ಮುಸ್ಲಿಮ್ ಸಮುದಾಯದ ಕುರಿತ ತಪ್ಪು ಕಲ್ಪನೆ ನಿವಾರಿಸುವ ಕುಟುಂಬ ಆರೋಗ್ಯ ಸಮೀಕ್ಷೆ ಅಂಕಿಅಂಶ

Update: 2022-12-20 06:55 GMT

20  ಕೋಟಿ ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಮರು ಭಾರತದ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯ. ಆದರೆ ಈ ಸಮುದಾಯದ ಕುರಿತು ಬಹಳಷ್ಟು ಸಲ ತಪ್ಪು ಮಾಹಿತಿಗಳೇ ಭಾಷಣಗಳಲ್ಲಿ, ಮಾತಿನಲ್ಲಿ ಸೇರಿಕೊಳ್ಳುವುದುಂಟು. ಮದುವೆಯಂಥ ವಿಚಾರಗಳ ಬಗೆಗಿನ ಅಭಿಪ್ರಾಯದಿಂದ ಹಿಡಿದು, ಇಸ್ಲಾಮ್‌ನಲ್ಲಿನ ಮಹಿಳೆಯ ಸ್ಥಾನಮಾನದವರೆಗೆ, ಧರ್ಮ ಮತ್ತು ಜನರ ಬಗ್ಗೆ ತಪ್ಪು ತಿಳಿವಳಿಕೆಗಳೇ ಹೆಚ್ಚು. ಆದರೆ ಅವುಗಳಲ್ಲಿ ಸತ್ಯವೆಷ್ಟು, ಮಿಥ್ಯಗಳು ಎಷ್ಟು?

ಈ ತಿಂಗಳು ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5 (NFHS-5) ಒದಗಿಸಿರುವ ಇತ್ತೀಚಿನ ಅಂಕಿಅಂಶಗಳನ್ನು ಆಧರಿಸಿ, ಮುಸ್ಲಿಮ್ ಸಮುದಾಯದ ಬಗೆಗಿನ ಅಂಥ ಕೆಲವು ಮಿಥ್‌ಗಳನ್ನು ನಿವಾರಿಸುವ ಯತ್ನ ಇಲ್ಲಿದೆ.

ಹೆಚ್ಚು ಮಕ್ಕಳೆಂಬುದು ವಾಸ್ತವವಲ್ಲ

ಭಾರತದಲ್ಲಿ ಮುಸ್ಲಿಮರ ವಿರುದ್ಧ ಮಾಡಲಾಗುವ ದೊಡ್ಡ ಆರೋಪವೆಂದರೆ, ಅವರು ಹಲವಾರು ಮಕ್ಕಳನ್ನು ಹೊಂದಿದ್ದಾರೆ, ಇದು ಭಾರತದ ಜನಸಂಖ್ಯಾ ಸ್ಫೋಟಕ್ಕೆ ಕಾರಣ ಎಂಬುದು. 2015 ರಲ್ಲಿ, ಬಲಪಂಥೀಯ ಹಿಂದೂ ನಾಯಕ ಸಾಕ್ಷಿ ಮಹಾರಾಜ್, ಮುಸ್ಲಿಮರನ್ನು ಮೀರಿಸಲು ಹಿಂದೂಗಳು ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು ಎಂದು ಹೇಳಿದ್ದರು.

ಒಟ್ಟು ಫಲವತ್ತತೆ ದರವನ್ನು (ಮಹಿಳೆ ತನ್ನ ಜೀವಿತಾವಧಿಯಲ್ಲಿ ಜನ್ಮ ನೀಡುವ ಮಕ್ಕಳ ಸರಾಸರಿ ಸಂಖ್ಯೆ) ಗಮನಿಸಿದರೆ, ಮುಸ್ಲಿಮರಲ್ಲಿ ಹೆಚ್ಚಿನ ಫಲವತ್ತತೆ ದರವಿದ್ದರೂ, ಅದು ಇತರ ಸಮುದಾಯಗಳಿಗೆ ಹೋಲಿಸಿದರೆ ತುಂಬಾ ಹೆಚ್ಚಿಲ್ಲ. NFHS-5ರ ಪ್ರಕಾರ, 2019-21ರಲ್ಲಿ ಮುಸ್ಲಿಮರ ಫಲವತ್ತತೆ ದರ 2.36 ಆಗಿತ್ತು. ಅಂದರೆ 100 ಮಹಿಳೆಯರಿಂದ 236 ಮಕ್ಕಳು. ಪ್ರತೀ ಮಹಿಳೆಯಿಂದ ಎರಡಕ್ಕಿಂತ ಹೆಚ್ಚು ಮತ್ತು ಮೂರಕ್ಕಿಂತ ಕಡಿಮೆ ಮಕ್ಕಳು. ಕಳೆದ 25 ವರ್ಷಗಳಲ್ಲಿ, ಮುಸ್ಲಿಮರಲ್ಲಿ ಫಲವತ್ತತೆ ದರ 1998-99 ರಲ್ಲಿದ್ದ 3.6ರಿಂದ 2019-21ರಲ್ಲಿ 2.36ಕ್ಕೆ ತೀವ್ರವಾಗಿ ಕುಸಿದಿದೆ ಎಂದು ಟೈಮ್ ಸಿರೀಸ್ ಡೇಟಾ ತೋರಿಸುತ್ತದೆ. ಹಿಂದೂಗಳಲ್ಲಿ ಫಲವತ್ತತೆ ದರ 1.94 ಎಂದು ದಾಖಲಾಗಿದೆ. ಮುಸ್ಲಿಮ್ ಮಹಿಳೆಯರಿಗೆ ಹೋಲಿಸಿದರೆ, ಪ್ರತೀ 100 ಹಿಂದೂ ಮಹಿಳೆಯರು 42 ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ.

ರಕ್ತಸಂಬಂಧದಲ್ಲಿ ಮದುವೆ ಪ್ರಮಾಣವೂ ಹೆಚ್ಚಿಲ್ಲ

ಮುಸ್ಲಿಮರಲ್ಲಿ ತಮ್ಮ ಕುಟುಂಬದೊಳಗೆ ಮದುವೆಯಾಗುವ ಅಭ್ಯಾಸವು ಸಾಮಾನ್ಯವಾಗಿದೆ ಎಂದು ನಂಬಲಾಗಿದೆ. ಆದಾಗ್ಯೂ ಅಂಕಿಅಂಶಗಳು ಹೇಳುವುದು ಬೇರೆ.

ಸಮೀಕ್ಷೆಯು ಹೇಳುವಂತೆ, ಶೇ.15.8 ಮುಸ್ಲಿಮ್ ಮಹಿಳೆಯರು ಮಾತ್ರ ರಕ್ತಸಂಬಂಧಿಯನ್ನು ಮದುವೆಯಾಗಿದ್ದಾರೆ. ಆದರೆ ಶೇ. 80ಕ್ಕಿಂತ ಹೆಚ್ಚು ಮಹಿಳೆಯರು ರಕ್ತಸಂಬಂಧದ ಹೊರಗೇ ಮದುವೆಯಾಗುತ್ತಾರೆ. ಬೌದ್ಧರು, ನಿಯೋ ಬೌದ್ಧ ಸಮುದಾಯದಲ್ಲಿ ಶೇ. 14.5 ರಕ್ತಸಂಬಂಧಿ ವಿವಾಹಗಳಾದರೆ, ಕ್ರಿಶ್ಚಿಯನ್ನರಲ್ಲಿ ಶೇ. 11.9 ಹಾಗೂ ಹಿಂದೂಗಳಲ್ಲಿ ಶೇ. 10.1ರಷ್ಟು ಅಂಥ ಮದುವೆಗಳಿವೆ.

ರಾಷ್ಟ್ರೀಯ ಮಟ್ಟದಲ್ಲಿ, ಶೇ.11 ಮಹಿಳೆಯರು ತಮ್ಮ ರಕ್ತಸಂಬಂಧಿಗಳೊಂದಿಗೆ ಮದುವೆಯಾಗಿದ್ದಾರೆ ಎನ್ನುತ್ತದೆ ವರದಿ. ಮುಸ್ಲಿಮರು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿಲ್ಲ ಎಂಬುದನ್ನು ಈ ಅಂಕಿಅಂಶಗಳೇ ಹೇಳುತ್ತವೆ.

ಬಹುಪತ್ನಿತ್ವದ ಬಗ್ಗೆ ಈ ಸಮೀಕ್ಷೆಯಲ್ಲಿ ಅಂಕಿಅಂಶಗಳಿಲ್ಲವಾದರೂ, ಹಿಂದಿನ ಮಾಹಿತಿಯ ಪ್ರಕಾರ, 2005-06ರಲ್ಲಿ ಮುಸ್ಲಿಮರಲ್ಲಿ ಬಹುಪತ್ನಿತ್ವ ಹೊಂದಿದವರ ಪ್ರಮಾಣ ಕೇವಲ ಶೇ.2.5. ಇದೇ ವೇಳೆ ಹಿಂದೂಗಳಲ್ಲಿ ಬಹುಪತ್ನಿತ್ವ ಪ್ರಮಾಣ ಶೇ.1.77 ದಾಖಲಾಗಿದೆ.

ಬೇಗನೆ ಮದುವೆ ಎಂಬುದೂ ತಪ್ಪು ಕಲ್ಪನೆ

ಮುಸ್ಲಿಮರಲ್ಲಿ, ವಿಶೇಷವಾಗಿ ಹದಿಹರೆಯದವರು ಬೇಗ ಮದುವೆಯಾಗುತ್ತಾರೆ ಎಂಬುದು ಮತ್ತೊಂದು ತಪ್ಪು ಕಲ್ಪನೆ. ಆದರೆ, ಇದು ಆಧಾರ ರಹಿತ ಎಂಬುದನ್ನು NFHS-5 ಅಂಕಿಅಂಶಗಳೇ ತೋರಿಸುತ್ತವೆ. ಮುಸ್ಲಿಮ್ ಮಹಿಳೆ ಮದುವೆಯಾಗುವ ಸರಾಸರಿ ವಯಸ್ಸು 18.7 ವರ್ಷ. ಅಂದರೆ ಸಮುದಾಯದ ಅರ್ಧಕ್ಕಿಂತ ಹೆಚ್ಚು ಮಹಿಳೆಯರು 18-19 ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಮೊದಲ ಮದುವೆಯ ಸರಾಸರಿ ವಯಸ್ಸು ಹಿಂದೂ ಮಹಿಳೆಯರಲ್ಲಿಯೂ 18.7 ವರ್ಷವೇ. ಇತರ ಅಲ್ಪಸಂಖ್ಯಾತರಲ್ಲಿ, ಮಹಿಳೆಯರಿಗೆ ಮದುವೆಯ ಸರಾಸರಿ ವಯಸ್ಸು 21ಕ್ಕಿಂತ ಹೆಚ್ಚು. ಸಿಖ್ಖರಲ್ಲಿ 21.2 ವರ್ಷವಾದರೆ, ಕ್ರಿಶ್ಚಿಯನ್ನರಲ್ಲಿ 21.7 ವರ್ಷ ಮತ್ತು ಜೈನರಲ್ಲಿ 22.7 ವರ್ಷ.

ಹೆಣ್ಣುಮಕ್ಕಳ ಶಿಕ್ಷಣಕ್ಕೂ ಪ್ರಾಮುಖ್ಯತೆ

ಮುಸ್ಲಿಮರಲ್ಲಿ ಹೆಣ್ಣುಮಕ್ಕಳ ಶಿಕ್ಷಣವನ್ನು ಅಲಕ್ಷಿಸಲಾಗುತ್ತದೆ ಎಂಬುದು ಮತ್ತೊಂದು ತಪ್ಪು ಭಾವನೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಬಾಲಕಿಯರನ್ನು ಶಿಕ್ಷಣದಿಂದ ದೂರ ವಿಡುತ್ತಿರುವ ಕ್ರಮವು ಈ ಥರದ ಚರ್ಚೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಆದರೆ ಸಮೀಕ್ಷೆ ತೋರಿಸುವ ಅಂಕಿಅಂಶಗಳು ಶಿಕ್ಷಣದ ವಿಚಾರದಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳನ್ನು ಅಲಕ್ಷಿಸಲಾಗಿಲ್ಲ ಎಂಬುದನ್ನು ಸಾಬೀತುಪಡಿಸಿವೆ. NFHS-5 ಅಂಕಿಅಂಶವು ಮುಸ್ಲಿಮ್ ವಿದ್ಯಾರ್ಥಿನಿಯರು ಶಾಲೆಯಲ್ಲಿ ಕಳೆಯುವ ಸರಾಸರಿ ವರ್ಷಗಳು 4.3 ಎಂದು ತೋರಿಸುತ್ತದೆ. ಮುಸ್ಲಿಮ್ ಗಂಡುಮಕ್ಕಳು ಶಾಲೆಯಲ್ಲಿ ಕಳೆಯುವ ಸರಾಸರಿ ವರ್ಷಗಳು 5.4 ಆಗಿದೆ. ಅಂದರೆ ಮುಸ್ಲಿಮ್ ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳು 1.1 ವರ್ಷ ಹೆಚ್ಚು ವರ್ಷವನ್ನು ಶಾಲೆಯಲ್ಲಿ ಕಳೆದಿದ್ದಾರೆ. ಆದರೆ ಈ ಲಿಂಗಾನುಪಾತದ ಅಂತರ ಇತರ ಸಮುದಾಯಗಳಲ್ಲಿ ಹೆಚ್ಚಿದ್ದು, ಕನಿಷ್ಠ 2 ವರ್ಷಗಳ ಅಂತರವಿದೆ. ಹಿಂದೂಗಳಲ್ಲಿ ಇದು ಅತಿ ಹೆಚ್ಚು. ಹಿಂದೂ ವಿದ್ಯಾರ್ಥಿಗಳು ಶಾಲೆಯಲ್ಲಿ ಸರಾಸರಿ 7.5 ವರ್ಷಗಳನ್ನು ಕಳೆದರೆ, ಹಿಂದೂ ವಿದ್ಯಾರ್ಥಿನಿಯರು ಶಾಲೆಗಳಲ್ಲಿರುವ ಸರಾಸರಿ ವರ್ಷಗಳು 4.9 ಆಗಿವೆ.

ಮದ್ಯಸೇವನೆ ಪ್ರಮಾಣ ಅತಿ ಕಡಿಮೆ

ಇಸ್ಲಾಮ್ ಮದ್ಯ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಹೆಚ್ಚಿನ ಇಸ್ಲಾಮಿಕ್ ದೇಶಗಳಲ್ಲಿ, ಮದ್ಯ ಮಾರಾಟ ಇರುವುದಿಲ್ಲ ಅಥವಾ ಮುಸ್ಲಿಮೇತರರಿಗೆ ಮಾತ್ರ ಮಾರಾಟ ಮತ್ತು ಬಳಕೆಗೆ ಅವಕಾಶವಿದೆ. ಭಾರತದಲ್ಲಿ, ಮದ್ಯ ಸೇವಿಸುವ ಮುಸ್ಲಿಮ್ ಪುರುಷರ ಪ್ರಮಾಣ ಶೇ.6.3 ಮಾತ್ರ. ಇದು ರಾಷ್ಟ್ರೀಯ ಸರಾಸರಿಗಿಂತ ಗಮನಾರ್ಹವಾಗಿ ಕಡಿಮೆ.

ವಾಸ್ತವ ಹೀಗೆಲ್ಲ ಇದ್ದೂ, ಮುಸ್ಲಿಮರ ಬಗೆಗಿನ ತಪ್ಪು ಕಲ್ಪನೆಗಳನ್ನೇ ಹೆಚ್ಚು ಹರಡುತ್ತ ಬರಲಾಗುತ್ತಿದೆ. ಆದರೆ ಇದೆಲ್ಲವೂ ಆಗುತ್ತಿರುವುದು ಸತ್ಯವನ್ನು ಪರಿಶೀಲಿಸದೆ ತಪ್ಪು ವಿಚಾರಗಳನ್ನು ನಂಬಿಕೊಂಡಿರುವುದರಿಂದ. ಮುಸ್ಲಿಮ್ ವಿರೋಧಿ ಗುಂಪುಗಳು ಮುಸ್ಲಿಮ್ ಸಮುದಾಯದ ವಿರುದ್ಧ ಹಳೆಯ ತಪ್ಪು ನಂಬಿಕೆಗಳನ್ನೇ ಹರಡುವಲ್ಲಿ ಪ್ರಬಲವಾಗಿವೆ. ಇದಕ್ಕೆ ಪ್ರತಿಯಾಗಿ ಉತ್ತರ ಬರಬೇಕಿರುವುದು ರಾಜಕೀಯ ವರ್ಗದಿಂದ ಮಾತ್ರ ಎಂಬುದು ಪರಿಣತರ ಅಭಿಪ್ರಾಯ. ಸಮುದಾಯದ ಬಗೆಗಿನ ಸತ್ಯಗಳೇನು ಎಂಬುದನ್ನು ಮನದಟ್ಟು ಮಾಡುವ ಕೆಲಸವಾದಾಗಲೇ ಇಂಥ ತಪ್ಪು ಕಲ್ಪನೆಗಳು ಇಲ್ಲವಾಗುವುದು ಸಾಧ್ಯ.

( ಕೃಪೆ: ThePrint)

Similar News