ಸಿಂಧಿ ಭಾಷೆಯ ಮಾನ್ಯತೆಗೆ ಧ್ವನಿ ಎತ್ತಿದ ಕೆನಡಾ ಸಂಸತ್ತು

Update: 2022-12-11 17:38 GMT

ಒಟ್ಟಾವ, ಡಿ.11: ಸಿಂಧಿ ಭಾಷೆಗೆ ಅಧಿಕೃತ ಭಾಷೆಯ ಮಾನ್ಯತೆ ನೀಡುವ ವಿಷಯದಲ್ಲಿ ಕೆನಡಾದ ಸಂಸತ್ತು ಧ್ವನಿ ಎತ್ತಿದ್ದು, ಸಿಂಧಿ ಭಾಷೆಯ ವೆಬ್‌ಸೈಟ್ ಅನ್ನು ಪ್ರಾರಂಭಿಸುವಂತೆ ಪಾಕಿಸ್ತಾನದಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಒತ್ತಾಯಿಸಿದೆ.

 ಪಾಕಿಸ್ತಾನದಲ್ಲಿರುವ ಕೆನಡಾ ರಾಯಭಾರ ಕಚೇರಿಯಲ್ಲಿ ಸಿಂಧಿ ಭಾಷೆಯ ವೆಬ್‌ಸೈಟ್ ಆರಂಭಿಸುವ ಮೂಲಕ ಕೆನಡಾ ಸರಕಾರ ಹಾಗೂ ಸಿಂಧಿ ಭಾಷಿಕರ ನಡುವಿನ ಸಂವಹನಕ್ಕೆ ಎದುರಾಗುವ ಅಡೆತಡೆಯನ್ನು ನಿವಾರಿಸಬೇಕು ಎಂದು ಕೆನಡಾದ ಸಂಸದ ಜೆರೆಮಿ ಪಾಟ್ಝರ್ ಕೆನಡಾದ ಹೌಸ್ ಆಫ್ ಕಾಮನ್ಸ್(ಸಂಸತ್ತು)ನಲ್ಲಿ ಒತ್ತಾಯಿಸಿದ್ದಾರೆ.

 ಸಿಂಧಿ ಭಾಷೆಗೆ ಮಾನ್ಯತೆ ನೀಡುವಂತೆ ನಾನಿಂದು ಧ್ವನಿ ಎತ್ತುತ್ತಿದ್ದೇನೆ. ಈ ಭಾಷೆಯನ್ನು ವಿದೇಶದಲ್ಲಿ ಸಂರಕ್ಷಿಸಲು ಕೆನಡಾ ಒಂದು ಸಣ್ಣ, ಆದರೆ ಮಹತ್ವದ ಹೆಜ್ಜೆಯನ್ನು ಇಡಬಹುದು. ಹೀಗೆ ಮಾಡುವುದರಿಂದ ಕೆನಡಾ ಮತ್ತು ಸಿಂಧ್ ಹಾಗೂ ಪಾಕಿಸ್ತಾನದ ಇತರ ಪ್ರದೇಶಗಳಲ್ಲಿರುವ ಸಿಂಧಿ ಜನರ ನಡುವಿನ ಸಂಬಂಧ ಬಲಗೊಳ್ಳುತ್ತದೆ ಎಂದು ಜೆರೆಮಿ ಪಾಟ್ಝರ್ ಟ್ವೀಟ್ ಮಾಡಿದ್ದಾರೆ. ಸಿಂಧಿ ಪಾಕಿಸ್ತಾನದ ಸಿಂಧ್ ಪ್ರಾಂತದ ಅಧಿಕೃತ ಭಾಷೆಯಾಗಿ ಗುರುತಿಸಲ್ಪಟ್ಟಿದೆ. ಆದರೆ ಕರಾಚಿಯಲ್ಲಿರುವ ಕೆನಡಾ ದೂತಾವಾಸದಿಂದ ಅಥವಾ ಇಸ್ಲಮಾಬಾದ್‌ನಲ್ಲಿರುವ ಕೆನಡಾ ಹೈಕಮಿಷನ್‌ನಿಂದ ಪ್ರಾದೇಶಿಕ ಭಾಷೆಯಾಗಿ ಗುರುತಿಸಲ್ಪಟ್ಟಿಲ್ಲ. ಪ್ರಾದೇಶಿಕ ಭಾಷೆಯ ಮನ್ನಣೆಯ ಕೊರತೆಯು ಸಿಂಧಿ ಜನತೆ ಹಾಗೂ ಕೆನಡಾ ದೂತಾವಾಸದ ನಡುವಿನ ಸಂವಹನಕ್ಕೆ ಅಡ್ಡಿಯಾಗುತ್ತಿದೆ. ಇದು ಬದಲಾಗಬೇಕು ಎಂದವರು ಆಗ್ರಹಿಸಿದ್ದಾರೆ.

ಇದೇ ಸಂದರ್ಭ ಸಂಸತ್ತಿನಲ್ಲಿ ಸಿಂಧಿ ಫೌಂಡೇಷನ್‌ನ ಸೂಫಿ ಲಘಾರಿ ಮತ್ತು ಮೀರ್ ಮುಝಫರ್ ತಾಲ್ಪುರ್‌ರನ್ನು ಗೌರವಿಸಲಾಯಿತು. ವಾಷಿಂಗ್ಟನ್ ಮೂಲದ ಸಿಂಧಿ ಫೌಂಡೇಷನ್ ಪಾಕಿಸ್ತಾನದಲ್ಲಿರುವ ಸಿಂಧಿ ಜನತೆಯ ಹಕ್ಕುಗಳಿಗಾಗಿ ಕಾರ್ಯ ನಿರ್ವಹಿಸುತ್ತಿದೆ. 

Similar News