ಆದಿವಾಸಿಗಳು, ಅರಣ್ಯವಾಸಿಗಳ ಭವಿಷ್ಯವೇನು?
ಅರಣ್ಯವಾಸಿಗಳನ್ನು ಅವರ ಹಕ್ಕುಗಳ ಮೂಲಕವಾಗಿ ಸಿಕ್ಕಿರುವ ಅವರ ಸ್ವಂತ ನೆಲೆಯಲ್ಲಿಯೇ ಅತಿಕ್ರಮಣಕಾರರು ಎಂದು ಆರೋಪಿಸುತ್ತಿರುವ ವಾದದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಯಾವ ನಿರ್ಧಾರ ತಳೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅದು ಕೈಗೊಳ್ಳಲಿರುವ ನಿರ್ಧಾರ ಮಹತ್ವದ್ದಾಗಲಿದೆ. 2019ರ ಹೊರಹಾಕುವಿಕೆ ನಿರ್ಧಾರವನ್ನೇ ಎತ್ತಿಹಿಡಿಯುವುದೇ ಅಥವಾ ಎಫ್‌ಆರ್‌ಎಯ ಸಾಂವಿಧಾನಿಕತೆಯನ್ನು ಎತ್ತಿಹಿಡಿಯುವುದೇ ಎಂಬುದನ್ನು ಕಾದುನೋಡಬೇಕಿದೆ. ಲಕ್ಷಾಂತರ ಅರಣ್ಯವಾಸಿಗಳ ಬದುಕು ಮತ್ತು ಹಕ್ಕು ಆ ಬಹುದೊಡ್ಡ ನಿರ್ಧಾರವನ್ನೇ ಅವಲಂಬಿಸಿದೆ.
ತಮ್ಮ ಹಕ್ಕುಗಳಿಗಾಗಿ ಆದಿವಾಸಿಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳು ನಡೆಸುತ್ತಿರುವ ಹೋರಾಟಕ್ಕೆ ದೀರ್ಘ ಇತಿಹಾಸವೇ ಇದೆ. ಬ್ರಿಟಿಷರ ಆಳ್ವಿಕೆ ಹೊತ್ತಲ್ಲಿ ದೊಡ್ಡ ಮಟ್ಟದ ಸಂಕಟವನ್ನು ಎದುರಿಸಬೇಕಾಗಿ ಬಂದ ಆದಿವಾಸಿಗಳು ಅದರ ವಿರುದ್ಧ ತೀವ್ರ ಹೋರಾಟವನ್ನೂ ನಡೆಸಬೇಕಾಗಿ ಬಂದಿತ್ತು. ಆದಿವಾಸಿಗಳನ್ನು ಅರಣ್ಯದಿಂದ ಹೊರಗಟ್ಟುವ ಬ್ರಿಟಿಷರ ನಡೆಯೇ, ಈಗಲೂ ಅರಣ್ಯ ಹಕ್ಕು ಕಾಯ್ದೆ ಇರುವಾಗಲೂ ಚಾಲ್ತಿಯಲ್ಲಿದೆ. ಅರಣ್ಯವಾಸಿಗಳ ವಿರುದ್ಧದ ಕೈಗಾರಿಕಾ ಲಾಬಿಗಳು ಸರಕಾರದೊಡನೆ ಹೊಂದಿರುವ ಸಂಬಂಧಗಳು ಅರಣ್ಯವಾಸಿಗಳ ಬದುಕು ಅತಂತ್ರವಾಗುತ್ತಿರುವುದಕ್ಕೆ ಕಾರಣವಾಗಿದೆ.
ಇದೇ ವರ್ಷದ ಜೂನ್‌ನಲ್ಲಿ ಅರಣ್ಯ ಸಂರಕ್ಷಣೆ ನಿಯಮಗಳಿಗೆ (ಎಫ್‌ಸಿಆರ್) ಸರಕಾರ ತಿದ್ದುಪಡಿ ತಂದಿದ್ದು, ಅದರ ಪ್ರಕಾರ ಅರಣ್ಯವಾಸಿಗಳ ಅನುಮತಿಯಿಲ್ಲದೆ ಆ ಪ್ರದೇಶವನ್ನು ಕೈಗಾರಿಕೆಗಳಿಗೆ ಕೊಡುವ ಪ್ರಕ್ರಿಯೆ ಸುಲಭವಾಗಿದೆ. ಇದರೊಂದಿಗೆ, ಅರಣ್ಯ ಪ್ರದೇಶದಲ್ಲಿ ಕೈಗೊಳ್ಳಲಾಗುವ ಯೋಜನೆಗಳನ್ನು ತಿರಸ್ಕರಿಸುವ ಆದಿವಾಸಿಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ ಅಧಿಕಾರವನ್ನು ಕಸಿದಂತಾಗಿದೆ.
ಇದರ ನಡುವೆಯೇ, ಅವರ ಹಕ್ಕುಗಳನ್ನು ಸಂರಕ್ಷಿಸಲಿಕ್ಕಿರುವ ಅರಣ್ಯ ಹಕ್ಕುಗಳ ಕಾಯ್ದೆಯನ್ನು (ಎಫ್‌ಆರ್‌ಎ) ಕಾನೂನುಬಾಹಿರಗೊಳಿಸುವ ನಿಟ್ಟಿನ ವಾದಗಳುಳ್ಳ ಕೆಲವು ಎನ್‌ಜಿಒಗಳ ಅರ್ಜಿ ಸುಪ್ರೀಂ ಕೋರ್ಟ್ ವಿಚಾರಣೆಗೆ ಬರಲಿಕ್ಕಿದೆ. 16 ಲಕ್ಷಕ್ಕೂ ಹೆಚ್ಚು ಕುಟುಂಬಗಳಿರುವ ಅರಣ್ಯವಾಸಿಗಳ ಸಂಖ್ಯೆ ಸುಮಾರು 78 ಲಕ್ಷಕ್ಕೂ ಅಧಿಕ ಎಂಬ ಅಂದಾಜಿದೆ. ಇವರ ಬದುಕು ಸುಪ್ರೀಂ ಕೋರ್ಟ್ ತಳೆಯಲಿರುವ ನಿಲುವನ್ನೇ ಅವಲಂಬಿಸಿದೆ.
ಆದಿವಾಸಿಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳು ಜೀವವೈವಿಧ್ಯ ಮತ್ತು ಅರಣ್ಯ ಪರಿಸರ ವ್ಯವಸ್ಥೆಯ ಭಾಗದಂತೆ ಜೀವನ ಸಾಗಿಸುತ್ತಿರುವವರು. ಹೀಗಿರುವಾಗ ಬುಡಕಟ್ಟು ಹಕ್ಕುಗಳನ್ನು ರಕ್ಷಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಸರಕಾರದ ನಡೆ, ಅರಣ್ಯವಾಸಿಗಳ ಪಾಲಿಗೆ ಸಮಸ್ಯೆಯನ್ನು ತಂದಿಟ್ಟಿದೆ. ಅವರನ್ನು ಹೊರಹಾಕುವ ಹುನ್ನಾರಗಳು ಶಕ್ತಿ ಪಡೆಯತೊಡಗಿವೆ. ಎಫ್‌ಆರ್‌ಎ ವಿರುದ್ಧದ ತಕರಾರು ಕೂಡ ಈ ಹುನ್ನಾರಗಳ ಭಾಗವೇ ಆಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಬ್ರಿಟಿಷ್ ರಾಜ್ ಅಡಿಯಲ್ಲಿನ ಅರಣ್ಯ ಆಡಳಿತವು, ಇಲ್ಲಿನ ಪರಿಸರದ ನೀತಿಗಳನ್ನು ರೂಪಿಸಲು ಅನುಸರಿಸಿದ್ದು ಪಾಶ್ಚಿಮಾತ್ಯ ತರ್ಕವನ್ನು. ಪ್ರಕೃತಿಯೊಂದಿಗೆ ವಾಸಿಸುವ ಜನರು ಅದನ್ನು ಸಮರ್ಥವಾಗಿ ಸಂರಕ್ಷಿಸಲು ಅಥವಾ ಬಳಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ವಸಾಹತುಶಾಹಿ ನೀತಿಗಳು ಅರಣ್ಯವಾಸಿ ಸಮುದಾಯಗಳನ್ನು ಅಪರಾಧಿ ಸ್ಥಾನದಲ್ಲಿಟ್ಟವು. ವಾಣಿಜ್ಯ ಬಳಕೆಗೆ ಅರಣ್ಯವನ್ನು ಬಳಸಿಕೊಳ್ಳುವ ಬ್ರಿಟಿಷರ ಯೋಜನೆಯ ಮುಂದೆ ಆದಿವಾಸಿಗಳ ಬದುಕಿಗೆ ಬೆಲೆ ಇಲ್ಲವಾಯಿತು.
ಸ್ವಾತಂತ್ರ್ಯಾನಂತರ ಕೂಡ ಪರಿಸ್ಥಿತಿ ಹೆಚ್ಚು ಬದಲಾಗಲಿಲ್ಲ. ಅರಣ್ಯವಾಸಿಗಳ ಅತಂತ್ರತೆ ತಪ್ಪಲಿಲ್ಲ. ಅರಣ್ಯ ಪ್ರದೇಶಗಳನ್ನು ಅಭಿವೃದ್ಧಿ, ಸಂಪನ್ಮೂಲ ಹೊರತೆಗೆಯುವಿಕೆ ಅಥವಾ ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಿಗೆ ಲಭ್ಯವಾಗುವಂತೆ ಮಾಡುವ ನೆಪದಲ್ಲಿ ಆದಿವಾಸಿಗಳನ್ನು ಹೊರಹಾಕುವ ಯತ್ನಗಳೇ ಮತ್ತೆ ಮತ್ತೆ ನಡೆದಿವೆ. ತಮ್ಮ ಹಕ್ಕುಗಳಿಗಾಗಿ ಅವರ ಹೋರಾಟವೂ ನಡೆದೇ ಇದೆ. ರಾಜ್ಯ ಸರಕಾರಗಳು, ಅರಣ್ಯ ಇಲಾಖೆಗಳು ಮತ್ತು ಎನ್‌ಜಿಒಗಳು ಅರಣ್ಯವಾಸಿಗಳಿಗೆ ನೀಡಿದ ಪುನರ್ವಸತಿ ಭರವಸೆಗಳು ಈಡೇರಿದ್ದೂ ಅಷ್ಟರಲ್ಲೇ ಇದೆ.
ತಮಗಾಗುತ್ತಿರುವ ಅನ್ಯಾಯಗಳ ವಿರುದ್ಧ ಅರಣ್ಯವಾಸಿಗಳು ನಡೆಸಿದ ಸುದೀರ್ಘ ಚಳವಳಿಯ ನಂತರ ಬಂದಿದ್ದೇ 2006ರ ಅರಣ್ಯ ಹಕ್ಕುಗಳ ಕಾಯ್ದೆ. ಈ ಕಾಯ್ದೆಯು, ಆದಿವಾಸಿಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳು ತಮ್ಮ ಅರಣ್ಯ ಹಕ್ಕುಗಳನ್ನು ಕೇಳಬಹುದಾಗಿದೆ. ತಲೆಮಾರುಗಳಿಂದ ವಾಸಿಸುತ್ತಿರುವ ಪ್ರದೇಶಗಳಲ್ಲಿ ಅರಣ್ಯದ ಮೇಲೆ ಅವರಿಗಿರುವ ಹಕ್ಕುಗಳ ರಕ್ಷಣೆಯನ್ನು ಇದು ಒಳಗೊಂಡಿದೆ. ತಮ್ಮ ಪ್ರದೇಶಗಳಲ್ಲಿ ಯಾವುದೇ ಕೈಗಾರಿಕಾ ಯೋಜನೆಯನ್ನು ತಿರಸ್ಕರಿಸುವ ಹಕ್ಕು ಅವರಿಗಿರುತ್ತದೆ. ಗ್ರಾಮಸಭೆಗಳ ಮೂಲಕ ಅವರು ತಮ್ಮ ಹಕ್ಕು ಮತ್ತು ನಿರ್ಧಾರಗಳನ್ನು ತಿಳಿಸಲು ಅವಕಾಶವಿರುತ್ತದೆ.
ಇಂಥದೊಂದು ಹೆಗ್ಗುರುತಿನ ಬೆಳವಣಿಗೆಯ ಹೊರತಾಗಿಯೂ ಅರಣ್ಯವಾಸಿಗಳಿಗೆ ಅನಿಶ್ಚಿತತೆ ತಪ್ಪಿಲ್ಲ. ಈಗ ತರಲಾಗಿರುವ ತಿದ್ದುಪಡಿ, ಅರಣ್ಯಪ್ರದೇಶದಲ್ಲಿನ ಕೈಗಾರಿಕಾ ಯೋಜನೆಗಳ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರದಿಂದ ಅರಣ್ಯವಾಸಿಗಳನ್ನು ದೂರವಿಡುತ್ತದೆ. ಅವರ ಅನುಮತಿಯಿಲ್ಲದೆ ಭೂಮಿಯನ್ನು ಅತಿಕ್ರಮಿಸುವ ಪ್ರಕ್ರಿಯೆಗೆ ತಿದ್ದುಪಡಿಯಲ್ಲಿ ಒತ್ತು ನೀಡಲಾಗಿದೆ. ಹೀಗೆ ಅವರನ್ನು ಅರಣ್ಯದಿಂದ ಆಚೆಗಟ್ಟುವ ಲಾಬಿಗಳು ಸಕ್ರಿಯವಾಗಿಯೇ ಇವೆ. ಇದರೆದುರು, ಕಾಯ್ದೆಯನ್ನು ಕಾಪಾಡುವ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಖಾಸಗಿಯವರ ಪ್ರಭಾವ, ಅರಣ್ಯವಾಸಿಗಳ ವಿರುದ್ಧ ಪಕ್ಷಪಾತ ಧೋರಣೆ ಇವೆಲ್ಲವುಗಳನ್ನು ಅವರೀಗ ಎದುರಿಸಬೇಕಾಗಿದೆ.
2008ರಲ್ಲಿಯೇ, ಎಫ್‌ಆರ್‌ಎ ವಿರುದ್ಧ ಅದು ಅಸಾಂವಿಧಾನಿಕ, ಸಂರಕ್ಷಣಾ ವಿರೋಧಿ ಮತ್ತು ಅತಿಕ್ರಮಣಕಾರರಿಗೆ ಅನುಕೂಲಕರ ಎಂಬ ನೆಪಗಳನ್ನು ಮುಂದೆ ಮಾಡಿದ ವಾದವೊಂದು ಎನ್‌ಜಿಒಗಳ ಸಣ್ಣ ಗುಂಪೊಂದರಿಂದ ಮಂಡನೆಯಾಯಿತು. ಇದರ ಪರಿಣಾಮವಾಗಿ, 2019ರಲ್ಲಿ, 16 ಲಕ್ಷಕ್ಕೂ ಹೆಚ್ಚು ಕುಟುಂಬಗಳನ್ನು ಅವರ ಮನೆಗಳಿಂದ ಹೊರಹಾಕಬಹುದೆಂಬ ಆದೇಶವೂ ಹೊರಬಿತ್ತು.
ಈ ಆತಂಕಕಾರಿ ನಿರ್ಧಾರದ ವಿರುದ್ಧ ಅರಣ್ಯವಾಸಿಗಳು ಮತ್ತು ಬೆಂಬಲಿಗ ಗುಂಪುಗಳು ದೊಡ್ಡ ಪ್ರಮಾಣದ ಹೋರಾಟಕ್ಕೆ ನಿಂತವು. ನೂರಾರು ಸಂರಕ್ಷಣಾ ಕಾರ್ಯಕರ್ತರು ತೆರವು ಆದೇಶದ ವಿರುದ್ಧ ಮಾತನಾಡಿದರು. ಕಡೆಗೆ, ರಾಜ್ಯ ಸರಕಾರಗಳು ಮೊದಲು ಯಾವ ಆಧಾರದ ಮೇಲೆ ಹಕ್ಕುಗಳನ್ನು ತಿರಸ್ಕರಿಸಲಾಗಿದೆ ಎಂಬುದನ್ನು ಪರಿಶೀಲಿಸಬೇಕು ಎಂದು ಕೇಂದ್ರ ಸರಕಾರ ಹೇಳಿತು. 2019ರ ಕೊನೆಯಲ್ಲಿ, ಉಚ್ಚಾಟನೆಯ ನಿರ್ಧಾರವನ್ನು ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆಹಿಡಿಯಿತು.
ಎಫ್‌ಆರ್‌ಎ ವಿರುದ್ಧದ ವಾದಗಳಲ್ಲಿ ಮೊದಲನೆಯದಾಗಿ, ಗ್ರಾಮಸಭೆಗಳ ಮೂಲಕ ಅರಣ್ಯವಾಸಿಗಳು ಅರಣ್ಯಪ್ರದೇಶದಲ್ಲಿನ ಯೋಜನೆಗಳ ಬಗ್ಗೆ ನಿರ್ಧಾರ ತಿಳಿಸುವ ಅವಕಾಶದ ಬಗ್ಗೆ ಆಕ್ಷೇಪವಿದೆ. ಗ್ರಾಮಸಭೆಗಳನ್ನು ಅರಣ್ಯ ಹಕ್ಕುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥ ಎಂದು ವಾದಿಸಲಾಗುತ್ತಿದೆ.
ಆದರೆ ಪರಿಣತರು ಹೇಳುವ ಪ್ರಕಾರ, ಎಫ್‌ಅರ್‌ಎ ಕುರಿತ ದೋಷಪೂರಿತ ವ್ಯಾಖ್ಯಾನ ಈ ವಾದದೊಂದಿಗೇ ಶುರುವಾಗುತ್ತದೆ ಎಂಬುದು. ಎಫ್‌ಆರ್‌ಎ ವಿರುದ್ಧ ಈ ವಾದವು ಪ್ರಜಾಪ್ರಭುತ್ವದಲ್ಲಿ ಗ್ರಾಮಸಭೆಗಳ ಮೂಲಭೂತ ಪಾತ್ರವನ್ನು ಕಾನೂನುಬಾಹಿರಗೊಳಿಸುತ್ತದೆ. ಗ್ರಾಮಸಭೆಗಳು ಸಾಂಸ್ಥಿಕ ಘಟಕವಾಗಿದ್ದು, ಅದರ ಮೂಲಕ ಅರಣ್ಯ ಹಕ್ಕುಗಳ ಕುರಿತ ಪ್ರತಿಪಾದನೆ ಮತ್ತು ನಿರಾಕರಣೆಗಳನ್ನು ಶಿಫಾರಸು ಮಾಡಲಾಗುತ್ತದೆಯೇ ಹೊರತು, ಅವು ತಾವಾಗಿಯೇ ನಿರ್ಧಾರದ ಮೇಲೆ ಪ್ರಭಾವ ಬೀರುವುದಿಲ್ಲ ಎಂಬುದು ಪರಿಣತರ ನಿಲುವು.
ಎಫ್‌ಆರ್‌ಎ ವಿರುದ್ಧ ವಾದದಲ್ಲಿ ಎರಡನೆಯದಾಗಿ, ಅರಣ್ಯವಾಸಿಗಳಿಗೆ ಅನ್ಯಾಯವಾಗುತ್ತೆ ಎಂಬುದನ್ನು ಮರೆಮಾಡುವ ಯತ್ನವಿದೆ. ಅದು ಈಗಿರುವ ಕಾಯ್ದೆಯ ಬದಲು, ವಸಾಹತುಶಾಹಿ ಕಾಲದ ಭಾರತೀಯ ಅರಣ್ಯ ಕಾಯ್ದೆ(1927)ಗೆ ಆದ್ಯತೆ ನೀಡುತ್ತದೆ. ಆದಿವಾಸಿಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕುಗಳನ್ನು ನೀಡುವುದರಿಂದ ಅರಣ್ಯೇತರ ಜನಸಂಖ್ಯೆಗೆ ಅದರ ಪ್ರಯೋಜನ ಇಲ್ಲವಾಗುತ್ತದೆಂಬ ವಾದ ಇಲ್ಲಿನದು.
ಇದು ಕೂಡ ಉದ್ದೇಶಪೂರ್ವಕ ತಪ್ಪು ವ್ಯಾಖ್ಯಾನವಾಗಿದೆ. ಎಫ್‌ಆರ್‌ಎ ಈಗಾಗಲೇ ಅಸ್ತಿತ್ವದಲ್ಲಿದ್ದ ಹಕ್ಕುಗಳಿಗೆ ಕಾನೂನು ಮಾನ್ಯತೆಯನ್ನು ನೀಡುತ್ತದೆಯೇ ಹೊರತು ಹೊಸ ಅತಿಕ್ರಮಣಗಳನ್ನು ಉತ್ತೇಜಿಸುವುದಿಲ್ಲ ಎಂಬುದು ಸ್ಪಷ್ಟ.
ಅರಣ್ಯವಾಸಿಗಳನ್ನು ಭೂರಹಿತ ಮತ್ತು ಬಡ ಎಂದು ನಮೂದಿಸುವ ಮೂರನೇ ವಾದವು ಅರಣ್ಯ ನಿವಾಸಿಗಳಿಗೆ ಸಂಪನ್ಮೂಲಗಳ ಮೇಲೆ ಆಸೆ ಎಂಬ ರೀತಿಯಲ್ಲಿ ಬಿಂಬಿಸುತ್ತದೆ. ಇದರ ಮೂಲಕ, ಅವರನ್ನು ಅರಣ್ಯದಿಂದ ಹೊರಗಿಡಬೇಕೆಂಬ ಬ್ರಿಟಿಷರ ಕಾಲದ ನಿಲುವನ್ನೇ ಮುನ್ನೆಲೆಗೆ ತರುವ ಯತ್ನವಿದೆ. ಕೊನೆಯದಾಗಿ, ಹೇಗಾದರೂ ಅರಣ್ಯವಾಸಿಗಳನ್ನು ತೆರವು ಮಾಡಬೇಕು ಎಂಬ ಕಟು ಒತ್ತಾಯವೇ ಮುಖ್ಯವಾಗಿರುವ ವಾದವು ಎಫ್‌ಆರ್‌ಎ ವಿರುದ್ಧದ ತಕರಾರಿನಲ್ಲಿದೆ.
ಭಾರತದ ಹೆಚ್ಚಿನ ಸಂರಕ್ಷಿತ ಪ್ರದೇಶಗಳಲ್ಲಿ, ಅರಣ್ಯವಾಸಿಗಳು ನಿರ್ಣಾಯಕ ಜೀವವೈವಿಧ್ಯ ಆವಾಸಸ್ಥಾನಗಳೆಂದು ಘೋಷಿಸುವ ಮೊದಲು ಅಲ್ಲಿ ವಾಸಿಸುತ್ತಿದ್ದರು. ಸಂರಕ್ಷಣೆಗಾಗಿ ಆನಂತರ ಹೊಸ ಗಡಿಗಳನ್ನು ಎಳೆಯಲಾಯಿತು, ಅರಣ್ಯವಾಸಿ ಸಮುದಾಯಗಳು ತಮ್ಮ ಸ್ವಂತ ಮನೆಗಳಲ್ಲಿಯೇ ಇದ್ದಕ್ಕಿದ್ದಂತೆ ಅತಿಕ್ರಮಣಕಾರರು ಎಂದು ಬಿಂಬಿಸಲ್ಪಟ್ಟರು. ಇದು ಇತಿಹಾಸವನ್ನು ನಿರ್ಲಕ್ಷಿಸುವ, ಪ್ರಕೃತಿಯಿಂದ ಜನರನ್ನು ಬೇರ್ಪಡಿಸುವ, ಹಳತಾದ ಮತ್ತು ವ್ಯಾಪಕವಾಗಿ ಟೀಕಿಸಲ್ಪಟ್ಟ ಬ್ರಿಟಿಷರ ವಿಧಾನವಾಗಿದೆ, ಇದು ಯಶಸ್ವಿ ಸಂರಕ್ಷಣೆಯ ಮಾರ್ಗವಲ್ಲ ಎಂಬುದು ಎಫ್‌ಆರ್‌ಎ ಪರವಾಗಿರುವವರ ನಿಲುವು.
ಅರಣ್ಯವಾಸಿಗಳನ್ನು ಅವರ ಹಕ್ಕುಗಳ ಮೂಲಕವಾಗಿ ಸಿಕ್ಕಿರುವ ಅವರ ಸ್ವಂತ ನೆಲೆಯಲ್ಲಿಯೇ ಅತಿಕ್ರಮಣಕಾರರು ಎಂದು ಆರೋಪಿಸುತ್ತಿರುವ ವಾದದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಯಾವ ನಿರ್ಧಾರ ತಳೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅದು ಕೈಗೊಳ್ಳಲಿರುವ ನಿರ್ಧಾರ ಮಹತ್ವದ್ದಾಗಲಿದೆ. 2019ರ ಹೊರಹಾಕುವಿಕೆ ನಿರ್ಧಾರವನ್ನೇ ಎತ್ತಿಹಿಡಿಯುವುದೇ ಅಥವಾ ಎಫ್‌ಆರ್‌ಎಯ ಸಾಂವಿಧಾನಿಕತೆಯನ್ನು ಎತ್ತಿಹಿಡಿಯುವುದೇ ಎಂಬುದನ್ನು ಕಾದುನೋಡಬೇಕಿದೆ. ಲಕ್ಷಾಂತರ ಅರಣ್ಯವಾಸಿಗಳ ಬದುಕು ಮತ್ತು ಹಕ್ಕು ಆ ಬಹುದೊಡ್ಡ ನಿರ್ಧಾರವನ್ನೇ ಅವಲಂಬಿಸಿದೆ.