ಇಂದು ಗಾಂಧೀಜಿ ಬದುಕಿದ್ದರೆ...

Update: 2022-12-23 18:34 GMT

ಮಾನ್ಯರೇ,
‘‘ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗದಿದ್ದರೆ ಜನರು ಇನ್ನೆಲ್ಲಿ ಹೋಗಬೇಕು?’’ ಎಂದು ದಿಲ್ಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು)ದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಇತ್ತೀಚೆಗೆ (17-12-2022) ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಅವರಿಗೆ ಯಾಕೆ ಬಂತೆಂದರೆ ಬಿಲ್ಕಿಸ್ ಬಾನು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಹಾಗೂ ತನ್ನ ಕುಟುಂಬದ ಏಳು ಸದಸ್ಯರನ್ನು ಕೊಲೆಗೈದ 11 ಜನ ಆರೋಪಿಗಳನ್ನು ಅವಧಿಗೆ ಮುನ್ನವೇ ಗುಜರಾತ್ ಸರಕಾರ ಜೈಲಿನಿಂದ ಕಳೆದ ಆಗಸ್ಟ್ 15ರಂದು ಬಿಡುಗಡೆಗೊಳಿಸಿತು. ನಂತರ ಸಂತ್ರಸ್ತೆ ಬಿಲ್ಕಿಸ್ ಆ ತೀರ್ಪನ್ನು ಮರು ಪರಿಶೀಲಿಸಬೇಕೆಂದು ಕೋರಿ ಸುರ್ಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಆದರೆ ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿದೆ. ಈ ಕುರಿತು ಸ್ವಾತಿ ಮಲಿವಾಲ್ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗದಿದ್ದರೆ ಜನರು ಇನ್ನೆಲ್ಲಿ ಹೋಗಬೇಕು? ಎಂದು ಅಲವತ್ತುಕೊಂಡಿದ್ದಾರೆ.
ಹಾಗಾಗಿ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಭಾವಿಸುತ್ತಿರುವ ಪತ್ರಿಕಾಮಾಧ್ಯಮಕ್ಕೆ ಸ್ವಾತಿ ಮಲಿವಾಲ್ ಮೊರೆ ಇಟ್ಟಿದ್ದಾರೆ. ಪ್ರಜಾತಂತ್ರದಲ್ಲಿ ಜನದನಿ ಬಹಳ ಮುಖ್ಯವಾದುದು. ಆದ್ದರಿಂದ ಈ ಮೊರೆ ಸರಿಯೇ. ಯಾಕೆಂದರೆ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಜೊತೆಗೆ ಪತ್ರಿಕಾರಂಗವೂ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು. ಪ್ರಸಕ್ತ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಮೊದಲ ಮೂರು ಅಂಗಗಳು ಸೋತಂತಾಗಿವೆ. ಉಳಿದದ್ದು ಪತ್ರಿಕಾ ರಂಗ ಮಾತ್ರ. ಆದರೆ ಇತ್ತೀಚೆಗೆ ಪತ್ರಿಕಾ ಮಾಧ್ಯಮ, ಟಿ.ವಿ. ಮಾಧ್ಯಮ ಇತ್ಯಾದಿ ಎಲ್ಲವೂ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳ ಕೈವಶವಾಗುತ್ತಿವೆ. ಆ ಕಂಪೆನಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಒಳಒಪ್ಪಂದ ಆದಂತಿದೆ. ಆದ್ದರಿಂದ ಸಂತ್ರಸ್ತ ಜನ ಏನು ಮಾಡಬೇಕು? ಎಲ್ಲಿ ಹೋಗಬೇಕು? ಹಾಗೂ ಧೈರ್ಯಮಾಡಿ ವಿಮರ್ಶಿಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಕಡೆಗೆ ನಮ್ಮ ಹಣೆ ಬರಹ ಎಂದು ತೆಪ್ಪಗಾಗಬೇಕಾಗುತ್ತದೆ ಹಾಗೂ ಪ್ರಶ್ನಿಸಿದರೆ ಪ್ರಭುತ್ವ ತಾನು ಪ್ರಜೆಗಳ ಪ್ರತಿನಿಧಿ ಎಂಬುದನ್ನೂ, ಸಂವಿಧಾನವನ್ನೂ ಉಲ್ಲಂಘಿಸಿ ಹಾಗೆ ಪ್ರಶ್ನಿಸಿದವರನ್ನು ದೇಶದ್ರೋಹಿ, ಧರ್ಮದ್ರೋಹಿಯೆಂದು ಹಣೆಪಟ್ಟಿ ಹಾಕಿ ಜೈಲಿಗೂ ದೂಡಬಹುದು.
ಹಾಗಾದರೆ ಮತ್ತೇನು? ಸಂತ್ರಸ್ತೆ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಆಕೆಯ ಪರ ಇದು ಸರಿಯಿಲ್ಲ ಎಂದು ದನಿ ಎತ್ತುವವರು ಯಾರು? ಜನಪರ ಮಾಧ್ಯಮಗಳು ತಮ್ಮ ಕರ್ತವ್ಯ ನಿಭಾಯಿಸುವುದೇ?
ನಮ್ಮದು ನಿಜವಾಗಿಯೂ ಪ್ರಜಾಪ್ರಭುತ್ವ ರಾಷ್ಟ್ರ ಎಂದಾದರೆ ನಮ್ಮ ಜಾಗೃತ ಮನಸ್ಸು ಸಂತ್ರಸ್ತೆ ಬಿಲ್ಕಿಸ್ ಬಾನು ಪರ ದನಿಯೆತ್ತಿ ಹೋರಾಡಬೇಕಾಗಿತ್ತು. ಆದರೆ ರಾಜಕೀಯ ಪಕ್ಷಗಳು ಜಾತಿ ಧರ್ಮಗಳ ಮೇಲಾಟದಲ್ಲಿ, ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಈ ಮಟ್ಟದ ಪಕ್ಷ ರಾಜಕೀಯವನ್ನು ಕಳೆದ 75 ವರ್ಷಗಳಿಂದ ಎಂದೂ ಕಂಡರಿಯೆವು. ಅನೈತಿಕತೆ, ಅಪ್ರಾಮಾಣಿಕತೆ, ಧರ್ಮಾಂಧತೆ, ಜಾತೀಯತೆ ಇವು ಮುಪ್ಪರಿಗೊಳ್ಳುತ್ತಿವೆ. ಇಂತಹ ಹೊತ್ತಿನಲ್ಲಿ ಗಾಂಧೀಜಿ ಬದುಕಿದ್ದರೆ...?
 

Similar News