ಫಲಿತಾಂಶ ಎಂದು?
ಮಾನ್ಯರೇ,
ಸ್ನಾತಕೋತ್ತರ ಪದವಿಗೆ ಆಯಾ ವಿಶ್ವವಿದ್ಯಾನಿಲಯಗಳಿಂದ ಪರೀಕ್ಷೆ ಮುಗಿದ ಕೂಡಲೇ ಫಲಿತಾಂಶ ಪ್ರಕಟ ಮಾಡಬೇಕು. ಇದರಿಂದ ಸ್ನಾತಕೋತ್ತರ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಸಹಾಯವಾಗುತ್ತದೆ. ಆದರೆ ಫಲಿತಾಂಶ ಪ್ರಕಟ ಮಾಡುವಲ್ಲಿ ವಿಶ್ವವಿದ್ಯಾನಿಲಯಗಳು ನಿಧಾನಗತಿ ತೋರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ.
ಪ್ರಸಕ್ತ ಮಂಗಳೂರು ವಿಶ್ವವಿದ್ಯಾಲಯ ಮಾತ್ರ ಸ್ನಾತಕೋತ್ತರದ ಪ್ರಥಮ, ದ್ವಿತೀಯ ಸೆಮಿಸ್ಟರ್ ಪರೀಕ್ಷೆ ಮುಗಿಸಿ, ತೃತೀಯ ಸೆಮಿಸ್ಟರ್ ತರಗತಿ ಆರಂಭ ಮಾಡಿದೆ, ಆದರೆ ಇನ್ನೂ ಪ್ರಥಮ, ದ್ವಿತೀಯ ಸೆಮಿಸ್ಟರ್ ಫಲಿತಾಂಶ ಪ್ರಕಟ ಮಾಡಿಲ್ಲ. ಅಲ್ಲದೆ, ಸ್ನಾತಕೋತ್ತರ ಕೊನೆಯ ಸೆಮಿಸ್ಟರ್‌ನಲ್ಲಿರುವವರು ಪರೀಕ್ಷೆ ಮುಗಿಸಿ, ಫಲಿತಾಂಶ ಸಿಗದ ಕಾರಣ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗದೆ ಎರಡು-ಮೂರು ತಿಂಗಳ ಕಾಲ ಕಾಲವ್ಯಯ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯ ಮಾತ್ರವಲ್ಲದೆ ರಾಜ್ಯದ ಕೆಲ ವಿಶ್ವವಿದ್ಯಾನಿಲಯಗಳು ಫಲಿತಾಂಶ ಪ್ರಕಟ ಮಾಡುವಲ್ಲಿ ವಿಳಂಬ ಮಾಡುತ್ತಿವೆ. ಆದರೆ ಏಡೆಡ್ ಕಾಲೇಜುಗಳು ಮಾತ್ರ ಕ್ರಮಬದ್ಧವಾಗಿ ಫಲಿತಾಂಶ ಪ್ರಕಟ ಮಾಡುತ್ತಿವೆ. ಒಂದೇ ಶೈಕ್ಷಣಿಕ ವರ್ಷದವರಾದರೂ ಏಡೆಡ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಕೆಲಸದ ಅವಕಾಶ ಸಿಗುತ್ತಿದೆ. ಹಾಗಾಗಿ ಸ್ನಾತಕೋತ್ತರ ಫಲಿತಾಂಶ ಬೇಗ ಪ್ರಕಟಿಸಬೇಕು. ಈ ಸಮಸ್ಯೆಯ ಬಗ್ಗೆ ಇನ್ನಾದರೂ ಶಿಕ್ಷಣ ಅಧಿಕಾರಿಗಳು ಗಮನಹರಿಸಬೇಕಾಗಿದೆ.