ಶೀಘ್ರದಲ್ಲೇ ಸಮಗ್ರ ಕನ್ನಡ ವಿಧೇಯಕ ಜಾರಿ: ಸಚಿವ ಸುನಿಲ್ ಕುಮಾರ್
ಮಂಗಳೂರು, ನ.1: ರಾಜ್ಯ ದಲ್ಲಿ ವಿವಿಧ ಕ್ಷೇತ್ರದ ಕನ್ನಡದ ಸಮಗ್ರ ಅನುಷ್ಠಾನಕ್ಕಾಗಿ ಶೀಘ್ರದಲ್ಲೇ ಸಮಗ್ರ ಕನ್ನಡ ವಿಧೇಯಕ ಜಾರಿ ಮಾಡಲು ಸರಕಾರ ಚಿಂತನೆ ಮಾಡಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತು ವಾರಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಅವರು ಇಂದು ನಗರದ ನೆಹರೂ ಮೈದಾನ ದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 67ನೆ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.
ಕನ್ನಡ ವನ್ನು ಉಳಿಸಬೇಕಾದರೆ ಅದನ್ನು ಬಳಸಬೇಕು. ಆಡಳಿತದಲ್ಲಿ ಕನ್ನಡ ಜಾರಿಗೊಳಿಸಲು ಸರಕಾರ ಬದ್ಧವಾಗಿದೆ. ಕನ್ನಡ ವನ್ನು ಆಡಳಿತದಲ್ಲಿ ಬಳಸಲು ಕನ್ನಡದಲ್ಲಿ ಸುತ್ತೋಲೆ, ಅಧಿಸೂಚನೆ, ನ್ಯಾಯಾಲಯ ಸೇರಿದಂತೆ ಆಡಳಿತದ ವಿವಿಧ ಹಂತದಲ್ಲಿ ಕನ್ನಡ ಜಾರಿಗೊಳಿಸಲು ಸಮಗ್ರ ವಿಧೇಯಕ ವೊಂದನ್ನು ಡಿಸೆಂಬರ್ ತಿಂಗಳಲ್ಲಿ ಮಂಡಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ದ.ಕ ಜಿಲ್ಲೆಯ 27 ಸರಕಾರಿ ಶಾಲೆ ಗಳ ಮೂಲಭೂತ ಸೌಕರ್ಯ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಅಮೃತ ಶಾಲಾ ಯೋಜನೆ ಯಡಿ 270 ಲಕ್ಷ ರೂ ಬಿಡುಗಡೆ ಗೊಳಿಸಲಾಗಿದೆ.275 ಕೊಠಡಿಗಳನ್ನು ನಿರ್ಮಾಣ ಗೊಳಿಸಲು 39.30 ಕೋಟಿ ರೂ. ಕ್ರೀಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಹೆಚ್ಚು ವರಿ ಶೌಚಾಲಯ ನಿರ್ಮಾಣ ಕ್ಕೆ 5 ಕೋಟಿ ರೂ ಅನುದಾನ ಬಿಡುಗಡೆ ಗೊಳಿಸಲಾಗಿದೆ.
ಕೈಯ್ಯಾರ ಕಿಂಞಣ್ಣ ರೈ ಸ್ಮಾರಕ ನಿರ್ಮಾಣಕ್ಕೆ 50 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ರಾಷ್ಟ್ರ ಕವಿ ಎಂ.ಗೋವಿಂದ ಪೈ ಅವರ ಪುಸ್ತಕ ದ ಮರು ಮುದ್ರಣ ಕ್ಕಾಗಿ 30 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ದ.ಕ ಜಿಲ್ಲಾ ರಂಗ ಮಂದಿರ ನಿರ್ಮಾಣಕ್ಕೆ 14 ಕೋಟಿಯ ಯೋಜನೆ ರೂಪಿಸಲಾಗಿದೆ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.
ಇತ್ತೀಚೆಗೆ ಕೋಟಿ ಕಂಠ ಗಾಯನದಲ್ಲಿ 1.50 ಕೋಟಿ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅತಿಥಿ ಗಳು ಜಿಲ್ಲಾ ಮಟ್ಟದ ರಾಜೋತ್ಸವ ಪ್ರಶಸ್ತಿ ವಿತರಿಸಿದರು. ಸಮಾರಂಭದಲ್ಲಿಮುಖ್ಯ ಅತಿಥಿಗಳಾಗಿ ಸಂಸದರಾದ ನಳಿನ್ ಕುಮಾರ್ ಕಟೀಲು, ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಉಮಾ ನಾಥ್ ಕೋಟ್ಯಾನ್, ಡಿ. ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಕೆ. ಪ್ರತಾಪ್ ಸಿಂಹ ನಾಯಕ್, ಮೀನುಗಾರಿಕೆ ಅಭಿವೃಧ್ಧಿ ನಿಗಮದ ಅಧ್ಯಕ್ಷ ಎ.ವಿ ತೀರ್ಥರಾಮ ಹಾಗೂ ಮಂಗಳೂರು ಮೇಯರ್ ಜಯಾನಂದ ಅಂಚನ್ ಉಪ ಮೇಯರ್ ಪೂರ್ಣಿಮಾ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
ವಿವಿಧ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಪೊಲೀಸ್ ಪಥ ಸಂಚಲನ ನಡೆಯಿತು.