ಸರಕಾರಿ ಬಸ್ ಇಲ್ಲಿಗೇಕಿಲ್ಲ?
ಮಾನ್ಯರೇ,
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸೌಲಭ್ಯವನ್ನು ರಾಜ್ಯದ ಎಲ್ಲಾ ಪ್ರದೇಶಗಳಿಗೆ ವಿಸ್ತರಿಸುವುದರ ಮೂಲಕ ಜನರಿಗೆ ಸಾರಿಗೆ ಸೌಲಭ್ಯವನ್ನು ಒದಗಿಸುವುದೇ ಇಲಾಖೆಯ ಮುಖ್ಯ ಉದ್ದೇಶವೆಂಬುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ರಾಜ್ಯದಲ್ಲಿ ಪ್ರಸಿದ್ಧ ಆರಾಧನಾ ಕೇಂದ್ರಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಲಾಗಿದೆ. ಉಡುಪಿ ಜಿಲ್ಲೆಯ ಕೊಲ್ಲೂರು ದೇವಸ್ಥಾನ ಪ್ರಸಿದ್ಧವಾಗಿದ್ದು, ದಿನನಿತ್ಯ ಇಲ್ಲಿ ಸಾವಿರಾರು ಭಕ್ತರು ಸಂದರ್ಶಿಸುತ್ತಾರೆ. ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸೌಲಭ್ಯ ಅಲ್ಲಿಗೆ ಇಲ್ಲದಿರುವುದು ಆಶ್ಚರ್ಯಕರ. ಇಲ್ಲಿಗೆ ಕೇರಳ ರಸ್ತೆ ಸಾರಿಗೆ ನಿಗಮದ ಬಸ್ ಸೌಲಭ್ಯವಿದೆ. ಕರ್ನಾಟಕ ಸರಕಾರ ಈ ಬಗ್ಗೆ ಗಮನಹರಿಸದಂತಿರಲು ಯಾರ ಕ್ಯೆವಾಡವಿದೆ ಎಂಬುದು ತಿಳಿಯದಾಗಿದೆ. ಅಲ್ಲಿಗೆ ಸಂದರ್ಶಿಸುವ ರಾಜ್ಯದ ಹಿರಿಯ ನಾಗರಿಕರು ಸಾರಿಗೆ ಇಲಾಖೆಯ ರಿಯಾಯಿತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಸರಕಾರ ಇನ್ನಾದರೂ ಶೀಘ್ರ ಸಾರಿಗೆ ಸೌಲಭ್ಯದ ವ್ಯವಸ್ಥೆ ಮಾಡಬೇಕು.