ಕೋಟಿ ಉದ್ಯೋಗಗಳ ಭರವಸೆ ಎಲ್ಲಿಗೆ ಹೋಯಿತು?

ಕೋಟಿ ಉದ್ಯೋಗಗಳು ಬಿಡಿ; ಇರುವ ಉದ್ಯೋಗಗಳಲ್ಲೂ ಕಡಿತ

Update: 2022-12-16 06:59 GMT

ವರ್ಷವೂ ಕೋಟಿ ಕೋಟಿ ಉದ್ಯೋಗ ಸೃಷ್ಟಿಯ ಮಾತಾಡುತ್ತ ಅಧಿಕಾರಕ್ಕೇರಿದ್ದ ಮೋದಿ ಭರವಸೆ ಏನಾಗಿದೆ ಎಂಬುದು ಗೊತ್ತಿರದ ವಿಚಾರವೇನಲ್ಲ. ಈಗ ಅದು ಎಲ್ಲಿಗೆ ಬಂದಿದೆಯೆಂದರೆ, ಖಾಲಿಯಿರುವ ಹುದ್ದೆಗಳನ್ನೂ ಭರ್ತಿ ಮಾಡುತ್ತಿಲ್ಲ. ಸದ್ಯದ ಸರಕಾರದ್ದೇ ಅಂಕಿ ಅಂಶದ ಪ್ರಕಾರ, ಹತ್ತಿರ ಹತ್ತಿರ ಹತ್ತು ಲಕ್ಷ ಹುದ್ದೆಗಳು ಖಾಲಿಯಿವೆ. ಭರ್ತಿ ಮಾಡಲಾಗುತ್ತದೆ ಎಂಬ ಭರವಸೆಯನ್ನೂ ಕೊಡಲಾಗುತ್ತಿದೆ.

ಬುಧವಾರ ಸಿಬ್ಬಂದಿ ಸಚಿವಾಲಯವು ಲೋಕಸಭೆಗೆ ಕೊಟ್ಟಿರುವ ಮಾಹಿತಿಯ ಪ್ರಕಾರ, ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಹುದ್ದೆಗಳು ಖಾಲಿ ಇವೆ. ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಉಲ್ಲೇಖದಂತೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು 9 ಲಕ್ಷ 79 ಸಾವಿರದ 327 ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಖಾಲಿ ಹುದ್ದೆಗಳನ್ನು ಸಕಾಲಕ್ಕೆ ಭರ್ತಿ ಮಾಡಲು ಸೂಚಿಸಲಾಗಿದೆ ಎಂದೂ ಅವರು ಮಾಹಿತಿ ಕೊಟ್ಟಿದ್ದಾರೆ.

ಸರಕಾರದ್ದೇ ಅಂಕಿಅಂಶಗಳು ತಿಳಿಸುವಂತೆ, ಮಂಜೂರಾದ 40.35 ಲಕ್ಷ ಹುದ್ದೆಗಳ ಪೈಕಿ ಕೇಂದ್ರ ಸರಕಾರದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಕೇವಲ 30.55 ಲಕ್ಷ ಉದ್ಯೋಗಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ರೈಲ್ವೆ ಸಚಿವಾಲಯದಲ್ಲಿ 2.94 ಲಕ್ಷ, ನಾಗರಿಕ ರಕ್ಷಣಾ ಇಲಾಖೆಯಲ್ಲಿ 2.64 ಲಕ್ಷ, ಗೃಹ ಸಚಿವಾಲಯದಲ್ಲಿ 1.4 ಲಕ್ಷ, ಅಂಚೆ ಇಲಾಖೆಯಲ್ಲಿ ಸುಮಾರು 90,000 ಹುದ್ದೆಗಳು ಮತ್ತು ಕಂದಾಯ ಇಲಾಖೆಯಲ್ಲಿ 80,000 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಐಎಎಸ್ ಹುದ್ದೆಗಳೇ 1,472ರಷ್ಟಿವೆ. ಅಧಿಕಾರಕ್ಕೆ ಬರುವ ಹೊತ್ತಲ್ಲಿ ಮೋದಿ ಹೇಳಿದ್ದು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು. ಆದರೆ, ಹಾಗೆ ಭರವಸೆ ನೀಡಿದ್ದ ಸರಕಾರ ಉದ್ಯೋಗ ಸೃಷ್ಟಿಸುವ ಮಾತು ಹಾಗಿರಲಿ, ಇರುವ ಉದ್ಯೋಗಗಳನ್ನೂ ಕಡಿತ ಮಾಡಿದೆ ಎಂದು ಪ್ರತಿಪಕ್ಷಗಳು ಹೇಳುತ್ತಲೇ ಬಂದಿವೆ. ತಾನು ಕೊಟ್ಟಿದ್ದ ಭರವಸೆಯ ಬಗ್ಗೆ ತುಟಿ ಬಿಚ್ಚದೆ ಜಾಣ ಮೌನ ತೋರಿಸುವ ಸರಕಾರ ಯಾವಾಗಲೋ ಒಮ್ಮೆ ನೀಡುತ್ತಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಗಿಟ್ಟಿಸುವುದನ್ನು ಮಾತ್ರ ಮರೆಯುವುದಿಲ್ಲ. ಇತ್ತೀಚೆಗೆ ರೋಜ್‌ಗಾರ್ ಮೇಳದ ಭಾಗವಾಗಿ ಪ್ರಧಾನಿ ವೀಡಿಯೊ ಕಾನ್ಫರೆನ್ಸ್ ಮೂಲಕ 71 ಸಾವಿರಕ್ಕೂ ಅಧಿಕ ಮಂದಿ ಹೊಸ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡಿದ್ದಕ್ಕೂ ಅದೇ ರೀತಿಯ ಪ್ರಚಾರ ಸಿಕ್ಕಿತ್ತು. ಕೇಂದ್ರ ಸರಕಾರದ ಉದ್ಯೋಗ ಸೃಷ್ಟಿಯ ಆದ್ಯತೆಯ ಮೇರೆಗೆ ತನ್ನ ಬದ್ಧತೆಯನ್ನು ಈಡೇರಿಸಲು ಈ ಅಭಿಯಾನ ಎಂದೆಲ್ಲ ಪ್ರಧಾನಿ ಕಚೇರಿ ಹೇಳಿಕೊಂಡಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗ ಮತ್ತು ಯುವಜನತೆಗೆ ಉತ್ತಮ ಅವಕಾಶ ಒದಗಿಸುವಲ್ಲಿ ದೇಶದ ಬೆಳವಣಿಗೆಯಲ್ಲಿ ನೇರವಾಗಿ ಭಾಗಿಯಾಗಲು, ಯುವಶಕ್ತಿಯನ್ನು ಸಶಕ್ತೀಕರಣಗೊಳಿಸಲು ಇದು ಸಹಾಯವಾಗಲಿದೆ ಎಂಬ ದೊಡ್ಡ ದೊಡ್ಡ ಮಾತುಗಳೂ ಹೇಳಿಕೆಯಲ್ಲಿದ್ದವು. ಇದರ ನಡುವೆಯೇ, 2023ರ ಅಂತ್ಯದ ವೇಳೆಗೆ ಕೇಂದ್ರ ಸರಕಾರದ ಖಾಲಿ ಇರುವ ಎಲ್ಲಾ 10 ಲಕ್ಷ ಹುದ್ದೆಗಳನ್ನು ತುಂಬುವ ಯೋಜನೆಯನ್ನು ಕೂಡ ಘೋಷಿಸಲಾಗಿದೆ. ಮುಂದಿನ ವರ್ಷದ ಅಂತ್ಯದ ವೇಳೆಗೆ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಗುರಿಯನ್ನು ತಲುಪಲು ಕೇಂದ್ರ ಸರಕಾರ 5 ಅಂಶಗಳ ಯೋಜನೆಯನ್ನು ಹಾಕಿಕೊಂಡಿದೆ. ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದೆಲ್ಲ ಹೇಳಲಾಗುತ್ತಿದೆ. ಚುನಾವಣೆಗಳು ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಮತ್ತೆ ಭರವಸೆಗಳನ್ನು ಕೊಡುತ್ತ, ಆಸೆ ಹುಟ್ಟಿಸುವ ತಂತ್ರದಂತೆಯೇ ಇದು ಕಾಣಿಸುತ್ತಿದೆ. ಇನ್ನೊಂದೆಡೆಯಿಂದ, ಸಚಿವರ ಮೂಲಕ ತುತ್ತೂರಿ ಊದಿಸುವ ಕೆಲಸವೂ ವ್ಯವಸ್ಥಿತವಾಗಿಯೇ ನಡೆಯುತ್ತದೆ. ಮೋದಿ ನೇತೃತ್ವದಲ್ಲಿ ಪ್ರತೀ ತಿಂಗಳೂ ಕೇಂದ್ರ ಸರಕಾರದಿಂದ 16 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆ ಕೊಡುತ್ತಾರೆ. ಹೀಗೆ ಯಾವ ದಾಕ್ಷಿಣ್ಯವೂ ಇಲ್ಲದೆ ಮಾತಾಡುವ, ಭರವಸೆಗಳ ಮೇಲೆ ಭರವಸೆಗಳನ್ನು ಕೊಡುತ್ತಲೇ ಇರುವ ಸರಕಾರ ನಿಜವಾಗಿಯೂ ಏನು ಮಾಡಿದೆ ಎಂಬುದು, ಅದರ ಖಾಲಿಯಿರುವ ಹುದ್ದೆಗಳ ಸಂಖ್ಯೆಯೇ ಹೇಳುತ್ತಿದೆ.
ವರ್ಷಕ್ಕೆ 2 ಕೋಟಿ ಉದ್ಯೋಗಗಳು, ತಿಂಗಳಿಗೆ 16 ಲಕ್ಷ ಉದ್ಯೋಗಗಳು. ಹಾಗಾದರೆ ಉದ್ಯೋಗಗಳು ಎಲ್ಲಿವೆ? ಯುವ ಜನತೆಯೇಕೆ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ? ಈ ದೇಶದ ಕೋಟಿಗಟ್ಟಲೆ ಯುವಕರು ಮೋದಿ ಸರಕಾರವನ್ನು ಬೆಂಬಲಿಸಿದ್ದರು. ಆದರೆ, ಅವರಲ್ಲಿ ಆಸೆ ಮೂಡಿಸಿದ್ದ ಕೋಟಿ ಸಂಖ್ಯೆಯ ಉದ್ಯೋಗಗಳು ಮಾತಿನಲ್ಲಿ ಮಾತ್ರ ಉಳಿದವೆ? ಮೋದಿಯವರನ್ನು ಬೆಂಬಲಿಸುವ ಈ ಕೋಟ್ಯಂತರ ಯುವಕರಿಗೆ ಮೋದಿ ಸರಕಾರ ಏನನ್ನು ಕೊಟ್ಟಿದೆ? ಉದ್ಯೋಗ ನೀಡಲಾರದ ಸರಕಾರ, ಧರ್ಮದ ಹೆಸರಿನ ದ್ವೇಷಭಾವನೆಯನ್ನು ಅವರಲ್ಲಿ ತುಂಬಿ, ಹೊಡೆದಾಡಲು ಹಚ್ಚಿದೆ ಮತ್ತು ಅವರು ಅದೇ ಅಮಲಿನಲ್ಲಿ ಇರುವಂತೆ ಮಾಡಿದೆ. ಅವರನ್ನು ನಿರಂತರವಾಗಿ ಆ ಸ್ಥಿತಿಯಲ್ಲಿಯೇ ಇಡಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪ ಸುಳ್ಳೇ?.
ಪ್ರತಿಪಕ್ಷಗಳು ಹೇಳುವಂತೆ ಕಳೆದ ಎಂಟು ವರ್ಷಗಳಲ್ಲಿ ನಿರುದ್ಯೋಗಿ ಯುವಕರಿಗೆ ಈ ಸರಕಾರ ನರಕ ತೋರಿಸಿದೆ. ಇಂಜಿನಿಯರಿಂಗ್ ಮೊದಲಾದ ಪದವಿ ಮುಗಿಸಿದ, ಸ್ನಾತಕೋತ್ತರ ಪದವಿ ಪಡೆದ ಕೋಟಿಗಟ್ಟಲೆ ಯುವಕರು ರೂ. 8-10 ಸಾವಿರಕ್ಕೆ ದುಡಿಯಬೇಕಾದ ಸ್ಥಿತಿಯನ್ನು ಈ ಸರಕಾರ ತಂದಿಟ್ಟಿದೆ.
ಒಂದು ಕಾಲದಲ್ಲಿ ಪ್ರತಿಭಾ ಪಲಾಯನದ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿ, ತಾನು ಅಧಿಕಾರಕ್ಕೆ ಬಂದ ಮೇಲೆ ಏನು ಮಾಡಿದೆ ಎಂದು ನೋಡಿಕೊಂಡರೆ ಅದಕ್ಕೇ ಗೊತ್ತಾಗುತ್ತದೆ. 2014ರಿಂದ 2021ರ ಅವಧಿಯಲ್ಲಿ 8 ಲಕ್ಷ ಭಾರತೀಯರು ನಾಗರಿಕತ್ವವನ್ನೇ ತೊರೆದು ಬೇರೆ ದೇಶಗಳಿಗೆ ಹೋಗಿ ನೆಲೆಸಿದ್ದಾರೆ. ಅದರಲ್ಲೂ ಬಾಹ್ಯಾಕಾಶದಂಥ ಕ್ಷೇತ್ರದಲ್ಲಿನ ಬುದ್ಧಿವಂತ ಯುವಕರು ಉದ್ಯೋಗ ಹುಡುಕಿ ಬೇರೆ ದೇಶಗಳಿಗೆ ಹೋಗುವಂತಾಗಿದೆ.
ಭಾರತದಲ್ಲಿ 25 ವರ್ಷದೊಳಗಿನ ಯುವಕರ ಸಂಖ್ಯೆ ಶೇ.50ರಷ್ಟಿದೆ. ಆದರೆ ಏರುತ್ತಿರುವ ನಿರುದ್ಯೋಗದಿಂದಾಗಿ ಈ ಯುವಕರು ಬದುಕು ಕಟ್ಟಿಕೊಳ್ಳುವ ಅವಕಾಶ ಶೇ.75ರಷ್ಟು ಕುಸಿದು ಹೋಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಹೇಳಿದ್ದರು. ಉದ್ಯೋಗಕ್ಕೆ ಕಾಯುತ್ತಲೇ ಯುವಕರಿಗೆ ವಯಸ್ಸಾಗುತ್ತಿದೆ ಎಂಬುದು ನಿಜ.
ಈಗ ಶೇ. 50ರಷ್ಟು ಯುವಕರನ್ನು ಹೊಂದಿರುವ ದೇಶ, ಇನ್ನು 15 ವರ್ಷಗಳಲ್ಲಿ ವಯಸ್ಕರ ದೇಶವಾಗುತ್ತದೆ. ದುಡಿಮೆಯ ಶಕ್ತಿ ಇಲ್ಲವಾಗುತ್ತದೆ. ಮೋದಿಯವರ ವಾರ್ಷಿಕ 2 ಕೋಟಿ ಉದ್ಯೋಗಗಳ ಭರವಸೆ ಹಾಗೇ ಉಳಿದಿದೆ. 2020ರಲ್ಲಿ ಒಂದೇ ವರ್ಷದಲ್ಲಿ 11,716 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್‌ಸಿಆರ್‌ಬಿ ದಾಖಲೆಯ ಪ್ರಕಾರ, ಹೀಗೆ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಗಳಲ್ಲಿ ಕರ್ನಾಟಕದ ಉದ್ಯಮಿಗಳು 1,772.
ದೇಶದಲ್ಲಿ 60 ಲಕ್ಷ ಎಂಎಸ್‌ಎಂಇಗಳನ್ನು ಮುಚ್ಚಲಾಗಿದೆ. ಈ ವಲಯಗಳಲ್ಲಿ ಮುಂಚೆ 10 ಕೋಟಿ ಕೆಲಸಗಾರರಿದ್ದರು. ಈಗ ಅವರ ಸಂಖ್ಯೆ ಬರೀ 2.5 ಕೋಟಿ ಮಾತ್ರ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದವರು ಇಲ್ಲಿಯವರೆಗೆ 16 ಕೋಟಿ ಉದ್ಯೋಗಗಳನ್ನು ಕೊಡಬೇಕಿತ್ತು. ವಿಪರ್ಯಾಸವೆಂದರೆ, ಇರುವ ಉದ್ಯೋಗಗಳೂ ಇಲ್ಲವಾಗುತ್ತಿವೆ.
ಇನ್ನೊಂದೆಡೆ ಹಲವಾರು ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ ಇಲ್ಲವೆ ಮುಚ್ಚಲಾಗುತ್ತಿದೆ. ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದವರ ಸಂಖ್ಯೆಯಲ್ಲಿ ಲಕ್ಷಗಟ್ಟಲೆ ಇಳಿಕೆಯಾಗಿದೆ.
ದೇಶದ ದಮನಿತ ವರ್ಗದವರ ಪಾಲಿಗೂ ಉದ್ಯೋಗಗಳು ಇಲ್ಲವಾಗಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೇಶದಲ್ಲಿ ಬ್ಯಾಕ್‌ಲಾಗ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಇಲ್ಲವಾಗಿಸಿದೆ ಎಂಬುದು ನ್ಯಾ.ಎಚ್. ಎನ್. ನಾಗಮೋಹನ್ ದಾಸ್ ಆಯೋಗದ ಆಕ್ಷೇಪ. ಕೇಂದ್ರ ಸರಕಾರ, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ದೇಶದ ಎಲ್ಲಾ ರಾಜ್ಯ ಸರಕಾರಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಕರ್ನಾಟಕದಲ್ಲಿಯೇ 2.39 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಆಯೋಗವು ಹೇಳುತ್ತಿದೆ. ಈ ಎಲ್ಲಾ 60 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ 15 ಲಕ್ಷ ಉದ್ಯೋಗಗಳು ಸಿಗುತ್ತವೆ ಎನ್ನುತ್ತದೆ ಆ ವರದಿ.
ಹೀಗೆ ದೇಶದಲ್ಲಿ ಉದ್ಯೋಗಾವಕಾಶಗಳು ಇಲ್ಲವಾಗಿವೆ. ಇರುವ ಹುದ್ದೆಗಳೂ ಖಾಲಿ ಇವೆ. ಮತ್ತೆ ಚುನಾವಣೆಗಳು ಬರುತ್ತಿರುವ ಹೊತ್ತಲ್ಲಿ ಉದ್ಯೋಗಗಳ ಭರವಸೆಯನ್ನೇ ಮುಂದೆ ಮಾಡಲಾಗುತ್ತಿದೆ. ಒಮ್ಮೆ ಚುನಾವಣೆಗಳು ಮುಗಿದುಹೋದರೆ ಆಗುವುದೇನು ಎಂಬುದನ್ನು ಊಹಿಸುವುದು ಕಷ್ಟವಲ್ಲ.

Similar News