಲಪತಿಯಾಗಿ ನೇಮಕಗೊಂಡರು.

ರಿಷಿ ಸುನಕ್‌ ಕುಟುಂಬದ ಹಿನ್ನೆಲೆ:

ರಿಷಿ ಸುನಕ್ ಅವರ ಅಜ್ಜ ಅಜ್ಜಿ ಪಂಜಾಬ್ ಮೂಲದವರಾಗಿದ್ದು, ಅವರ ತಂದೆ ತಾಯಿಯರಿಬ್ಬರೂ ಫಾರ್ಮಸಿಸ್ಟ್ ಆಗಿದ್ದಾರೆ. ಅವರು 1960 ರ ದಶಕದಲ್ಲಿ ಪೂರ್ವ ಆಫ್ರಿಕಾದಿಂದ ಯುಕೆಗೆ ವಲಸೆ ಬಂದಿದ್ದರು.

ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವರಿಸಿರುವ ರಿಷಿ ಸುನಕ್‌ಗೆ ಕೃಷ್ಣ ಮತ್ತು ಅನೌಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಬೋರಿಸ್ ಜಾನ್ಸನ್ ಅವರ ನೇತೃತ್ವದಲ್ಲಿ ಹಣಕಾಸು ಸಚಿವರಾಗಿದ್ದರು.

ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಅವರ ನಿವಾಸದಲ್ಲಿ ದೀಪಾವಳಿಗೆ ದೀಪ ಬೆಳಗಿಸಿದ್ದ ರಿಷಿ ಸುನಕ್, ಯುಕೆ ಸಂಸತ್ತಿನಲ್ಲಿ ಭಗವದ್ಗೀತೆ ಮೇಲೆ ಪ್ರಮಾಣವಚನ ಸ್ವೀಕರಿಸಿದ ಮೊದಲ ಸಂಸದರೂ ಆಗಿದ್ದಾರೆ. ಆಗಾಗ್ಗೆ ಪರಂಪರೆ, ಸಂಸ್ಕೃತಿ ಕುರಿತು ಮಾತನಾಡುವ ರಿಷಿ ಸುನಕ್ ತಮ್ಮ ಕುಟುಂಬವು ಮೌಲ್ಯಗಳು ಮತ್ತು ಸಂಸ್ಕೃತಿಯ ಬಗ್ಗೆ ನೆನಪಿಸುತ್ತದೆ ಅಂದಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಭಗವದ್ಗೀತೆಯು ಆಗಾಗ್ಗೆ ನನ್ನನ್ನು ಎಂದು ರಿಷಿ ಹೇಳಿದ್ದರು

 ರಿಷಿ ಸುನಕ್ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದು, ಮತ್ತು ವಿಂಚೆಸ್ಟರ್ ಕಾಲೇಜು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಬಳಿಕ ಇನ್ವೆಸ್ಟ್ ಮೆಂಟ್  ಬ್ಯಾಂಕರ್ ಆಗಿ ವೃತ್ತಿ ಜೀವನ ನಡೆಸಿದ್ದರು.

2022 ಪ್ರಧಾನಿ ಚುನಾವಣೆ ಪ್ರಚಾರದ ಸಮಯದಲ್ಲಿ, ರಿಷಿ ಸುನಕ್ ಅವರ ಅದ್ದೂರಿ ಮನೆ, ದುಬಾರಿ ಸೂಟುಗಳು ಮತ್ತು ಬೂಟುಗಳು ಸೇರಿದಂತೆ ಐಷರಾಮಿ ಬದುಕಿನ ಬಗ್ಗೆ ವಿವಿಧ ಟೀಕೆಗಳನ್ನು ಎದುರಿಸಿದ್ದರು.‌ ರಿಷಿ ಸುನಕ್ ಅವರು 700 ಮಿಲಿಯನ್ ಪೌಂಡ್‌ಗಳಿಗಿಂತ ಹೆಚ್ಚು ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News