ಧೂಳಿನ ಕಣಜವಾಗುತ್ತಿರುವ ಭಾರತ
ಒಂದು ಅಂದಾಜಿನ ಪ್ರಕಾರ ಭಾರತ ದೇಶಾದ್ಯಂತ, ಒಂದು ವರ್ಷಕ್ಕೆ ಸರಿಸುಮಾರು 5 ಲಕ್ಷ ಟನ್‌ನಷ್ಟು ಧೂಳಿನ ಕಣಗಳು ವಾತಾವರಣ ಸೇರುತ್ತಿವೆ. ಇಲ್ಲಿ ಧೂಳಿನ ಕಣಗಳು ಎಂದರೆ ಮಣ್ಣಿನ, ಮರಳಿನ, ಪ್ಲಾಸ್ಟಿಕ್‌ನ, ಕೂದಲಿನ, ಪ್ರಾಣಿಪಕ್ಷಿಗಳ ಪಳೆಯುಳಿಕೆಗಳಿಂದ ಹೊರಬರುವ, ಮರಗಿಡಗಳ ತ್ಯಾಜ್ಯದಿಂದ ಹೊರಬರುವ, ರಸ್ತೆ ಬದಿಯಲ್ಲಿ ದೊರಕುವ ಹಲವಾರು ವಿವಿಧ ತ್ಯಾಜ್ಯಗಳಿಂದ ಹೊರಬರುವ, ಸಿಮೆಂಟಿನ, ಕಾರ್ಖಾನೆಗಳಿಂದ ಹೊರಬರುವ ಸಣ್ಣಸಣ್ಣ ಕಣಗಳು ಮತ್ತು ಧೂಳು ಸೇರಿವೆ.
ಭೂಮಿ ದಿನೇದಿನೇ ಬಿಸಿಯಾಗುತ್ತಲೇ ಇದೆ. ಇದಕ್ಕೆ ಕಾರಣ ಮನುಷ್ಯನ ದುರಾಸೆಯ ತ್ಯಾಜ್ಯವಾಗಿರುವ ಆ ಶಾಖವರ್ಧಕ ಅನಿಲಗಳು ಎನ್ನುವ ಸತ್ಯದ ಅರಿವೂ ನಮಗಿದೆ. ಆದರೆ ಭೂಮಿ ಬಿಸಿಯಾಗಲು ಈ ಶಾಖವರ್ಧಕ ಅನಿಲಗಳ ಜೊತೆ ಇನ್ನೊಂದು ಕಾರಣವೂ ಇದೆ. ಅದು ಧೂಳಿನ ಕಣಜವಾಗುತ್ತಿರುವ ನಮ್ಮ ವಾತಾವರಣ. ಹೌದು, ನಾವು ಎಬ್ಬಿಸುತ್ತಿರುವ ಧೂಳು ಭೂತಾಪಮಾನದ ಏರಿಕೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.
ಒಂದು ಅಂದಾಜಿನ ಪ್ರಕಾರ ಭಾರತ ದೇಶಾದ್ಯಂತ, ಒಂದು ವರ್ಷಕ್ಕೆ ಸರಿಸುಮಾರು 5 ಲಕ್ಷ ಟನ್‌ನಷ್ಟು ಧೂಳಿನ ಕಣಗಳು ವಾತಾವರಣ ಸೇರುತ್ತಿವೆ. ಇಲ್ಲಿ ಧೂಳಿನ ಕಣಗಳು ಎಂದರೆ ಮಣ್ಣಿನ, ಮರಳಿನ, ಪ್ಲಾಸ್ಟಿಕ್‌ನ, ಕೂದಲಿನ, ಪ್ರಾಣಿಪಕ್ಷಿಗಳ ಪಳೆಯುಳಿಕೆಗಳಿಂದ ಹೊರಬರುವ, ಮರಗಿಡಗಳ ತ್ಯಾಜ್ಯದಿಂದ ಹೊರಬರುವ, ರಸ್ತೆ ಬದಿಯಲ್ಲಿ ದೊರಕುವ ಹಲವಾರು ವಿವಿಧ ತ್ಯಾಜ್ಯಗಳಿಂದ ಹೊರಬರುವ, ಸಿಮೆಂಟಿನ, ಕಾರ್ಖಾನೆಗಳಿಂದ ಹೊರಬರುವ ಸಣ್ಣಸಣ್ಣ ಕಣಗಳು ಮತ್ತು ಧೂಳು ಸೇರಿವೆ. ಇವು ಗಾಳಿಯ ಒತ್ತಡದಿಂದ ಮೇಲೆದ್ದು ವಾತಾವರಣ ಸೇರಿ, ಅಲ್ಲಿರುವ ಗಾಳಿಯ ಜೊತೆ ಚಲಿಸುತ್ತಾ ಇಡೀ ಭೂಮಂಡಲವನ್ನೇ ಸುತ್ತುವರಿದಿವೆ. ಇಂತಹ ಧೂಳಿನ ಕಣಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು.
ಸೂಕ್ಷ್ಮಾತಿಸೂಕ್ಷ್ಮ ಧೂಳಿನ ಕಣಗಳು (ಫೈನ್ ಡಸ್ಟ್) ಮತ್ತು ಒರಟಾದ ಧೂಳಿನ ಕಣಗಳು ಎಂದು. ಇದರಲ್ಲಿ ಸೂಕ್ಷ್ಮಾತಿಸೂಕ್ಷ್ಮ ಧೂಳಿನ ಕಣಗಳು ಭೂಮಿಯ ಒಳಿತಿಗಾಗಿ ಸಹಕರಿಸುತ್ತಿರುತ್ತವೆ. ಇವು ಸೂರ್ಯನ ಕಿರಣಗಳನ್ನು ಒಂದೇ ಕಡೆ ಕ್ರೋಡೀಕರಿಸದಂತೆ ತಡೆಹಿಡಿದು, ಅದನ್ನು ಅತ್ತಿತ್ತ ಚದುರಿಸುತ್ತಿರುತ್ತದೆ. ಹಾಗಾಗಿ ಆ ಜಾಗ ತಂಪಾಗಿರುತ್ತದೆ ಮತ್ತು ಅಲ್ಲಿಯ ಭೂಮಿಯು ತಂಪಾಗಿರುತ್ತದೆ. ಈ ದೃಷ್ಟಿಯಿಂದ ಇದನ್ನು ಉಪಯುಕ್ತ ಎಂದು ಪರಿಗಣಿಸಬಹುದು. ಆದರೆ ಇದೇ ಸಮಯದಲ್ಲಿ ಇದು ಹಾನಿಕಾರಕವಾಗಿಯೂ ಪರಿಣಮಿಸುತ್ತಿದೆ. ಯಾಕೆಂದರೆ ಈ ಸಣ್ಣಸಣ್ಣ ಕಣಗಳು ಸಸ್ಯಗಳ, ಪ್ರಾಣಿಪಕ್ಷಿಗಳ, ಸಮುದ್ರ ಜೀವಿಗಳ ದೇಹವನ್ನು ಸೇರುತ್ತಿವೆ. ನಮ್ಮ ದೇಹವನ್ನು ಕೂಡಾ. ಇದರಿಂದ ನಾವೆಲ್ಲರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಕೆಮ್ಮು, ನೆಗಡಿ, ಅಸ್ತಮಾದಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ನಮ್ಮೆಲ್ಲರ ಶ್ವಾಸಕೋಶವನ್ನು ಹಾಳುಮಾಡುತ್ತಿದೆ. ಹಾಗಾಗಿ ಪ್ರಯೋಜನಕ್ಕಿಂತ ಘಾಸಿಯೇ ಹೆಚ್ಚು.
ಒರಟಾದ ಧೂಳಿನ ಕಣಗಳು ಸೂಕ್ಷ್ಮಾತಿಸೂಕ್ಷ್ಮ ಧೂಳಿನ ಕಣಗಳಿಗಿಂತ ಸ್ವಲ್ಪಹೆಚ್ಚಿನ ಗಾತ್ರವನ್ನು ಹೊಂದಿರುವ ಕಣಗಳು ಈ ವಿಭಾಗಕ್ಕೆ ಸೇರುತ್ತವೆ. ಇದರಲ್ಲಿ ಮಣ್ಣಿನ, ಮರಳಿನ, ಪ್ಲಾಸ್ಟಿಕ್‌ನ, ಸಿಮೆಂಟ್‌ನ, ಗಣಿಕಾರಿಕೆಯಿಂದ, ಕಾರ್ಖಾನೆಗಳಿಂದ ಹೊರಬರುತ್ತಿರುವ ಧೂಳಿನ ಕಣಗಳು ಸೇರುತ್ತವೆ. ಈ ಒರಟು ಕಣಗಳು, ಸೂರ್ಯನ ಕಿರಣಗಳನ್ನು ಭೂಮಿಗೆ ಬರಲು ಯಾವುದೇ ಅಡೆತಡೆಯನ್ನು ಮಾಡದೆ, ಆ ಕಿರಣಗಳು ಭೂಮಿಗೆ ಬಿದ್ದು ಮತ್ತೆ ಹಿಂದಕ್ಕೆ ಪ್ರತಿಫಲಿಸುವಾಗ ಅದನ್ನು ತಡೆಹಿಡಿಯುತ್ತಿವೆ. ಇದರಿಂದ ಆ ಕಿರಣಗಳು ಮತ್ತು ಆ ಕಿರಣಗಳಲ್ಲಿನ ಶಾಖ ಆಕಾಶವನ್ನು ತಲುಪಲು ಸಾಧ್ಯವಾಗದೆ ಕೆಳಗಿಳಿದು ಭೂಮಿಗೆ ಅಪ್ಪಳಿಸುತ್ತಿವೆ. ಇದರಿಂದ ಭೂಮಿಯನ್ನು ಇನ್ನಷ್ಟು ಬಿಸಿಯಾಗುವಂತೆ ಮಾಡುತ್ತಿವೆ.
ಇಂತಹ ಧೂಳಿನ ಕಣಗಳು ವಾತಾವರಣ ಸೇರುತ್ತಿರುವಲ್ಲಿ ಕೃಷಿ ಪದ್ಧತಿಯೂ ಕಾರಣವಾಗುತ್ತಿವೆ. ಇದರಲ್ಲಿ ಮುಖ್ಯವಾಗಿ ಮರಗಿಡಗಳು ಇಲ್ಲದ ಕೃಷಿ ಪದ್ಧತಿಗೆ ಆದ್ಯತೆಯನ್ನು ನೀಡಿರುವುದು, ಅತೀ ಹೆಚ್ಚಿನ ಆಳಕ್ಕೆ ಉಳುಮೆ ಮಾಡುತ್ತಿರುವುದು ಹಾಗೂ ಹ್ಯೂಮಸ್‌ನ ಬಗ್ಗೆ ಗಮನಹರಿಸದೇ ಇರುವುದರಿಂದ ಮಣ್ಣು ಮತ್ತು ನೀರಿನ ಆವಿಯಾಗುವಿಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಮುಖ್ಯವಾಗಿ ಬೇಸಿಗೆಯ ದಿನಗಳಲ್ಲಿ ಉಳುಮೆ ಮಾಡುವುದರಿಂದ ಸಾಕಷ್ಟು ಪ್ರಮಾಣದ ಮಣ್ಣು ಗಾಳಿಯ ಜೊತೆ ಬೆರೆಯುತ್ತಿದೆ. ಇದನ್ನು ತಡೆಗಟ್ಟಬೇಕಾದ ಮರಗಿಡಗಳಿಂದ ಕೂಡಿದ ಕೃಷಿ ಪದ್ಧತಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ, ಭೂಮಿಗೆ ಹೊದಿಕೆಯಾಗಿ ಹ್ಯೂಮಸ್ ಸೃಷ್ಟಿಸುವುದು ಮುಖ್ಯ ಆಗುತ್ತದೆ.
ಇನ್ನು ಎಲ್ಲೇ ನೋಡಿದರೂ ಕಸದ ರಾಶಿಯೇ ಕಾಣುತ್ತದೆ. ಇಂತಹ ಕಸದ ರಾಶಿಗಳಲ್ಲಿ ಪ್ಲಾಸ್ಟಿಕ್‌ನದ್ದೇ ಕಾರುಬಾರಾಗಿದೆ. ಇದಕ್ಕೆ ಕಾರಣ ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಬಳಸುತ್ತಿರುವ ಶೇ. 80ರಷ್ಟು ಪ್ರತಿಶತದ ವಸ್ತುಗಳು, ಪದಾರ್ಥಗಳಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿರುವುದು. ಹಲ್ಲುಜ್ಜುವ ಬ್ರಷ್, ಬಕೆಟ್, ಮಗ್, ಬ್ಯಾಗ್, ಕಂಪ್ಯೂಟರ್, ಟಿವಿ, ಫ್ರಿಡ್ಜ್, ಬುಕ್, ಪೆನ್ ಎಲ್ಲವೂ ಪ್ಲಾಸ್ಟಿಕ್ ಮಯವಾಗಿವೆ. ಇಂತಹವುಗಳನ್ನು ಬೇಕಾಬಿಟ್ಟಿ ಎಲ್ಲೆಂದರೆ ಅಲ್ಲಿ ನಾವು ಬಿಸಾಡುತ್ತಿದ್ದೇವೆ. ಇದು ಭೂಮಿಯಲ್ಲಿ ಕಳೆಯದೆ ನಿರಂತರವಾಗಿ ವಾತಾವರಣ ಸೇರುತ್ತಿದೆ. ಒಂದು ವರದಿಯ ಪ್ರಕಾರ ಒಂದು ವರ್ಷಕ್ಕೆ ಸರಿಸುಮಾರು 800 ಕೋಟಿ ಮೆಟ್ರಿಕ್ ಟನ್‌ನಷ್ಟು ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಇದರಿಂದ ಭೂಮಿಯ ಆರೋಗ್ಯವೂ ಹಾಳಾಗುತ್ತಿದೆ, ವಾತಾವರಣದ ಆರೋಗ್ಯವೂ ಹಾಳಾಗುತ್ತಿದೆ, ಇದು ಸಾಕಾಗುತ್ತಿಲ್ಲ ಎನ್ನುವಂತೆ ಸಕಲ ಜೀವರಾಶಿಗಳ ಆರೋಗ್ಯವನ್ನು ಹಾಳುಮಾಡುತ್ತಿದೆ. ಹಾಗಾಗಿ ಇದರ ನಿರ್ಮೂಲನೆಗೆ ನಮ್ಮೆಲ್ಲರ ದೃಢ ಸಂಕಲ್ಪವೂ ಮುಖ್ಯ ಆಗುತ್ತದೆ.
ಹಾಗೆಯೇ ಗಣಿಗಾರಿಕೆಯೂ ಕೂಡಾ. ನಮ್ಮ ಅವಶ್ಯಕತೆಯನ್ನೂ ಮೀರಿ ಗಣಿಗಾರಿಕೆ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಇದರಿಂದ ಸರಿಸುಮಾರು 8 ಪ್ರತಿಶತದಷ್ಟು ಶಾಖವರ್ಧಕ ಅನಿಲಗಳು ಉತ್ಪಾದನೆಯಾಗುತ್ತಿರುವುದರ ಜೊತೆ ಜೊತೆಗೆ ವಾತಾವರಣದಲ್ಲಿರುವ ಧೂಳಿನ ಕಣಗಳಲ್ಲಿ ಸುಮಾರು 40ರಷ್ಟು ಪಾಲನ್ನು ಪಡೆದಿವೆ. ಈಗ ನಮ್ಮ ಮುಂದಿರುವ ಆಯ್ಕೆಯನ್ನು ನಾವೇ ನಿರ್ಧರಿಸಬೇಕಾಗಿದೆ. ನಾವು ಬಳಸುವ ವಸ್ತುಗಳಲ್ಲಿ ಅನಿವಾರ್ಯ, ಅಗತ್ಯ ಮತ್ತು ಪರ್ಯಾಯಗಳ ಪಟ್ಟಿಯನ್ನು ಮಾಡಿಕೊಂಡು, ಅದಕ್ಕೆ ಅನುಗುಣವಾಗಿ ನಮ್ಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕಾಗಿದೆ. ಇಲ್ಲಿ ನಾವೆಲ್ಲರೂ ಒಕ್ಕೂರಲಿನಿಂದ ಕೈ ಜೋಡಿಸಿದಾಗ ಮಾತ್ರ ಪ್ರಕೃತಿಯ ಆರೋಗ್ಯವನ್ನು ಸುಧಾರಿಸಬಹುದು. ಇದರೊಳಗೇ ನಮ್ಮ ಆರೋಗ್ಯವೂ ಅಡಗಿದೆ