EWS ಮೀಸಲಾತಿ ಮತ್ತು ಖಾಸಗೀಕರಣ: ಬ್ರಾಹ್ಮಣಶಾಹಿ ಫ್ಯಾಶಿಸಂನ ಎರಡು ಅಸ್ತ್ರಗಳು!
ಅಳಿದುಳಿದ ಉದ್ಯೋಗಾವಕಾಶಗಳಲ್ಲಿ ದಲಿತ-ಒಬಿಸಿ-ಆದಿವಾಸಿ ಸಮುದಾಯಗಳಿಗೆ ಸಿಗುತ್ತಿದ್ದ ಅವಕಾಶಗಳಲ್ಲೂ ಶೇ. 10ರಷ್ಟು ಅವಕಾಶಗಳನ್ನು EWS ಮೀಸಲಾತಿ ಹೆಚ್ಚುವರಿಯಾಗಿ ನುಂಗಿಹಾಕುತ್ತಿದೆ. ಇದು ಹಿಂದುತ್ವದ ಬ್ರಾಹ್ಮಣಶಾಹಿ ಕತ್ತಿಯ ಎರಡು ಅಲಗುಗಳಾಗಿವೆ. ಹೀಗಾಗಿ ಹಿಂದುತ್ವ ಫ್ಯಾಶಿಸಂ ಎಂದರೆ ಕೇವಲ ಮುಸ್ಲಿಮ್ ವಿರೋಧವಲ್ಲ. ಹಿಂದುತ್ವ ಫ್ಯಾಶಿಸಂ ಎಂದರೆ ದಲಿತ-ಆದಿವಾಸಿ-ಹಿಂದುಳಿದ ಸಮುದಾಯಗಳ ಮೇಲೆ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಯ ಕ್ರೂರ, ನಗ್ನ, ಭಯೋತ್ಪಾದಕ ಸರ್ವಾಧಿಕಾರವೇ ಆಗಿದೆ. ಹೀಗಾಗಿ ಸಾಮಾಜಿಕ ನ್ಯಾಯದ ಹೋರಾಟವು ಹಿಂದುತ್ವ ಫ್ಯಾಶಿಸಂ ವಿರೋಧಿ ಹೋರಾಟವಾಗುವ ತುರ್ತು ಇದ್ದೇ ಇದೆ.
EWS ಮೀಸಲಾತಿ ಎಂಬುದು ಸಂವಿಧಾನ ಒದಗಿಸಿದ ಸಾಮಾಜಿಕ ನ್ಯಾಯದ ಬುನಾದಿಯ ಮೇಲೆ ಹಿಂದುತ್ವ ಫ್ಯಾಶಿಸಂ ನಡೆಸಿರುವ ಬ್ರಾಹ್ಮಣಶಾಹಿ ದಾಳಿಯೇ ಆಗಿದೆ. ಏಕೆಂದರೆ ಇದು
1. ಜಾತಿ ಆಧಾರಿತ ತಾರತಮ್ಯದ ಇತಿಹಾಸವನ್ನು ಮತ್ತು ವರ್ತಮಾನವನ್ನು ನಗಣ್ಯಗೊಳಿಸುತ್ತದೆ
2. ಮೇಲ್ಜಾತಿ ಬಡ-ಮಧ್ಯಮ ವರ್ಗಗಳನ್ನು ಇತರ ಬಡ-ಮಧ್ಯಮ ವರ್ಗಗಳಿಗಿಂತ ವಿಶೇಷ ಸ್ಥಾನದಲ್ಲಿ ಇರಿಸುತ್ತದೆ. ಇದು ಮೇಲ್ಜಾತಿಗಳು ಮನುವಾದಿ ಜಾತಿ ವ್ಯವಸ್ಥೆಯಲ್ಲಿ ಪಡೆದುಕೊಂಡಿದ್ದ ವಿಶೇಷ ಸ್ಥಾನಮಾನಗಳ ಮುಂದುವರಿಕೆಯಂತಿದೆ.
3. ಹಾಗೂ, ದಲಿತ-ದಮನಿತ ಸಮುದಾಯಗಳಿಗೆ ಸಿಗುತ್ತಿದ್ದ ಅವಕಾಶಗಳನ್ನು ಕಿತ್ತು ಮೇಲ್ಜಾತಿಗಳಿಗೆ ಒದಗಿಸುತ್ತದೆ. ಈ ಮೂರೂ ತಾತ್ವಿಕ ಹಾಗೂ ಪ್ರಾಯೋಗಿಕ ಅಂಶಗಳು ಒಟ್ಟು ಸೇರಿ ಬ್ರಾಹ್ಮಣಶಾಹಿಯನ್ನು ತಾತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ಗಟ್ಟಿಗೊಳಿಸುತ್ತಿದೆ.
ಹಾಗೆ ನೋಡಿದರೆ ಸಾರ್ವಜನಿಕ ಉದ್ಯಮಗಳ, ಆಡಳಿತದ ಖಾಸಗೀಕರಣವೂ ದಲಿತ-ದಮನಿತ ಸಮುದಾಯಗಳಅವಕಾಶಗಳನ್ನು ತಾತ್ವಿಕವಾಗಿ ಹಾಗೂ ಪ್ರಾಯೋಗಿಕವಾಗಿ ಕತ್ತರಿಸಿ ಹಾಕುವ ಬ್ರಾಹ್ಮಣಶಾಹಿ ಯೋಜನೆಯ ಇನ್ನೂ ಪರಿಣಾಮಕಾರಿ ಅಸ್ತ್ರವನ್ನಾಗಿ ಮೋದಿ ಸರಕಾರದ ನೇತೃತ್ವದಲ್ಲಿ ಹಿಂದುತ್ವ ಫ್ಯಾಶಿಸಂ ಬಳಸುತ್ತಾ ಬಂದಿದೆ.
ಖಾಸಗೀಕರಣ- ಕಾರ್ಪೊರೇಟ್ ಬ್ರಾಹ್ಮಣ್ಯ
1991ರ ನಂತರದಲ್ಲಿ ಖಾಸಗೀಕರಣ, ಜಾಗತೀಕರಣ ನೀತಿಗಳು ಮೋದಿ ಕಾಲದಲ್ಲಿ ಅದರ ಉತ್ತುಂಗವನ್ನು ಮುಟ್ಟಿವೆ. ಕಲ್ಯಾಣ ರಾಜ್ಯದ ಬದಲಿಗೆ ಕಾರ್ಪೊರೇಟ್ ರಾಜ್ಯ, ಸಾಮಾಜಿಕ ನ್ಯಾಯದ ಬದಲಿಗೆ ಸಮರ್ಥ ಆಡಳಿತ, ಉತ್ತರದಾಯಿತ್ವದ ಬದಲಿಗೆ ಖಾಸಗಿ ಸ್ವಾಯತ್ತತೆಗಳು ಮೌಲ್ಯಗಳಾದವು. ‘ಕನಿಷ್ಠ ಸರಕಾರ, ಗರಿಷ್ಠ ಆಡಳಿತ’ ಇವೆಲ್ಲಾ ಆಡಳಿತದ ಪ್ರಾತಿನಿಧ್ಯದಲ್ಲಿ ಸಾಮಾಜಿಕ ನ್ಯಾಯವನ್ನು ನಿರಾಕರಿಸುವ ಸಾಧನವಾದರೆ, ಶಿಕ್ಷಣ ಮತ್ತು ಉದ್ಯಮಗಳಲ್ಲಿ ಖಾಸಗೀಕರಣ ನೀತಿಗಳು ಸಾಂವಿಧಾನಾತ್ಮಕವಾಗಿ ದಲಿತ ಹಿಂದುಳಿದ ಸಮುದಾಯಗಳಿಗೆ ಅವಕಾಶಗಳನ್ನು ಮತ್ತು ಪ್ರಾತಿನಿಧ್ಯವನ್ನು ನಿರಾಕರಿಸಿ ಮರುಬ್ರಾಹ್ಮಣಶಾಹೀಕರಿಸುವ ಸಾಧನವಾಗಿ ಜಾರಿಯಾಗಿವೆ. ಇಂದು ಮೋದಿ ಸರಕಾರದ ಅವಧಿಯಲ್ಲಿ ದೇಶದ ಆಡಳಿತ ಮತ್ತು ಆರ್ಥಿಕತೆಯ ಕಾರ್ಪೊರೇಟೀಕರಣ ಮತ್ತು ಬ್ರಾಹ್ಮಣೀಕರಣಗಳು ಉತ್ತುಂಗವನ್ನು ಮುಟ್ಟಿರುವ ಹೊತ್ತಿನಲ್ಲಿ ಮೀಸಲಾತಿಯ ಮೇಲೆ ಖಾಸಗೀಕರಣದ ಪರಿಣಾಮವನ್ನೂ ಅರ್ಥಮಾಡಿಕೊಳ್ಳದ ಸಾಮಾಜಿಕ ನ್ಯಾಯದ ಹೋರಾಟ ಆಳುವವರು ವಿಧಿಸಿರುವ ಚೌಕಟ್ಟಿನಲ್ಲೇ ಅಳುತ್ತಾ ಕೂರಬೇಕಾದ ಅಪಾಯವನ್ನು ಒಡ್ಡಿದೆ.
ಖಾಸಗಿಯಲ್ಲಿ ಮೀಸಲಾತಿ: ಹಾವಿನ ಹಂಗು, ಬಾಲದ ಜೊತೆ ಚೌಕಾಸಿ?
ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಸಿಗುವುದು ಸರಕಾರಿ ವಲಯದಲ್ಲೇ ವಿನಾ ಖಾಸಗಿ ವಲಯದಲ್ಲಲ್ಲ. ಖಾಸಗಿ ವಲಯಕ್ಕೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದರೆ ಸರಕಾರ ಕೆಲವು ಉತ್ತೇಜನಗಳನ್ನು ಘೋಷಿಸಬಹುದೇ ವಿನಾ ಮೀಸಲಾತಿ ಕೊಡದಿದ್ದರೆ ಶಿಕ್ಷಿಸುವ ಅವಕಾಶ ನಮ್ಮ ಸಂವಿಧಾನದಲ್ಲಿಲ್ಲ. ಅಷ್ಟು ಮಾತ್ರವಲ್ಲ. ದೇಶದ ಉದ್ಧಾರವಾಗುವುದೇ ಖಾಸಗಿ ದೇಶೀ ಮತ್ತು ವಿದೇಶೀ ಬಂಡವಾಳಗಳ ಹೂಡಿಕೆಯಿಂದ ಮಾತ್ರ ಎಂಬ ಸಂವಿಧಾನ ವಿರೋಧಿ ತತ್ವವು ಎಡದಿಂದ-ಬಲದವರೆಗಿನ ಎಲ್ಲಾ ರಾಜಕೀಯ ಪಕ್ಷಗಳ ಒಪ್ಪಿಗೆ ಪಡೆದಿರುವುದರಿಂದ ಖಾಸಗಿಯನ್ನು ಸಾಮಾಜಿಕ ನ್ಯಾಯಕ್ಕೆ ಬಗ್ಗಿಸುವ ರಾಜಕೀಯ ಇಚ್ಛಾಶಕ್ತಿ ಯಾವ ಚುನಾವಣಾ ರಾಜಕೀಯ ಪಕ್ಷಗಳಿಗೂ ಇಲ್ಲ. ಹೀಗಾಗಿ 1991ರಿಂದ ಸರ್ವ ಸಮ್ಮತವಾಗಿ ಈ ದೇಶದ ಮೀಸಲಾತಿಯ ಮೇಲೆ ಮತ್ತು ಸಾಮಾಜಿಕ ನ್ಯಾಯದ ಮೇಲೆ ರಾಜಕೀಯ-ಆರ್ಥಿಕ-ಸಾಂಸ್ಕೃತಿಕ ದಾಳಿ ನಡೆಯುತ್ತಾ ಬಂದಿದೆ. ಜೊತೆಗೆ ಈ ದೇಶದ ಒಟ್ಟಾರೆ ಉದ್ಯೋಗ ಸೃಷ್ಟಿಯಲ್ಲಿ ಶೇ. 92 ಭಾಗ ಸೃಷ್ಟಿಯಾಗುವುದು ಅಸಂಘಟಿತ ವಲಯದಲ್ಲಿ. ಕೃಷಿ, ಬೀದಿ ವ್ಯಾಪಾರ, ಸಣ್ಣ, ಅತಿಸಣ್ಣ ಉದ್ದಿಮೆ..ಇತ್ಯಾದಿಗಳಲ್ಲಿ. ಇನ್ನು ಶೇ. 8 ಭಾಗ ಮಾತ್ರ ಸಂಘಟಿತ ಎಂದರೆ ನಿಗದಿತ ಸಂಬಳ, ಸೌಲಭ್ಯ, ಪೆನ್ಷನ್, ಕಾರ್ಮಿಕ ಹಕ್ಕುಗಳು ಇರುವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ.
ಹೆಚ್ಚು ಉದ್ಯೋಗ-ಮೀಸಲಾತಿ ಕೊಡುತ್ತಿರುವುದು ಸರಕಾರಿ ವಲಯವೇ?
ಹೊಸದಿಲ್ಲಿಯ ಇನ್‌ಸ್ಟಿಟ್ಯೂಟ್ ಫಾರ್ ಸ್ಟಡೀಸ್ ಆಫ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ (ಐಎಸ್‌ಐಡಿ) ಸಂಸ್ಥೆಯು ಮಾಡಿರುವ ಅಧ್ಯಯನದ ಪ್ರಕಾರ ಈ ಸಂಘಟಿತ ವಲಯದೊಳಗೆ 1981ರಲ್ಲಿ 1.65 ಕೋಟಿ ಜನರು ಸಾರ್ವಜನಿಕ ವಲಯದಲ್ಲಿ ಕೆಲಸಮಾಡುತ್ತಿದ್ದರು. ಇದರಲ್ಲಿ ಶೇ.40 ಭಾಗದಷ್ಟು ರಾಜ್ಯ ಹಾಗೂ ಕೇಂದ್ರ ಸರಕಾರದ ಆಡಳಿತ ಯಂತ್ರಾಂಗ ಸೃಷ್ಟಿಸಿದ್ದರೆ, ಉಳಿದದ್ದು ಸಾರ್ವಜನಿಕ ವಲಯದ ಉದ್ಯಮಗಳು ಸೃಷ್ಟಿಸಿದ್ದವು. ಅದರ ಅರ್ಥ 1.65 ಕೋಟಿ ಉದ್ಯೋಗಗಳಲ್ಲಿ ಆಗ ಶೇ. 22.3 ರಷ್ಟು ಉದ್ಯೋಗಗಳು ಅಂದರೆ 35 ಲಕ್ಷದಷ್ಟು ಉದ್ಯೋಗಾವಕಾಶಗಳು ಮೀಸಲಾಗಿರುತ್ತಿತ್ತು. ಅದರಲ್ಲಿ ಅರ್ಧದಷ್ಟು ಬ್ಯಾಕ್ ಲಾಗ್ ಆಗಿ ಬಾಕಿ ಉಳಿಯುತ್ತಿದೆ ಎನ್ನುವುದು ಬೇರೆ ಮಾತು. ಇದು 1997ರಲ್ಲಿ 1.95 ಕೋಟಿಗೆ ತಲುಪಿತು. 1989ರಲ್ಲಿ ಮಂಡಲ್ ವರದಿ ಜಾರಿಯಾಗಿದ್ದರಿಂದ ಇದರಲ್ಲಿ ಅಂದಾಜು 1 ಕೋಟಿ ಉದ್ಯೋಗಗಳು ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ದಕ್ಕಿತು. ಆಗಲೂ ಅದರ ಪೂರ್ತಿ ಲಾಭವನ್ನು ಪಡೆದುಕೊಳ್ಳುವಷ್ಟು ಸಾಧ್ಯತೆಗಳು ಈ ಸಮುದಾಯಗಳಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಯಿತು ಎಂಬುದು ಮತ್ತೊಂದು ವಿಷಯ.
ಆದರೆ ಸಾರ್ವಜನಿಕ ಕ್ಷೇತ್ರವು ಹೆಚ್ಚಾಗುತ್ತಿದ್ದುದರಿಂದ ಅಷ್ಟು ಅವಕಾಶವಂತೂ ದಲಿತ-ಹಿಂದುಳಿದ ಸಮುದಾಯಕ್ಕೆ ದಕ್ಕುತ್ತಿತ್ತು. ಆದರೆ, ಅಲ್ಲಿಂದಾಚೆಗೆ 1997- 2012ರ ಅವಧಿಯಲ್ಲಿ ಖಾಸಗೀಕರಣ, ಉದಾರೀಕರಣ ನೀತಿಗಳು ವೇಗವಾಗಿ ಜಾರಿಯಾಗತೊಡಗುತ್ತಾ ಸಾರ್ವಜನಿಕ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು 1.75 ಕೋಟಿಗೆ ಕುಸಿದಿತ್ತು. ಅಂದರೆ ಈ ಅವಧಿಯಲ್ಲಿ ಖಾಸಗೀಕರಣದ ಜಾರಿಯಿಂದಾಗಿ ದಲಿತ -ಹಿಂದುಳಿದ ಸಮುದಾಯಗಳಿಗೆ ಕೇವಲ ಕೇಂದ್ರ ಸರಕಾರದ ಅಧೀನದಲ್ಲಿರುವ ಉದ್ದಿಮೆಗಳಲ್ಲಿ ದೊರೆಯಬೇಕಾಗಿದ್ದ 10 ಲಕ್ಷ ಉದ್ಯೋಗಾವಕಾಶಗಳು ಕಣ್ಮರೆಯಾದವು. ಇದು 2014-2022ರ ಮೋದಿ ಅವಧಿಯಲ್ಲಿ ಇನ್ನೂ ಶೀಘ್ರಗತಿಯಲ್ಲಿ ಕುಸಿದಿದೆ. ಆದರೆ, 1981ರಲ್ಲಿ 65 ಲಕ್ಷ ಜನರಿಗೆ ಉದ್ಯೋಗ ಕೊಡುತ್ತಿದ್ದ ಖಾಸಗಿ ಸಂಘಟಿತ ಕ್ಷೇತ್ರ 40 ವರ್ಷಗಳ ನಂತರ 2019ರ ವೇಳೆಗೆ ಸರಕಾರಗಳಿಂದ ಸಕಲ ಸೌಲಭ್ಯಗಳನ್ನು ಪಡೆದುಕೊಂಡೂ ಉದ್ಯೋಗ ಸೃಷ್ಟಿಸಿದ್ದು ಕೇವಲ 98 ಲಕ್ಷಗಳನ್ನು ಮಾತ್ರ. ಅಂದರೆ ಕೇವಲ 30 ಲಕ್ಷ ಹೆಚ್ಚುವರಿ ಉದ್ಯೋಗಗಳನ್ನು ಮಾತ್ರ. ಆದರೆ ಅವ್ಯಾವುವೂ ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಉದ್ಯೋಗಾವಕಾಶಗಳನ್ನು ನಿಯಮಬದ್ಧವಾಗಿ ಕಲ್ಪಿಸಲಿಲ್ಲ.
(http://111.93.232.162/pdf/ICSSR_TSP_PPS.pdf)
2020ರ ನಂತರ ‘ಆತ್ಮ ನಿರ್ಭರ ಭಾರತ’ದ ಹೆಸರಿನಲ್ಲಿ ಮೋದಿ ಸರಕಾರ ಖಾಸಗಿ ವಲಯವು ಉತ್ಪಾದನೆ ಹೆಚ್ಚಿಸಿ 60 ಲಕ್ಷ ಹೊಸ ಉದ್ಯೋಗಗಳನ್ನು ಕೊಡುತ್ತವೆ ಎಂಬ ನೆಪ ಒಡ್ಡಿ ಖಾಸಗಿ ಉದ್ಯಮಿಗಳಿಗೆ ರೂ. 2 ಲಕ್ಷ ಕೋಟಿಗೂ ಹೆಚ್ಚು ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ನೀಡಿತ್ತು. ಆದರೆ ಅವು ಕಳೆದ ಐದುವರ್ಷದಲ್ಲಿ ಸೃಷ್ಟಿಸಿರುವ ಉದ್ಯೋಗಗಳು 60 ಲಕ್ಷಗಳಲ್ಲ. ಬದಲಿಗೆ ಕೇವಲ 1,97,210 ಮಾತ್ರ. ಅದರಲ್ಲಿ ದಲಿತ-ದಮನಿತ ಸಮುದಾಯಗಳ ಪ್ರಾತಿನಿಧ್ಯ ಒಂದಂಕಿಯನ್ನು ದಾಟಿಲ್ಲ. ಮತ್ತೊಂದು ಅಧ್ಯಯನದ ಪ್ರಕಾರ ಖಾಸಗೀಕರಣದ ನಂತರದ 25 ವರ್ಷಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಸೃಷ್ಟಿಯಾದ ಹೊಸ 6.1 ಕೋಟಿ ಉದ್ಯೋಗಗಳಲ್ಲಿ. ಶೇ. 92ರಷ್ಟು ಉದ್ಯೋಗಗಳು ಅನೌಪಚಾರಿಕ ಅಂದರೆ ಯಾವುದೇ ಸಾಮಾಜಿಕ ನ್ಯಾಯ ಮಾತ್ರವಲ್ಲ ಕಾರ್ಮಿಕ ಹಕ್ಕು ಹಾಗೂ ಸೌಲಭ್ಯಗಳೂ ಇಲ್ಲದ ವಲಯದಲ್ಲಿ ಸೃಷ್ಟಿಯಾಗಿದ್ದವು.
(https://scroll.in/article/922863/data-check-90-of-jobs-created-in-india-after-liberalisation-were-in-the-informal-sector)
ಸಾರ್ವಜನಿಕ ವಲಯದ ಖಾಸಗೀಕರಣ ಈ ಮಹಾ ವಂಚನೆಯನ್ನು ಜನರೆದುರು ಮಹಾ ಸಾಧನೆಯೆಂಬಂತೆ ಮೋದಿ ಸರಕಾರ ಮುಂದಿಡುತ್ತಿದೆ. ಅದಕ್ಕೆ ಅವರ ಆಸ್ಥಾನ ಪಂಡಿತರು ಕೊಡುವ ಕಾರಣ ಸಾರ್ವಜನಿಕ ಉದ್ಯಮಗಳು ಸಾರ್ವಜನಿಕ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿವೆ ಎಂಬುದೇ ಆಗಿದೆ. ಆದರೆ ಇದು ನಿಜವೇ? ನೋಡೋಣ:
ಲಾಭ ಗಳಿಸಿದರೂ ನಷ್ಟವೆನ್ನುವ ಸರಕಾರ
ಮೋದಿ ಸರಕಾರವು ಕೇಂದ್ರ ಸರಕಾರದ ಸುಪರ್ದಿನಲ್ಲಿರುವ ಸಾರ್ವಜನಿಕ ಕಂಪೆನಿಗಳ ಕಾಲಾವಧಿ ಸರ್ವೇಯನ್ನು 2019ರಲ್ಲಿ ಬಿಡುಗಡೆ ಮಾಡಿದೆ. ಅದರ ಪೂರ್ಣ ಪಾಠ ಈ ಕೆಳಗಿನ ವೆಬ್ ವಿಳಾಸದಲ್ಲಿ ದೊರೆಯುತ್ತದೆ.
(https://dpe.gov.in/sites/default/files/PE_seurvey_ENG_VOL_1.pdf)
ಮೇಲಿನ ವರದಿಯ ಪ್ರಕಾರ 2019ರ ಡಿಸೆಂಬರ್ ವೇಳೆಗೆ ಭಾರತದಲ್ಲಿ ಕೇಂದ್ರ ಸರಕಾರದ ಸ್ವಾಮ್ಯಕ್ಕೆ ಸೇರಿದ 330 ಸಾರ್ವಜನಿಕ ಸಂಸ್ಥೆಗಳಿದ್ದವು. ಅವುಗಳಲ್ಲಿ ಒಟ್ಟಾರೆಯಾಗಿ ಈವರೆಗೆ 26 ಲಕ್ಷ ಕೋಟಿ ರೂಪಾಯಿಗಳಷ್ಟು ಬಂಡವಾಳವನ್ನು ತೊಡಗಿಸಲಾಗಿದೆ. 2018-19ರ ಸಾಲಿನಲ್ಲಿ ಆ 330 ಕಂಪೆನಿಗಳಲ್ಲಿ 178 ಕಂಪೆನಿಗಳು ಲಾಭ ಮಾಡುತ್ತಿದ್ದರೆ, 70 ಕಂಪೆನಿಗಳು ಮಾತ್ರ ನಷ್ಟಕ್ಕೆ ಗುರಿಯಾಗಿದ್ದವು. ಆದರೂ ಅದೇ ಸಾಲಿನಲ್ಲಿ ಲಾಭ ಮಾಡುತ್ತಿದ್ದ ಕಂಪೆನಿಗಳು 1,74,587 ಕೋಟಿ ರೂ.ಗಳಷ್ಟು ಲಾಭ ಮಾಡಿದ್ದರೆ, ನಷ್ಟ ಮಾಡುತ್ತಿದ್ದ ಕಂಪೆನಿಗಳು ಕೇವಲ ರೂ. 30,000 ಕೋಟಿ ಮಾತ್ರ ನಷ್ಟ ಮಾಡಿದ್ದವು. ಅಂದರೆ ಒಟ್ಟಾರೆಯಾಗಿ ಭಾರತದ ಆರ್ಥಿಕತೆಗೆ ಸಾರ್ವಜನಿಕ ಉದ್ಯಮಗಳಿಂದರೂ. 1.5 ಲಕ್ಷ ಕೋಟಿ ರೂ.ಯಷ್ಟು ಲಾಭವೇ ಆಗಿತ್ತು. ಅಷ್ಟು ಮಾತ್ರವಲ್ಲ. ಈ ಎಲ್ಲಾ ಕಂಪೆನಿಗಳು 2019ರ ಸಾಲಿನಲ್ಲಿ ಡಿವಿಡೆಂಡ್, ಜಿಎಸ್‌ಟಿ, ಕಾರ್ಪೊರೇಟ್ ಟ್ಯಾಕ್ಸ್‌ಗಳ ರೂಪದಲ್ಲಿ ಸರಕಾರಕ್ಕೆ 3,68,803 ಕೋಟಿ ರೂ.ಗಳನ್ನು ಪಾವತಿ ಮಾಡಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಇವು 11 ಲಕ್ಷದಷ್ಟು ಉದ್ಯೋಗಗಳನ್ನು ನೀಡಿದ್ದವು. ಅದರಲ್ಲಿ 5 ಲಕ್ಷದಷ್ಟು ಉದ್ಯೋಗಗಳಾದರೂ ದಲಿತ ಮತ್ತು ಹಿಂದುಳಿದ ಸಮುದಾಯಕ್ಕೆ ದಕ್ಕಿತ್ತು.
ಈ ಕಾರ್ಮಿಕರಿಗೆ ಅವರಿಗೆ 2019ರ ಸಾಲಿನಲ್ಲಿ ರೂ. 1,52,684 ಕೋಟಿಗಳನ್ನು ಸಂಬಳ ಸಾರಿಗೆಯ ರೂಪದಲ್ಲಿ ನೀಡಲಾಗಿತ್ತು. ಸಹಜವಾಗಿಯೇ ಆ ಮೊತ್ತವು ಆರ್ಥಿಕತೆಯಲ್ಲಿ ಅಷ್ಟರ ಮಟ್ಟಿಗಿನ ಬೇಡಿಕೆಯನ್ನು ಸೃಷ್ಟಿಸುತ್ತಷ್ಟೆ. ಇವತ್ತು ಈ ದೇಶದ ಆರ್ಥಿಕತೆ ಕಂಗೆಟ್ಟಿರುವುದೇ ಜನರ ಕೊಳ್ಳುವ ಶಕ್ತಿಯ ಕುಸಿತದಿಂದ, ಅದಕ್ಕೆ ಕಾರಣವಾಗಿರುವ ನಿರುದ್ಯೋಗದಿಂದ ಎನ್ನುವುದರ ಹಿನ್ನೆಲೆಯಲ್ಲಿ ಈ ಉದ್ಯೋಗಗಳ ಮಹತ್ವ ಅರ್ಥವಾಗುತ್ತದೆ ಮತ್ತು ಸರಕಾರಿ ಕಂಪೆನಿಗಳನ್ನು ನಷ್ಟದಾಯಕ ಎಂದು ವರ್ಗೀಕರಿಸುವುದರ ಅಸಂಬದ್ಧತೆಯನ್ನು ತೋರಿಸುತ್ತದೆ. ಇಷ್ಟಾದರೂ ಮೋದಿ ಸರಕಾರವು 2021-22 ರ ಬಜೆಟ್‌ನಲ್ಲಿ ಎಲ್ಲಾ ಲಾಭದಾಯಕ ಕಂಪೆನಿಗಳನ್ನೂ ಖಾಸಗೀಕರಿಸುವುದಾಗಿ ಘೋಷಿಸಿತ್ತು ಮತ್ತು 2022-23ರ ಬಜೆಟ್‌ನಲ್ಲಿ ದೇಶದ ವ್ಯೆಹಾತ್ಮಕ ಮತ್ತು ಸೇನಾತ್ಮಕ ಕೈಗಾರಿಕೆಗಳನ್ನು ಖಾಸಗೀಕರಿಸುವುದಾಗಿ ಮತ್ತು ಸರಕಾರದ ಸುಪರ್ದಿಯಲ್ಲಿರುವ ಭೂಮಿ, ಇನ್ನಿತರ ಸಂಪನ್ಮೂಲಗಳನ್ನು ಖಾಸಗಿಯವರಿಗೆ ಮಾರಿಬಿಡುವುದಾಗಿ ಘೋಷಿಸಿದೆ ಮತ್ತು ಈ ವಹಾ ಮಾರಾಟವನ್ನು ಮಾಡಲು ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡುತ್ತಿದೆ.
ಇದಲ್ಲದೆ, ಉದ್ಯೋಗಾವಕಾಶಗಳು ಒದಗಿಸುವ ಮತ್ತೊಂದು ಅತಿದೊಡ್ಡ ಕ್ಷೇತ್ರ ಸರಕಾರದ ಆಡಳಿತ ಯಂತ್ರಾಂಗ. ಇದರಲ್ಲಿ ಅಂದಾಜು 41 ಲಕ್ಷ ಉದ್ಯೋಗಾವಕಾಶಗಳು ಲಭ್ಯವಾಗುತ್ತಿತ್ತು. ಆದರೆ ಇದರಲ್ಲಿ ಈವರೆಗೆ ಸೆಕ್ರೆಟರಿ ಮಟ್ಟದ ಹುದ್ದೆಗಳಿಗೆ ಮೀಸಲಾತಿಯನ್ನು ಜಾತಿ ಪೂರ್ವಾಗ್ರಹಗಳಿಂದ ಒದಗಿಸುತ್ತಿಲ್ಲ. ಉಳಿದಂತೆ 1989ರಿಂದ ಇದರಲ್ಲಿನ ಕನಿಷ್ಠ 20 ಲಕ್ಷ ಉದ್ಯೋಗಾವಕಾಶಗಳಲ್ಲಿ ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಅವಕಾಶಗಳು ಸಿಗಬೇಕಿತ್ತು. ಆದರೆ ಆಡಳಿತ ವೆಚ್ಚವನ್ನು ಕಡಿಮೆ ಮಾಡಬೇಕೆಂಬ ವಿಶ್ವಬ್ಯಾಂಕಿನ ನಿಬಂಧನೆಗೆ ಒಳಪಟ್ಟು 2013ರಿಂದ ಆಡಳಿತ ಯಂತ್ರದ ಗಾತ್ರವನ್ನು ಕಡಿಮೆ ಮಾಡಲಾಗುತ್ತಿದೆ.
ಅಂದರೆ ಅಷ್ಟರ ಮಟ್ಟಿಗೆ ಮೀಸಲಾತಿಯನ್ನು ನಿರಾಕರಿಸಲಾಗುತ್ತಿದೆ. ಇದನ್ನೇ ‘ಕನಿಷ್ಠ ಸರಕಾರ- ಗರಿಷ್ಠ ಆಡಳಿತ’ ಎಂದೂ, ‘ಆಡಳಿತ ಸುಧಾರಣೆ’ಯೆಂದೂ ಹೇಳಲಾಗುತ್ತದೆ. ಸರಕಾರವು ತನ್ನ ನೀತಿಯಲ್ಲಿ ಘೋಷಿಸಿಕೊಂಡಿರುವಂತೆ ನಿವೃತ್ತಿಯಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೆ, ಖಾಲಿಯಾಗಿಯೇ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೆ, ಕೆಳಹಂತದ ಸೇವೆಗಳನ್ನು ದಿನಗೂಲಿ-ಗುತ್ತಿಗೆಯ ಮೂಲಕ ಪೂರೈಸಿಕೊಳ್ಳುವ ಮೂಲಕ ಆಡಳಿತ ಯಂತ್ರಾಂಗದ ಗಾತ್ರ ಮತ್ತು ವೆಚ್ಚವನ್ನು ಕಡಿಮೆ ಮಾಡಿಕೊಳ್ಳುತ್ತಾ ಬಂದಿದೆ. ಮೋದಿ ಸರಕಾರ ಬರಲಿರುವ ವರ್ಷಗಳಲ್ಲಿ ಶೇ. 40ರಷ್ಟು ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವುದಾಗಿ ವಿಶ್ವ ಬ್ಯಾಂಕಿಗೆ ಭರವಸೆ ನೀಡಿದೆ. ಹೀಗೆ ಆಡಳಿತ ಯಂತ್ರಾಂಗದ ಅನೌಪಚಾರೀಕರಣ ಮತ್ತು ಖಾಸಗೀಕರಣದ ಮೂಲಕ ಕೇವಲ ಕೇಂದ್ರ ಆಡಳಿತ ಯತ್ರಾಂಗವೊಂದರಲ್ಲೇ 10 ಲಕ್ಷಕ್ಕೂ ಹೆಚ್ಚು ದಲಿತ ಮತ್ತು ಹಿಂದುಳಿದ ಸಮುದಾಯಗಳು ಉದ್ಯೋಗಾವಕಾಶಗಳಿಂದ ವಂಚಿತವಾಗಲಿವೆ.
ಆದರೆ ಅದೇ ಸಮಯದಲ್ಲಿ ಜಾಯಿಂಟ್ ಸೆಕ್ರೆಟರಿ ಮಟ್ಟದ ಹುದ್ದೆಗಳಿಗೆ ನೇರವಾಗಿ ಭರ್ತಿ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಇದರಿಂದ ಭಡ್ತಿಯ ಮೂಲಕ ಆ ಹುದ್ದೆಗಳನ್ನು ಪಡೆದುಕೊಳ್ಳಬೇಕಿದ್ದ ದಲಿತ-ಹಿಂದುಳಿದ ಅಭ್ಯರ್ಥಿಗಳಿಗೆ ಪ್ರಾತಿನಿಧ್ಯವನ್ನೂ ಮತ್ತು ಅವಕಾಶವನ್ನೂ ನಿರಾಕರಿಸಿದೆ.
ಖಾಸಗೀಕರಣ ಮತ್ತು EWS ಮೀಸಲಾತಿ- ಬ್ರಾಹ್ಮಣಶಾಹಿ ಕತ್ತಿಯ ಎರಡು ಅಲಗುಗಳು
ಹೀಗೆ ಮೇಲಿನ ಅಂಕಿಅಂಶಗಳು ಹಾಗೂ ಸರಕಾರಿ ನೀತಿಗಳು ಕೆಲವು ವಿಷಯಗಳನ್ನೂ ಸಾಬೀತು ಮಾಡುತ್ತವೆ. ಮೊದಲನೆಯದು ಖಾಸಗೀಕರಣವು ದಲಿತ ಮತ್ತು ಹಿಂದುಳಿದ ಸಮುದಾಯಗಳ ಉದ್ಯೋಗದ ಹಕ್ಕನ್ನು ಕಸಿಯುತ್ತವೆ. ಎರಡನೆಯದಾಗಿ ಸರಕಾರಿ ವಲಯದ ಖಾಸಗೀಕರಣ ತೀವ್ರವಾಗಿ ನಡೆಯುತ್ತಿರುವ ಹೊತ್ತಿನಲ್ಲೂ ಸರಕಾರಿ ವಲಯದಲ್ಲೇ ಖಾಸಗಿ ವಲಯಕ್ಕಿಂತ ಹೆಚ್ಚಿನ ಔಪಚಾರಿಕ ಉದ್ಯೋಗಗಳು ಲಭ್ಯವಿವೆ. ಮೂರನೆಯದಾಗಿ ಸರಕಾರಿ ವಲಯದ ಶಾಶ್ವತ ಉದ್ಯೋಗಗಳೂ ದಿನಗೂಲಿ, ಗುತ್ತಿಗೆ ಪದ್ಧತಿಯಿಂದ ನಾಶವಾಗುತ್ತಿವೆ. ಸಾರ್ವಜನಿಕ ಉದ್ದಿಮೆಗಳು ನಷ್ಟ ಮಾಡುತ್ತಿಲ್ಲ.
ಸರಕಾರ ಖಾಸಗೀಕರಿಸುತ್ತಿರುವುದು ಉದ್ಯೋಗ ಸೃಷ್ಟಿಸಿರುವ ಲಾಭ ಮಾಡುತ್ತಿರುವ ಸರಕಾರಿ ಕಂಪೆನಿಗಳನ್ನೇ ಹೊರತು ನಷ್ಟದಲ್ಲಿರುವ ಉದ್ಯಮಗಳನ್ನಲ್ಲ. ಮೋದಿ ಸರಕಾರದ ‘ಕನಿಷ್ಠ ಸರಕಾರ ಗರಿಷ್ಠ ಆಡಳಿತ’ವೆಂಬ ನೀತಿ ಹಾಗೂ ನೇರ ಭರ್ತಿ ನೀತಿಗಳು ಕಾರ್ಪೊರೇಟ್-ಬ್ರಾಹ್ಮಣಶಾಹಿ ನೀತಿಗಳಾಗಿವೆ. ಹಾಗೂ ಅಳಿದುಳಿದ ಉದ್ಯೋಗಾವಕಾಶಗಳಲ್ಲಿ ದಲಿತ-ಒಬಿಸಿ-ಆದಿವಾಸಿ ಸಮುದಾಯಗಳಿಗೆ ಸಿಗುತ್ತಿದ್ದ ಅವಕಾಶಗಳಲ್ಲೂ ಶೇ. 10ರಷ್ಟು ಅವಕಾಶಗಳನ್ನು EWS ಮೀಸಲಾತಿ ಹೆಚ್ಚುವರಿಯಾಗಿ ನುಂಗಿಹಾಕುತ್ತಿದೆ. ಇದು ಹಿಂದುತ್ವದ ಬ್ರಾಹ್ಮಣಶಾಹಿ ಕತ್ತಿಯ ಎರಡು ಅಲಗುಗಳಾಗಿವೆ. ಹೀಗಾಗಿ ಹಿಂದೂತ್ವ ಫ್ಯಾಶಿಸಂ ಎಂದರೆ ಕೇವಲ ಮುಸ್ಲಿಮ್ ವಿರೋಧವಲ್ಲ. ಹಿಂದುತ್ವ ಫ್ಯಾಶಿಸಂ ಎಂದರೆ ದಲಿತ-ಆದಿವಾಸಿ-ಹಿಂದುಳಿದ ಸಮುದಾಯಗಳ ಮೇಲೆ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಯ ಕ್ರೂರ, ನಗ್ನ, ಭಯೋತ್ಪಾದಕ ಸರ್ವಾಧಿಕಾರವೇ ಆಗಿದೆ. ಹೀಗಾಗಿ ಸಾಮಾಜಿಕ ನ್ಯಾಯದ ಹೋರಾಟವು ಹಿಂದುತ್ವ ಫ್ಯಾಶಿಸಂ ವಿರೋಧಿ ಹೋರಾಟವಾಗುವ ತುರ್ತು ಇದ್ದೇ ಇದೆ.
ಅಲ್ಲವೇ?