ಮಾನವ ಹಕ್ಕು ದಿನ ಮತ್ತು ಆತ್ಮಾವಲೋಕನ

ಇಂದು ವಿಶ್ವ ಮಾನವ ಹಕ್ಕು ದಿನ

Update: 2022-12-10 04:31 GMT

ವಾರದ ಅಂತರದಲ್ಲಿ ಇತ್ತೀಚೆಗೆ ವರದಿಯಾದ ಎರಡು ಘಟನೆಗಳು ಹೀಗಿದ್ದವು: 'ನೀರು ತರಲು ಹೋಗಿದ್ದ ದಲಿತನ ಮೇಲೆ ಹಲ್ಲೆ ನಡೆಸಿ ಕೊಲೆ', 'ಪರಿಶಿಷ್ಟ ಮಹಿಳೆ ನೀರು ಕುಡಿದಿದ್ದಕ್ಕೆ ಗೋಮೂತ್ರದಿಂದ ಟ್ಯಾಂಕ್ ಶುದ್ಧೀಕರಣ'- ಮೊದಲನೆಯದು ರಾಜಸ್ಥಾನದಲ್ಲಿ ನಡೆದ ಘಟನೆಯಾದರೆ, ಎರಡನೆಯದ್ದು ನಮ್ಮದೇ ರಾಜ್ಯದ ಚಾಮರಾಜನಗರದಲ್ಲಿ ನಡೆದದ್ದು. ಹಾಗೆ ನೋಡಿದರೆ ಪ್ರತಿದಿನವೂ ಇಂಥ ಒಂದಲ್ಲ ಒಂದು ಘಟನೆ ದೇಶದಾದ್ಯಂತ ನಡೆಯುತ್ತಲೇ ಇರುತ್ತದೆ. ಇನ್ನು ವರದಿಯಾಗದೇ ಮುಚ್ಚಿಹೋಗುವ ಘಟನೆಗಳೂ ಲೆಕ್ಕವಿಲ್ಲದಷ್ಟು.

ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರಂತಹ ಸಮಾಜ ಸುಧಾರಕರ, ಹೋರಾಟಗಾರರ ನಾಡಿನಲ್ಲಿ, ಇಷ್ಟು ವರ್ಷಗಳ ನಂತರವೂ ಮತ್ತದೇ ಕತ್ತಲೆ, ಮತ್ತದೇ ಶೋಷಣೆ, ತಾರತಮ್ಯ, ಹಿಂಸೆಯ ತಾಂಡವ ನೃತ್ಯಕ್ಕೆ ಸಾಕ್ಷಿಯಾಗುತ್ತಿದ್ದೇವೆ.
ಎಲ್ಲರಿಗೂ ಇರುವ ಬದುಕುವ ಹಕ್ಕನ್ನು ರಕ್ಷಿಸುವ, ಯಾವ ತಾರತಮ್ಯಕ್ಕೆ ಎಡೆಯಿಲ್ಲದೆ ಪ್ರತಿಯೊಬ್ಬನೂ ಮೂಲಭೂತ ಹಕ್ಕುಗಳಿಗೆ ಅರ್ಹನಾಗಿರುವುದನ್ನು ಪ್ರತಿಪಾದಿಸುವ ಮಾನವ ಹಕ್ಕು ದಿನದ ಬೆಳಕಿನಲ್ಲಿ ಈ ಸಮಾಜದ ಒಂದು ಭಾಗದ ಇಂಥ ಅಮಾನವೀಯ ವರ್ತನೆಯನ್ನು ವಿಮರ್ಶಿಸಬೇಕಿದೆ.
ವಿಶ್ವಸಂಸ್ಥೆಯ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಗೆ 74 ವರ್ಷಗಳಾದವು. ಭಾರತದಲ್ಲಿ 8ನೇ ಜನವರಿ 1994ರಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗವೂ ಅಸ್ತಿತ್ವಕ್ಕೆ ಬಂದಿದೆ. ಸ್ವಾತಂತ್ರ್ಯ ಅಮೃತಮಹೋತ್ಸವದ ಹೊಸ್ತಿಲಲ್ಲಿ ನಿಂತಿರುವ ಭಾರತದಲ್ಲಿ ಸಮಾನತೆ ಸಾರುವ ಭಾರತದ ಸಂವಿಧಾನ ಜಾರಿಗೆ ಬಂದು 72 ವರ್ಷಗಳಾದವು. ಈ ನಡುವೆಯೇ ಮನುಷ್ಯನೊಬ್ಬನ ಮೂಲಭೂತ ಹಕ್ಕುಗಳನ್ನು ಕಸಿಯುವ, ಪ್ರತ್ಯೇಕವಾಗಿ ಕಾಣುವ ನಡೆಯೂ ಇರುವುದು ದುಃಖದ ಸಂಗತಿ.

1948ರಲ್ಲಿ ವಿಶ್ವಸಂಸ್ಥೆಯಿಂದ ಅಂಗೀಕರಿಸಲ್ಪಟ್ಟ ಮಾನವ ಹಕ್ಕುಗಳು ಪ್ರತಿಯೊಬ್ಬನ ಸ್ವಾತಂತ್ರ್ಯವನ್ನೂ ಗೌರವಿಸಬೇಕು ಎಂಬ ಉದ್ದೇಶದ್ದಾಗಿವೆ. ಮಾನವ ಹಕ್ಕುಗಳು ಅಂಗೀಕೃತವಾದ ದಿನ ಡಿಸೆಂಬರ್ 10. ಮಾನವ ಹಕ್ಕು ದಿನವಾಗಿ ಅದನ್ನು ಆಚರಿಸುವ ಮೂಲಕ, ಒಂದಿಡೀ ಸಮಾಜವನ್ನು ಮನುಷ್ಯನ ಮೂಲಭೂತ ಹಕ್ಕುಗಳ ವಿಚಾರವಾಗಿ ಎಚ್ಚರಿಸುವ ಕೆಲಸ ವಿಶ್ವಾದ್ಯಂತ ನಡೆಯುತ್ತದೆ. ಮಾನವ ಹಕ್ಕು ದಿನದ ಈ ಸಲದ ಥೀಮ್ 'ಘನತೆ, ಸ್ವಾತಂತ್ರ್ಯ ಮತ್ತು ಎಲ್ಲರಿಗೂ ನ್ಯಾಯ'.

ಹಿಂಸೆಯನ್ನು ತ್ಯಜಿಸಬೇಕು ಎಂಬ ಬಹುದೊಡ್ಡ ಹಂಬಲದೊಂದಿಗೆ ಮಾನವ ಹಕ್ಕುಗಳ ಪರಿಕಲ್ಪನೆ ಒಡಮೂಡಿತು ಎಂಬುದನ್ನು ಮರೆಯಬಾರದು. ಎಲ್ಲ ಮನುಷ್ಯರು ಜಾತಿ, ಲಿಂಗ, ರಾಷ್ಟ್ರೀಯತೆ, ಜನಾಂಗ, ಭಾಷೆ , ಧರ್ಮ ಮತ್ತು ಸ್ಥಾನಮಾನಗಳ ಹೊರತಾಗಿಯೂ ಸಮಾನರು. ಸ್ವತಂತ್ರವಾಗಿ ಬದುಕುವ ಹಕ್ಕು, ಗುಲಾಮಗಿರಿ ಮತ್ತು ಕಿರುಕುಳದಿಂದ ಸ್ವಾತಂತ್ಯ, ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಇವೆಲ್ಲವನ್ನೂ ಸೇರಿಸಿ ಮಾನವ ಹಕ್ಕುಗಳು ಎನ್ನುತ್ತೇವೆ. ಜೀವಿರಾಷ್ಟ್ರೀಯತೆ, ರಕ್ಷಣೆ, ಆರೋಗ್ಯ, ಧಾರ್ಮಿಕ ಸ್ವಾತಂತ್ರ್ಯದ ಜತೆಗೆ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಹಕ್ಕುಗಳು ಮಾನವ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತವೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸನ್ನದು ಒಟ್ಟು 30 ಅನುಚ್ಛೇದಗಳಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಮುಕ್ತ, ಸಮಾನ ಗೌರವಾನ್ವಿತ ಬದುಕುವ ಹಕ್ಕುಗಳನ್ನು ಒದಗಿಸಿದೆ. ಪ್ರತಿಯೊಬ್ಬರಿಗೂ ಗೌರವ ಮತ್ತು ಹಕ್ಕುಗಳ ಸಮಾನ ಲಭ್ಯತೆ, ಬಣ್ಣ, ಜಾತಿ, ಲಿಂಗ, ಭಾಷೆ, ವಂಶ, ಪ್ರದೇಶ ಮತ್ತು ರಾಜಕೀಯ ವಿಚಾರಗಳಲ್ಲಿನ ತಾರತಮ್ಯದಿಂದ ಮುಕ್ತಿ, ಅಮಾನವೀಯವಾಗಿ ವ್ಯಕ್ತಿಯನ್ನು ನಡೆಸಿಕೊಳ್ಳುವುದಕ್ಕೆ ವಿರೋಧ, ಕಾನೂನಿನ ಮುಂದೆ ಸಮಾನತೆ, ವ್ಯಕ್ತಿಯ ವೈಯಕ್ತಿಕ ಮತ್ತು ಸಾಂಸಾರಿಕ ಜೀವನದಲ್ಲಿ ಅಡ್ಡಿಗೆ ವಿರೋಧ, ಎಲ್ಲರಿಗೂ ಸಮಾನವಾಗಿ ಮತ್ತು ಗೌರವದಿಂದ ಬದುಕುವ ಹಕ್ಕು, ವಾಸಿಸುವ ದೇಶದ ಒಳಗೆ ಸ್ವತಂತ್ರವಾಗಿ ಸಂಚರಿಸಲು ಮತ್ತು ನೆಲೆಯೂರಲು ಪ್ರತಿಯೊಬ್ಬರಿಗೂ ಹಕ್ಕು, ಎಲ್ಲರಿಗೂ ಪೌರತ್ವದ ಹಕ್ಕು ಇದೆ. ಕಾರಣವಿಲ್ಲದೆ ಯಾರೊಬ್ಬರ ಪೌರತ್ವ ಕಸಿಯುವುದಕ್ಕೆ ವಿರೋಧ, ಪೌರತ್ವ ಬದಲಿಸುವ ಅವಕಾಶವನ್ನು ತಡೆಯುವುದಕ್ಕೆ ವಿರೋಧ, ಮುಕ್ತ ಚಿಂತನೆ, ಸ್ವತಂತ್ರವಾಗಿ ಧರ್ಮದ ನಂಬಿಕೆಗೆ ಎಲ್ಲರಿಗೂ ಅಧಿಕಾರವಿದೆ. ಒಬ್ಬರೇ ಅಥವಾ ಸಾಮೂಹಿಕವಾಗಿ ಮತಾಂತರವಾಗಲು ಮತ್ತು ಬಹಿರಂಗವಾಗಿ ಅಥವಾ ರಹಸ್ಯವಾಗಿ ಧರ್ಮದ ನಂಬಿಕೆಯನ್ನು ವ್ಯಕ್ತಪಡಿಸಲು, ಆಚರಿಸಲು ಅಧಿಕಾರ, ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿರುವ ಸ್ವಾತಂತ್ರ್ಯ ಇವೆಲ್ಲವೂ ವಿಶ್ವಸಂಸ್ಥೆ ಒದಗಿಸಿರುವ ಹಕ್ಕುಗಳಾಗಿವೆ.

ಪ್ರತಿಯೊಬ್ಬನಿಗೂ ಬದುಕುವ ಹಕ್ಕಿದೆ. ಸ್ವತಂತ್ರವಾಗಿ ಬದುಕುವ ಹಕ್ಕು. ಆಹಾರ, ಉಡುಪು ಮತ್ತು ವಸತಿ. ಇವು ಮನುಷ್ಯನ ಮೂಲಭೂತ ಹಕ್ಕುಗಳು. ಈ ಹಕ್ಕುಗಳು ಸಂರಕ್ಷಿಸಲ್ಪಡಬೇಕು, ಅವರನ್ನು ಯಾರೂ ದಮನಿಸಬಾರದು. ಮನುಷ್ಯನಿಗೆ ಕನಿಷ್ಠ ಅಗತ್ಯಗಳು ಸಿಗಬೇಕು. ಹಕ್ಕುಗಳು ಗೌರವಿಸಲ್ಪಡಬೇಕು ಆದರೆ ಮನುಷ್ಯನ ಈ ಮೂಲಭೂತ ಹಕ್ಕುಗಳನ್ನು ದಮನಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಜಗತ್ತಿನಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿರುವುದನ್ನು ಕಾಣುತ್ತೇವೆ. ಭಾರತದಲ್ಲಿಯೂ ಮಾನವಹಕ್ಕುಗಳ ಉಲ್ಲಂಘನೆ ನಡೆಯುತ್ತಿರುತ್ತದೆ. ಸಂವಿಧಾನ ಖಾತ್ರಿಪಡಿಸಿರುವ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನಗಳೂ ನಮ್ಮ ಸಮಾಜದಲ್ಲಿ ಸಂಭವಿಸುತ್ತಲೇ ಇರುತ್ತವೆ. ದೌರ್ಜನ್ಯವೆಸಗುವುದು ಅಪರಾಧವಾಗಿದ್ದರೂ, ದಲಿತರು, ಅಲ್ಪಸಂಖ್ಯಾತರು, ಬಡವರು, ಮಹಿಳೆ- ಮಕ್ಕಳ ಮೇಲಿನ ದೌರ್ಜನ್ಯಗಳು ನಿಂತಿಲ್ಲ. ಧರ್ಮ, ಆಹಾರ ಪದ್ಧತಿ, ಆಚರಣೆ, ಉಡುಗೆ-ತೊಡುಗೆ ಎಲ್ಲದಕ್ಕೂ ಸ್ವಾತಂತ್ರ್ಯವಿದ್ದರೂ ಸಂಸ್ಕೃತಿಯ ಹೆಸರಿನಲ್ಲಿ ಕಟ್ಟುಪಾಡುಗಳನ್ನು ತಂದು ವಿರೋಧಿಸುವ ಪ್ರಕರಣಗಳಿಗೂ ಕಡಿಮೆಯಿಲ್ಲ.
ಇದೆಲ್ಲದರ ನಡುವೆಯೇ ಈ ಸಲ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸಮಕಾಲೀನ ವರ್ಣಭೇದ ನೀತಿ ಮತ್ತು ಅಸಹಿಷ್ಣುತೆ ಕುರಿತ ವಿಷಯದ ಸ್ವತಂತ್ರ ತಜ್ಞೆಯಾಗಿ ಕರ್ನಾಟಕದ ಕೋಲಾರ ಮೂಲದ ಪ್ರೊ. ಕೆ.ಪಿ. ಅಶ್ವಿನಿ ಅವರು ನೇಮಕವಾಗಿದ್ದಾರೆ. ಈ ಸ್ಥಾನಕ್ಕೆ ನೇಮಕವಾದ ಮೊದಲ ಏಶ್ಯ ಮತ್ತು ಮೊದಲ ಭಾರತೀಯ ಯುವತಿ ಎಂಬ ಹೆಗ್ಗಳಿಕೆಗೂ ಅಶ್ವಿನಿ ಪಾತ್ರರಾಗಿದ್ದಾರೆ. ಅಶ್ವಿನಿ ಅವರ ಅಧಿಕಾರಾವಧಿ ಮೂರು ವರ್ಷಗಳು. ವರ್ಣಭೇದ, ಕ್ವೆನೋಫೋಬಿಯಾ ಮತ್ತು ಅಸಹಿಷ್ಣ್ಣುತೆಗೆ ಸಂಬಂಧಿಸಿದ ವಿಷಯಗಳಲ್ಲಿ ಅಶ್ವಿನಿ ಕೆಲಸ ಮಾಡಲಿದ್ದಾರೆ.

ಭಾರತವು ವಿಶ್ವಸಂಸ್ಥೆಯ ಸದಸ್ಯರಾಷ್ಟ್ರ. ನಮ್ಮ ಸಂವಿಧಾನವು ಮೂಲಭೂತ ಹಕ್ಕುಗಳನ್ನು ಖಾತ್ರಿಪಡಿಸುತ್ತದೆ. ಹಾಗಾಗಿ ದೇಶದಲ್ಲಿ ಮಾನವ ಹಕ್ಕುಗಳ ಪರವಾಗಿ ನ್ಯಾಯಾಲಯಗಳು ನಿಲ್ಲುತ್ತವೆ. ಪ್ರಬಲರು ಮತ್ತು ಸರಕಾರಗಳ ವಿರುದ್ಧ ನಿರ್ದಿಷ್ಟ ವ್ಯಕ್ತಿಯ ಮಾನವ ಹಕ್ಕು ಎತ್ತಿಹಿಡಿದ ಹಲವು ಸಂದರ್ಭಗಳು ನಮ್ಮಲ್ಲಿವೆ.

ಶ್ರೇಷ್ಠತೆಯ ವ್ಯಸನ, ಜಾತಿ ತಾರತಮ್ಯ, ಲೈಂಗಿಕ ಶೋಷಣೆ, ಲಿಂಗಭೇದ ಇತ್ಯಾದಿ ಕಾರಣದಿಂದಾಗಿ ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ದ್ವಿಗುಣಗೊಳ್ಳುತ್ತಲಿದೆ. ಈ ವಾಸ್ತವವನ್ನು ಪೂರ್ವಾಗ್ರಹ ಪೀಡಿತರಾಗದೆ ಒಪ್ಪಿಕೊಂಡಾಗಷ್ಟೇ ಪರಿಹಾರದ ಬಾಗಿಲುಗಳು ತೆರೆದುಕೊಳ್ಳಲು ಸಾದ್ಯ. ಮನುಷ್ಯನೊಬ್ಬನ ಗೌರವವನ್ನು ಕಾಯುವುದು ಎಲ್ಲರ ಕರ್ತವ್ಯವಾಗುವ ಮೂಲಕವೇ ಎಲ್ಲರೂ ಗೌರವಕ್ಕೆ ಪಾತ್ರರಾಗುವುದು ಸಾಧ್ಯ. 'ಮನುಷ್ಯನ ಹಕ್ಕುಗಳನ್ನು ನಿರಾಕರಿಸಿದರೆ ಅದು ಮನುಷ್ಯತ್ವವನ್ನೇ ನಿರಾಕರಿಸಿದಂತೆ' ಎಂಬ ದಕ್ಷಿಣ ಆಫ್ರಿಕಾದ ಮಹಾನಾಯಕ ನೆಲ್ಸನ್ ಮಂಡೇಲಾ ಮಾತು ಯಾವ ಕಾಲಕ್ಕೂ ಪ್ರಸ್ತುತ ಮತ್ತದನ್ನು ಈ ಸಮಾಜ ನೆನಪಿಟ್ಟುಕೊಂಡರೆ ಸಾಕು.

Similar News