ಟ್ರಾಫಿಕ್ ನಿಯಂತ್ರಿಸಲು ಐಟಿಎಂಎಸ್ ತಂತ್ರಜ್ಞಾನ
ವೇಗವಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಹಲವು ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಇಂತಹ ಹಲವಾರು ಸಮಸ್ಯೆ ಹಾಗೂ ಸವಾಲುಗಳನ್ನು ಬಗೆಹರಿಸುವಲ್ಲಿ ಪೊಲೀಸರ ಪಾತ್ರ ದೊಡ್ದದು. ತಮ್ಮ ಆತ್ಮರಕ್ಷಣೆಯನ್ನು ಬದಿಗಿಟ್ಟು ಸಾರ್ವಜನಿಕರ ರಕ್ಷಣೆಗೆ ಮುಂದಾಗುವ ಪೊಲೀಸರ ಸೇವೆ ಶ್ಲಾಘನೀಯ.
ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಟ್ರಾಫಿಕ್ ಜಾಮ್ ಬಹಳ ದೊಡ್ಡ ಸಮಸ್ಯೆಯಾಗಿದೆ. ಅದನ್ನು ನಿಯಂತ್ರಿಸಲು ಪೊಲೀಸರು ದಿನನಿತ್ಯ ಹರಸಾಹಸ ಪಡುತ್ತಾರೆ. ಹಾಗಾಗಿ ಈಗ ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಸಂಚಾರಿ ಪೊಲೀಸರು ಐಟಿಎಂಎಸ್ ಎಂಬ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಸಾಕಷ್ಟು ಕಡಿಮೆಯಾಗುತ್ತಿದೆ. ಐಟಿಎಂಎಸ್ ಎಂದರೆ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್.
ಇದು ಅತ್ಯಾಧುನಿಕ ಕ್ಯಾಮರಾ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಕಣ್ಣಿಡಲು ಸಂಚಾರಿ ಪೊಲೀಸರು ಮಾಡಿರುವ ಹೊಸ ಪ್ರಯತ್ನದಿಂದಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿ ಓಡಾಡುವ ವಾಹನ ಸವಾರರ ಮನೆ ಬಾಗಿಲಿಗೆ ದಂಡದ ರಶೀದಿ ಬರುವಂತಾಗಿದೆ. ಇದು ದೇಶದಲ್ಲೇ ಮೊದಲ ಬಾರಿ ಬೆಂಗಳೂರು ಸಂಚಾರಿ ಪೊಲೀಸರು ಮಾಡಿರುವ ಪ್ರಯತ್ನವಾಗಿದ್ದು, ಇದರಿಂದ ವೇಗದ ಮಿತಿ, ರೆಡ್ ಲೈಟ್ ವೈಲೇಷನ್, ಸ್ಟಾಪ್ ಲೈನ್ ಉಲ್ಲಂಘನೆ, ಹೆಲ್ಮೆಟ್ ರಹಿತ ಚಾಲನೆ, ತ್ರಿಬಲ್ ರೈಡಿಂಗ್, ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಹಾಕದಿರುವುದು ಕ್ಯಾಮರಾ ಮುಖಾಂತರ ತಿಳಿಯುತ್ತದೆ.
ರಾತ್ರಿ ಸಮಯದಲ್ಲೂ ಕೂಡ ಅದು ಕಾರ್ಯನಿರ್ವಹಿಸುತ್ತದೆ. ಮೊಬೈಲ್ ಕ್ಯೂಆರ್ ಕೋಡ್ ಮೂಲಕ ದಂಡ ಕಟ್ಟಬೇಕಾಗುತ್ತದೆ. ದಂಡ ಕಟ್ಟದೆ ಇದ್ದರೆ 24 ಗಂಟೆಗಳಲ್ಲಿ ಮನೆ ಬಾಗಿಲಿಗೆ ನೋಟಿಸ್ ಸಹ ಬರಲಿದೆ. ಅದನ್ನೂ ಲೆಕ್ಕಿಸದೆ ಇದ್ದರೆ ವಿಮೆ ಅಥವಾ ಎಫ್‌ಸಿ ಮಾಡಿಸಲು ಹೋದಾಗ ದಂಡವನ್ನು ಕಡ್ಡಾಯವಾಗಿ ಕಟ್ಟಬೇಕು ಎಂಬ ನಿಯಮ ಇದೆ. ಇಂತಹ ಕಠಿಣ ನಿಯಮದಿಂದಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಲು ವಾಹನ ಸವಾರರು ಹಿಂದೇಟು ಹಾಕುತ್ತಾರೆ.
ರಾಜ್ಯದ ರಾಜಧಾನಿ ಮತ್ತು ದೇಶದ ಪ್ರಮುಖ ನಗರಗಳಲ್ಲೊಂದಾದ ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಲು ಆಧುನಿಕ ತಂತ್ರಜ್ಞಾನ ಬಳಕೆಗೆ ಮುಂದಾಗಿದ್ದು ಉತ್ತಮ ನಿರ್ಧಾರ. ಹಾಗೆಯೇ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲೂ ಕೂಡಾ ಈ ತಂತ್ರಜ್ಞಾನ ಬಳಸಿ ಸಂಚಾರಿ ನಿಯಮ ಉಲ್ಲಂಘನೆ ತಡೆಗಟ್ಟಬಹುದು. ಇಂತಹ ಪ್ರಯತ್ನಗಳಿಂದ ಸುಗಮ ಸಂಚಾರ ಸಾಧ್ಯ ಹಾಗೂ ಅಪಘಾತಗಳನ್ನೂ ತಡೆಯಲು ಸಾಧ್ಯ. ಆದುದರಿಂದ ಸರಕಾರ ಜಿಲ್ಲಾ ಕೇಂದ್ರಗಳಲ್ಲೂ ಕೂಡಾ ಐಟಿಎಂಎಸ್ ತಂತ್ರಜ್ಞಾನ ಬಳಸಿ ಸಂಚಾರಿ ನಿಯಮ ಉಲ್ಲಂಘನೆ ತಡೆಯಲು ಕ್ರಮಕೈಗೊಳ್ಳಲಿ.