ಒಗ್ಗಟ್ಟಾಗಬೇಕಾದವರಲ್ಲಿ ಅಧಿಕಾರಕ್ಕಾಗಿ ಒಡಕು; ಆಕ್ರಮಿಸುವವರಿಗೆ ಅಷ್ಟು ಸಾಕು

Update: 2022-12-10 05:02 GMT

ಚುನಾವಣೆಯವರೆಗೂ ಮೋದಿ ಮುಖವನ್ನೇ ತೋರಿಸುವ ಬಿಜೆಪಿಯ ಮಹಾತಂತ್ರದ ಬಳಿಕವೂ ದಿಲ್ಲಿ ಪಾಲಿಕೆಯನ್ನು ಆಪ್ ಕಿತ್ತುಕೊಂಡಿರುವುದು, ಕಾಂಗ್ರೆಸ್‌ನಂತಹ ಹಳೆಯ ಪಕ್ಷಕ್ಕೂ ಆಗದಂಥ ಬಗೆಯಲ್ಲಿ ಗುಜರಾತಿನೊಳಗೆ ತನ್ನ ನೆಲೆಯನ್ನು ಸ್ಥಾಪಿಸಿಕೊಳ್ಳುವ ಮೊದಲ ಹಂತವನ್ನು ಆಪ್ ಪೂರೈಸಿಕೊಂಡಿರುವುದು, ಮತ್ತೊಂದೆಡೆ ಹಿಮಾಚಲ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಸೋತಿರುವುದು ಮತದಾರರೂ ಕೊಂಚ ಯೋಚಿಸಬಲ್ಲರೆಂಬುದನ್ನೇ ಹೇಳುತ್ತಿದೆ.

ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳ ಫಲಿತಾಂಶ ಮೊದಲನೆಯದಾಗಿ ಕಾಣಿಸುವ ಸತ್ಯವೇನೆಂದರೆ, ಬಿಜೆಪಿ ಚುನಾವಣೆಗಳನ್ನು ಎದುರಿಸುವುದು ರಾಷ್ಟ್ರಮಟ್ಟದ ಚುನಾವಣಾ ವಿಷಯಗಳನ್ನಿಟ್ಟುಕೊಂಡು ಮತ್ತು ಅದು ಅನ್ವಯವಾಗಬಲ್ಲ ರಾಜ್ಯಗಳಲ್ಲಿ ಮಾತ್ರವೇ ಅದರ ಆಟ ನಡೆಯುತ್ತದೆಯೇ ಹೊರತು ಪ್ರಾದೇಶಿಕ ಸೂಕ್ಷ್ಮಗಳನ್ನು ಅದು ಅರ್ಥ ಮಾಡಿಕೊಳ್ಳಲಾರದು ಎಂಬುದು.

ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ ಎಂಬುದನ್ನು ಒಪ್ಪುತ್ತಲೇ, ಪ್ರಾದೇಶಿಕ ಮಟ್ಟದಲ್ಲಿ ಅದು ದುರ್ಬಲವಾಗಿದೆ ಎಂಬುದನ್ನು ಹೇಳಲೇಬೇಕು. ಗುಜರಾತ್‌ನಲ್ಲಿ ಏಳನೇ ಬಾರಿಗೆ ಗೆದ್ದು, ಅದೂ ದಾಖಲೆ ಗೆಲುವಿಗಾಗಿ ಬೀಗುತ್ತಿರುವ ಬಿಜೆಪಿ, ಅದರ ಗುಂಗಿನಲ್ಲಿ ಹಿಮಾಚಲ ಪ್ರದೇಶದಲ್ಲಿನ ಸೋಲನ್ನು ಮರೆಯಲೆತ್ನಿಸಿರಲೂ ಸಾಕು. ಅದಕ್ಕೂ ಮೊದಲು ಕಳೆದ 15 ವರ್ಷಗಳಿಂದ ದಿಲ್ಲಿ ಪಾಲಿಕೆಯ ಮೇಲೆ ಹೊಂದಿದ್ದ ಪ್ರಾಬಲ್ಯವನ್ನೂ ಆಮ್ ಆದ್ಮಿ ಪಕ್ಷ ಕಸಿದುಕೊಂಡಿರುವುದರಿಂದ, ಆ ಆಘಾತವೂ ಬಿಜೆಪಿಯನ್ನು ಬಾಧಿಸುತ್ತಲೇ ಇರುತ್ತದೆ.

ಪಾಲಿಕೆ ಚುನಾವಣೆಯಿಂದ ಹಿಡಿದು ಎಂಪಿ ಚುನಾವಣೆಯವರೆಗೂ ಮೋದಿ ಮುಖವನ್ನೇ ತೋರಿಸುವ ಬಿಜೆಪಿಯ ಮಹಾತಂತ್ರದ ಬಳಿಕವೂ ದಿಲ್ಲಿ ಪಾಲಿಕೆಯನ್ನು ಆಪ್ ಕಿತ್ತುಕೊಂಡಿರುವುದು, ಕಾಂಗ್ರೆಸ್‌ನಂತಹ ಹಳೆಯ ಪಕ್ಷಕ್ಕೂ ಆಗದಂಥ ಬಗೆಯಲ್ಲಿ ಗುಜರಾತಿನೊಳಗೆ ತನ್ನ ನೆಲೆಯನ್ನು ಸ್ಥಾಪಿಸಿಕೊಳ್ಳುವ ಮೊದಲ ಹಂತವನ್ನು ಆಪ್ ಪೂರೈಸಿಕೊಂಡಿರುವುದು, ಮತ್ತೊಂದೆಡೆ ಅಧಿಕಾರದಲ್ಲಿದ್ದ ಹಿಮಾಚಲ ಪ್ರದೇಶವನ್ನು ಇರಿಸಿಕೊಳ್ಳಲು ಬಿಜೆಪಿ ಸೋತಿರುವುದು ಮತದಾರರೂ ಕೊಂಚ ಯೋಚಿಸಬಲ್ಲರೆಂಬುದನ್ನೇ ಹೇಳುತ್ತಿದೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಸಿಕ್ಕ ಗೆಲುವು ನಿರಾಯಾಸದ್ದಲ್ಲ ಎಂಬುದನ್ನು ಕಾಂಗ್ರೆಸ್ ಕೂಡ ಮರೆಯುವಂತಿಲ್ಲ. ಅರ್ಧ ದಾರಿಯವರೆಗೂ ಅತ್ಯಂತ ಪೈಪೋಟಿಯೊಡ್ಡಿದ್ದ ಬಿಜೆಪಿಗೆ ಅದರ ಬಂಡಾಯ ಅಭ್ಯರ್ಥಿಗಳು ಚುನಾವಣೆಯಲ್ಲಿ ಜೊತೆಯಾಗಿದ್ದಿದ್ದರೆ ಏನಾಗುತ್ತಿತ್ತು ಎಂಬುದನ್ನು ಕಾಂಗ್ರೆಸ್ ಯೋಚಿಸಬೇಕು.

ಅಲ್ಲದೆ ಗುಜರಾತ್‌ನಲ್ಲಿ ಮತಗಳನ್ನು ಒಡೆದಂತೆ ಆಪ್ ಇಲ್ಲಿ ಕಾಂಗ್ರೆಸ್ ಮತಗಳನ್ನು ಒಡೆಯಲಾರದೆ ಉಳಿಯಿತೆಂಬುದು ಕೂಡ ಮುಖ್ಯ. ಪ್ರಿಯಾಂಕಾ ಥರದವರ ನಾಯಕತ್ವದ ಹೊರತಾಗಿಯೂ ಕಾಂಗ್ರೆಸ್ ತನ್ನ ಜಡ್ಡುಗಟ್ಟಿದ ಸ್ಥಿತಿಯಿಂದ ಮೇಲೇಳಲು ಮೊದಲು ಗಮನ ಕೊಡಬೇಕು. ಇಲ್ಲದಿದ್ದರೆ ಮುಂದಿರುವುದು ಅಷ್ಟೊಂದು ಹಿತದ ದಾರಿಯಲ್ಲ ಅದರ ಪಾಲಿಗೆ.

ದೇಶದಲ್ಲಿ ಒಟ್ಟು 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಿವೆ. ದಿಲ್ಲಿ ಮತ್ತು ಪುದುಚೇರಿಗಳೂ ಸೇರಿ ಒಟ್ಟು 30 ವಿಧಾನಸಭೆಗಳಲ್ಲಿ ಬಿಜೆಪಿ 16ರಲ್ಲಿ ಅಧಿಕಾರ ಹೊಂದಿದೆ. ಅವುಗಳಲ್ಲಿ 10 ರಾಜ್ಯಗಳಲ್ಲಿ ಅದರದ್ದೇ ಪ್ರಾಬಲ್ಯವಾದರೆ, ಉಳಿದೆಡೆ ಇತರ ಪಕ್ಷಗಳೊಡನೆ ಸೇರಿ ಸರಕಾರ ರಚಿಸಿದೆ. ಬಿಜೆಪಿ ಅಧಿಕಾರದಲ್ಲಿರುವ ಈ 16 ರಾಜ್ಯಗಳಲ್ಲಿ ಎಂಟು ಪ್ರಮುಖ ರಾಜ್ಯಗಳು ಒಂದು ಕೋಟಿಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. 2011ರ ಜನಗಣತಿ ಅಂಕಿಅಂಶಗಳನ್ನು ಆಧರಿಸಿ ಹೇಳುವುದಾದರೆ, ದೇಶದ ಒಟ್ಟು ಜನಸಂಖ್ಯೆಯ ಶೇ.48.7ರಷ್ಟು ಬಿಜೆಪಿ ಸರಕಾರದ ಆಳ್ವಿಕೆಯಲ್ಲಿದೆ. ಬಿಜೆಪಿ ಅಧಿಕಾರದಲ್ಲಿರುವ ಎಂಟು ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಈ ಮೂರು ರಾಜ್ಯಗಳಲ್ಲಿ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಸರಕಾರ ರಚಿಸದೆ ಪಕ್ಷಾಂತರಿಗಳ ನೆರವಿನಿಂದ ಅಧಿಕಾರದಲ್ಲಿದೆ.

ಹೀಗೆ ನಿಜವಾದ ಜನಬಲದಿಂದ ಸಿಕ್ಕ ಗೆಲುವಿನ ಆಚೆಗಿನ ಆಟಗಳ ಮೂಲಕ ಸರಕಾರ ರಚಿಸದೆ ಇದ್ದಿದ್ದರೆ ಜನಸಂಖ್ಯೆಯ ಶೇ. 28.3ರಷ್ಟು ಮಾತ್ರ ಇಂದು ಬಿಜೆಪಿ ಆಡಳಿತದಡಿ ಬರುತ್ತಿತ್ತು ಎಂಬುದೊಂದು ಲೆಕ್ಕಾಚಾರ. ಪಕ್ಷಾಂತರ ದ್ರೋಹವನ್ನು ಬಳಸಿಕೊಂಡು, ಗೆದ್ದವರನ್ನು ಬದಿಗೆ ಸರಿಸಿ ಅಧಿಕಾರಕ್ಕೇರುವುದನ್ನು ತನ್ನ ದೊಡ್ಡ ಸಾಧನೆಯೆಂಬಂತೆ ಬಿಂಬಿಸಿಕೊಳ್ಳುತ್ತಲೇ ಬಂದಿರುವ ಬಿಜೆಪಿ, ಅದಕ್ಕಾಗಿ ಕಟು ಟೀಕೆಗಳಿಗೂ ಒಳಗಾಗುತ್ತಲೇ ಇದೆ. ಎದುರು ಪಕ್ಷದವರನ್ನು ಸೆಳೆಯಲು ತನ್ನ ಕೈಯಲ್ಲಿನ ತನಿಖಾ ಸಂಸ್ಥೆಗಳನ್ನು ಅತ್ಯಂತ ತೀವ್ರ ಸ್ವರೂಪದಲ್ಲಿ ಅಸ್ತ್ರವಾಗಿ ಬಳಸುವ ಅದರ ತಂತ್ರವೂ ವ್ಯಾಪಕ ಟೀಕೆಗೆ ತುತ್ತಾಗುತ್ತಲೇ ಇದೆ.

ಇದೇ ಹೊತ್ತಲ್ಲಿ ಒಂದು ರಾಜಕೀಯ ಶಕ್ತಿರಂಗವಾಗಿ ನಿಲ್ಲಬಹುದಾಗಿದ್ದ ಪ್ರತಿಪಕ್ಷಗಳಿಗೆ ಅಧಿಕಾರದ ಆಸೆಯಲ್ಲಿ ಕಿತ್ತಾಡುವ ಚಾಳಿ. ಎಲ್ಲರೂ ಒಂದಾಗಿ ದುರಿತವನ್ನು ಎದುರಿಸುವಲ್ಲಿ ಬೇಕಾದ ಒಗ್ಗಟ್ಟಿನ ಕೊರತೆ, ಕಡೆಗೆ ಅವರವರ ಒಳಗೇ ಅವರವರ ಮತಗಳನ್ನೇ ಕಸಿದುಕೊಳ್ಳುತ್ತ ಮುಗ್ಗರಿಸುವಲ್ಲಿಗೆ ತಂದು ನಿಲ್ಲಿಸುತ್ತಿದೆ ಪ್ರತಿಪಕ್ಷಗಳನ್ನು. ಕಾಂಗ್ರೆಸ್ ಜೊತೆ ಕೈಜೋಡಿಸಲು ಟಿಎಂಸಿ ಮತ್ತು ಆಪ್ ಮನಸ್ಸು ಮಾಡುವುದೇ ಇಲ್ಲ. ಕಾಂಗ್ರೆಸ್‌ನ ಒಳಗೂ ನೂರೆಂಟು ತಾಪತ್ರಯಗಳು.

ಹೀಗೆ ಒಗ್ಗಟ್ಟಾಗಬೇಕಾದವರು ಆಗಲಾರದ ಸ್ಥಿತಿ ಒಂದೆಡೆಗಾದರೆ, ಆಮಿಷಗಳಿಗೆ ಬಲಿಯಾಗುವವರು ಮತ್ತೊಂದೆಡೆ. ಗೆದ್ದ ಶಾಸಕರು ಪಕ್ಷದೊಳಗೇ ಇರುತ್ತಾರೆ ಎಂಬ ಖಾತ್ರಿಯೂ ಇಲ್ಲದ ಸ್ಥಿತಿ. ಎಲ್ಲರನ್ನೂ ಹಿಡಿದಿಟ್ಟು ಕಾಪಾಡಿಕೊಳ್ಳಬೇಕಾದ ದುರವಸ್ಥೆ. ಪ್ರಜಾಪ್ರಭುತ್ವ ಇಂಥ ನಗೆಪಾಟಲಿನ ಸ್ಥಿತಿಗೆ ಮುಟ್ಟಿರುವ ಹೊತ್ತಿನಲ್ಲಿ ಸಮಾನ ಮನಸ್ಕ ಪಕ್ಷಗಳು ಒಗ್ಗಟ್ಟಾಗಿ ನಿಲ್ಲುವುದು ಸಾಧ್ಯವಿರುತ್ತಿದ್ದರೆ ಚುನಾವಣೆಗಳಿಗೆ ಬೇರೆಯ ಸ್ವರೂಪವೇ ಸಾಧ್ಯವಿರುತ್ತಿತ್ತೇನೊ. ಆದರೆ ಹಾಗಾಗುತ್ತಿಲ್ಲ. ಎಲ್ಲ ವೈವಿಧ್ಯವನ್ನೂ ನುಂಗಿಹಾಕಬೇಕೆಂದು ಹೊರಟಿರುವ ‘ಒಂದೇ’ ಗುರಿಯವರಿಗೆ ಇಂತಹ ಒಡಕುಗಳೇ ಹೆದ್ದಾರಿ.

Similar News