ಮತದಾರರು ಜಾಗೃತರಾದರೆ ಮಾತ್ರ ದೇಶಕ್ಕೆ ಭವಿಷ್ಯ
''ಉತ್ತಮ ಆಡಳಿತವೇ ಭಾರತದ ಅಭಿವೃದ್ಧಿಗೆ ದ್ಯೋತಕ. ಉತ್ತಮ ಆಡಳಿತವೆಂದರೆ ನಮ್ಮ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸಮಾನತೆ ದೊರಕಿ, ಈ ಎಲ್ಲಾ ವಲಯಗಳಲ್ಲೂ ಭ್ರಷ್ಟಾಚಾರವಿರದ ಸರ್ವಾಂಗೀಣ ಅಭಿವೃದ್ಧಿ ಪರ ಆಡಳಿತವಾಗಿದೆ.''
-ಅಮರ್ತ್ಯಸೇನ್, ಖ್ಯಾತ ಅರ್ಥಶಾಸ್ತ್ರಜ್ಞ.
ಭಾರತದ ಪ್ರಸಕ್ತ ಸನ್ನಿವೇಶದಲ್ಲಿ ಸರಕಾರಿ, ಖಾಸಗಿ ಹಾಗೂ ಸಹಕಾರ ವಲಯಗಳು ಬಹಳಷ್ಟು ಮಲಿನಗೊಂಡಿವೆ. ಸರಕಾರದ ಕೆಲಸ ದೇವರ ಕೆಲಸವೆಂದು ಹೇಳುವ ನಮ್ಮನ್ನಾಳುವ ನಾಯಕರು ಭ್ರಷ್ಟಾಚಾರ ಹಗರಣಗಳಲ್ಲಿ ಭಾಗಿಯಾಗಿ ಕೋಟ್ಯಂತರ ರೂಪಾಯಿಗಳನ್ನು ಕೊಳ್ಳೆ ಹೊಡೆದು, ಇಡೀ ದೇಶದ ಮತದಾರರ, ನಾಗರಿಕರ ತೆರಿಗೆ ಹಣವನ್ನು ಪೋಲು ಮಾಡಿ, ರಾಷ್ಟ್ರ ಬೊಕ್ಕಸಕ್ಕೆ ತುಂಬಾ ಹಾನಿ ಮಾಡಿ ರಾಷ್ಟ್ರದ್ರೋಹ ಎಸಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಪ್ರಸಕ್ತ ಸಾಲಿನಲ್ಲಿ ಸಾರ್ವತ್ರಿಕ ಚುನಾವಣೆಗಳು ಎದುರಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ವಿವಿಧ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳೆಂಬ ಹುಸಿ ಆಶ್ವಾಸನೆಗಳ ಮಹಾಪೂರವೇ ಕಂಡುಬರುತ್ತಿವೆ. ತಮ್ಮ ಪಕ್ಷ ಚುನಾವಣೆಯಲ್ಲಿ ಗೆದ್ದು ಸರಕಾರ ರಚಿಸಿದ್ದೇ ಆದರೆ, ಆಕಾಶವನ್ನೇ ಕೆಳಕ್ಕಿಳಿಸುವಂತಹ ಆಶ್ವಾಸನೆ ನೀಡಿ, ಚುನಾವಣೆಯಲ್ಲಿ ವಿಜಯಿಯಾದ ನಂತರ ಮತದಾರರ ಕಡೆಗೆ ಕಣ್ಣೆತ್ತಿಯೂ ನೋಡದಿರುವುದನ್ನು ಗಮನಿಸುತ್ತಲೇ ಇದ್ದೇವೆ.
ಇಂತಹ ದುರವಸ್ಥೆಗೆ ಈಗಿನ ಮತದಾರರಲ್ಲೂ ಪಾಲಿದೆ. ತುಂಡುಬಟ್ಟೆಗೆ, ಹಣಕ್ಕೆ, ಮಾಂಸ-ಮದ್ಯಕ್ಕೆ, ಸ್ವಜಾತಿ ವ್ಯಕ್ತಿಯೆಂಬ ಮೋಹಕ್ಕೆ ತಮ್ಮ ಅಮೂಲ್ಯವಾದ ಮತವನ್ನು ಮಾರಿಕೊಂಡು ಕಡೆಗೆ ತಾವೇ ಆರಿಸಿದ ಜನಪ್ರತಿನಿಧಿಗಳ ಗುಲಾಮರಾಗಬೇಕಾಗುತ್ತದೆ.
ಈ ರೀತಿಯ ವಾಸ್ತವವನ್ನು ಅರಿತೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ''ವೋಟು ಎಂಬುದು ಎರಡಲಗಿನ ಖಡ್ಗವಿದ್ದಂತೆ. ಒಂದು ಕಡೆ ಬೀಸಿದರೆ ಸಾಮಾಜಿಕ ಅಸಮಾನತೆ ತೊಲಗುತ್ತದೆ, ಮತ್ತೊಂದು ಕಡೆ ಬೀಸಿದರೆ ಆರ್ಥಿಕ ಅಸಮಾನತೆ ಮಾಯವಾಗುತ್ತದೆ. ಇವೆಲ್ಲದಕ್ಕೂ ಮತದಾರರು ಜಾಗೃತರಾಗಿ ಚಿಂತಿಸಿ ಮತ ನೀಡಿದರೆ ಮಾತ್ರ ಸಾಧ್ಯ.'' ಎಂದಿದ್ದಾರೆ. ಮತದಾರರು ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ, ವಿವೇಚನಾಯುಕ್ತವಾಗಿ ಮತ ಚಲಾಯಿಸಲೇ ಬೇಕಾಗುತ್ತದೆ. ನಾವು ಆಯ್ಕೆ ಮಾಡುವ ವ್ಯಕ್ತಿ ಮತ್ತು ಪಕ್ಷ ಉತ್ತಮವಾಗಿದ್ದರೆ, ಅವರು ಉತ್ತಮ ಆಡಳಿತ ನೀಡಿದರೆ ದೇಶದಲ್ಲಿರುವ ಬಹು ಜನರ ಸಮಸ್ಯೆಗಳಿಗೆ ಶಾಶ್ವತವಾಗಿ ಇತಿಶ್ರೀ ಹಾಡಬಹುದಾಗಿರುತ್ತದೆ.
ದೇಶದಲ್ಲಿ ಪ್ರಸಕ್ತ ಜಾರಿಯಲ್ಲಿರುವ ನವ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳನ್ನು ಕೈಬಿಡುವುದಲ್ಲದೆ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವಂತಹ ಅಂತರ್‌ರಾಷ್ಟ್ರೀಯ ಬಾಹ್ಯ ಮತ್ತು ಆಂತರಿಕ ಒಪ್ಪಂದಗಳನ್ನು ಕೂಡಾ ಕೈಬಿಟ್ಟು ನಾಗರಿಕರ ಹಕ್ಕುಗಳನ್ನು ರಕ್ಷಿಸುವಂತಹ, ದೇಶದ ಜನರಿಗೆ ಉದ್ಯೋಗ ನೀಡುವಂತಹ ಸರಕಾರಗಳು ಜನರಿಂದ ನೇರವಾಗಿ ಆಯ್ಕೆಯಾಗಿ ಬರಬೇಕಾಗಿದೆ.
ಈ ದೇಶದಲ್ಲಿರುವ ಶೇ.35ಕ್ಕಿಂತಲೂ ಹೆಚ್ಚಿರುವ ಬಡಜನರ ಬಡತನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿ, ಶೈಕ್ಷಣಿಕ ಸುಧಾರಣೆಗಳನ್ನು ಕೈಗೊಂಡು ಇದಕ್ಕೆ ಪೂರಕವಾಗುವ ಕಾನೂನುಗಳನ್ನು ಜಾರಿಗೆ ತಂದು ಶೈಕ್ಷಣಿಕ ಸುಧಾರಣೆ ಮಾಡಬೇಕಾಗಿದೆ. ಅಲ್ಲದೆ ಭೂಸುಧಾರಣೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಬಡವ, ಶ್ರೀಮಂತ ಎಂಬ ಭೇದಭಾವವನ್ನು ತೊಡೆದು ಹಾಕಬೇಕಾಗಿದೆ. ಉತ್ಕೃಷ್ಟ ಗುಣಮಟ್ಟದ ದವಸ ಧಾನ್ಯಗಳನ್ನು ಪಡಿತರ ವ್ಯವಸ್ಥೆಯ ಮೂಲಕ ನೀಡುವುದರಿಂದ ದೇಶದಲ್ಲಿನ ಅಪೌಷ್ಟಿಕತೆ ಎಂಬ ರಾಷ್ಟ್ರೀಯ ಅವಮಾನವನ್ನು ತೊಡೆದುಹಾಕಬಹುದು. ಭಾರತದಲ್ಲಿ ವಿವಿಧ ಜಾತಿ ಧರ್ಮಗಳಿವೆ, ಎಲ್ಲಾ ಜಾತಿ ಧರ್ಮಗಳಿಗೂ ನ್ಯಾಯ ಸಿಗುವಂತಹ ವಿವಿಧ ಕಾಯ್ದೆಗಳನ್ನು ಜಾರಿಗೆ ತರುವುದು ನಮ್ಮನ್ನಾಳುವ ನಾಯಕರು ಮಾಡಬೇಕಾದ ಮೊದಲ ಕೆಲಸ. ಲಂಚಗುಳಿತನವನ್ನು ನಿವಾರಣೆ ಮಾಡುವ ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ, ಲೋಕಪಾಲ ಹಾಗೂ ಸಿಬಿಐಗೆ ಕಾನೂನಿನನ್ವಯ ವಿಶೇಷ ಸ್ಥಾನಮಾನ ನೀಡಿ ಯಾವುದೇ ರಾಜಕೀಯ ಪಕ್ಷದ, ರಾಜಕೀಯ ಒತ್ತಡವಿಲ್ಲದೆ ಸರ್ವ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವುದು ನಮ್ಮ ಜನಪ್ರತಿನಿಧಿಗಳ ಎರಡನೇ ಕೆಲಸ.
ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸರಕಾರಿ ನೌಕರರನ್ನು ಕಠಿಣವಾಗಿ ಶಿಕ್ಷಿಸುವ ಕಾನೂನುಗಳು ನಮ್ಮ ದೇಶದಲ್ಲಿ ಜಾರಿಗೆ ಬರಬೇಕು. ಒಂದು ವೇಳೆ ಖಾಸಗಿ ವಲಯದ ಸಂಸ್ಥೆಗಳು ಇಂತಹ ಭ್ರಷ್ಟಾಚಾರ ಹಗರಣಗಳಲ್ಲಿ ಭಾಗಿಯಾಗಿದ್ದರೆ ಅಂತಹ ಸಂಸ್ಥೆಗಳು ಯಾರದ್ದೇ ಆದರೂ ಅವುಗಳಿಗೆ ಸರಕಾರ ನೀಡಿದ ಪರವಾನಿಗೆಯನ್ನು ರದ್ದುಪಡಿಸಿ ಅವರಿಂದಲೇ ಬೊಕ್ಕಸಕ್ಕೆ ಆದ ನಷ್ಟವನ್ನು ತುಂಬುವಂತೆ ಕಾನೂನು ಮಾಡುವುದು ಪ್ರಜ್ಞಾವಂತ, ಪ್ರಜಾನಿಷ್ಠ, ಜನಪರ ಮತ್ತು ಜನನಾಯಕನ ಆದ್ಯ ಕರ್ತವ್ಯವಾಗಿರುತ್ತದೆ.
ನ್ಯಾಯಾಂಗ ಮತ್ತು ಶಾಸಕಾಂಗಗಳು ಎಂದೂ ಒಂದಾಗದಂತೆ ನೋಡಿಕೊಳ್ಳುವ ಕಾಯ್ದೆ ಜಾರಿಯಾಗಿ, ತಪ್ಪುಮಾಡಿದರೆ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅಧಿಕಾರದಲ್ಲಿರುವಾಗಲೇ ಶಿಕ್ಷೆ ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇದ್ದರೆ ಮಾತ್ರ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಸುಧಾರಿಸಿಯಾರು. ಮಾಧ್ಯಮಗಳ ಮತ್ತು ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರದೆ, ದೇಶದ ಸಮಸ್ತ ಜನರ, ಸಮಸ್ತ ಸಮಸ್ಯೆಗಳನ್ನು ಅರ್ಥೈಸಿಕೊಂಡು, ಜನಪರವಾಗಿ ಕೆಲಸ ಮಾಡಿ ಉತ್ತಮ ಆಡಳಿತ ನೀಡುವ ಸರಕಾರ, ದೇಶದಲ್ಲಿನ ನಿರುದ್ಯೋಗ ಪ್ರಮಾಣವನ್ನು ತಗ್ಗಿಸುವ ಜನನಾಯಕರು ದೇಶಕ್ಕೆ ಬೇಕು. ಅಂತಹ ಜನನಾಯಕರನ್ನು ಆರಿಸಿ ವಿಧಾನಸಭೆ ಮತ್ತು ಲೋಕಸಭೆಗೆ ಕಳುಹಿಸುವ ಮತದಾರರು ಇನ್ನಾದರೂ ಜಾಗೃತರಾಗಿ ಮತ ಚಲಾಯಿಸಬೇಕಾಗಿದೆ.