ತೈಲಬೆಲೆಯಲ್ಲಿನ ಸ್ಥಿರತೆ ಮತ್ತು ಏರಿಕೆಯ ಹಿಂದೆ...
ಇತ್ತೀಚೆಗೆ ಇಂಧನ ಬೆಲೆಗಳನ್ನು ಹೆಚ್ಚು ನಿಯಂತ್ರಿಸಲಾಗಿದೆ ಮತ್ತು ಅದು ಕೂಡ ರಾಜಕೀಯ ಉದ್ದೇಶಗಳಿಗಾಗಿ ಎಂಬುದನ್ನು ಅಂಕಿಅಂಶಗಳೇ ತೋರಿಸುತ್ತವೆ. ಉದಾಹರಣೆಗೆ, ಎಪ್ರಿಲ್ 2019ರಲ್ಲಿ ಅರುಣಾಚಲ ಪ್ರದೇಶ, ಆಂಧ್ರಪ್ರದೇಶ ಮತ್ತು ಸಿಕ್ಕಿಂನಲ್ಲಿ ವಿಧಾನಸಭೆ ಚುನಾವಣೆಗೆ ಕೇವಲ ಐದು ದಿನಗಳವರೆಗೆ ಬೆಲೆಗಳನ್ನು ಬದಲಾಗದೆ ಇರಿಸಲಾಗಿತ್ತು. ನವೆಂಬರ್ 2020ರಲ್ಲಿ ಬಿಹಾರ ಚುನಾವಣೆಗಳು ನಡೆದಾಗ, ಮತದಾನದ ಕೊನೆಯ ದಿನಾಂಕದ ಮೊದಲು 51 ದಿನಗಳವರೆಗೆ ಬೆಲೆಗಳಲ್ಲಿ ಬದಲಾವಣೆ ಇರದಂತೆ ನೋಡಿಕೊಳ್ಳಲಾಗಿತ್ತು ಮತ್ತು ಎರಡು ವಾರಗಳ ನಂತರ ಬದಲಾವಣೆ ಶುರುವಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ, ಅಸೆಂಬ್ಲಿ ಚುನಾವಣೆಗೆ ವಾರಗಳ ಮೊದಲು ಇಂಧನ ಬೆಲೆಗಳು ಸ್ಥಿರವಾಗಿ ಇರುತ್ತದೆ. ನಂತರ ಶೀಘ್ರದಲ್ಲೇ ಏರಿಕೆ. ಅಷ್ಟಕ್ಕೂ ಇಂಧನ ಬೆಲೆಗಳನ್ನು ಯಾರು ನಿರ್ಧರಿಸುತ್ತಾರೆ? ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಏರುತ್ತಿರುವ ತೈಲ ಬೆಲೆಗಳ ಅರ್ಥವೇನೆಂದರೆ, ಮೋದಿ ಸರಕಾರವು 2017ರಲ್ಲಿ ಅಳವಡಿಸಿಕೊಂಡಿದ್ದ ಡೈನಾಮಿಕ್ ಬೆಲೆ ಸುಧಾರಣೆಯನ್ನು ಕೈಬಿಡುತ್ತಿದೆ ಮತ್ತು ಇಂಧನ ಬೆಲೆಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಿದೆ. ಅಸೆಂಬ್ಲಿ ಚುನಾವಣೆಗಳ ಮೊದಲು ವಾರಗಟ್ಟಲೆ ಮತ್ತು ಕೆಲವೊಮ್ಮೆ ತಿಂಗಳುಗಳವರೆಗೆ ಇಂಧನ ಬೆಲೆಗಳನ್ನು ಬದಲಾಗದಂತೆ ನೋಡಿಕೊಳ್ಳಲಾಗುತ್ತಿದೆ. ಚುನಾವಣೆ ಮುಗಿಯುತ್ತಲೇ ಮತ್ತೆ ಏರಿಕೆ ಶುರು. ಇಂಧನ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಕೋಶದ ಅಂಕಿಅಂಶಗಳು ಈ ವಿಚಾರವನ್ನು ಹೇಳುತ್ತವೆ.
ಇಂಧನ ಬೆಲೆ ನಿಗದಿಗೆ ನಿಖರವಾಗಿ ಯಾರು ಹೊಣೆ ಎಂಬ ಬಗ್ಗೆಯೂ ಸ್ಪಷ್ಟತೆ ಇದ್ದಂತಿಲ್ಲ. ಸಚಿವರು ಬೆಲೆ ನಿರ್ಧಾರಗಳನ್ನು ತೈಲ ಮಾರುಕಟ್ಟೆ ಕಂಪೆನಿಗಳು ಮಾಡುತ್ತವೆ ಎಂದು ಹೇಳಿದರೆ, ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನಂತಹ ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪೆನಿಯು ಬೆಲೆ ವಿಚಾರವೇನಿದ್ದರೂ ಪೆಟ್ರೋಲಿಯಂ ಸಚಿವಾಲಯ ಹೇಳಬೇಕು ಎನ್ನುತ್ತದೆ.
ಬೆಲೆ ನಿರ್ಧಾರಗಳಿಗೆ ಜವಾಬ್ದಾರರು ಯಾರೇ ಆಗಿರಲಿ, ದುಬಾರಿ ತೈಲವನ್ನು ಖರೀದಿಸುವ ಮತ್ತು ಅಗ್ಗದ ಬೆಲೆಗೆ ಇಂಧನವನ್ನು ಮಾರಾಟ ಮಾಡಬೇಕಾದ ತೈಲ ಮಾರುಕಟ್ಟೆ ಕಂಪೆನಿಗಳು ಭಾರವನ್ನು ಹೊರುತ್ತಿವೆ ಎಂಬುದು ಸ್ಪಷ್ಟ. ಸರಕಾರವು ಈ ಕಂಪೆನಿಗಳಿಗೆ ಕೊಡುವ ನೆರವು ತೆರಿಗೆದಾರರ ಮೇಲಿನ ಹೊರೆಯಾಗಿ ಬದಲಾಗುತ್ತದೆ ಅಥವಾ ತೈಲ ಮಾರುಕಟ್ಟೆ ಕಂಪೆನಿಗಳೇ ಸ್ವತಃ ನಷ್ಟ ಅನುಭವಿಸುತ್ತವೆ.
ಮತ್ತೊಂದು ವಿಚಾರವೆಂದರೆ, ಒಂದು ಹಂತದಲ್ಲಿ ತೈಲ ಬೆಲೆಗಳನ್ನು ಕಡಿಮೆ ಮಾಡಿದರೂ, ಇಂಧನ ಬೆಲೆಗಳು ಹೆಚ್ಚಾಗುವ ಹೊತ್ತಲ್ಲಿ ಈ ಕಂಪೆನಿಗಳು ತಮ್ಮ ನಷ್ಟವನ್ನು ತುಂಬಿಕೊಳ್ಳಲು ಸಾಧ್ಯ. ಹೆಚ್ಚಿದ ತೈಲ ಬೆಲೆಗಳು ಪೆಟ್ರೋಲ್ ಬೆಲೆ ನಿಯಂತ್ರಣಕ್ಕೆ ಕಾರಣವಾಗುತ್ತವೆ. ಜೂನ್ 2017ರಲ್ಲಿ, ಸರಕಾರವು ಪೆಟ್ರೋಲ್ ಮತ್ತು ಡೀಸೆಲ್‌ಗೆ ಡೈನಾಮಿಕ್ ಬೆಲೆ ವಿಧಾನವನ್ನು ಅಳವಡಿಸಿಕೊಂಡಿತು, ಇದು ಹಿಂದಿನ ಪಾಕ್ಷಿಕ ಪರಿಷ್ಕರಣೆಗಳ ವ್ಯವಸ್ಥೆಗೆ ವಿರುದ್ಧವಾಗಿ ಪ್ರತಿದಿನವೂ ಬೆಲೆಗಳಲ್ಲಿ ಬದಲಾವಣೆಗೆ ಕಾರಣವಾಯಿತು.
ಆ ಸಮಯದಲ್ಲಿ, ಈ ಕ್ರಮವನ್ನು ಆಗಿನ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಹಲವಾರು ಸಚಿವರು ಶ್ಲಾಘಿಸಿದರು, ಆದರೆ ಇದರ ಪ್ರಯೋಜನವೇನು ಎಂಬ ಗ್ರಾಹಕರ ಪ್ರಶ್ನೆಗೆ ಉತ್ತರಿಸಿದ ಪ್ರಧಾನ್, ‘‘ಪಾರದರ್ಶಕತೆ, ಬೆಲೆ ಏರಿಕೆಯಾದಾಗ ಹಠಾತ್ ಆಘಾತಗಳಿಂದ ರಕ್ಷಣೆ ಮತ್ತು ಬೆಲೆ ಕುಸಿದರೆ ಗ್ರಾಹಕರಿಗೆ ತಕ್ಷಣದ ಪರಿಹಾರವನ್ನು ಒಳಗೊಂಡಿರುತ್ತದೆ’’ ಎಂದು ವಿವರಿಸಿದ್ದರು.
2017ರ ಕ್ರಮದ ಅರ್ಥವೇನೆಂದರೆ, ಜಾಗತಿಕವಾಗಿ ತೈಲ ಬೆಲೆಯಲ್ಲಿನ ಬದಲಾವಣೆಗೆ ಪ್ರತಿಕ್ರಿಯೆಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತೀದಿನ ಬದಲಾಗುತ್ತವೆ. 2017ರಿಂದ ಶುರುವಾಗಿ ಆನಂತರ 2018 ಮತ್ತು 2019ರಲ್ಲಿ ಇದನ್ನು ಹೆಚ್ಚಾಗಿ ಅನುಸರಿಸಲಾಗಿದ್ದರೂ, ತೈಲ ಬೆಲೆಗಳ ಏರಿಕೆಯ ಅರ್ಥವು ಇಂಧನ ಬೆಲೆಗಳ ನಿಯಂತ್ರಣವು ಪ್ರಮುಖ ರಾಜಕೀಯ ತೀರ್ಮಾನವಾಗಿದೆ ಎನ್ನುವಂತಾದದ್ದು 2020ರಿಂದೀಚಿನ ವರ್ಷಗಳಲ್ಲಿ.
ಅರ್ಥಶಾಸ್ತ್ರಜ್ಞರ ಪ್ರಕಾರ, ಮೋದಿ ಸರಕಾರದ ಮೊದಲ ಅವಧಿಯಲ್ಲಿ ತೈಲ ಬೆಲೆಗಳು ಹೆಚ್ಚಾಗಿ ಒಂದು ಮಿತಿಯಲ್ಲಿಯೇ ಇದ್ದ ಕಾರಣ ಇಂಧನ ಬೆಲೆಗಳ ಮೇಲೆ ಯಾವುದೇ ರೀತಿಯ ನಿಯಂತ್ರಣದ ಅಗತ್ಯವಿರಲಿಲ್ಲ. ಮೊದಲ ಅವಧಿಯಲ್ಲಿ ತೈಲ ಬೆಲೆಗಳು ಕಡಿಮೆಯಾಗಿದ್ದವು ಮತ್ತು ಆದ್ದರಿಂದ ಪೆಟ್ರೋಲ್ ಬೆಲೆ ರಾಜಕೀಯ ಸಾಧನವಾಗಿರಲಿಲ್ಲ. ಪೆಟ್ರೋಲ್ ಬೆಲೆಗಳು ಮತದಾರರ ಮೇಲೆ ಪ್ರಭಾವ ಬೀರಲು ಬಳಕೆಯಾಗುವ ಸಾಧನವಾಗಿದ್ದು ಆನಂತರ.
ವಾಸ್ತವವಾಗಿ, ಎಪ್ರಿಲ್ 2019ರಿಂದ ಎಪ್ರಿಲ್ 2020ರ ಅವಧಿಯಲ್ಲಿ ತೈಲದ ಸರಾಸರಿ ಬೆಲೆಯಲ್ಲಿ ಇಳಿಕೆಯಾಗಿತ್ತು. ಈ ನಡುವೆ ಕೋವಿಡ್ ಪರಿಣಾಮವಾಗಿ ಉಂಟಾದ ಪೂರೈಕೆ ಅಡೆತಡೆಗಳು ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಪ್ರಾರಂಭವಾದ ರಶ್ಯ-ಉಕ್ರೇನ್ ಯುದ್ಧ ಇವೆಲ್ಲವುಗಳ ಪರಿಣಾಮವಾಗಿ ಎಪ್ರಿಲ್ 2020ರಿಂದ ಡಿಸೆಂಬರ್ 2022ರವರೆಗೆ ತೈಲದ ಸರಾಸರಿ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಕೆಯಾಯಿತು.
ಇತ್ತೀಚೆಗೆ ಇಂಧನ ಬೆಲೆಗಳನ್ನು ಹೆಚ್ಚು ನಿಯಂತ್ರಿಸಲಾಗಿದೆ ಮತ್ತು ಅದು ಕೂಡ ರಾಜಕೀಯ ಉದ್ದೇಶಗಳಿಗಾಗಿ ಎಂಬುದನ್ನು ಅಂಕಿಅಂಶಗಳೇ ತೋರಿಸುತ್ತವೆ. ಉದಾಹರಣೆಗೆ, ಎಪ್ರಿಲ್ 2019ರಲ್ಲಿ ಅರುಣಾಚಲ ಪ್ರದೇಶ, ಆಂಧ್ರಪ್ರದೇಶ ಮತ್ತು ಸಿಕ್ಕಿಂನಲ್ಲಿ ವಿಧಾನಸಭೆ ಚುನಾವಣೆಗೆ ಕೇವಲ ಐದು ದಿನಗಳವರೆಗೆ ಬೆಲೆಗಳನ್ನು ಬದಲಾಗದೆ ಇರಿಸಲಾಗಿತ್ತು.
ನವೆಂಬರ್ 2020ರಲ್ಲಿ ಬಿಹಾರ ಚುನಾವಣೆಗಳು ನಡೆದಾಗ, ಮತದಾನದ ಕೊನೆಯ ದಿನಾಂಕದ ಮೊದಲು 51 ದಿನಗಳವರೆಗೆ ಬೆಲೆಗಳಲ್ಲಿ ಬದಲಾವಣೆ ಇರದಂತೆ ನೋಡಿಕೊಳ್ಳಲಾಗಿತ್ತು ಮತ್ತು ಎರಡು ವಾರಗಳ ನಂತರ ಬದಲಾವಣೆ ಶುರುವಾಗಿತ್ತು.
2021ರಲ್ಲಿ ಪಶ್ಚಿಮ ಬಂಗಾಳದ ಚುನಾವಣೆಯ ಮೊದಲು, ಮತದಾನದ ಕೊನೆಯ ದಿನಾಂಕದ ಮೊದಲು 31 ದಿನಗಳ ಕಾಲ ಇಂಧನ ಬೆಲೆಗಳನ್ನು ಬದಲಾಗದಂತೆ ಇರಿಸಲಾಗಿತ್ತು ಮತ್ತು ಕೇವಲ ಐದು ದಿನಗಳ ನಂತರ ಬದಲಾಯಿಸಲಾಯಿತು.
ಈ ವರ್ಷ, ಏರುತ್ತಿರುವ ತೈಲ ಬೆಲೆಗಳಿಗೆ ಅನುಗುಣವಾಗಿ ಬದಲಾಗದ ಇಂಧನ ಬೆಲೆಗಳ ಅವಧಿಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. 2022ರ ಫೆಬ್ರವರಿ-ಮಾರ್ಚ್‌ನಲ್ಲಿ ಉತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್ ಮತ್ತು ಉತ್ತರಾಖಂಡ ಈ ಐದು ವಿಧಾನಸಭಾ ಚುನಾವಣೆಗಳಿಗೆ ಮೊದಲು, ಮತದಾನದ ಕೊನೆಯ ದಿನದ ಮೊದಲು ನಾಲ್ಕು ತಿಂಗಳವರೆಗೆ ಬೆಲೆಗಳನ್ನು ಬದಲಾಗದಂತೆ ಇರಿಸಲಾಗಿತ್ತು. ಗಮನಾರ್ಹವಾಗಿ, ಚುನಾವಣೆ ಮುಗಿದ ಎರಡು ವಾರಗಳ ನಂತರ ಬೆಲೆಗಳ ಪರಿಷ್ಕರಣೆ ಪುನರಾರಂಭವಾಯಿತು.
ಇತ್ತೀಚೆಗಷ್ಟೇ ಮುಗಿದ ಗುಜರಾತ್ ಚುನಾವಣೆಯ ವೇಳೆಯೂ ಇದೇ ಬಗೆಯಿತ್ತು. ಮತದಾನದ ಕೊನೆಯ ದಿನ ಅಂದರೆ ಡಿಸೆಂಬರ್ 5ಕ್ಕೆ ಮೊದಲು ಎಂಟು ತಿಂಗಳಿಗೂ ಹೆಚ್ಚು ಕಾಲ ಇಂಧನ ಬೆಲೆಗಳನ್ನು ಬದಲಿಸದೆ ಇರಿಸಲಾಗಿತ್ತು. ಈಗ ಚುನಾವಣೆ ಮುಗಿದ ನಂತರ ಬೆಲೆಗಳು ಎಷ್ಟು ದಿನ ಬದಲಾಗದೆ ಇರುತ್ತವೆ ಎಂಬುದನ್ನು ನೋಡಬೇಕಾಗಿದೆ.
ಚುನಾವಣೆಗಳು ಮುಗಿದ ನಂತರ ಬೇಗ ಬೆಲೆಗಳನ್ನು ಬದಲಾಯಿಸಲು ಕಾರಣವೇನು? ರಾಜಕೀಯ ಉದ್ದೇಶಗಳಿಗಾಗಿ ಹೀಗೆ ಮಾಡಲಾಗುತ್ತಿದೆಯೆ? ನಿಜವಾಗಿಯೂ ಹೀಗೆ ನಡೆಯುತ್ತದೆನ್ನುವುದರ ಅರ್ಥ, ಆಡಳಿತ ಪಕ್ಷಗಳು ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತವೆ ಎಂಬುದೇ ಆಗಿದೆ.
ದೇಶದಲ್ಲಿ ಇಂಧನದ ಬೆಲೆಯನ್ನು ಬದಲಾಯಿಸುವವರು ಯಾರು? ಸರಕಾರವೋ ಅಥವಾ ತೈಲ ಮಾರುಕಟ್ಟೆ ಕಂಪೆನಿಗಳೊ? ಇಂಧನ ಬೆಲೆಯ ಮೇಲೆ ಸರಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ ಎಂದು ಸಚಿವಾಲಯಗಳು ಪದೇ ಪದೇ ಹೇಳುತ್ತಿವೆ. ಅದು ತೈಲ ಮಾರುಕಟ್ಟೆ ಕಂಪೆನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಮತ್ತು ಇತರ ಹಲವಾರು ಕಂಪೆನಿಗಳ ಕೆಲಸ ಎನ್ನಲಾಗುತ್ತದೆ.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕಾರ್ಯವಿಧಾನದಲ್ಲಿ ಸರಕಾರ ಮಧ್ಯಪ್ರವೇಶಿಸುವುದಿಲ್ಲ. ಅದನ್ನು ತೈಲ ಕಂಪೆನಿಗಳಿಗೆ ದೈನಂದಿನ ಆಧಾರದ ಮೇಲೆ ನಿರ್ಧರಿಸಲು ಬಿಡಲಾಗಿದೆ ಎಂದು ಪೆಟ್ರೋಲಿಯಂ ಸಚಿವರಾಗಿದ್ದಾಗ, ಪ್ರಧಾನ್ ಹೇಳಿದ್ದರು. ತೀರಾ ಇತ್ತೀಚೆಗೆ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ತಾಂತ್ರಿಕವಾಗಿ, ತೈಲ ಬೆಲೆಗಳನ್ನು ಮುಕ್ತಗೊಳಿಸಲಾಗಿದೆ ಮತ್ತು ಸರಕಾರಕ್ಕೆ ಅದರ ಮೇಲೆ ಯಾವುದೇ ನಿಯಂತ್ರಣವಿಲ್ಲ ಎಂದು ಹೇಳಿದ್ದರು.
ಇದೇ ನಿಲುವನ್ನು ಈ ವರ್ಷವೂ ಸರಕಾರ ದೃಢಪಡಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ತೈಲ ಕಂಪೆನಿಗಳು ಬೆಲೆಗಳನ್ನು ನಿರ್ಧರಿಸುತ್ತವೆ ಎಂದು ಪ್ರತಿಪಾದಿಸಿದ್ದರು.
ಆದರೆ, ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ವಕ್ತಾರರ ಪ್ರಕಾರ, ಬೆಲೆ ಮತ್ತು ಇತರ ಸೂಕ್ಷ್ಮ ವಿಷಯಗಳು ಪೆಟ್ರೋಲಿಯಂ ಸಚಿವಾಲಯಕ್ಕೆ ಸಂಬಂಧಿಸಿದ್ದು. ಇಂಧನ ಬೆಲೆಗಳಲ್ಲಿ ಏರಿಳಿತಗಳಾದಾಗ ಅವುಗಳ ನಡುವಿನ ವ್ಯತ್ಯಾಸವನ್ನು ತೈಲ ಮಾರುಕಟ್ಟೆ ಕಂಪೆನಿಗಳು ಭರಿಸುತ್ತವೆ.
ಅಂದರೆ, ಅವು ದುಬಾರಿ ತೈಲವನ್ನು ಖರೀದಿಸುವ ಮತ್ತು ಕಡಿಮೆ ಬೆಲೆಗೆ ಇಂಧನವನ್ನು ಮಾರಾಟ ಮಾಡುವ ಪ್ರಮೇಯವಿರುತ್ತದೆ. ಆದ್ದರಿಂದ ಆ ನಷ್ಟದ ಭಾರವನ್ನು ಹೊರಬೇಕಾಗುತ್ತದೆ. ಈ ವ್ಯತ್ಯಾಸವನ್ನು ‘ಅಂಡರ್-ರಿಕವರಿ’ ಎಂದು ಉಲ್ಲೇಖಿಸಲಾಗುತ್ತದೆ. ಈ ಹಣಕಾಸು ವರ್ಷದ ಸೆಪ್ಟಂಬರ್ ತ್ರೈಮಾಸಿಕದಲ್ಲಿ 3,805.73 ಕೋಟಿ ರೂ.ಗಳ ಏಕೀಕೃತ ನಷ್ಟವನ್ನು ತೈಲ ಮಾರುಕಟ್ಟೆ ಕಂಪೆನಿಗಳು ವರದಿ ಮಾಡಿವೆ.
ಈ ಅಂಡರ್-ರಿಕವರಿಗಳ ಮತ್ತೊಂದು ಪರಿಣಾಮವೆಂದರೆ ತೈಲ ಬೆಲೆಗಳು ಕಡಿಮೆಯಾಗುತ್ತಿದ್ದರೂ ಇಂಧನ ಬೆಲೆಗಳು ಕಡಿಮೆಯಾಗುವ ಸಾಧ್ಯತೆಯಿಲ್ಲ, ಏಕೆಂದರೆ ತೈಲ ಮಾರುಕಟ್ಟೆ ಕಂಪೆನಿಗಳು ಈಗ ತಮ್ಮ ಹಿಂದಿನ ನಷ್ಟವನ್ನು ಸರಿದೂಗಿಸಲು ಈ ಅವಧಿಯನ್ನು ಬಳಸುತ್ತವೆ.
ಮೂರು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪೆನಿಗಳಿಗೆ ಒಂದು ಬಾರಿ 22,000 ಕೋಟಿ ರೂ.ಗಳ ಅನುದಾನವನ್ನು ನೀಡಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಸ್ತಾವವನ್ನು ಕೇಂದ್ರ ಕ್ಯಾಬಿನೆಟ್ ಅಕ್ಟೋಬರ್‌ನಲ್ಲಿ ಅನುಮೋದಿಸಿತು.
ಆ ಅನುದಾನವು ತೈಲ ಮಾರುಕಟ್ಟೆ ಕಂಪೆನಿಗಳು ಎಲ್‌ಪಿಜಿ ಮಾರಾಟದಲ್ಲಿ ಮಾಡಿದ ಅಂಡರ್-ರಿಕವರಿಗಳನ್ನು ಮರುಪಡೆಯಲು ಸಹಾಯ ಮಾಡಿದ್ದರೆ, ಪೆಟ್ರೋಲಿಯಂ ಸಚಿವಾಲಯವು ತೈಲ ಮಾರುಕಟ್ಟೆ ಕಂಪೆನಿಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿನ ಕಡಿಮೆ ಚೇತರಿಕೆಗಳನ್ನು ಸರಿದೂಗಿಸಲು ಹೆಚ್ಚುವರಿ ಹಣವನ್ನು ನೀಡುತ್ತದೆ. ಕಂಪೆನಿಗಳು ನಷ್ಟ ಅನುಭವಿಸುತ್ತಿದ್ದರೂ, ತೈಲ ಬೆಲೆಗಳಲ್ಲಿನ ಟ್ರೆಂಡ್ ಏರಿದಂತೇನೂ ಕಾಣಿಸುವುದಿಲ್ಲ. ಟ್ರೆಂಡನ್ನು ಬೆಲೆಗಳಲ್ಲಿ ಪ್ರತಿಬಿಂಬಿಸಲು ಅನುಮತಿಸುವ ಮೊದಲು ಕಂಪೆನಿಗಳು ನಷ್ಟದಲ್ಲಿ ಚೇತರಿಸಿಕೊಳ್ಳುತ್ತವೆ.
(ಆಧಾರ: ThePrint)