ಕೆ.ಜಿ.ಎಫ್.: ಸಿಗದ ಪರಿಹಾರ, ನಿಲ್ಲದ ಮಲಹೊರುವ ಪದ್ಧತಿ

Update: 2022-12-21 06:35 GMT

ಮಲಹೊರುವ ಪದ್ಧತಿಯನ್ನು 2013ರಲ್ಲೇ ನಿಷೇಧಿಸಲಾಯಿತು. ಆದರೆ ಕಾನೂನು ಜಾರಿಯಾಗಿ 9 ವರ್ಷಗಳೇ ಕಳೆದರೂ ಪರಿಹಾರ ಮಾತ್ರ ನೀಡದಿರುವುದು ಮಲಹೊರುವವರನ್ನು ಸರಕಾರ ಕಡೆಗಣಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ 2021-22ನೇ ಸಾಲಿನಲ್ಲಿ ಕೆಲವರಿಗೆ ಮಾತ್ರ ಕೆಲವು ಸೌಲಭ್ಯಗಳನ್ನು ಅನುಮೋದಿಸಿದೆ. ಆದರೆ ಅದು ಇನ್ನೂ ಜನರ ಕೈ ತಲುಪಿಲ್ಲ. ಕೆಲವರಿಗೆ ಮಾತ್ರ ಸೌಲಭ್ಯ, ಬಹುತೇಕರಿಗೆ ಸೌಲಭ್ಯಗಳು ಸಿಗದಿರುವುದು ಮಲಹೊರುವವರ ಸಮುದಾಯದಲ್ಲಿ ಸಂಘರ್ಷವನ್ನು ಸೃಷ್ಟಿ ಮಾಡಿದೆ.

ಮಲಹೊರುವ ಪದ್ಧತಿಯ ಕುರಿತು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಕೆ.ಜಿ.ಎಫ್.ನಲ್ಲಿ ಇಂದಿಗೂ ಮಲಹೊರುವ ಪದ್ಧತಿ ಜೀವಂತವಾಗಿದೆ. ಸರಕಾರ ಮಲಹೊರುವವರನ್ನು ಗುರುತಿಸಿ ಗುರುತಿನ ಚೀಟಿ ನೀಡಿ ಆರೇಳು ವರ್ಷಗಳು ಕಳೆದರೂ ಅವರಿಗೆ ಪರಿಹಾರ ನೀಡದೆ ಕಡೆಗಣಿಸಿದೆ. ಇದರಿಂದ ತಮ್ಮ ಎಂದಿನ ವೃತ್ತಿಗಳಲ್ಲಿ ಜನರು ತೊಡಗಿಸಿಕೊಂಡಿದ್ದಾರೆ. 2013ರ ಕಾಯ್ದೆಯ ಅನ್ವಯ ಮಲಹೊರುವುದು ಹಾಗೂ ಮಲಹೊರಿಸುವುದು ಎರಡೂ ಅಪರಾಧವಾದ ಕಾರಣ ಈ ಪದ್ಧತಿ ಈಗ ಗುಟ್ಟಾಗಿ ನಡೆಯುತ್ತಿದೆ. 

12 ವರ್ಷಗಳ ಹಿಂದೆ ಕೆ.ಜಿ.ಎಫ್.ನಲ್ಲಿ ಮಲಹೊರುವ ಪದ್ಧತಿ ಜಾರಿ ಇರುವುದು ತಿಳಿದಾಗ ಮಾನವಹಕ್ಕುಗಳ ಆಯೋಗ ಮತ್ತು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು. ಅದರಂತೆ 82 ಜನರನ್ನು ಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕ ವೃತ್ತಿಗೆ ನೇಮಕ ಮಾಡಿಕೊಂಡಿದ್ದರು. 

11 ವರ್ಷಗಳ ಹಿಂದೆ ಮಲದ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಪ್ರಸಾದ್, ರವಿ, ನಾಗೇಂದ್ರ ಬಾಬು ಅವರ ಕುಟುಂಬಗಳಿಗೆ ಪರಿಹಾರ ನೀಡಿದ್ದು ಬಿಟ್ಟರೆ ವ್ಯವಸ್ಥಿತ ಬದಲಾವಣೆ ತರುವಲ್ಲಿ ಸ್ಥಳೀಯ ಆಡಳಿತ ಮತ್ತು ಕರ್ನಾಟಕ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಬೆರಳೆಣಿಕೆಯ ಜನರಿಗೆ ಕೆಲವು ಲೋನ್‌ಗಳು ಸಿಕ್ಕಿರುವುದು ಬಿಟ್ಟರೆ ಸರಕಾರ ಮಲಹೊರುವ ಪದ್ಧತಿಯನ್ನು ಕೊನೆಗಾಣಿಸಲು ಕೈಗೊಳ್ಳಬೇಕಾದ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. 

2013ರಿಂದ ಮಲಹೊರುವವರ ಸಮೀಕ್ಷೆಯಲ್ಲೇ ತೊಡಗಿರುವ ಸರಕಾರ ಇವರನ್ನು ಪುನರ್ವಸತಿಯಿಂದ ವಂಚಿತರಾಗಿ ಮಾಡುತ್ತಿದೆ. ಒಂದು ದಶಕಕ್ಕೂ ಹೆಚ್ಚಿನ ಕಾಲ ಪರಿಹಾರಕ್ಕಾಗಿ ಕಾದುಕುಳಿತವರು ನಿರಾಸೆಯಿಂದ ಮತ್ತೆ ಅನಿಷ್ಟ ವೃತ್ತಿಯೆಡೆಗೆ ಮುಖ ಮಾಡಿದ್ದಾರೆ. ಕೆ.ಜಿ.ಎಫ್.ನಲ್ಲಿ ಸಕ್ಕಿಂಗ್ ಮಿಷನ್‌ಗಳು ಇದೆ. ಜೊತೆಗೆ ಪೊಲೀಸರು ಮಲದಗುಂಡಿ ಸ್ವಚ್ಛ ಮಾಡಬಾರದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೂ ಹೊಟ್ಟೆಪಾಡಿಗಾಗಿ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾತ್ರಿ ಸಮಯದಲ್ಲಿ ಮಲದ ಗುಂಡಿಗಳನ್ನು ಸ್ವಚ್ಛ ಮಾಡುತ್ತಿದ್ದಾರೆ. ಇನ್ನು ಸಣ್ಣ ಪುಟ್ಟ ಬ್ಲಾಕ್‌ಗಳ ತೆಗೆಯುವುದು, ಶೌಚಾಲಯಗಳನ್ನು ಶುದ್ಧಗೊಳಿಸುವುದು, ಹೊಟೇಲ್, ಮಾಲ್‌ಗಳಲ್ಲಿ ಶೌಚಾಲಯಗಳನ್ನು ಶುದ್ಧಗೊಳಿಸಿ ಅದರಲ್ಲಿ ಬರುವ ಹಣದಿಂದ ಜೀವನ ನಡೆಸುತ್ತಿದ್ದಾರೆ. 

2013ರಲ್ಲಿ ಜಾರಿಯಾದ ಕಾನೂನು ಮಲಹೊರುವ ಪದ್ಧತಿಯನ್ನು ನಿಷೇಧಿಸುವ ಬದಲಿಗೆ ಮಲಹೊರುವವರ ಬದುಕುವ ಹಕ್ಕನ್ನೇ ನಿಷೇಧಿಸಲು ಜಾರಿಗೆ ತಂದಂತೆ ಇದೆ. ರಾಬರ್ಟ್‌ಸನ್ ಪೇಟೆಯ ಕೆನಡಿ ಲೈನ್ ಒಂದರಲ್ಲಿ 52 ಜನರನ್ನು ಮಲಹೊರುವವರು ಎಂದು ಸರಕಾರ ಗುರುತಿಸಿದೆ. ಕೆ.ಜಿ.ಎಫ್. ಒಂದರಲ್ಲೇ 460 ಜನ ಮಲಹೊರುವ ಪದ್ಧತಿಯಲ್ಲಿ ತೊಡಗಿದ್ದವರು ಎಂದು ಸರಕಾರ ಅಧಿಕೃತವಾಗಿ ಹೇಳಿದೆ. ಅಂದಹಾಗೆ ಈ ಗುರುತಿನ ಚೀಟಿಯ ಆಟ 2015ರಿಂದ ನಡೆಯುತ್ತಲೇ ಇದೆ. ಆದರೆ ಕನಿಷ್ಠ ಒನ್ ಟೈಮ್ ಕ್ಯಾಶ್ ಅಸಿಸ್ಟ್ ಹಣವಾದ 40 ಸಾವಿರ ಕೂಡ ನೀಡಿಲ್ಲ ನಮ್ಮ ಸರಕಾರ. ಮಲಹೊರುವ ಪದ್ಧತಿಯನ್ನು 2013ರಲ್ಲೇ ನಿಷೇಧಿಸಲಾಯಿತು. 

ಆದರೆ ಕಾನೂನು ಜಾರಿಯಾಗಿ 9 ವರ್ಷಗಳೇ ಕಳೆದರೂ ಪರಿಹಾರ ಮಾತ್ರ ನೀಡದಿರುವುದು ಮಲಹೊರುವವರನ್ನು ಸರಕಾರ ಕಡೆಗಣಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ 2021-22ನೇ ಸಾಲಿನಲ್ಲಿ ಕೆಲವರಿಗೆ ಮಾತ್ರ ಕೆಲವು ಸೌಲಭ್ಯಗಳನ್ನು ಅನುಮೋದಿಸಿದೆ. ಆದರೆ ಅದು ಇನ್ನೂ ಜನರ ಕೈ ತಲುಪಿಲ್ಲ. ಕೆಲವರಿಗೆ ಮಾತ್ರ ಸೌಲಭ್ಯ, ಬಹುತೇಕರಿಗೆ ಸೌಲಭ್ಯಗಳು ಸಿಗದಿರುವುದು ಮಲಹೊರುವವರ ಸಮುದಾಯದಲ್ಲಿ ಸಂಘರ್ಷವನ್ನು ಸೃಷ್ಟಿ ಮಾಡಿದೆ.

ನಿಲ್ಲದ ಸಾವುಗಳು...!

ಕೆ.ಜಿ.ಎಫ್.ನ ಕೆನಡಿ ಲೈನ್‌ನಲ್ಲಿ ಅನಾರೋಗ್ಯದಿಂದ ಸಾವುಗಳು ಸಂಭವಿಸುತ್ತಲೇ ಇವೆ. ಮಲಹೊರುವ ಪದ್ಧತಿಯು ಸುದ್ದಿಯಾದಾಗ ಇದ್ದ ಬಹುತೇಕರು ಇಂದು ಮಣ್ಣುಪಾಲಾಗಿದ್ದಾರೆ. ಮಲಹೊರುವ ಗುರುತಿನ ಚೀಟಿ ಪಡೆದ ಇಪ್ಪತ್ತಕ್ಕೂ ಹೆಚ್ಚಿನ ಜನ ಯಾವುದೇ ಪರಿಹಾರ ಪಡೆಯುವುದಕ್ಕೂ ಮೊದಲೇ ತೀರಿಕೊಂಡಿದ್ದಾರೆ. ಮಲದ ಗುಂಡಿಗಳು, ಮ್ಯಾನ್‌ಹೋಲ್‌ಗಳು, ಪಟ್ಟಣದ ಕೊಳಕನ್ನು ಸ್ವಚ್ಛಗೊಳಿಸುವ ಕೆಲಸಗಳಿಂದ ಉಂಟಾಗಿರುವ ಅನಾರೋಗ್ಯವು ಯಾವ ಕ್ಷಣದಲ್ಲಾದರೂ ಸಾವನ್ನು ತಂದಿಡಬಹುದಾಗಿದೆ. 

ಇಂತಹ ಸಾವುಗಳಿಗೆ ಯುವಜನತೆಯು ಹೊರತಾಗಿಲ್ಲ ಅನ್ನುವುದು ಆಘಾತಕಾರಿಯಾಗಿದೆ. ಅನಾರೋಗ್ಯದಿಂದ ಸಾವನ್ನಪ್ಪಿದ ಕುಟುಂಬಗಳಿಗೆ ಸರಕಾರ ಯಾವುದೇ ಪರಿಹಾರವನ್ನು ನೀಡಿಲ್ಲ. ಕಳೆದ ಎರಡು ವರ್ಷದ ಅವಧಿಯಲ್ಲಿ ಕನಿಷ್ಠ 6 ಜನ ಗುರುತಿಸಿದ ಮಲಹೊರುವವರು ತೀರಿಕೊಂಡಿದ್ದಾರೆ. ಇದು ಕೆನಡಿ ಲೈನ್ ಮತ್ತು ಊರಿಗಾಂ ಪೇಟೆಯಲ್ಲಿ ಮಾತ್ರ. ಇದರಂತೆ ಕೆ.ಜಿ.ಎಫ್.ನಲ್ಲಿ ಇನ್ನೂ ಒಂಭತ್ತು ಲೈನ್‌ಗಳಿವೆ. ಅಲ್ಲಿ ಎಷ್ಟು ಜನ ಸತ್ತಿರಬೇಕೆಂದು ನೀವೇ ಊಹಿಸಿಕೊಳ್ಳಿ. 

‘‘ಊರಿಗಾಂ ಪೇಟೆಯಲ್ಲಿ 500 ಜನ ಯುವಕ, ಯುವತಿಯರು ಇದ್ದಾರೆ, ಅದರಲ್ಲಿ ಅರ್ಧ ಜನ ಕೂಲಿ ಕೆಲಸ ಮಾಡುತ್ತಿದ್ದಾರೆ, ಇನ್ನರ್ಧ ಜನ ಅದೇ (ಮಲಹೊರುವ) ಕೆಲಸ ಮಾಡುತ್ತಾ ಇದ್ದಾರೆ, ಈಗಲೂ ಸರಕಾರಕ್ಕೆ ತಿಳಿಯದ ಹಾಗೆ ರಾತ್ರಿಯಲ್ಲಿ ಹೋಗಿ ಕೆಲಸ ಮಾಡಿಕೊಂಡು ಬರೋರು ಇದ್ದಾರೆ. ಕನಕರಾಜ್ ಅಂತ ನಮ್ಮ ಹುಡುಗ ಸುಬ್ರಮಣಿ ಟೆಂಪಲ್ ಸ್ಟ್ರೀಟ್‌ನಲ್ಲಿ ಹೋಗಿ ಒಂದು ಪಿಟ್ ತೆಗೆದಿದ್ದಾನೆ. ಆ ಚಪ್ಪಡಿ ಓಪನ್ ಮಾಡುವಾಗ ಗ್ಯಾಸ್ ಹೊಡೆದು ಹಂಗೆ ಬಿದ್ದೋಗಿದ್ದಾನೆ. ತಗೊಂಡು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಹೋಗ್ಬಿಟ್ಟಿದ್ದಾನೆ. 

ಚಿಕ್ಕ ಹುಡುಗ ಅವನಿಗೆ 30 ವಯಸ್ಸು ಇರಬಹುದು ಅವನು ಸಾಯೋ ವಯಸ್ಸಾ? ಸರಕಾರ ಏನ್ ಮಾಡ್ತಾ ಇದೆ ಅಂತ ಅರ್ಥ ಆಗ್ತಾ ಇಲ್ಲ ನಮಗೆ, ಒಂದೇ ಒಂದು ನಯಾಪೈಸೆಯ ಉಪಕಾರಾನೂ ಆಗಿಲ್ಲ ಸರಕಾರದಿಂದ ನಮಗೆ’’ ಎಂದು ಹೇಳುತ್ತಾರೆ ಸಫಾಯಿ ಕರ್ಮಚಾರಿ ಶಿವರವರು. ದಿನಾಂಕ 10/01/2022ರಂದು ಕನಕರಾಜ್ ಪಿಟ್ ಕ್ಲೀನ್ ಮಾಡಲು ಹೋಗಿ ಗ್ಯಾಸ್ ಹೊಡೆದು ಪ್ರಜ್ಞೆ ತಪ್ಪಿಬೀಳುತ್ತಾನೆ. ಜೊತೆಯಲ್ಲಿದ್ದವರು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಾರೆ, ಆದರೆ ಆಸ್ಪತ್ರೆಗೆ ಹೋಗುವ ಮೊದಲೇ ಪ್ರಾಣ ಹೋಗುತ್ತದೆ. 

ಆದರೆ ಪೋಸ್ಟ್ ಮಾರ್ಟಂ ಮಾಡಿಸದೇ ಮಣ್ಣು ಮಾಡಿದ್ದಾರೆ. ಕಾರಣ ಕೇಳಿದರೆ ದೇಹವನ್ನು ಕತ್ತರಿಸಿಕೊಡುತ್ತಾರೆ, ಅದಕ್ಕಾಗಿ ಬೇಡ ಎಂದು ಮಣ್ಣುಮಾಡಿದೆವು ಎಂದು ಉತ್ತರ ನೀಡುತ್ತಾರೆ. ಹೀಗಾಗಿ ಸರಕಾರಕ್ಕೆ ಬೇಕಾದ ಯಾವೊಂದು ಸಾಕ್ಷಿಯೂ ಈಗ ಆ ಕುಟುಂಬದವರ ಹತ್ತಿರ ಇಲ್ಲ. ಸಣ್ಣ ಮಗ ತನ್ನ ತಂದೆಯ ಸಾವಿನ ಬಗ್ಗೆ ಅರಿವಿಲ್ಲದೆ ಆಟವಾಡುತ್ತಿದ್ದಾನೆ. ಗಂಡನನ್ನು ಕಳೆದುಕೊಂಡ ಹೆಣ್ಣು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾಳೆ. ಈ ಕುರಿತು ಸೂಕ್ತ ತನಿಖೆ ಮಾಡಿ ಪರಿಹಾರ ಕೊಡುವ ನಿಟ್ಟಿನಲ್ಲಿ ಸಫಾಯಿ ಕರ್ಮಚಾರಿ ಆಯೋಗ ಕೆಲಸ ಮಾಡಬೇಕಾಗಿದೆ. ಕೋವಿಡ್ ಸಾವು, ಸಿಗದ ಪರಿಹಾರ

ಮಲಹೊರುವ ಪದ್ಧತಿಯೊಂದಿಗೆ ಕೋವಿಡ್ 19 ಸಹ ಇಲ್ಲಿನ ಜನರಿಗೆ ಸಂಕಷ್ಟ ಸೃಷ್ಟಿ ಮಾಡಿದೆ. ಬಹುತೇಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇಲ್ಲಿನ ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಮಲಹೊರುವವರು ಪ್ರಾಣದ ಹಂಗನ್ನು ತೊರೆದು ಮೊದಲ ಸಾಲಿನ ಸೇನಾನಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲೂ ಪೌರಕಾರ್ಮಿಕರಿಗೆ ಮತ್ತು ಸಫಾಯಿ ಕರ್ಮಚಾರಿಗಳಿಗೆ ಯಾವುದೇ ಹೆಚ್ಚುವರಿ ಸೌಕರ್ಯಗಳನ್ನು ನೀಡಿಲ್ಲ ಅನ್ನುವುದು ವಿಷಾದನೀಯ. 

ಇನ್ನು ಬಿಜಿಎಂಎಲ್‌ನಲ್ಲಿ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡಿದ್ದ ಯೇಸುರವರ ಸ್ಥಿತಿಯಂತೂ ಕರುಣಾಜನಕವಾಗಿದೆ. ಜೋನ್ ನಂ 6ರಲ್ಲಿ 1971ರಿಂದ ಬಿಜಿಎಂಎಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬಿಜಿಎಂಎಲ್ ಬಂಗಳ ಏರಿಯಾದಲ್ಲಿ ಪಿಟ್‌ಗಳನ್ನು ಕ್ಲೀನ್ ಮಾಡುತ್ತಾರೆ ಆ ಪ್ರದೇಶವನ್ನು ಸ್ವಚ್ಛ ಮಾಡುತ್ತಾ ಜೀವನ ಸಾಗಿಸಿದವರು. ಗಣಿಗಾರಿಕೆ ಮುಚ್ಚಿದ ಮೇಲೆ ವಿಆರ್‌ಎಸ್ ಕೊಟ್ಟು ಮನೆಗೆ ಕಳುಹಿಸಿದರು. ಹೆಂಡತಿಯೂ ಬಿಜಿಎಂಎಲ್‌ನಲ್ಲೇ ಕೆಲಸ ಮಾಡುತ್ತಿದ್ದವರು 2000ದಲ್ಲಿ ಗಣಿ ಮುಚ್ಚಿದ ಬಳಿಕ ಅವರು ಗುತ್ತಿಗೆ ಆಧಾರದಲ್ಲಿ ಕೆ.ಜಿ.ಎಫ್‌ನ ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ದುಡಿಯುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. 

ಇದೇ ಸಮಯದಲ್ಲಿ ದೇಶದಲ್ಲಿ ಕಾಣಿಸಿಕೊಂಡ ಕೊರೋನ ಈ ಕುಟುಂಬಕ್ಕೆ ಆಘಾತವನ್ನು ಸೃಷ್ಟಿಸಿದೆ. ಮಗನಾದ ವಿನೋದ್ ಕುಮಾರ್ ಮಲಹೊರುವ ಪದ್ಧತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳದೆ ಆರ್ಕೆಸ್ಟ್ರಾದಲ್ಲಿ ತನ್ನ ಜೀವನವನ್ನು ಕಟ್ಟಿಕೊಂಡಿದ್ದ, ಬೆಂಗಳೂರು, ಹೈದರಾಬಾದ್, ಚೆನ್ನೈಗಳಂತಹ ಪ್ರಮುಖ ನಗರಗಳಲ್ಲಿ ಕಾರ್ಯಕ್ರಮ ನೀಡುತ್ತಾ ಕುಟುಂಬವನ್ನು ಪೋಷಿಸುತ್ತಿದ್ದ. ಒಂದು ದಿನ ಜ್ವರ ಅಂತ ಆಸ್ಪತ್ರೆಗೆ ಹೋದಾಗ ಕೊರೋನ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. 

ಮಾರನೇ ದಿನ ಬೆಳಗ್ಗೆಯೇ ಅಂದರೆ 24/04/2021ರಂದು ವಿನೋದ್ ಕುಮಾರ್ ತೀರಿಕೊಂಡಿದ್ದಾನೆ. ಅಂದಹಾಗೆ ಯೇಸುವಿನ ಮಡದಿ ಚಿನ್ನಮ್ಮ ಸಹ ಸಫಾಯಿ ಕರ್ಮಚಾರಿಯೇ ಆಗಿದ್ದರು, ಜೊತೆಗೆ ಗುತ್ತಿಗೆ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದವರು, ಅವರ ಸಾವಿಗೂ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಜೊತೆಗೆ ಕೊರೋನದಿಂದ ಸಾವನ್ನಪ್ಪಿದರೆ ಒಂದು ಲಕ್ಷ ಪರಿಹಾರ ಎಂದು ಸರಕಾರ ಘೋಷಿಸಿತ್ತು. ಆ ಹಣವೂ ಸಿಕ್ಕಿಲ್ಲ ಹೀಗಾಗಿ ಮನೆಗೆ ಆಧಾರವಾಗಿದ್ದ ಮಗ, ಜೀವನಕ್ಕೆ ಆಧಾರವಾಗಿದ್ದ ಹೆಂಡತಿ ಇಬ್ಬರನ್ನು ಎರಡೇ ವರ್ಷಗಳಲ್ಲಿ ಕಳೆದುಕೊಂಡು ನೋವಿನ ಕ್ಷಣಗಳನ್ನು ಕಳೆಯುತ್ತಿದ್ದಾರೆ ಯೇಸು ಎಂಬ ಹಿರಿಯ ಜೀವ. ಮರೀಚಿಕೆಯಾದ ಮೂಲಭೂತ ಸೌಕರ್ಯಗಳು

ಕೆ.ಜಿ.ಎಫ್.ನಲ್ಲಿ ಮಲಹೊರುವವರು ವಾಸಿಸುತ್ತಿರುವ ಪ್ರದೇಶ ಭಾರತ್ ಗೋಲ್ಡ್ ಮೈನ್ ಲಿಮಿಟೆಡ್ (ಬಿಜಿಎಂಎಲ್) ನೀಡಿರುವುದಾಗಿದೆ. ಇದಕ್ಕಾಗಿ ಇಲ್ಲಿನ ಜನರು ಕಂತುಗಳ ರೂಪದಲ್ಲಿ ಹಣವನ್ನು ಕಟ್ಟಿದ್ದಾರೆ. ಗಣಿಗಾರಿಕೆ ನಿಂತು 20 ವರ್ಷಗಳು ಕಳೆದಿದೆ. ಇದರಿಂದ ಬಿಜಿಎಂಎಲ್ ಈ ಪ್ರದೇಶಗಳ ನಿರ್ವಹಣೆಯನ್ನು ಕೈಬಿಟ್ಟಿದೆ. ಇತ್ತ ಸರಕಾರವೂ ತಮಗೆ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದೆ. ಮಲಹೊರುವವರು ವಾಸಿಸುವ ಪ್ರದೇಶವನ್ನು ಅಭಿವೃದ್ಧಿಗೊಳಿಸಬೇಕು ಎಂದು ಕಾನೂನು ಹೇಳಿದರೂ ಸರಕಾರ ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. 

ಕೆ.ಜಿ.ಎಫ್.ನಲ್ಲಿರುವ ಮಲಹೊರುವ ವೃತ್ತಿಯಲ್ಲಿ ತೊಡಗಿದ್ದವರ ಹಲವು ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲ. ಮಳೆ ಬಂದರೆ ಸೋರುತ್ತವೆ. ಗೋಡೆಗಳು ಯಾವಾಗ ಬೇಕಾದರೂ ಕುಸಿದು ಬೀಳುವ ಸ್ಥಿತಿಯಲ್ಲಿವೆ. ಇದೇ ಕೆ.ಜಿ.ಎಫ್.ನಲ್ಲಿರುವ ಊರಿಗಾಂ ಪೇಟೆ ಎಂಬ ಪ್ರದೇಶದಲ್ಲಿ ಮಲಹೊರುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಸರಕಾರ ನೀಡಿರುವ ಮನೆಗಳು ಕಳಪೆ ಗುಣಮಟ್ಟದ್ದಾಗಿದ್ದು ಮಳೆ ಬಂದರೆ ಸೋರುತ್ತವೆ. 

ಜೊತೆಗೆ ಯಾವಾಗ ಬೇಕಾದರೂ ಬೀಳಬಹುದಾದ ಸ್ಥಿತಿಯಲ್ಲಿವೆ. ಇತ್ತೀಚೆಗೆ ಬಿದ್ದ ಮಳೆಗೆ ಮನೆಯ ಮೇಲ್ಛಾವಣಿ ಬಿದ್ದ ಕಾರಣ ಮಗು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ ಘಟನೆ ಜರುಗಿದೆ. ಕೆನಡಿ ಲೈನ್‌ನಲ್ಲಿ ಇರುವ ನಾಗಮ್ಮ ಮುಂಬೈ ಮಾದರಿಯ ಒಣ ಮಲವನ್ನು ಹೊತ್ತು ಬದುಕಿದ ಜೀವ. 2010ರಲ್ಲಿ ಅಧ್ಯಯನ ನಡೆಸಿದಾಗ ಅವರ ಪರಿಸ್ಥಿತಿ ಹೇಗಿತ್ತೋ ಅದೇ ಸ್ಥಿತಿಯಲ್ಲಿ ಇವತ್ತಿಗೂ ಅವರನ್ನು ಕಾಣುವಂತಹ ಪರಿಸ್ಥಿತಿ ಅಂತರಾತ್ಮವನ್ನು ಚುಚ್ಚುವಂತಿತ್ತು. ಇವತ್ತು ತನ್ನ ಗುರುತಿನ ಚೀಟಿಗಳನ್ನು ಹಿಡಿದು ತನ್ನ ದಾರುಣ ಬದುಕನ್ನು ಸರಕಾರದ ಮುಂದಿಟ್ಟು ಸಾಯುವ ಕಾಲದಲ್ಲಾದರೂ ನೆಮ್ಮದಿಯಿಂದ ಬದುಕಬೇಕೆಂದು ಹೋರಾಡುತ್ತಲೇ ಇದ್ದಾರೆ.

ನಾಗಮ್ಮ ಒಬ್ಬರೇ ಅಲ್ಲ, ಈ ರೀತಿ ಬಹುತೇಕ ಜೀವಗಳು ತಮ್ಮ ಬದುಕಿನಲ್ಲಿ ಸಣ್ಣ ಬದಲಾವಣೆಗಾಗಿ ಪರದಾಡುತ್ತಿವೆ. ಡಾ. ಅನಿತಾ ಎಜುಕೇಷನಲ್ ಟ್ರಸ್ಟ್ ಸಹಕಾರದೊಂದಿಗೆ ನಡೆದ ಒಂದು ಸಣ್ಣ ಅಧ್ಯಯನದಲ್ಲಿ ಇಷ್ಟೊಂದು ದಾರುಣ ಬದುಕು ಅನಾವರಣವಾಗಿದೆ. ಇನ್ನು ಬಿಜಿಎಂಎಲ್‌ನ ಹತ್ತೂ ಲೈನ್‌ನಲ್ಲಿ ಸೂಕ್ಷ್ಮವಾಗಿ ಅಧ್ಯಯನ ನಡೆಸಿದ್ದೇ ಆದರೆ ದೇಶವೇ ತಲೆ ತಗ್ಗಿಸುವಷ್ಟರ ಮಟ್ಟಿಗೆ ಇಲ್ಲಿನ ಜನರನ್ನು ‘ಭಾರತ’ ನಡೆಸಿಕೊಳ್ಳುತ್ತದೆ.

Similar News