ಇರುವ ಸರಕಾರಿ ಆಸ್ಪತ್ರೆಗಳು ಮೊದಲು ಉದ್ಧಾರವಾಗಲಿ

Update: 2022-12-16 18:27 GMT

ಮಾನ್ಯರೇ,

ಸರಕಾರದ ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆ 'ನಮ್ಮ ಕ್ಲಿನಿಕ್'ಗೆ ಚಾಲನೆ ಸಿಕ್ಕಿದೆ. ಇದನ್ನು ಸ್ವಾಗತಿಸಬೇಕೋ ಅಥವಾ ತಿರಸ್ಕರಿಸಬೇಕೋ ಗೊತ್ತಾಗುತ್ತಿಲ್ಲ. ಏಕೆಂದರೆ ಈಗ ಇರುವ ಸರಕಾರಿ ಪ್ರಾಥಮಿಕ ಆಸ್ಪತ್ರೆಗಳ ಪಾಡೇ ಹೇಳತೀರದಾಗಿದೆ. ಹಾಗಿರುವಾಗ 'ನಮ್ಮ ಕ್ಲಿನಿಕ್' ಭವಿಷ್ಯ ಯಾವರೀತಿ ಇರಬಹುದು ಎಂಬ ಪ್ರಶ್ನೆ ಕಾಡ ತೊಡಗಿದೆ.

ರಾಜ್ಯಾದ್ಯಂತ ಹೋಬಳಿಗೆ ಒಂದು ಎರಡು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇದೇ ರೀತಿ ತಾಲೂಕು, ಜಿಲ್ಲೆಗೆ ಒಂದರಂತೆ ಕೂಡ ಇವೆ. ಇತ್ತೀಚೆಗೆ ಸರಕಾರ ಅಥವಾ ವೈದ್ಯರ ನಿರ್ಲಕ್ಷ್ಯದಿಂದ ಸರಕಾರಿ ಆಸ್ಪತ್ರೆಗಳಲ್ಲಿ ನಡೆದ ದುರ್ಘಟನೆಗಳು ಎಲ್ಲರಿಗೂ ಗೊತ್ತಿರುವಂತಹ ವಿಚಾರ. ವೈದ್ಯರ ಕೊರತೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿರುವುದು, ಔಷಧಗಳ ಕೊರತೆ, ವೈದ್ಯಕೀಯ ಪರಿಕರಗಳ ಕೊರತೆ, ಆ್ಯಂಬುಲೆನ್ಸ್ ಸೇವೆಯಲ್ಲಿ ತೊಡಕು ಹೀಗೆ ನಾನಾ ಸಮಸ್ಯೆಗಳು ಸರಕಾರಿ ಆಸ್ಪತ್ರೆಯಲ್ಲಿ ತಾಂಡವವಾಡುತ್ತಿವೆ. ಇಂತಹ ಆಸ್ಪತ್ರೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರಿಲ್ಲ. ಇರುವ ವೈದ್ಯರಿಗೆ ಒತ್ತಡ ಹೆಚ್ಚಾಗುತ್ತಿದೆ. ಹಾಗಿರುವಾಗ ಸಾವಿರಾರು ಕೋಟಿ ಖರ್ಚು ಮಾಡಿ, ಹೊಸದಾಗಿ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಿಕೊಂಡು 'ನಮ್ಮ ಕ್ಲಿನಿಕ್' ಆರಂಭಿಸುವುದು ಅಗತ್ಯವಿತ್ತೇ?. ಇರುವ ಅಸ್ಪತ್ರೆಗಳನ್ನೇ ಅಭಿವೃದ್ಧಿ ಪಡಿಸಿ, ಮೇಲ್ದರ್ಜೆಗೆ ಏರಿಸಬಹುದಿತ್ತು. ಗ್ರಾಮೀಣ ಭಾಗದ ಜನರಿಗೆ ಉತ್ತಮ ಚಿಕಿತ್ಸೆ ಕೊಡಬಹುದಾಗಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಶುರುವಾದ 'ಇಂದಿರಾ ಕ್ಯಾಂಟೀನ್' ಸರಕಾರದ ನಿರ್ಲಕ್ಷ್ಯಕ್ಕೆ ತುತ್ತಾಗಿ ಈಗ ಸದ್ದಿಲ್ಲದೆ ಬಾಗಿಲು ಮುಚ್ಚುತ್ತಿವೆ. ಇದೇ ರೀತಿ ಸರಕಾರ ಬದಲಾದರೆ ಇಂತಹ ಯೋಜನೆಯನ್ನು ನಿರ್ಲಕ್ಷ್ಯ ಮಾಡಿ, ಶಾಶ್ವತವಾಗಿ ಮುಚ್ಚಬಹುದಲ್ಲವೇ..?. ಹಾಗಾಗಿ ಯಾವುದಾದರೂ ಹೊಸ ಯೋಜನೆ ತರುವ ಮುನ್ನ ಯೋಚಿಸಿ. ಶಾಶ್ವತವಾಗಿ ಉಳಿಯುವಂತಹ ಹಾಗೂ ಜನರಿಗೆ ನೆರವಾಗುವಂತಹ ಯೋಜನೆ ತಂದರೆ ಉತ್ತಮ.
 

Similar News