ಕಮು ನೆನೆದ ಅನ್ನಿ
ಇದು, ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 65 ವರ್ಷ ಹಿಂದೆ ಪ್ರಶಸ್ತಿ ಪಡೆದ ಬರಹಗಾರನೊಬ್ಬನ ನೆನಪು ಮರುಕಳಿಸಿದ ಸಂದರ್ಭ. ಫ್ರೆಂಚ್ ಬರಹಗಾರ್ತಿ ಅನ್ನಿ ಎರ್ನಾಕ್ಸ್ ಅವರು ಆಲ್ಬರ್ಟ್ ಕಮು ಅವರನ್ನು, ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಸ್ಮರಿಸಿದರು.
ಅಸ್ತಿತ್ವವಾದಿ ಕ್ಲಾಸಿಕ್ ‘ದಿ ಸ್ಟ್ರೇಂಜರ್’ ಲೇಖಕ ಪಡೆದ ಗೌರವವನ್ನು 65 ವರ್ಷಗಳ ನಂತರ ಪಡೆಯುತ್ತಿರುವುದಕ್ಕೆ ಅಚ್ಚರಿ ಮತ್ತು ಧನ್ಯತೆ ಭಾಸವಾಗುತ್ತಿದೆ ಎಂದು ಅನ್ನಿ ನುಡಿದರು. ಬದುಕು ಎಲ್ಲಿಂದ ಎಲ್ಲಿಗೋ ಕರೆದು ತರುತ್ತದೆ. ಬರವಣಿಗೆಯು ಅಪರೂಪದ ಸಂದರ್ಭಗಳನ್ನು ಎದುರಿಗೆ ತಂದಿಡುತ್ತದೆ ಎಂದು ವಿಸ್ಮಯ ವ್ಯಕ್ತಪಡಿಸಿದ ಅನ್ನಿ, ಇದೊಂದು ಅಂಥ ಅಪರೂಪದ ಸಂದರ್ಭ ಎಂದರು. ನನ್ನ ಕೃತಿಗೆ ಸಂದ ಈ ಗೌರವ ವಾಸ್ತವದ ಹುಡುಕಾಟದಲ್ಲಿ ಇನ್ನಷ್ಟು ತೊಡಗಿಕೊಳ್ಳುವುದಕ್ಕೆ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು.
‘ದಿ ಸ್ಟ್ರೇಂಜರ್’, ‘ದಿ ಪ್ಲೇಗ್’ನಂಥ ಕಾದಂಬರಿಗಳಲ್ಲದೆ, ಹಲವಾರು ನಾಟಕಗಳು ಮತ್ತು ಪ್ರಬಂಧಗಳನ್ನು ಬರೆದ ಕಮು 1857ರಲ್ಲಿ ತನ್ನ 44ನೇ ವಯಸ್ಸಿನಲ್ಲಿ ನೊಬೆಲ್ ಪ್ರಶಸ್ತಿ ಗೌರವಕ್ಕೆ ಪಾತ್ರನಾಗುತ್ತಾನೆ. ಫ್ರೆಂಚ್ ಅಲ್ಜೀರಿಯಾದ ಬಡ ಕುಟುಂಬದಲ್ಲಿ ಜನಿಸಿದ್ದ ಕಮುನಂತೆಯೆ, ಅನ್ನಿ ಎರ್ನಾಕ್ಸ್ ಬರವಣಿಗೆಯು ಕಾರ್ಮಿಕ ವರ್ಗದ ಹಿನ್ನೆಲೆಯಿಂದ ಫ್ರಾನ್ಸ್‌ನ ಸಾಹಿತ್ಯಿಕ ಲೋಕದವರೆಗಿನ ಆಕೆಯ ಪಯಣವನ್ನು ತೆರೆದಿಡುತ್ತದೆ. ಸ್ವೀಡಿಷ್ ಅಕಾಡಮಿಯ ಈ ಗೌರವ ಪಡೆಯುತ್ತಿರುವ 17ನೆಯ ಮಹಿಳೆ ಮತ್ತು ಮೊದಲ ಫ್ರೆಂಚ್ ಬರಹಗಾರ್ತಿ ಅನ್ನಿ.
ಫ್ರಾನ್ಸ್‌ನ ಹೊರಗೆ, ಆಕೆಯ ಕೃತಿಗಳಿಗೆ ಮನ್ನಣೆ ಸಿಗತೊಡಗಿರುವುದು ಇತ್ತೀಚಿನ ವರ್ಷಗಳಲ್ಲಿ. ಮುಖ್ಯವಾಗಿ 2008ರಲ್ಲಿ ಅವರ ಪ್ರಮುಖ ಕೃತಿ ‘ದಿ ಇಯರ್ಸ್’ ನ ಇಂಗ್ಲಿಷ್ ಅನುವಾದದ ನಂತರ. ಅದು 2019ರಲ್ಲಿ ಪ್ರತಿಷ್ಠಿತ ಮ್ಯಾನ್ ಬೂಕರ್ ಇಂಟರ್‌ನ್ಯಾಷನಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.