ಕಾಶ್ಮೀರಿ ಜಿಂಕೆಗಳನ್ನು ಅಳಿವಿನಂಚಿಗೆ ತಳ್ಳಿರುವ ಸಿಮೆಂಟ್ ಕಾರ್ಖಾನೆಗಳು
1900 ರ ದಶಕದ ಆರಂಭದಲ್ಲಿ, ಕಾಶ್ಮೀರಿ ಜಿಂಕೆಗಳ ಜನಸಂಖ್ಯೆಯು ಸುಮಾರು 5,000 ಎಂದು ಅಂದಾಜಿಸಲಾಗಿತ್ತು. ಇಂದು ಉಳಿದಿರುವ ಜಿಂಕೆಗಳು 261 ಮಾತ್ರ.
ಹಿಮಾಲಯದ ತಪ್ಪಲಿನಲ್ಲಿ ದಟ್ಟ ಕಾಡಿನ ನಡುವೆ ಅತಿ ಲಜ್ಜೆಯ ಈ ಪ್ರಾಣಿ ಬದುಕಲು ಹೋರಾಡುತ್ತಿದೆ. ಕೈಗಾರಿಕೀಕರಣ, ಮಿಲಿಟರೀಕರಣ ಮತ್ತು ಮಾನವನ ಹಸ್ತಕ್ಷೇಪವು ಅದರ ಆವಾಸಸ್ಥಾನ ಮತ್ತು ಸಂತತಿಗೆ ಅಪಾಯವನ್ನು ತಂದೊಡ್ಡಿದೆ. ಕಾಶ್ಮೀರದಲ್ಲಿ ಮೋಡಿ ಮಾಡುವ ಜಿಂಕೆ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ.
20ನೇ ಶತಮಾನದ ಆರಂಭದಿಂದ ಈ ಕಾಶ್ಮೀರಿ ಜಿಂಕೆಗಳ ಸಂಖ್ಯೆ ಇಳಿಮುಖವಾಗಿದೆ. ಅಧಿಕೃತ ಅಂಕಿಅಂಶಗಳು ಮತ್ತು ಸ್ವತಂತ್ರ ಸಂಶೋಧನೆ ಗಳ ನಡುವಿನ ದತ್ತಾಂಶದಲ್ಲಿ ವ್ಯತ್ಯಾಸಗಳಿವೆ. ಈಗ ಇವುಗಳ ಸಂಖ್ಯೆ 100ರಿಂದ 261ರ ನಡುವೆ ಇದೆ ಎಂಬುದು ಖಚಿತವಾಗಿದೆ. 1900ರ ದಶಕದ ಆರಂಭದಲ್ಲಿದ್ದುದಕ್ಕಿಂತ ಗಣನೀಯ ಕುಸಿತ ಇದು. ಆಗ ಸುಮಾರು 5,000 ಜಿಂಕೆಗಳಿವೆ ಎಂದು ಅಂದಾಜಿಸಲಾಗಿತ್ತು. ಇವು ಬಹುಬೇಗ ಅಳಿವಿನಂಚಿಗೆ ಹೋಗುವ ಸ್ಥಿತಿ ಕಾಣಿಸುತ್ತಿದೆ ಎಂಬ ಆತಂಕವನ್ನು ಜಿಂಕೆ ಗಳನ್ನು ಅಧ್ಯಯನ ಮಾಡುವ ಮತ್ತು ಮೇಲ್ವಿಚಾರಣೆ ಮಾಡುವ ಪರಿಣಿತರು ವ್ಯಕ್ತಪಡಿಸುತ್ತಿದ್ದಾರೆ.
ಕೆಲವು ವನ್ಯಜೀವಿ ತಜ್ಞರು ಮತ್ತು ಕಾರ್ಯಕರ್ತರ ಪ್ರಕಾರ, ಪ್ರಾಣಿಗಳ ಆವಾಸಸ್ಥಾನ ಮತ್ತು ವನ್ಯಜೀವಿ ಅಭಯಾರಣ್ಯಗಳ ಸಮೀಪದಲ್ಲಿ ಸಿಮೆಂಟ್ ಕಾರ್ಖಾನೆಗಳ ನಿರ್ಮಾಣವು ಇಂಥ ಅವನತಿಗೆ ಕಾರಣ. ಅಲ್ಲದೆ, ರಕ್ಷಣಾ ಮೂಲಸೌಕರ್ಯಗಳ ನಿರ್ಮಾಣ ಮತ್ತು ಇತರ ಬಗೆಯ ಮಾನವ ಹಸ್ತಕ್ಷೇಪವೂ ಇವುಗಳ ಆವಾಸಸ್ಥಾನವನ್ನು ತಿಂದುಹಾಕಿದೆ.
ಕಾಶ್ಮೀರಿ ಜಿಂಕೆ ಏಶ್ಯದಲ್ಲಿ ಕಂಡುಬರುವ ಯುರೋಪಿಯನ್ ಕೆಂಪು ಜಿಂಕೆಗಳ ಆರು ಉಪಜಾತಿಗಳಲ್ಲಿ ಒಂದಾಗಿದೆ. ಇದು ಮಧ್ಯ ಏಶ್ಯದ ಸಮರ್ಕಂಡ್ ಮತ್ತು ಬುಖಾರಾ ಜಿಂಕೆ ಕುಟುಂಬಕ್ಕೆ ಹೆಚ್ಚು ಸಂಬಂಧ ಹೊಂದಿರುವ ಪ್ರತ್ಯೇಕ ಜಾತಿ ಎಂದೂ ಹೇಳಲಾಗುತ್ತದೆ. ಇವನ್ನು ಭಾರತೀಯ ವನ್ಯಜೀವಿ (ರಕ್ಷಣೆ) ಕಾಯ್ದೆ-1972 ಮತ್ತು ಜಮ್ಮು - ಕಾಶ್ಮೀರ ವನ್ಯಜೀವಿ ಸಂರಕ್ಷಣಾ ಕಾಯ್ದೆ,-1978ರ ಅಡಿಯಲ್ಲಿ ಸೇರಿಸಿರುವುದೇನೋ ನಿಜ. ಅದರೆ ರಕ್ಷಣೆ ಆಗುತ್ತಿದೆಯೇ ಎಂಬುದೇ ಪ್ರಶ್ನೆ.
ಸಿಮೆಂಟ್ ಕಾರ್ಖಾನೆಗಳ ನಿರ್ಮಾಣವು ಈ ಜಿಂಕೆಗಳ ವಾಸಸ್ಥಾನವನ್ನು ಆಕ್ರಮಿಸುತ್ತಿದೆ. ಅವು ಈಗ ಹೆಚ್ಚಾಗಿ ದಚಿಗಮ್ ರಾಷ್ಟ್ರೀಯ ಉದ್ಯಾನವನಕ್ಕೆ ಮಾತ್ರ ಸೀಮಿತವಾಗಿವೆ ಎನ್ನಲಾಗುತ್ತದೆ. ಮೊದಲು ಗುರೆಜ್ ಕಣಿವೆಯಿಂದ ಉತ್ತರಕ್ಕೆ 200 ಕಿ.ಮೀ.ರಿಂದ 150 ಕಿ.ಮೀ. ಮತ್ತು ದಕ್ಷಿಣಕ್ಕೆ 400 ಕಿಮೀ ಕಿಶ್ತ್ವಾರ್ ರಾಷ್ಟ್ರೀಯ ಉದ್ಯಾನವನದವರೆಗೂ ಹರಡಿಕೊಂಡಿದ್ದವು. ಇಂದು ಕಿಶ್ತ್ವಾರದಲ್ಲಿ ಅವುಗಳ ಅಸ್ತಿತ್ವವೇ ಇಲ್ಲವಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇವುಗಳ ರಕ್ಷಣೆಗಾಗಿ 2015ರಲ್ಲಿ ಯೋಜನೆಯನ್ನು ಪ್ರಾರಂಭಿಸಲಾಯಿತು. ಸಮುದಾಯ ಬೆಂಬಲ, ಜಾಗೃತಿ ಮತ್ತು ವನ್ಯಜೀವಿಗಳ ನಿರ್ವಹಣೆಯ ಮೂಲಕ ಇದನ್ನು ಸಾಧಿಸುವ ಗುರಿಯನ್ನು ಹೊಂದಿರುವ ಯೋಜನೆ ಅದು. ದಚಿಗಮ್ ರಾಷ್ಟ್ರೀಯ ಉದ್ಯಾನವನದ ಒಳಗೆ ಮತ್ತು ಹೊರಗೆ ಜಿಂಕೆಗಳ ಚಲನೆಯ ಮಾದರಿಯನ್ನು ಸಹ ಅಧ್ಯಯನ ಮಾಡಿರುವ ಪರಿಣತರು, ಅವುಗಳ ಸಂತಾನೋತ್ಪತ್ತಿ ಕ್ರಮವು ವ್ಯತ್ಯಯಗೊಂಡಿದೆ ಎಂಬುದನ್ನೂ ಗಮನಿಸಿದ್ದಾರೆ.
1980ರ ದಶಕದ ಮಧ್ಯಭಾಗದಲ್ಲಿ, ಜಮ್ಮು ಮತ್ತು ಕಾಶ್ಮೀರ ಸರಕಾರವು ಪಕ್ಕದ ಪರ್ವತ ಶ್ರೇಣಿಯಲ್ಲಿನ ಬೃಹತ್ ಸುಣ್ಣದ ಕಲ್ಲುಗಳ ನಿಕ್ಷೇಪದಿಂದಾಗಿ ಖ್ರೂ ಪ್ರದೇಶದಲ್ಲಿ ಸಿಮೆಂಟ್ ಕಾರ್ಖಾನೆಗಳನ್ನು ಆರಂಭಿಸಿತು. ಕೆಲವು ಅಂದಾಜಿನ ಪ್ರಕಾರ, 12 ಚದರ ಕಿಲೋಮೀಟರ್‌ಗಳಷ್ಟು ಇರುವ ಸಣ್ಣ ಪಟ್ಟಣವಾದ ಖ್ರೂದಲ್ಲಿ ಪ್ರಸಕ್ತ ಸುಮಾರು ಆರು ಸಿಮೆಂಟ್ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ.
ಸಿಮೆಂಟ್ ಕಾರ್ಖಾನೆಗಳು ಇಲ್ಲಿನ ಪರಿಸರದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ವಿರುದ್ಧ ಆಂದೋಲನದಲ್ಲಿ ತೊಡಗಿರುವ ಹಲವರು, ಸರಕಾರಿ ಸ್ವಾಮ್ಯದ ಕಾರ್ಖಾನೆಯನ್ನು ಸ್ಥಾಪಿಸಿದಾಗಿನಿಂದ, ಈ ಪ್ರದೇಶದಲ್ಲಿ ಕನಿಷ್ಠ ಏಳು ಖಾಸಗಿ ಒಡೆತನದ ಸಿಮೆಂಟ್ ಕಾರ್ಖಾನೆಗಳೂ ಬಂದಿವೆ. ಖಾಸಗಿಯವರಿಂದ ವನ್ಯಜೀವಿ ಸಂರಕ್ಷಣಾ ನಿಯಮಗಳ ಉಲ್ಲಂಘನೆಯಾಗುವ ಸಾಧ್ಯತೆಯಿದೆ ಎಂದು ಆರೋಪಿಸುತ್ತಾರೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ವನ್ಯಜೀವಿ ಅಭಯಾರಣ್ಯಗಳ ಸುತ್ತಲಿನ 10 ಕಿ.ಮೀ. ಪ್ರದೇಶವನ್ನು ಪರಿಸರ-ಸೂಕ್ಷ್ಮ ವಲಯವೆಂದು ನಿಗದಿಪಡಿಸುತ್ತವೆ. ಆದರೆ ಖ್ರೂದಲ್ಲಿನ ಅನೇಕ ಸಿಮೆಂಟ್ ಕಾರ್ಖಾನೆಗಳು ಪಕ್ಕದ ವನ್ಯಜೀವಿ ಅಭಯಾರಣ್ಯದ ಒಂದು ಕಿ.ಮೀ.ಅಂತರದೊಳಗೇ ಇವೆಯೆನ್ನಲಾಗುತ್ತದೆ.
ಈ ಕಾರ್ಖಾನೆಗಳು ಜಿಂಕೆಗಳ ಆವಾಸಸ್ಥಾನದ ಮೇಲೆ ನೇರವಾಗಿ ಪರಿಣಾಮ ಬೀರಿವೆ. ಜಿಂಕೆ ಬಲು ಸೂಕ್ಷ್ಮಪ್ರಾಣಿಯಾಗಿದ್ದು, ಅದು ಬಹಳ ದೂರದಿಂದ ವಾಸನೆ ಮತ್ತು ಧ್ವನಿಯನ್ನು ಗ್ರಹಿಸಬಲ್ಲದು. ಖ್ರೂ ಸುತ್ತಲೂ ಸುಣ್ಣದ ಕಲ್ಲುಗಳ ನಿಕ್ಷೇಪಗಳನ್ನು ಸ್ಫೋಟಿಸುವ ಭಾರೀ ಸದ್ದು ಜಿಂಕೆಯನ್ನು ಕಂಗೆಡಿಸಿದೆ. ಅಲ್ಲದೆ ಕಾರ್ಖಾನೆಯ ತ್ಯಾಜ್ಯ ಕೂಡ ಈ ಜಿಂಕೆಗಳ ಆರೋಗ್ಯ ಮತ್ತು ಆಹಾರದ ಮಾದರಿಗಳ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿದೆ.
ಜಿಂಕೆಗಳ ಮರಣ ಪ್ರಮಾಣವು ಹೆಚ್ಚಾಗಿರುತ್ತದೆ. ಹೆಚ್ಚಿನವು ಪರಿಸರದ ತೊಂದರೆಗಳಿಂದ ಒಂದು ವರ್ಷದೊಳಗೆ ಸಾಯುತ್ತವೆ. ಹವಾಮಾನ ಮತ್ತು ನೈಸರ್ಗಿಕ ಅಂಶಗಳ ಜೊತೆಗೆ ನರಿಗಳು ಮತ್ತು ನರಿಗಳಂತಹ ಪರಭಕ್ಷಕಗಳ ದಾಳಿಗಳು ದಚಿಗಮ್ ರಾಷ್ಟ್ರೀಯ ಉದ್ಯಾನವನದೊಳಗೆ ಹೆಚ್ಚಾಗಿವೆ. ಇದೇ ವೇಳೆ, ಜಿಂಕೆಗಳ ಸಂತಾನೋತ್ಪತ್ತಿ ಕ್ಷೀಣಿಸಿರುವುದು ಇವುಗಳು ಅವನತಿಯತ್ತ ಸಾಗುತ್ತಿರುವುದಕ್ಕೆ ಕಾರಣ. ಹೆಚ್ಚುತ್ತಿರುವ ಪ್ರವಾಸೋದ್ಯಮ ಮತ್ತು ನಿಗದಿತ ಆವಾಸಸ್ಥಾನದಲ್ಲಿ ಮಾನವ ಹಸ್ತಕ್ಷೇಪವು ಕೂಡ ಪರಿಣಾಮ ಬೀರುತ್ತಿದೆ.
ಕಾಶ್ಮೀರ ಮೂಲದ ಪರಿಸರ ಕಾರ್ಯಕರ್ತರ ಪ್ರಕಾರ, ಅರಣ್ಯಗಳಲ್ಲಿ ಸೇನಾ ಪಡೆಗಳ ನಿಯೋಜನೆ ಮತ್ತು ಸಿಮೆಂಟ್ ಕಾರ್ಖಾನೆಗಳ ಸ್ಥಾಪನೆ ಮುಖ್ಯ ಸಮಸ್ಯೆ. ಕಾಶ್ಮೀರಿ ಜಿಂಕೆಗಳನ್ನು ಉಳಿಸಬೇಕಾದರೆ ಸಿಮೆಂಟ್ ಕಾರ್ಖಾನೆಗಳನ್ನು ಮುಚ್ಚಬೇಕು ಮತ್ತು ಅನುಮತಿ ಕೊಟ್ಟಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು. ಸಿಮೆಂಟ್ ಕಾರ್ಖಾನೆಗಳಿರುವ ಜಾಗದಲ್ಲಿ ಈ ಜಿಂಕೆಗಳ ಗಣತಿಯೇ ನಡೆದಿಲ್ಲ ಎಂಬ ಅನುಮಾನಗಳನ್ನೂ ಪರಿಸರ ಕಾರ್ಯಕರ್ತರು ವ್ಯಕ್ತಪಡಿಸುತ್ತಾರೆ.
(ಮಾಹಿತಿ ಕೃಪೆ: scroll.in)