ಅಭಿವೃದ್ಧಿ ಕಾಣದ ಬಿ.ಡಿ.ಎ. ಬಡಾವಣೆಗಳು
ಮಾನ್ಯರೇ,
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ, ಅಭಿವೃದ್ಧಿಪಡಿಸಿರುವ ಅನೇಕ ಬಡಾವಣೆಗಳಲ್ಲಿ ಇಂದಿಗೂ ಯಾವುದೇ ರೀತಿಯ ಅಭಿವೃದ್ಧಿಯಾಗಿರುವುದಿಲ್ಲ. ನಿವೇಶನಗಳನ್ನು ಪಡೆದವರು ಮೂಲಭೂತ ಸೌಕರ್ಯ, ಸೌಲಭ್ಯಗಳ ಕೊರತೆಯಿಂದ ಮನೆಗಳನ್ನು ನಿರ್ಮಿಸಿರುವುದಿಲ್ಲ. ಹಲವಾರು ಬಡಾವಣೆಗಳಲ್ಲಿ ನಿವೇಶನಗಳು ಗಿಡ ಮತ್ತು ಪಾರ್ತೇನಿಯಂ ತಳಿಗಳಿಂದ ತುಂಬಿ ತುಳುಕುತ್ತಿವೆ. ಜಾಲಿಮುಳ್ಳಿನ ಮರಗಳು ಮುಗಿಲೆತ್ತರಕ್ಕೆ ಬೆಳೆದು ನಿಂತಿವೆ. ಇದಕ್ಕೆಲ್ಲಾ ಕಾರಣ ನಿವೇಶನಗಳಿಗೆ ನಿಗದಿಪಡಿಸುವ ಗುತ್ತಿಗೆ ಅವಧಿಯೇ ಪ್ರಮುಖವಾಗಿರುತ್ತದೆ.
ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬನಶಂಕರಿ, ವಿಶ್ವೇಶ್ವರ ಬಡಾವಣೆ ಮತ್ತು ನಾಗರಭಾವಿ ಭಾಗದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿಕೊಟ್ಟರು. ಇವರ ಕಾಲದಲ್ಲಿ ಗುತ್ತಿಗೆ ಪದ್ಧತಿ ಇಲ್ಲದೇ ಇದ್ದ ಕಾರಣದಿಂದ ನಿವೇಶನಗಳ ಕೈಬದಲಾವಣೆಗಳಾಗಿ ಮೇಲಿಂದ ಮೇಲೆ ಮನೆಗಳನ್ನು ಅನೇಕರು ಕಟ್ಟುತ್ತಾ ಅತೀ ಕಡಿಮೆ ಅವಧಿಯಲ್ಲಿ ಬಡಾವಣೆ ಅಭಿವೃದ್ಧಿಯಾಗಿರುತ್ತದೆ. ಕೆಲವು ಪ್ರದೇಶಗಳು ಬಿಬಿಎಂಪಿಗೆ ಹಸ್ತಾಂತರವಾಗಿ ತೆರಿಗೆಯು ಪಾವತಿಯಾಗುತ್ತಿದೆ. ಆದರೆ ಯಾವ ಬಡಾವಣೆಗಳು ಗುತ್ತಿಗೆ ಷರತ್ತಿನ ಕ್ರಯಪತ್ರಗಳ ವ್ಯಾಪ್ತಿಗೆ ಒಳಪಟ್ಟಿದೆಯೇ ಅಂತಹ ಬಡಾವಣೆಗಳಲ್ಲಿ ಯಾವುದೇ ಅಭಿವೃದ್ಧಿಯಾಗಿರುವುದಿಲ್ಲ. ಸಂಪೂರ್ಣವಾಗಿ ಹಣವನ್ನು ಪಾವತಿಸಿ ನಿವೇಶನ ಪಡೆದುಕೊಂಡವರು ತಮ್ಮ ಕಷ್ಟ ಕಾಲದ ಸಮಯದಲ್ಲಿ ಅದನ್ನು ಮಾರಾಟ ಮಾಡಿಕೊಳ್ಳಲು ಆಗದೆ ತೊಂದರೆಗೆ ಸಿಲುಕಿರುತ್ತಾರೆ. ಶುದ್ಧಕ್ರಯಪತ್ರಗಳು 10 ವರ್ಷದ ನಂತರ ನೀಡುವುದರಿಂದ 10 ವರ್ಷದ ಅವಧಿಯ ತನಕ ಆ ನಿವೇಶನಗಳನ್ನು ಯಾರೂ ಮೂಸಿ ನೋಡುವುದಿಲ್ಲ. ಉಚಿತವಾಗಿ ನಿವೇಶನವನ್ನು ನೀಡಿದರೆ 10 ವರ್ಷದ ಗುತ್ತಿಗೆ ಹಾಕುವುದು ನ್ಯಾಯಸಮ್ಮತ. ಆದರೆ ನಿಗದಿಪಡಿಸಿರುವ ದರವನ್ನು ಸಂಪೂರ್ಣವಾಗಿ ಪಾವತಿಸಿದ ಮೇಲೆಯೂ ಗುತ್ತಿಗೆ ಅವಧಿಯನ್ನು ನಿಗದಿಪಡಿಸುವುದು ಯಾವ ರೀತಿಯಲ್ಲಿ ಸಮರ್ಥನೀಯ? ಒಂದು ವೇಳೆ ಗುತ್ತಿಗೆ ಷರತ್ತನ್ನು ವಿಧಿಸುವ ಹಾಗಿದ್ದರೆ ಆರ್ಥಿಕವಾಗಿ ಹಿಂದುಳಿದವರಿಗಾಗಿ ನೀಡುವ ನಿವೇಶನಗಳಿಗೆ ಮಾತ್ರ ಈ ಷರತ್ತನ್ನು ವಿಧಿಸಬಹುದು. ಕಾರಣ ಅವರು ಬೇರೆಯವರಿಗಿಂತ ಕಡಿಮೆ ಮೊತ್ತಕ್ಕೆ ನಿವೇಶನವನ್ನು ಪಡೆದುಕೊಂಡಿರುತ್ತಾರೆ. ನಿವೇಶನ ಪಡೆದವರಿಗೆ ಇಷ್ಟು ದಿನದಲ್ಲಿ ಮನೆಯನ್ನು ಕಟ್ಟಬೇಕೆಂದು ಷರತ್ತು ವಿಧಿಸುವ ಬಿ.ಡಿ.ಎ. ಸಂಸ್ಥೆ ತಾನು ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿ ಎಷ್ಟು ವರ್ಷಕ್ಕೆ ಸಂಪೂರ್ಣವಾಗಿ ನೀರು, ವಿದ್ಯುತ್, ಒಳಚರಂಡಿ, ರಸ್ತೆ ಸೌಲಭ್ಯವನ್ನು ಒದಗಿಸಿಕೊಡುತ್ತದೆೆಂಬ ಬದ್ಧತೆಯನ್ನು ತೋರಿಸುತ್ತದೆ?