ಉಕ್ರೇನ್ ಮೇಲಿನ ಆಕ್ರಮಣಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರ ಖಂಡನೆ

Update: 2022-12-11 17:52 GMT

ಸ್ಟಾಕ್‌ಹೋಮ್, ಡಿ.11: ಶನಿವಾರ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಸರ್ವಾಧಿಕಾರಿ ಧೋರಣೆ ಮತ್ತು ಉಕ್ರೇನ್ ಮೇಲಿನ ಅವರ ಆಕ್ರಮಣವನ್ನು ಖಂಡಿಸಿದ್ದಾರೆ ಎಂದು ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.

ಬಂಧನಲ್ಲಿರುವ ಬೆಲಾರಸ್‌ನ ಮಾನವ ಹಕ್ಕುಗಳ ಪ್ರತಿಪಾದಕ ಅಲೆಸ್ ಬಿಯಾಲಿಯಟ್ಸ್ಕಿ, ರಶ್ಯದ ಮಾನವ ಹಕ್ಕುಗಳ ಸಂಘಟನೆ ಹಾಗೂ ಉಕ್ರೇನ್‌ನ ನಾಗರಿಕ ಸ್ವಾತಂತ್ರ್ಯಕ್ಕಾಗಿನ ಮಾನವ ಹಕ್ಕುಗಳ ಕೇಂದ್ರವನ್ನು 2022ರ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಉಕ್ರೇನ್‌ನಲ್ಲಿನ ಯುದ್ಧದ ಮಧ್ಯೆ, ರಾಷ್ಟ್ರಗಳ ನಡುವೆ ಶಾಂತಿ ಮತ್ತು ಭ್ರಾತೃತ್ವದ ದೃಷ್ಟಿಕೋನವನ್ನು ಉತ್ತೇಜಿಸುವ ಪ್ರಯತ್ನ ಈ ಪ್ರಶಸ್ತಿಯಾಗಿದೆ ಎಂದು ನೊಬೆಲ್ ಪ್ರಶಸ್ತಿ ಸಮಿತಿ ಹೇಳಿದೆ.

  ರಶ್ಯದ ನಾಗರಿಕ ಸಮಾಜದ ದುಸ್ಥಿತಿಯು ದೇಶದ ಬಗೆಹರಿಯದ ಗತಕಾಲದ ನೇರ ಪರಿಣಾಮವಾಗಿದೆ . ಮಾನವಹಕ್ಕುಗಳ ಸಂಘಟನೆ ಈ ಹುಚ್ಚುತನದ ಪ್ರಥಮ ಬಲಿಪಶುವಾಗಿದೆ. ಈಗ ರಶ್ಯದ ಸಮೂಹ ಮಾಧ್ಯಮವು ನೆರೆಯ ದೇಶದ ಮೇಲೆ ಅಪ್ರಚೋದಿತ ಸಶಸ್ತ್ರ ಆಕ್ರಮಣ, ಪ್ರದೇಶಗಳ ಸ್ವಾಧೀನ, ಆಕ್ರಮಿತ ಪ್ರದೇಶಗಳಲ್ಲಿ ನಾಗರಿಕರ ವಿರುದ್ಧ ಭಯೋತ್ಪಾದನೆ ಮತ್ತು ಯುದ್ಧಾಪರಾಧವನ್ನು ಫ್ಯಾಸಿಸಂ ವಿರುದ್ಧದ ಹೋರಾಟವೆಂದು ಸಮರ್ಥಿಸುತ್ತಿದೆ ಎಂದು ರಶ್ಯದ ಮಾನವ ಹಕ್ಕುಗಳ ಸಂಘಟನೆಯ ಮಾನವ ಹಕ್ಕುಗಳ ಕಾರ್ಯಕರ್ತ ಜಾನ್ ರಚಿಂಸ್ಕಿ ಹೇಳಿದ್ದಾರೆ.

 2020ರಿಂದ ವಿಚಾರಣೆಯಿಲ್ಲದೆ ಜೈಲಿನಲ್ಲಿ ಬಂಧನದಲ್ಲಿರುವ ಅಲೆಸ್ ಬಿಯಾಲಿಯಟ್ಸ್ಕಿ ತಮಗೆ ದೊರಕಿರುವ ನೊಬೆಲ್ ಪ್ರಶಸ್ತಿಯನ್ನು ತನ್ನ ಎಲ್ಲಾ ಮಾನವ ಹಕ್ಕುಗಳ ಪ್ರತಿಪಾದಕ ಮಿತ್ರರು, ನಾಗರಿಕ ಹೋರಾಟಗಾರರು ಮತ್ತು ‘ಥಳಿತ, ದೌರ್ಜನ್ಯ, ಬಂಧನ, ಜೈಲುಶಿಕ್ಷೆಗೆ ಗುರಿಯಾಗಿರುವ ಸಾವಿರಾರು ಬೆಲಾರಸ್ ಜನತೆಗೆ’ ಅರ್ಪಿಸುವುದಾಗಿ ಹೇಳಿದ್ದಾರೆ. ನನ್ನ ತಾಯ್ನೆಲ, ಸಂಪೂರ್ಣ ಬೆಲಾರಸ್ ಈಗ ಜೈಲಿನಂತಾಗಿದೆ. ಜನತೆಯ ಧ್ವನಿ ಅಡಗಿಸಿದ, ಅವರನ್ನು ಕಡೆಗಣಿಸಿದ, ಕೀಳಾಗಿ ಕಾಣುವ ಬೆಲಾರಸ್‌ನಂತೆ ಉಕ್ರೇನ್ ಕೂಡಾ ಬದಲಾಗಬೇಕು ಎಂಬುದು ರಶ್ಯ ಅಧ್ಯಕ್ಷ ಪುಟಿನ್ ಬಯಕೆಯಾಗಿದೆ ಎಂದು ಬಿಯಾಲಿಯಟ್ಸ್ಕಿ ಹೇಳಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅವರ ಭಾಷಣವನ್ನು ಕಳುಹಿಸಿಕೊಡಲು ಬೆಲಾರಸ್ ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂದು ಸಮಾರಂಭದಲ್ಲಿ ಅಲೆಸ್ ಬಿಯಾಲಿಯಟ್ಸ್ಕಿಯ ಪರವಾಗಿ ಮಾತನಾಡಿದ ಅವರ ಪತ್ನಿ ನತಾಲಿಯಾ ಹೇಳಿದ್ದಾರೆ.

Similar News