ನ್ಯಾಯಾಧೀಶರನ್ನು ಕೂಡ ಸರಕಾರವೇ ನೇಮಿಸುವುದಾದರೆ ಸಂವಿಧಾನವೇಕೆ?

ಭಾಗ-1

Update: 2022-12-21 05:13 GMT

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರನ್ನು ನೇಮಕ ಮಾಡಲು ಈಗ ಅನುಸರಿಸಲಾಗುತ್ತಿರುವ ಕೊಲಿಜಿಯಂ ಪದ್ಧತಿಯ ಅಪಾರದರ್ಶಕತೆಯನ್ನು ನೆಪವಾಗಿರಿಸಿಕೊಂಡು ಮೋದಿ ಸರಕಾರ ಸುಪ್ರೀಂ ಕೋರ್ಟಿನ ಮೇಲೆ ನಿರಂತರ ದಾಳಿಯನ್ನು ನಡೆಸುತ್ತಿದೆ. ಅದರ ಭಾಗವಾಗಿಯೇ ಕಾನೂನು ಮಂತ್ರಿ ಹದ್ದು ಮೀರಿ ಎಲ್ಲಾ ವೇದಿಕೆಗಳಲ್ಲೂ ಸುಪ್ರೀಂ ಕೋರ್ಟಿನ ಮೇಲೆ ನೇರ ದಾಳಿ ನಡೆಸುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ, ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶರ ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಾಧೀಶರನ್ನು ಹೈಕೋರ್ಟಿಗೆ ಮತ್ತು ಸುಪ್ರೀಂ ಕೋರ್ಟಿಗೆ ನೇಮಕಾತಿ ಮಾಡಲು ಸರಕಾರ ನಿರಾಕರಿಸುತ್ತಿದೆ. ಆ ಮೂಲಕ ನ್ಯಾಯಾಂಗ ನಿಂದನೆಯನ್ನೂ ಮಾಡುತ್ತಿದೆ. ಮತ್ತೊಂದು ಕಡೆ ಖಾಲಿ ಇರುವ ಹುದ್ದೆಗಳು ಭರ್ತಿಯಾಗದೆ ಜನರಿಗೆ ನ್ಯಾಯ ಸಿಗುವುದು ಇನ್ನಷ್ಟು ನಿಧಾನವಾಗುತ್ತಿದೆ.

೨೦೨೨ರಲ್ಲಿ ನಡೆದ ‘Mood Of The Nation Survey’ ಯಲ್ಲಿ ಬಹುಪಾಲು ಜನ ಭಾರತದ ಪ್ರಜಾತಂತ್ರದ ಬಗ್ಗೆ ತಮ್ಮಲ್ಲಿ ಭರವಸೆ ಹುಟ್ಟಿಸುವ ಸಂಸ್ಥೆಯೆಂದು ಹೆಚ್ಚಾಗಿ ಗುರುತಿಸಿರುವುದು ರಾಜಕೀಯ ಪಕ್ಷಗಳನ್ನೂ ಅಲ್ಲ, ಮಾಧ್ಯಮಗಳನ್ನೂ ಅಲ್ಲ. ಬದಲಿಗೆ ಸುಪ್ರೀಂ ಕೋರ್ಟನ್ನು.

ಸುಪ್ರಿಂ ಕೋರ್ಟ್ ಕೂಡ ಮೋದಿ ಅವಧಿಯಲ್ಲಿ ತಾನು ಕಳೆದುಕೊಳ್ಳುತ್ತಿರುವ ವರ್ಚಸ್ಸನ್ನು ಕಳೆದ ಇಬ್ಬರು ಮುಖ್ಯ ನ್ಯಾಯಾಧೀಶರ ಅವಧಿಯಲ್ಲಿ ಸ್ವಲ್ಪಮಟ್ಟಿಗೆ ಪಡೆದುಕೊಳ್ಳುವ ದಿಸೆಯಲ್ಲಿದೆ. ಏಕೆಂದರೆ ಅದರ ಹಿಂದಿನ ಮುಖ್ಯ ನ್ಯಾಯಾಧೀಶರುಗಳು ಕೋರ್ಟುಗಳ ಪ್ರತಿಷ್ಠೆಯನ್ನು  ಮೋದಿ ಸರಕಾರದಿಂದ ನಿರ್ದೇಶನ ತೆಗೆದುಕೊಳ್ಳುವ ಕಾರಕೂನರ ಮಟ್ಟಕ್ಕೆ ಇಳಿಸಿಬಿಟ್ಟಿತ್ತು. ಆದರೆ ಇತ್ತೀಚೆಗೆ ನಿವೃತ್ತರಾದ ನ್ಯಾ. ರಮಣ, ಯು.ಯು. ಲಲಿತ್ ಹಾಗೂ ಹಾಲಿ ನ್ಯಾ. ಚಂದ್ರಚೂಡರು ಕೂಡ ಈ ಹಿಂದೆ ಮೋದಿ ಸರಕಾರದ ಸರ್ವಾಧಿಕಾರಕ್ಕೆ ಕ್ಲೀನ್‌ಚಿಟ್ ಕೊಟ್ಟ ನ್ಯಾಯ ತೀರ್ಮಾನಗಳಲ್ಲಿ ಭಾಗಿಯಾಗಿದ್ದವರೇ. ಆದರೂ ಅವರು ಆಗೀಗ ನ್ಯಾಯದ ಪರವಾಗಿ ಗಟ್ಟಿಯಾಗಿ ಮಾತಾಡುವುದನ್ನು ಕೂಡ ಮೋದಿ ಸರಕಾರ ಸಹಿಸಿಕೊಳ್ಳುತ್ತಿಲ್ಲ.

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರನ್ನು ನೇಮಕ ಮಾಡಲು ಈಗ ಅನುಸರಿಸಲಾಗುತ್ತಿರುವ ಕೊಲಿಜಿಯಂ ಪದ್ಧತಿಯ ಅಪಾರದರ್ಶಕತೆಯನ್ನು ನೆಪವಾಗಿರಿಸಿಕೊಂಡು ಮೋದಿ ಸರಕಾರ ಸುಪ್ರೀಂ ಕೋರ್ಟಿನ ಮೇಲೆ ನಿರಂತರ ದಾಳಿಯನ್ನು ನಡೆಸುತ್ತಿದೆ. ಅದರ ಭಾಗವಾಗಿಯೇ ಕಾನೂನು ಮಂತ್ರಿ ಹದ್ದು ಮೀರಿ ಎಲ್ಲಾ ವೇದಿಕೆಗಳಲ್ಲೂ ಸುಪ್ರೀಂ ಕೋರ್ಟಿನ ಮೇಲೆ ನೇರ ದಾಳಿ ನಡೆಸುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ, ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶರ ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಾಧೀಶರನ್ನು ಹೈಕೋರ್ಟಿಗೆ ಮತ್ತು ಸುಪ್ರೀಂ ಕೋರ್ಟಿಗೆ ನೇಮಕಾತಿ ಮಾಡಲು ಸರಕಾರ ನಿರಾಕರಿಸುತ್ತಿದೆ. ಆ ಮೂಲಕ ನ್ಯಾಯಾಂಗ ನಿಂದನೆಯನ್ನೂ ಮಾಡುತ್ತಿದೆ. ಮತ್ತೊಂದು ಕಡೆ ಖಾಲಿ ಇರುವ ಹುದ್ದೆಗಳು ಭರ್ತಿಯಾಗದೆ ಜನರಿಗೆ ನ್ಯಾಯ ಸಿಗುವುದು ಇನ್ನಷ್ಟು ನಿಧಾನವಾಗುತ್ತಿದೆ.

ಈಗ ಈ ದಾಳಿಗೆ ಉಪರಾಷ್ಟ್ರಪತಿಯಂಥ ಜವಾಬ್ದಾರಿ ಹುದ್ದೆಯಲ್ಲಿರುವ ಈ ಹಿಂದೆ ಬಿಜೆಪಿಯ ಒಡಕು ಬಾಯಿ ಎಂದೇ ಪ್ರಸಿದ್ಧರಾಗಿದ್ದ ಜಗದೀಪ್ ಧನ್ಕರ್ ಅವರೂ ಸೇರಿಕೊಂಡಿದ್ದಾರೆ. ತಮ್ಮ ಹುದ್ದೆಗೆ ಯಾವುದೇ ಘನತೆಯನ್ನು ತೋರದೆ ತಮ್ಮ ಪ್ರಥಮ ಭಾಷಣದ ಮುಕ್ಕಾಲು ಪಾಲನ್ನು ನ್ಯಾಯಾಂಗವನ್ನು ನಿಂದಿಸುವುದಕ್ಕೆ ಬಳಸಿಕೊಂಡಿದ್ದಾರೆ ಮತ್ತು ಅದನ್ನು ಎಲ್ಲಾ ವೇದಿಕೆಗಳಿಂದಲೂ ಮುಂದುವರಿಸಿದ್ದಾರೆ. ಕೆಲವು ದಿನಗಳ ಹಿಂದೆ ಮೋದಿ ಸರಕಾರದ ಗುರುಮಠವಾದ ಆರೆಸ್ಸೆಸ್ ಸಹ ಈ ದಾಳಿಗಳಿಗೆ ತನ್ನ ಆಶೀರ್ವಾದವನ್ನು ನೀಡಿದೆ.

ಪ್ರಜಾತಂತ್ರದ ಇತರ ಕಾವಲುಗಾರರೆಂದೆನಿಸಿಕೊಳ್ಳುವ ಸ್ವತಂತ್ರ ಮಾಧ್ಯಮವನ್ನು ಕೊಂಡುಕೊಳ್ಳುವ ಮೂಲಕ, ವಿರೋಧ ಪಕ್ಷಗಳನ್ನು ಸಿಬಿಐ-ಈಡಿ ದಾಳಿಯ ಬೆದರಿಕೆಯ ಮೂಲಕ, ಹೋರಾಟಗಾರರನ್ನು ಭಯೋತ್ಪಾದಕ ಪಟ್ಟಿ ಹಚ್ಚಿ ಜೈಲಿಗಟ್ಟುವ ಮೂಲಕ ವಿರೋಧ ಮುಕ್ತ ಸರಕಾರ ನಡೆಸುತ್ತಿರುವ ಮೋದಿ ಸರ್ವಾಧಿಕಾರವು ಈಗ ಅಲ್ಪಸ್ವಲ್ಪಸ್ವಾಯತ್ತತೆ ಉಳಿಸಿಕೊಂಡಿದ್ದ ನ್ಯಾಯಾಂಗದ ಸ್ವಾತಂತ್ರ್ಯವನ್ನು ಹರಣ ಮಾಡಲೆಂದೇ ಈ ದಾಳಿಯನ್ನು ಪ್ರಾರಂಭಿಸಿದೆ. ಅದರಲ್ಲೂ ಮುಖ್ಯನ್ಯಾಯಾಧೀಶರಾಗಿ- ಸಿಜೆಐ- ಆಗಿ ನ್ಯಾ. ಚಂದ್ರಚೂಡ್ ಅವರು ಅಧಿಕಾರ ವಹಿಸಿಕೊಂಡ ನಂತರ ಈ ದಾಳಿ ಹೆಚ್ಚಾಗಿದೆ.

ಈ ಎಲ್ಲಾ ದಾಳಿಗಳಿಗೂ ನೈತಿಕ ಸಮರ್ಥನೆ ಒದಗಿಸಿಕೊಳ್ಳಲು ಮೋದಿ ಸರಕಾರ ಕೊಡುತ್ತಿರುವ ಕಾರಣ ಈಗ ನ್ಯಾಯಾಧೀಶರನ್ನು ನೇಮಕ ಮಾಡುವ ಕೊಲಿಜಿಯಂ ಪದ್ಧತಿ ಅಪಾರದರ್ಶಕ ಹಾಗೂ ಸ್ವಜನಪಕ್ಷಪಾತದಿಂದ ಕೂಡಿದೆ ಎನ್ನುವುದು.

ಇದರಲ್ಲಿ ಅರ್ಧ ಸತ್ಯವಿದೆ. ಆದರೆ ಅದಕ್ಕೆ ಪರಿಹಾರವೆಂದು ಮೋದಿ ಸರಕಾರ ೨೦೧೪ರಲ್ಲಿ ಮುಂದಿಟ್ಟ National Judicial Appointment Commission-NJAC- ರಾಷ್ಟ್ರೀಯ ನ್ಯಾಯಿಕ ನೇಮಕಾತಿ ಆಯೋಗ ಕಾಯ್ದೆ-ರೋಗಕ್ಕಿಂತ ಔಷಧಿಯೇ ಅಪಾಯಕಾರಿ ಎನ್ನುವಂತಿತ್ತು.

ಆದ್ದರಿಂದ ಮೋದಿ ಸರಕಾರವು ನ್ಯಾಯಾಧೀಶರ ನೇಮಕಾತಿಯ ಪಾರದರ್ಶಕತೆಯ ತರುವ ಮುಸುಕಿನಲ್ಲಿ ನಡೆಸುತ್ತಿರುವ ಹುನ್ನಾರ ಹಾಗೂ ನ್ಯಾಯಾಧೀಶರ ನೇಮಕಾತಿಯಲ್ಲಿ ಅದರ ಸ್ವಾಯತ್ತತೆಗೆ ಧಕ್ಕೆ ತರದೆ ಅತ್ಯಗತ್ಯವಾಗಿ ಆಗಲೇ ಬೇಕಿರುವ ಸುಧಾರಣೆಗಳು- ಇವೆರಡರ ಬಗ್ಗೆಯೂ ಏಕಕಾಲದಲ್ಲಿ ಸ್ಪಷ್ಟವಾದ ನಿಲುವಿಗೆ ಬರುವ ಅಗತ್ಯವಿದೆ.

ಸಂವಿಧಾನ ಮತ್ತು ಉನ್ನತ ನ್ಯಾಯಾಧೀಶರ

ನೇಮಕಾತಿಯ ಸಮಸ್ಯೆಗಳು:

ಭಾರತ ಸಂವಿಧಾನದ ೧೨೪, ೨೧೭ ಮತ್ತು ೨೨೨ನೇ ಕಲಂಗಳು ಸುಪ್ರೀಂ ಕೋರ್ಟಿನ ಮತ್ತು ಹೈಕೋರ್ಟಿನ ನ್ಯಾಯಾಧೀಶರ ನೇಮಕಾತಿಯ ಬಗೆಗಿನ ನಿಯಮಗಳನ್ನು ಹೇಳುತ್ತವೆ. ಜಿಲ್ಲಾ ಹಾಗೂ ಅದರ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರನ್ನು ಆಯಾ ರಾಜ್ಯ ಸರಕಾರಗಳೇ ಸೂಕ್ತ ಪ್ರಕ್ರಿಯೆಯ ಮೂಲಕ ನೇಮಕ ಮಾಡುತ್ತವೆ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲಾತಿ ಇದೆಯಾದರೂ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್‌ನ (ಉನ್ನತ ನ್ಯಾಯಾಲಯ) ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲಾತಿಯಿಲ್ಲ.

ಸಂವಿಧಾನದ ಆರ್ಟಿಕಲ್ ೧೨೪ರ ಪ್ರಕಾರ ಉನ್ನತ ನ್ಯಾಯಾಧೀಶರ ನೇಮಕಾತಿಯನ್ನು ರಾಷ್ಟ್ರಪತಿಗಳು ಮಾಡಬೇಕು. (ಆದರೆ ರಾಷ್ಟ್ರಪತಿಗಳು ತಮ್ಮೆಲ್ಲಾ ತೀರ್ಮಾನಗಳನ್ನು ಕೇಂದ್ರ ಸರಕಾರದ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು!)

ಅದರ ಜೊತೆಗೆ ಆರ್ಟಿಕಲ್ ೧೨೪ರಲ್ಲಿ ಉನ್ನತ ನ್ಯಾಯಾಧೀಶರ ನೇಮಕಾತಿ ಮಾಡುವಾಗ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ಜೊತೆ ‘Consult’ ‘ಸಮಾಲೋಚನೆ’ ಮಾಡಬೇಕೆಂದಿದೆ. ಸ್ವಾತಂತ್ರ್ಯ ಬಂದ ನಂತರ ಬಹುಪಾಲು ವರ್ಷಗಳು ಇದು ಕೇವಲ ಸಮಾಲೋಚನೆ ಮಾತ್ರವಾಗಿತ್ತು. ಅಂದರೆ ನೇಮಕಾತಿಯಲ್ಲಿ ಪರಮಾಧಿಕಾರವನ್ನು  ರಾಷ್ಟ್ರಪತಿಗಳು ಅರ್ಥಾತ್ ಕೇಂದ್ರ ಸರಕಾರವೇ ಚಲಾಯಿಸುತ್ತಿತ್ತು.

ಆದರೆ ನಮ್ಮ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸಮತೂಕದ ಮತ್ತು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳಾಗಿರಬೇಕೆಂದು ಸಂವಿಧಾನದ ಆಶಯವಾಗಿದೆ. ಅದರಲ್ಲೂ ಸಂವಿಧಾನ ಈ ದೇಶದ ನಾಗರಿಕರಿಗೆ ಕೊಡಮಾಡಿರುವ ಮೂಲಭೂತ ಹಕ್ಕುಗಳನ್ನು ಸರಕಾರ ಕೂಡ ಉಲ್ಲಂಘಿಸದಂತೆ ಕಾಪಾಡುವ ಜವಾಬ್ದಾರಿಯು ಆರ್ಟಿಕಲ್ ೩೨ರ ಪ್ರಕಾರ ಉನ್ನತ ನ್ಯಾಯಾಲಯಗಳಿಗಿದೆ. ಆ ಜವಾಬ್ದಾರಿಯನ್ನು ಅವು ನಿರ್ವಹಿಸಬೇಕೆಂದರೆ ಆಳುವ ಸರಕಾರದ ಮರ್ಜಿಯಲ್ಲಿರದೆ ಸ್ವತಂತ್ರವಾಗಿರಬೇಕಿರುತ್ತದೆ.

ಹೀಗಾಗಿ ಉನ್ನತ ನ್ಯಾಯಾಲಯಗಳ ನ್ಯಾಯಾಧೀಶರ ನೇಮಕಾತಿಯಲ್ಲಿ ನ್ಯಾಯಾಂಗಕ್ಕೆ ಪರಮಾಧಿಕಾರ ಇರಬೇಕೇ ವಿನಾ ಕಾರ್ಯಾಂಗ- ಸರಕಾರಕ್ಕಲ್ಲ ಎಂಬ ವಾದಗಳು ೯೦ರ ದಶಕದಲ್ಲಿ ಬಲವಾಯಿತು. ಅದರ ಭಾಗವಾಗಿಯೇ ಸಂವಿಧಾನದಲ್ಲಿ ಉನ್ನತ ನ್ಯಾಯಾಧೀಶರನ್ನು ನೇಮಕ ಮಾಡುವಾಗ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ‘Consult’ ಮಾಡಬೇಕೆಂದಿರುವುದರ ಅರ್ಥ ಕೇವಲ ಸಮಾಲೋಚನೆಯಲ್ಲ, ಸುಪ್ರೀಂ ಮುಖ್ಯ ನ್ಯಾಯಾಧೀಶರು ‘Concur’ - ಸಮ್ಮತಿ ತೋರಿದರೆ ಮಾತ್ರ ಆ ನೇಮಕಾತಿಯಾಗಬೇಕು ಎಂದು ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠಗಳು ವ್ಯಾಖ್ಯಾನ ಮಾಡಿದವು. ಇದರ ಭಾಗವಾಗಿಯೇ ಉನ್ನತ ನ್ಯಾಯಾಧೀಶರ ನೇಮಕಾತಿಯಲ್ಲಿ ನ್ಯಾಯಾಂಗದ ಪರಮಾಧಿಕಾರವಿರುವ ಕೊಲಿಜಿಯಂ ಪದ್ಧತಿ ಜಾರಿಗೆ ಬಂತು.

ಕೊಲಿಜಿಯಂ ಪದ್ಧತಿ- ಸರಕಾರದಿಂದ ಸ್ವತಂತ್ರ ಆದರೆ ಅಪಾರದರ್ಶಕ, ಅಪ್ರಜಾತಾಂತ್ರಿಕ

ಈ ಕೊಲಿಜಿಯಂ ಪದ್ಧತಿಯ ಪ್ರಕಾರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಹಾಗೂ ಆ ನಂತರದ ನಾಲ್ವರು ಹಿರಿಯ ನ್ಯಾಯಾಧೀಶರು (ಅದರಲ್ಲಿ ಒಬ್ಬರು ಹಾಲಿ ಮುಖ್ಯ ನ್ಯಾಯಾಧೀಶರು ನಿವೃತ್ತಿಯಾದ ನಂತರ ಮುಖ್ಯ ನ್ಯಾಯಾಧೀಶರಾಗುವವರು ಇರಬೇಕು) ಒಟ್ಟು ಸೇರಿ ಕೊಲಿಜಿಯಂ ಆಗುತ್ತಾರೆ.

ಈ ಕೊಲಿಜಿಯಮ್ಮೇ ಸುಪ್ರೀಂ ಹಾಗೂ ಹೈಕೋರ್ಟ್‌ನ ನ್ಯಾಯಾಧೀಶರ ನೇಮಕದ ಹಾಗೂ ವರ್ಗಾವಣೆಯ ಪ್ರಸ್ತಾಪವನ್ನು ಸಿದ್ಧಪಡಿಸುತ್ತದೆ. ಅದನ್ನು ಅನುಮೋದಿಸಲು ಕೇಂದ್ರ ಸರಕಾರದ ಕಾನೂನು ಇಲಾಖೆಗೆ ಕಳಿಸುತ್ತದೆ. ಕೇಂದ್ರ ಸರಕಾರ ಅದನ್ನು ಪರಿಶೀಲಿಸಿ ಅದರಲ್ಲಿ ಯಾವುದಾದರೂ ಪ್ರಸ್ತಾಪದ ಬಗ್ಗೆ ತನ್ನ ತಕರಾರು ಇದ್ದರೆ ಅದನ್ನು ಮರುಪರಿಶೀಲಿಸಲು ವಾಪಸ್ ಕೊಲಿಜಿಯಂಗೆ ಕಳಿಸುತ್ತದೆ. ಆಗ ಕೊಲಿಜಿಯಂ ಆ ತಕರಾರುಗಳನ್ನು ಪರಿಗಣಿಸಿ- ಒಪ್ಪಿಅಥವಾ ತಿರಸ್ಕರಿಸಿ- ಮತ್ತೊಮ್ಮೆ ಆ ಪ್ರಸ್ತಾಪಗಳನ್ನು ಕೇಂದ್ರಕ್ಕೆ ಕಳಿಸುತ್ತದೆ. ಹಾಗೆ ಎರಡನೇ ಬಾರಿ ಹಿಂದಿರುಗಿಸಿದ ಪ್ರಸ್ತಾಪಗಳನ್ನು ಕೇಂದ್ರವು ಅಂಗೀಕರಿಸಿ ರಾಷ್ಟ್ರಪತಿಗಳಿಗೆ ಕಳಿಸಬೇಕು. (ಆದರೆ, ಕಳೆದ ನಾಲ್ಕೈದು ಪ್ರಕರಣಗಳಲ್ಲಿ ಕೇಂದ್ರವು ಸುಪ್ರೀಂ ಕೋರ್ಟ್ ಎರಡನೇ ಬಾರಿ ವಾಪಸ್ ಕಳಿಸಿದ ಪ್ರಸ್ತಾಪಗಳನ್ನು ರಾಷ್ಟ್ರಪತಿಗಳಿಗೆ ಕಳಿಸಿಲ್ಲ. ಇದರಿಂದಾಗಿ ಕೆಲವು ನ್ಯಾಯಾಧೀಶರು ಪದೋನ್ನತಿ ಕಾಣದೆ ನಿವೃತ್ತರಾಗಿದ್ದಾರೆ. ಕೆಲವರು ಇಂತಹ ವಿಳಂಬವು ತಮ್ಮ ಘನತೆಗೆ ಅವಮಾನ ಎಂದು ಭಾವಿಸಿ ತಮ್ಮ ಒಪ್ಪಿಗೆಯನ್ನು ಹಿಂದೆಗೆದುಕೊಂಡಿದ್ದಾರೆ. ಮೋದಿ ಸರಕಾರ ಅಂಗೀಕರಿಸದ ಬಹುಪಾಲು ಹೆಸರುಗಳು ತಮ್ಮ ಸರಕಾರದ ಸಿದ್ಧಾಂತಕ್ಕೆ ಪೂರಕವಾಗದವರು ಎಂಬುವವರದೇ ಆಗಿದೆ- ಉದಾಹರಣೆಗೆ ೨೦೧೦ರಲ್ಲಿ ಈಗಿನ ಗೃಹಮಂತ್ರಿ ಶಾ ಅವರನ್ನು ಜೈಲಿಗೆ ಕಳಿಸಿದ್ದ ಆಗಿನ ಗುಜರಾತ್ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ಖುರೇಶಿ ಅವರನ್ನು ಅವರ ಹಿರಿತನ, ದಕ್ಷತೆಯ ಮೇರೆಗೆ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಮಾಡಿ ಕೊಲಿಜಿಯಂ ಎರಡೆರಡು ಬಾರಿ ಕಳಿಸಿದ ಶಿಫಾರಸನ್ನು ಕೇಂದ್ರ ಒಪ್ಪಲೇ ಇಲ್ಲ.)

ಈ ಕೊಲಿಜಿಯಂ ಪದ್ಧತಿ ನ್ಯಾಯಾಧೀಶರ ನೇಮಕಾತಿಯಲ್ಲಿ ನ್ಯಾಯಾಂಗದ ಪರಮಾಧಿಕಾರವನ್ನೇನೋ ಸಾಂಸ್ಥೀಕರಿಸಿತು. ಆದರೆ ಈ ವ್ಯವಸ್ಥೆ ಸಂಪೂರ್ಣವಾಗಿ ಸುಪ್ರೀಂನ ಹಿರಿಯ ಐವರು ನ್ಯಾಯಾಧೀಶರ, ಉಸ್ತುವಾರಿಯಿಲ್ಲದ ಮತ್ತು ಉತ್ತರದಾಯಿತ್ವವಿಲ್ಲದ ಆಯ್ಕೆಗಳನ್ನೇ ಆಧರಿಸುವಂತಾಯಿತು.

ಕೊಲಿಜಿಯಂ ಮಾಡುವ ನೇಮಕಾತಿಯಲ್ಲಿ ಹಿರಿತನ, ಪ್ರತಿಭೆ, ಸಾಮರ್ಥ್ಯ, ದಕ್ಷತೆ ಇತ್ಯಾದಿ ಮಾನದಂಡಗಳನ್ನು ಅನುಸರಿಸ ಲಾಗುವುದೆಂಬುದು ಬಹಿರಂಗವಾಗಿ ಘೋಷಿತವಾಗಿರುವ ವಿಷಯವಾಗಿ ದ್ದರೂ, ಘೋಷಿತವಲ್ಲದ ಆಯಾ ನ್ಯಾಯಾಧೀಶರಿಗಿರ ಬಹುದಾದ ಹಲವಾರು ಸಾಮಾಜಿಕ ಪೂರ್ವಗ್ರಹಗಳು, ವ್ಯಕ್ತಿನಿಷ್ಠ ಮಾನದಂಡಗಳು ಪರಿಣಾಮ ಬೀರುತ್ತಿರುತ್ತವೆ. ಹೀಗಾಗಿ ಉನ್ನತ ನ್ಯಾಯಾಧೀಶರ ನೇಮಕಾತಿಯಲ್ಲಿ ಪರೋಕ್ಷ ಹಾಗೂ ಪ್ರತ್ಯಕ್ಷ ಸ್ವಜನಪಕ್ಷಪಾತ ಕೆಲಸ ಮಾಡುತ್ತಿರುತ್ತದೆ. ಪರಿಣಾಮವಾಗಿ ಉನ್ನತ ನ್ಯಾಯಾಧೀಶರ ಹುದ್ದೆಯೂ ಮೇಲ್ಜಾತಿ ಪುರುಷರಿಗೆ ಮಾತ್ರ ಸೀಮಿತವಾಗಿ ಉಳಿದವರಿಗೆ ಈ ಎಲ್ಲಾ ಮನದಂಡಗಳಿದ್ದರೂ ಅವಕಾಶ ಸಿಗದಂತಾಗಿದೆ.

ಕೆಲವು ಅಧ್ಯಯನಗಳ ಪ್ರಕಾರ ಸುಪ್ರೀಂನ ಶೇ. ೩೦ರಷ್ಟು ನ್ಯಾಯಾಧೀಶರು ಹಾಗೂ ಹೈಕೋರ್ಟಿನ ಶೇ. ೫೦ರಷ್ಟು ನ್ಯಾಯಾಧೀಶರು ಈ ಹಿಂದೆ ನ್ಯಾಯಾಧೀಶರಾಗಿದ್ದ, ಹಿರಿಯ ವಕೀಲರಾಗಿದ್ದವರ ಕುಟುಂಬದವರೇ ಆಗಿದ್ದಾರೆ. (ಉದಾಹರಣೆಗೆ, ಹಾಲಿ ಮುಖ್ಯ ನ್ಯಾಯಾಧೀಶರಾಗಿರುವ ನ್ಯಾ. ಡಿ.ವೈ. ಚಂದ್ರಚೂಡ್ ಅವರ ತಂದೆ ವೈ.ವಿ. ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದರು. ಇವರ ನಂತರ ೨೦೨೪ರಲ್ಲಿ ಮುಖ್ಯ ನ್ಯಾಯಾಧೀಶರಾಗಲಿರುವ ನ್ಯಾ. ಸಂಜಯ್ ಖನ್ನಾ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ಎಚ್. ಆರ್. ಖನ್ನಾ ಅವರ ಮಗ. ೨೦೨೭ರಲ್ಲಿ ಭಾರತದ ಪ್ರಪ್ರಥಮ ಮಹಿಳಾ ಮುಖ್ಯ ನ್ಯಾಯಾಧೀಶರಾಗಲಿರುವ ನ್ಯಾ. ಬಿ.ವಿ. ನಾಗರತ್ನಾ ಅವರು ಸುಪ್ರೀಂನ ಮುಖ್ಯ ನ್ಯಾಯಾಧೀಶರಾಗಿದ್ದ ಇ.ಎಸ್. ವೆಂಕಟರಾಮಯ್ಯನವರ ಮಗಳು!)

ಇದಲ್ಲದೆ ಕಳೆದ ಐವತ್ತು ಮುಖ್ಯ ನ್ಯಾಯಾಧೀಶರಲ್ಲಿ ಶೇ. ೩೬ರಷ್ಟು ಜನ ಬ್ರಾಹ್ಮಣರಾಗಿದ್ದರೆ, ಸುಪ್ರೀಂ ಕೋರ್ಟ್‌ನ ೭೩ ವರ್ಷಗಳ ಇತಿಹಾಸದಲ್ಲಿ ಕೇವಲ ನಾಲ್ವರು ಮಾತ್ರ ದಲಿತ ಹಿನ್ನೆಲೆಯ ನ್ಯಾಯಾಧೀಶರಾಗಿದ್ದಾರೆ. ೧೯೮೦ರ ತನಕ ಹಿಂದುಳಿದ ಜಾತಿಯ ಒಬ್ಬರೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರಲಿಲ್ಲ. ೧೯೯೦ರ ತನಕ ಸುಪ್ರಿಂ ಕೋರ್ಟ್‌ನಲ್ಲಿ ಒಬ್ಬರೂ ಮಹಿಳಾ ನ್ಯಾಯಾಧೀಶರಿರಲಿಲ್ಲ. ಈಗಲೂ ಸುಪ್ರೀಂ ಕೋರ್ಟ್‌ನಲ್ಲಿ ಆದಿವಾಸಿ ಹಿನ್ನೆಲೆಯ ಒಬ್ಬರೂ ನ್ಯಾಯಾಧೀಶರಿಲ್ಲ ಹಾಗೂ ಈಗ ಒಬ್ಬರು ಮಾತ್ರ ಮುಸ್ಲಿಮ್ ನ್ಯಾಯಾಧೀಶರಿದ್ದಾರೆ. ೨೦೧೬ರಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಕೊಟ್ಟ ವರದಿಯ ಪ್ರಕಾರ ಆಗಿದ್ದ ದೇಶದ ೨೧ ಹೈಕೋರ್ಟ್‌ಗಳಲ್ಲಿ ೧೬ರಲ್ಲಿ ಒಬ್ಬರೂ ದಲಿತ ಹಿನ್ನೆಲೆಯ ನ್ಯಾಯಾಧೀಶರಿರಲಿಲ್ಲ.

ಹೀಗೆ ನ್ಯಾಯಾಧೀಶರೇ ನ್ಯಾಯಾಧೀಶರನ್ನು ಆಯ್ಕೆ ಮಾಡಿಕೊಳ್ಳುತ್ತಿರುವು ದರಿಂದ ಉನ್ನತ ನ್ಯಾಯಾಲಯವೆಂಬುದು ಕೇವಲ ಮೇಲ್ಜಾತಿ ಪುರುಷರಿಂದಲೇ ತುಂಬಿಕೊಂಡಿದೆ. ಸಹಜವಾಗಿಯೇ ವಿವಿಧ, ಸಂಸ್ಕೃತಿ, ಜಾತಿ, ಭಾಷೆಗಳ ಹಿನ್ನೆಲೆಯಿರುವ ಭಾರತೀಯ ಸಮಾಜದಲ್ಲಿ ನ್ಯಾಯ-ಅನ್ಯಾಯಗಳ ವಿಚಕ್ಷಣೆಯನ್ನು ಮಾಡುವಾಗ ಆ ಸಾಮಾಜಿಕ ಹಿನ್ನೆಲೆಯ ಅನುಭವವಿಲ್ಲದೆ ಸತ್ಯ ಸಂಗತಿಗಳನ್ನು ಸರಿಯಾಗಿ ವ್ಯಾಖ್ಯಾನ ಮಾಡಲಾಗುವುದಿಲ್ಲ. ಸರಿಯಾದ ನ್ಯಾಯದಾನವನ್ನು ಮಾಡಲಾಗುವುದಿಲ್ಲ.

(ನಾಳೆಯ ಸಂಚಿಕೆಗೆ)

Similar News